ರೋಜರ್ ಬಿನ್ನಿ – ಕರ‍್ನಾಟಕ ಕಂಡ ಮೇರು ಆಲ್‌ ರೌಂಡರ್

– ರಾಮಚಂದ್ರ ಮಹಾರುದ್ರಪ್ಪ.

ಕ್ರಿಕೆಟ್ ಪಂಡಿತರ ಅನಿಸಿಕೆ, ಅಬಿಪ್ರಾಯಗಳನ್ನು ತಲೆಕೆಳಗೆ ಮಾಡಿ ಬಾರತ ತಂಡ ಕಪಿಲ್ ದೇವ್ ರ ಮುಂದಾಳ್ತನದಲ್ಲಿ ಕ್ರಿಕೆಟ್ ಜಗತ್ತೇ ಬೆಕ್ಕಸ ಬೆರಗಾಗುವಂತೆ ಇಂಗ್ಲೆಂಡ್ ನಲ್ಲಿ ನಡೆದ 1983 ರ ವಿಶ್ವಕಪ್ ಅನ್ನು ಗೆದ್ದು ಬೀಗಿತು. ಆ ಗೆಲುವಿನ ಹಿಂದೆ ಬ್ಯಾಟ್ ಹಾಗೂ ಬಾಲ್ ನಿಂದ ಹಲವಾರು ಆಟಗಾರರ ಕೊಡುಗೆ ಇದ್ದರೂ ಟೂರ‍್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳನ್ನು ಪಡೆದು ಟೂರ‍್ನಿ ಗೆಲುವಿಗೆ ಮುನ್ನುಡಿ ಬರೆದವರು ಕರ‍್ನಾಟಕದ ಹೆಮ್ಮೆಯ ಆಲ್ ರೌಂಡರ್ ರೋಜರ್ ಮೈಕೆಲ್ ಹಂಪ್ರಿ ಬಿನ್ನಿ. ಬಲಗೈ ವೇಗಿ ಹಾಗೂ ಕೆಳಗಿನ ಕ್ರಮಾಂಕದಲ್ಲಿ ಬಿರುಸಾಗಿ ಬ್ಯಾಟ್ ಬೀಸುತ್ತಿದ್ದ ರೋಜರ್ ಬಿನ್ನಿ 80ರ ದಶಕದ ಬಾರತ ತಂಡದ ಅವಿಬಾಜ್ಯ ಅಂಗವಾಗಿದ್ದರು.

ಹುಟ್ಟು – ಎಳವೆಯ ಕ್ರಿಕೆಟ್

ಜುಲೈ 19, 1955 ರಂದು ಬೆಂಗಳೂರಿನಲ್ಲಿ ರೋಜರ್ ಬಿನ್ನಿ ಹುಟ್ಟಿದರು. ಸೈoಟ್ ಜೆರ‍್ಮೈನ್ ಶಾಲೆಯಲ್ಲಿ ಪ್ರಾತಮಿಕ ಶಿಕ್ಶಣದ ಬಳಿಕ ಅವರು ಮುಂದಿನ ಶಿಕ್ಶಣಕ್ಕೆ ಸೈoಟ್ ಜೋಸೆಪ್ ಇಂಡಿಯನ್ ಹೈಸ್ಕೂಲ್ ಸೇರಿದರು. ಆ ವೇಳೆ ಎಳೆಯರ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ರಾಶ್ಟ್ರೀಯ ದಾಕಲೆ ಮಾಡಿದರು. ಶಾಟ್ಪುಟ್ ನಲ್ಲೂ ಹೆಸರು ಮಾಡಿದ ಅವರು ಶಾಲೆಯಲ್ಲಿ ಕ್ರಿಕೆಟ್ ನೊಟ್ಟಿಗೆ ಪುಟ್ಬಾಲ್ ಹಾಗೂ ಹಾಕಿ ಆಡಿದ್ದೂ ಉಂಟು. ಆದರೆ ಕ್ರಿಕೆಟ್ ನ ಮೇಲಿನ ಹೆಚ್ಚಿನ ಒಲವಿನಿಂದ ಕಡೆಗೆ ಬಿನ್ನಿ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿ.ಯು.ಸಿ.ಸಿ) ಸೇರಿ ವ್ರುತ್ತಿಪರಕ್ರಿಕೆಟರ್ ಆಗುವತ್ತ ಮೊದಲ ಹೆಜ್ಜೆ ಇಟ್ಟರು. 1973 ರಿಂದ 1975 ರ ನಡುವೆ ಅವರು ಕೂಚ್ ಬಿಹಾರ್ ಟ್ರೋಪಿ ಮತ್ತು ಸಿ.ಕೆ ನಾಯ್ಡು ಟ್ರೋಪಿಯಲ್ಲಿ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಬಾವ ಬೀರಿ ಸೈ ಎನಿಸಿಕೊಂಡರು. ಜೊತೆಗೆ ಕರ‍್ನಾಟಕ ರಾಜ್ಯದ ಹಲವಾರು ವಯೋಮಿತಿಯ ಪಂದ್ಯಾವಳಿಗಳಲ್ಲೂ ಸ್ತಿರ ಪ್ರದರ‍್ಶನ ಕಾಪಾಡಿಕೊಂಡು ಗಮನ ಸೆಳೆದರು. ಇದರ ಪಲವಾಗಿ 20 ರ ಹರೆಯದಲ್ಲೇ ಬಿನ್ನಿರಿಗೆ ಕರ‍್ನಾಟಕ ರಣಜಿ ತಂಡದ ಕದ ತೆರೆಯಿತು.

ರಣಜಿ ಪಾದಾರ‍್ಪಣೆ

1975/76 ರ ಸಾಲಿನಲ್ಲಿ ಕೇರಳ ಎದುರು ಪ್ರಸನ್ನರ ಮುಂದಾಳ್ತನದಲ್ಲಿ ರಾಯಚೂರಿನಲ್ಲಿ ಬಿನ್ನಿ ಕರ‍್ನಾಟಕದ ಪರ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಈ ಪಂದ್ಯದಲ್ಲಿ ಒಂದು ರನ್ ಗಳಿಸಿ ಒಂದು ವಿಕೆಟ್ ಪಡೆದ ಅವರು ಹೆಚ್ಚು ಪ್ರಬಾವ ಬೀರದಿದ್ದರೂ ಎರಡನೇ ಪಂದ್ಯದಲ್ಲಿ ಆರಂಬಿಕ ಬ್ಯಾಟ್ಸ್ಮನ್ ಆಗಿ ಅರ‍್ದಶತಕ (50) ಗಳಿಸಿದರು. ಅದೇ ಸಾಲಿನ ಕ್ವಾರ‍್ಟರ್ ಪೈನಲ್ ನಲ್ಲಿ ಮಹಾರಾಶ್ಟ್ರ ಎದುರು ತಂಡದ ಬ್ಯಾಟಿಂಗ್ ಮೊದಲು ಮಾಡುವುದರೊಟ್ಟಿಗೆ ಹೊಸ ಚೆಂಡಿನೊಂದಿಗೆ ಬೌಲಿಂಗ್ ಕೂಡ ಮೊದಲು ಮಾಡಿ ವಿಶಿಶ್ಟ ದಾಕಲೆ ಮಾಡಿದ ಬಿನ್ನಿ, 71 ರನ್ ಗಳಿಸಿ ತಮ್ಮ ಸ್ವಿಂಗ್ ಬೌಲಿಂಗ್ ನಿಂದ 4 ವಿಕೆಟ್ ಕೂಡ ಪಡೆದರು. ಪ್ರತಿ ವರುಶ ಆಟದಲ್ಲಿ ಪಕ್ವವಾಗುತ್ತಾ ತಮ್ಮ ಪ್ರದರ‍್ಶನವನ್ನು ಇನ್ನೂ ಸುದಾರಿಸಿಕೊಂಡರು. ಆಗಾಗಲೇ ದೇಸೀ ಕ್ರಿಕೆಟ್ ನಲ್ಲಿ ಆಟಗಾರನಾಗಿ ಒಂದು ಮಟ್ಟಕ್ಕೆ ಬೆಳೆದಿದ್ದ ಅವರು 1977/78 ರಲ್ಲಿ ಕೇರಳ ಎದುರು ಚಿಕ್ಕಮಗಳೂರಿನಲ್ಲಿ ಮೊದಲ ವಿಕೆಟ್ ಗೆ ಸಂಜಯ್ ದೇಸಾಯಿರೊಂದಿಗೆ ಮುರಿಯದ 451 ರನ್ ಗಳ ಜೊತೆಯಾಟವಾಡಿದರು. ಆರಂಬಿಕ ಬ್ಯಾಟ್ಸ್ಮನ್ ಗಳಾದ ಇಬ್ಬರೂ ದ್ವಿಶತಕ : ಬಿನ್ನಿ (211*) ಮತ್ತು ದೇಸಾಯಿ (218*) ಗಳಿಸಿ ಈ ಅಪರೂಪದ ಸಾದನೆಯಿಂದ ಸಂಚಲನ ಮೂಡಿಸಿದರು. ಕರ‍್ನಾಟಕ ತಂಡ ತನ್ನ ಎರಡನೇ ರಣಜಿ ಟೂರ‍್ನಿ ಗೆದ್ದ ಈ ಸಾಲಿನಲ್ಲಿ ಬಿನ್ನಿ 63 ರ ಸರಾಸರಿಯಲ್ಲಿ 563 ರನ್ ಗಳಿಸಿದರೆ, ಸಿಕ್ಕ ಕಡಿಮೆ ಬೌಲಿಂಗ್ ಅವಕಾಶದಲ್ಲೂ 6 ವಿಕೆಟ್ ಪಡೆದರು. ಜೊತೆಗೆ ಇರಾನಿ ಕಪ್ ಮತ್ತು ದುಲೀಪ್ ಟ್ರೋಪಿಗಳಲ್ಲಿಯೂ ಆಲ್ ರೌಂಡ್ ಚಳಕದಿಂದ ಒಳ್ಳೆ ಪ್ರದರ‍್ಶನ ಕಾಯ್ದುಕೊಂಡ ಬಿನ್ನಿರಿಗೆ ರಾಶ್ಟ್ರೀಯ ಆಯ್ಕೆಗಾರರು ಕಡೆಗೆ ಪಾಕಿಸ್ತಾನದ ಎದುರು ತವರಿನಲ್ಲಿ ನಡೆಯಲಿದ್ದ ಟೆಸ್ಟ್ ಸರಣಿಗೆ ಮಣೆ ಹಾಕಿದರು.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

ತವರೂರು ಬೆಂಗಳೂರಿನಲ್ಲಿ 1979 ರಲ್ಲಿ ಬಿನ್ನಿ ಟೆಸ್ಟ್ ಪಾದಾರ‍್ಪಣೆ ಮಾಡಿದರು. ಸಪ್ಪೆಯಾಗಿ ಡ್ರಾನಲ್ಲಿ ಕೊನೆಗೊಂಡ ಈ ಪಂದ್ಯದಲ್ಲಿ ವಿಕೆಟ್ ಪಡೆಯಲಾಗದಿದ್ದರೂ 46 ರನ್ ಗಳಿಸಿ ನಾಯಕ ಗಾವಸ್ಕರ್ ರ ನಂಬಿಕೆ ಗಳಿಸಿದರು. ಸರಣಿಯಲ್ಲಿ ಒಟ್ಟು11 ವಿಕೆಟ್ ಮತ್ತು 143 ರನ್ ಗಳಿಸಿ ತಮ್ಮ ಎಡೆ ಉಳಿಸಿಕೊಳ್ಳುವಲ್ಲಿ ಕರ‍್ನಾಟಕದ ಯುವ ಆಲ್ ರೌಂಡರ್‌ ಯಶಸ್ವಿಯಾದರು. ಬಳಿಕ 1980 ರಲ್ಲಿ ಮೆಲ್ಬರ‍್ನ್ ನಲ್ಲಿ ಆಸ್ಟ್ರೇಲಿಯಾ ಎದುರು ಚೊಚ್ಚಲ ಒಂದು ದಿನದ ಅಂತರಾಶ್ಟ್ರೀಯ ಪಂದ್ಯವಾಡಿದ ಬಿನ್ನಿ 2 ವಿಕೆಟ್ ಕೆಡವಿ ಒಳ್ಳೆಯ ಆರಂಬ ಪಡೆದರು. ಆ ಬಳಿಕ ಸರಣಿಯ ಎರಡನೇ ಪಂದ್ಯದಲ್ಲೇ ಪರ‍್ತ್ ನಲ್ಲಿ ನ್ಯೂಜಿಲೆಂಡ್ ವಿರುದ್ದ 4 ವಿಕೆಟ್ ಪಡೆದು ನಿಯಮಿತ ಓವರ್ ಗಳ ಕ್ರಿಕೆಟ್ ನಲ್ಲೂ ನೆಲೆ ಕಂಡುಕೊಂಡರು. ಹೀಗೆ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ತಂಡಕ್ಕೆ ಕೊಡುಗೆ ನೀಡುತ್ತಾ ಬಾರತ ತಂಡದ ಮುಕ್ಯ ಆಲ್ ರೌಂಡರ್ ಗಳಲ್ಲೊಬ್ಬರಾಗಿ ಬೆಳೆದ ಬಿನ್ನಿರ ಆಟ 1983 ವಿಶ್ವಕಪ್ ನಲ್ಲಿ ಉತ್ತುಂಗ ತಲುಪಿತು. ಮಾಡು ಇಲ್ಲವೇ ಮಡಿ ಎಂಬಂತಿದ್ದ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಬಾರತ 17/5 ಗೆ ಕುಸಿದಿದ್ದಾಗ ಬಿನ್ನಿ 22 ರನ್ ಗಳಿಸಿ ನಾಯಕ ಕಪಿಲ್ ದೇವ್ ರೊಂದಿಗೆ 60 ರನ್ ಗಳ ಜೊತೆಯಾಟವಾಡಿ ಮೊದಲಿಗೆ ಇನ್ನಿಂಗ್ಸ್ ಗೆ ಒಂದು ಮಟ್ಟಕ್ಕೆ ಚೇತರಿಕೆ ನೀಡಿದ್ದನ್ನು ಮರೆಯುವಂತಿಲ್ಲ. ಸ್ವಿಂಗ್ ಬೌಲಿಂಗ್ ಗೆ ನೆರವಾಗುವ ಇಂಗ್ಲೆಂಡ್ ನ ಹವಾಗುಣ ಹಾಗೂ ಅಲ್ಲಿನ ಹುಲ್ಲುಹಾಸಿನ ಪಿಚ್ ಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ಬಿನ್ನಿ ಎರಡೂ ದಿಕ್ಕಿನಲ್ಲಿ ಸ್ವಿಂಗ್ ಮಾಡುತ್ತಾ ಬ್ಯಾಟ್ಸ್ಮನ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನ ಮೆಲ್ಪಂಕ್ತಿಯ ಗಟಾನುಗಟಿ ಬ್ಯಾಟ್ಸ್ಮನ್ ಗಳೂ ಸಹ ಇವರ ಬಿರುಸಿನ ಸ್ವಿಂಗ್ ಮರ‍್ಮ ಅರಿಯಲಾಗದೆ ತಬ್ಬಿಬ್ಬಾದರು. ಈ ವಿಶ್ವಕಪ್‌ನಲ್ಲಿ 8 ಪಂದ್ಯಗಳಿಂದ ಒಟ್ಟು 18 ವಿಕೆಟ್ ಪಡೆದು ಬಾರತದ ಗೆಲುವಿನ ರೂವಾರಿಯಾದರು. ಅವರ ಈ ಸಾದನೆ ಬಾರತದ ಕ್ರಿಕೆಟ್ ಇತಿಹಾಸದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. 1985 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಎಲ್ಲಾ ಅಂತರಾಶ್ಟ್ರೀಯ ತಂಡಗಳೂ ಪಾಲ್ಗೊಂಡಿದ್ದ ವರ‍್ಲ್ಡ್ ಚಾಂಪಿಯನ್ಶಿಪ್ ಆಪ್ ಕ್ರಿಕೆಟ್ ಸರಣಿಯ ಗೆಲುವಿನಲ್ಲೂ ಬಿನ್ನಿರ ಅತ್ಯಮೂಲ್ಯ ಕೊಡುಗೆ ಇತ್ತು. ಬಾರತದ ವೇಗಿಗಳ ಪೈಕಿ ಅವರು ಅತಿಹೆಚ್ಚು (9) ವಿಕೆಟ್ ಪಡೆದು ಬಾರತದ ಹೆಸರು ವಿಶ್ವಮಟ್ಟದಲ್ಲಿ ಮತ್ತೊಮ್ಮೆ ರಾರಾಜಿಸುವಂತೆ ಮಾಡಿದರು. ಬಳಿಕ 1986 ರಲ್ಲಿ ಇಂಗ್ಲೆಂಡ್ ನಲ್ಲಿ ಬಾರತ ತಂಡ 2-0 ಇಂದ ಟೆಸ್ಟ್ ಸರಣಿ ಗೆದ್ದು ಬೀಗಿತು. ಈ ಸರಣಿಯ ಎರಡನೇ ಲೀಡ್ಸ್ ಟೆಸ್ಟ್ ನಲ್ಲಿ ಬಿನ್ನಿ ತಮ್ಮ ಕರಾರುವಾಕ್ ಸ್ವಿಂಗ್ ದಾಳಿಯಿಂದ (5/40 ಮತ್ತು 2/18) ಗೆಲುವು ತಂದಿತ್ತರು. 15 ವರುಶಗಳ ಬಳಿಕ ಇಂಗ್ಲೆಂಡ್ ನಲ್ಲಿ ಗೆದ್ದ ಈ ಟೆಸ್ಟ್ ಸರಣಿ ಬಾರತದ ಶ್ರೇಶ್ಟ ಗೆಲುವುಗಳಲ್ಲಿ ಒಂದು ಎಂದು ಇಂದಿಗೂ ನೆನೆಯಲ್ಪಡುತ್ತದೆ. ನಂತರ 1987 ರಲ್ಲಿ ಪಾಕಿಸ್ತಾನ ಎದುರು ಕೊಲ್ಕತ್ತಾ ಟೆಸ್ಟ್ ನಲ್ಲಿ ಬಿನ್ನಿ ಔಟಾಗದೆ 52 ರನ್ ಗಳಿಸಿ ಬೌಲಿಂಗ್ ನಲ್ಲಿ (6/56 ಮತ್ತು 2/45) ದಾಳಿಯಿಂದ ಮಿಂಚಿದರೂ ಪಂದ್ಯ ಡ್ರಾ ನಲ್ಲಿ ಕೊನೆಗೊಳ್ಳುತ್ತದೆ. ಬಾರತ ಈ ಸರಣಿಯನ್ನು ಬೆಂಗಳೂರಿನಲ್ಲಿ ಕಡೇ ಟೆಸ್ಟ್ ನಲ್ಲಿ ಸೋತ ಬಳಿಕ ಬಿನ್ನಿರನ್ನು ಹರಕೆಯ ಕುರಿ ಮಾಡಲಾಗುತ್ತದೆ. ತವರಿನಲ್ಲಿ ಆಡಿದ ಈ ಪಂದ್ಯ ಅವರ ಕಟ್ಟ ಕಡೇ ಟೆಸ್ಟ್ ಆಗುತ್ತದೆ. ನಂತರ ಒಳ್ಳೆ ಲಯದಲ್ಲಿದ್ದ ಅವರಿಗೆ 1987 ರ ವಿಶ್ವಕಪ್ ನಲ್ಲೂ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ನೀಡಿ ತಂಡದಿಂದ ಕೈಬಿಡಲಾಗುತ್ತದೆ. ಹೀಗೆ 32 ರ ಹರೆಯದ ಬಿನ್ನಿರ ಅಂತರಾಶ್ಟ್ರೀಯ ವ್ರುತ್ತಿ ಬದುಕು ಹಟಾತ್ತನೆ ಕೊನೆಗೊಳ್ಳುತ್ತದೆ. ಎಂಟು ವರುಶಗಳ ಕಾಲ ಅಂತರಾಶ್ಟ್ರೀಯ ಕ್ರಿಕೆಟ್ ಆಡಿ ಒಟ್ಟು 27 ಟೆಸ್ಟ್ ಗಳಲ್ಲಿ 2 ಅರ‍್ದಶತಕಗಳೊಂದಿಗೆ 830 ರನ್ ಪೇರಿಸಿ, 2 ಬಾರಿ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳೊಂದಿಗೆ 47 ವಿಕೆಟ್ ಗಳನ್ನು ಪಡೆದಿರುವ ಬಿನ್ನಿ 72 ಒಂದು ದಿನದ ಪಂದ್ಯಗಳಲ್ಲಿ 1 ಅರ‍್ದಶತಕದೊಂದಿಗೆ 629 ರನ್ ಗಳಿಸಿ, 77 ವಿಕೆಟ್ ಗಳನ್ನು ಪಡೆದು ತಂಡದ ಉಪಯುಕ್ತ ಆಲ್ ರೌಂಡರ್ ಎನಿಸಿಕೊಂಡಿದ್ದರು.

ಕರ‍್ನಾಟಕದ ದಿಗ್ಗಜ ಆಲ್ ರೌಂಡರ್

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಿಂದಲೂ ಪಂದ್ಯ ಗೆಲ್ಲಿಸುವ ಅಳವು ಹೊಂದಿದ್ದ ರೋಜರ್ ಬಿನ್ನಿ ರಾಜ್ಯ ಕಂಡ ಶ್ರೇಶ್ಟ ಆಲ್ ರೌಂಡರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕರ‍್ನಾಟಕ ತಂಡದೊಂದಿಗೆ ಎರಡು ರಣಜಿ ಟೂರ‍್ನಿ ಹಾಗೂ ಒಂದು ಇರಾನಿ ಕಪ್ ಗೆದ್ದಿರುವ ಅವರು ಪ್ರತೀ ಗೆಲುವಿನಲ್ಲೂ ಮುಕ್ಯ ಪಾತ್ರ ವಹಿಸಿದ್ದಾರೆ. 1982/83 ರಲ್ಲಿ ರಾಜ್ಯ ತಂಡ ಮೂರನೇ ರಣಜಿ ಟೂರ‍್ನಿಯನ್ನು ಮುಡಿಗೇರಿಸಿಕೊಂಡಾಗ ಬಿನ್ನಿ 570 ರನ್ ಗಳಿಸಿ 22 ವಿಕೆಟ್ ಗಳನ್ನೂ ಕಬಳಿಸಿದ್ದರು. 1987 ರಲ್ಲಿ ಬಾರತ ತಂಡದಿಂದ ಮರಳಿದ ನಂತರ ಹಲವು ವರುಶಗಳ ಕಾಲ ದೇಸೀ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿ ಸಾಕಶ್ಟು ವಿಕೆಟ್ ಗಳನ್ನು ಪಡೆದರೂ ಬಿನ್ನಿರನ್ನು ರಾಶ್ಟ್ರೀಯ ಆಯ್ಕೆಗಾರರು ಮತ್ತೆಂದೂ ಪರಿಗಣಿಸುವುದಿಲ್ಲ. ಆದರೂ ದ್ರುತಿಗೆಡದೆ ತಮ್ಮ ಎಂದಿನ ಆಟ ಮುಂದುವರೆಸಿಕೊಂಡು ಕರ‍್ನಾಟಕದಲ್ಲಿ ಯುವ ಆಟಗಾರರಿಗೆ ಹಿರಿಯಣ್ಣನಾಗಿ ಮಾರ‍್ಗದರ‍್ಶಕರಾದರು. ಯುವ ಪ್ರತಿಬೆಗಳನ್ನು ಗುರುತಿಸಿ ಅವರ ಬೆನ್ನಿಗೆ ನಿಂತು ಅವಕಾಶ ನೀಡುತ್ತಿದ್ದ ಬಿನ್ನಿ ದಿಗ್ಗಜರ ನಿವ್ರುತ್ತಿಯಿಂದ ಸೊರಗಿದ್ದ ರಾಜ್ಯ ತಂಡಕ್ಕೆ ಕಸುವು ತುಂಬಿದರು. ಬಿನ್ನಿರ ಮುಂದಾಳ್ತನದಲ್ಲೇ ವಿಶ್ವಮಟ್ಟದಲ್ಲಿ ದಿಗ್ಗಜರಾಗಿ ಬೆಳೆದ ಜಾವಗಲ್ ಶ್ರೀನಾತ್ ಮತ್ತು ಅನಿಲ್ ಕುಂಬ್ಳೆ ರಣಜಿ ಪಾದಾರ‍್ಪಣೆ ಮಾಡಿದ್ದು ವಿಶೇಶ. ಒಟ್ಟು 26 ಪಂದ್ಯಗಳಲ್ಲಿ ಕರ‍್ನಾಟಕವನ್ನು ಮುನ್ನಡೆಸಿರುವ ಬಿನ್ನಿ 11 ರಲ್ಲಿ ಗೆಲುವು ಕಂಡು 1 ಪಂದ್ಯದಲ್ಲಿ ಮಾತ್ರ ಸೋಲುಂಡಿದ್ದಾರೆ. ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ 136 ಪಂದ್ಯಗಳಿಂದ 14 ಶತಕಗಳೊಂದಿಗೆ 6,579 ರನ್ ಮತ್ತು 205 ವಿಕೆಟ್ ಗಳನ್ನು ಪಡೆದಿರುವ ಬಿನ್ನಿ ಕರ‍್ನಾಟಕದ ಪರ ರಣಜಿ ಟೂರ‍್ನಿಯಲ್ಲಿ 68 ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ 11 ಶತಕಗಳೊಂದಿಗೆ 4,173 ರನ್ ಗಳಿಸಿ 111 ವಿಕೆಟ್ ಗಳನ್ನು ಕೆಡವಿದ್ದಾರೆ. ಪಂದ್ಯದಲ್ಲಿ ಎದುರಾಳಿ ಮೇಲುಗೈ ಸಾದಿಸಿರುವಾಗಲೂ ಬಿನ್ನಿರ ಕೈಲಿ ಬ್ಯಾಟ್ಆಗಲಿ ಬಾಲ್ ಆಗಲಿ ಇದ್ದರೆ ಕರ‍್ನಾಟಕ ತಂಡಕ್ಕೆ ಅಂಜಿಕೆಯಿಲ್ಲ. ಅವರು ಏನಾದರೂ ಮಾಡಿ ತಂಡವನ್ನು ಪಂದ್ಯದಲ್ಲಿ ಮರಳುವಂತೆ ಮಾಡುತ್ತಾರೆ ಎನ್ನುವಂತಹ ನಂಬಿಕೆ ಸಹ ಆಟಗಾರರಲ್ಲಿ ಇದ್ದದ್ದು ಸುಳ್ಳಲ್ಲ. ಇದು ರಾಜ್ಯ ತಂಡಕ್ಕೆ ಬಿನ್ನಿ ಎಂತಹ ಶಕ್ತಿ ಆಗಿದ್ದರು ಎಂಬುದಕ್ಕೆ ಎತ್ತುಗೆ. ಯುವ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ತಮ್ಮ ಆಟದ ಸಂದ್ಯಾ ಕಾಲದಲ್ಲಿ ಗೋವಾ ತಂಡದ ಪರ ಎರಡು ರುತುಗಳ ಕಾಲ ಆಡಿ ಬಿನ್ನಿ 1991/92 ರ ಸಾಲಿನಲ್ಲಿ ಆಟದಿಂದ ದೂರಸರಿದರು. ಅಲ್ಲಿಗೆ ಬಾರತ ಕಂಡ ಒಬ್ಬ ಅಪರೂಪದ ಆಲ್ ರೌಂಡ್ ಪ್ರತಿಬೆಯ ವ್ರುತ್ತಿ ಬದುಕು ಕೊನೆಗೊಂಡಿತು.

ನಿವ್ರುತ್ತಿ ನಂತರದ ಬದುಕು

ಆಟದ ಅಂಗಳದಿಂದ ದೂರ ಸರಿದ ಬಳಿಕ ಬಿನ್ನಿ ಹಲವಾರು ದೇಸೀ ಹಾಗೂ ಅಂತರಾಶ್ಟ್ರೀಯ ತಂಡಗಳ ಕೋಚ್ ಆಗಿ ದುಡಿದರು. 13 ವರುಶಗಳ ದೊಡ್ಡ ಅಂತರದ ಬಳಿಕ 1995/96 ರಲ್ಲಿ ರಣಜಿ ಟೂರ‍್ನಿ ಗೆದ್ದ ಕರ‍್ನಾಟಕ ತಂಡದ ಕೋಚ್ ಆಗಿದ್ದ ಅವರು 2000 ದಲ್ಲಿ ಕಿರಿಯರ ವಿಶ್ವಕಪ್ ಗೆದ್ದ ಬಾರತ ತಂಡದ ಕೋಚ್ ಕೂಡ ಆಗಿದ್ದರು. ಕೆಲ ಕಾಲ ಬಾರತದ ರಾಶ್ಟ್ರೀಯ ಆಯ್ಕೆಗಾರರ ಸಮಿತಿಯ ಅದ್ಯಕ್ಶರಾಗಿದ್ದ ಅವರು ಕೆ.ಎಸ್.ಸಿ.ಎ ವಿನ ಪದಾದಿಕಾರಿ ಹಾಗೂ ಉಪಾದ್ಯಕ್ಶರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ನಂತರ ಒಂದು ಪೂರ‍್ಣ ಅವದಿಗೆ ಬಿನ್ನಿ ಕರ‍್ನಾಟಕದ ವಿದಾನ ಪರಿಶತ್ ಸದಸ್ಯರೂ (ಎಮ್.ಎಲ್.ಸಿ ) ಆಗಿದ್ದರು. ಬಂಗಾಳ ರಣಜಿ ತಂಡದ ಕೋಚ್ ಮತ್ತು ಮಲೇಶಿಯಾ ಕಿರಿಯರ ತಂಡದ ಕೋಚ್ ಆಗಿ ತಮ್ಮ ಅನುಬವವನ್ನು ದಾರೆ ಎರೆದ ಬಿನ್ನಿ ಪ್ರಸ್ತುತ ಕರ‍್ನಾಟಕ ರಾಜ್ಯ ಕ್ರಿಕೆಟ್ ಸಂಸ್ತೆಯ ಅದ್ಯಕ್ಶರಾಗಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ಎಳೆಯರಿಗಾಗಿ ಕ್ರಿಕೆಟ್ ಅಕ್ಯಾಡೆಮಿ ತೆರೆದಿರುವ ಅವರು ಆಡಳಿತದ ಹೊಣೆಗಾರಿಕೆಯ ನಡುವೆಯೂ ಕೋಚ್ ಆಗಿ ಮಂದಿನ ಪೀಳಿಗೆಯ ಆಟಗಾರರಿಗೆ ಕ್ರಿಕೆಟ್ ಪಟ್ಟುಗಳನ್ನು ಕಲಿಸುವುದರಿಂದ ದೂರ ಸರಿದಿಲ್ಲ.

ಚೆಂಡನ್ನು ಎರಡೂ ದಿಕ್ಕಿನಲ್ಲಿ ಸ್ವಿಂಗ್ ಮಾಡುವ ಚಳಕ, ಬಿರುಸಾಗಿ ರನ್ ಗಳಿಸುವುದರ ಜೊತೆ ಅತ್ಯುತ್ತಮ ಪೀಲ್ಡರ್ ಕೂಡ ಆಗಿದ್ದ ಬಿನ್ನಿ ಇಂದಿನ ಕಾಲದಲ್ಲಿ ಇದ್ದಿದ್ದರೆ ಅವರ ಸೇವೆಯನ್ನು ಪಡೆಯಲು ಐ.ಪಿ.ಎಲ್ ತಂಡಗಳು ಕಂಡಿತ ಮುಗಿಬೀಳುತ್ತಿದ್ದವು. ಆದರೆ ಸಾಂಪ್ರಾದಾಯಿಕ ಶೈಲಿಯಲ್ಲಿ ಕ್ರಿಕೆಟ್ ಆಡಲಾಗುತ್ತಿದ್ದ 70 ಹಾಗೂ 80ರ ದಶಕದಲ್ಲೂ ಬಿನ್ನಿ ತಮ್ಮ ಆಲ್ ರೌಂಡ್ ಚಳಕದಿಂದ ಚಾಪು ಮೂಡಿಸಿ ಬಾರತ ಹಾಗೂ ಕರ‍್ನಾಟಕ ತಂಡಗಳ ಹಲವಾರು ಗೆಲುವುಗಳಿಗೆ ಮುನ್ನುಡಿ ಬರೆದರು. ಇಂತಹ ಒಂದು ವಿಶೇಶ ಪ್ರತಿಬೆ ನಮ್ಮ ನಾಡಿನಿಂದ ಹೊರಹೊಮ್ಮಿದ್ದು ನಮ್ಮೆಲ್ಲರಿಗೂ ಹೆಮ್ಮೆ. ಬಿನ್ನಿರ ಕೊಡುಗೆಯನ್ನು ಎಂದಿಗೂ ಮರೆಯದಿರೋಣ.

(ಚಿತ್ರ ಸೆಲೆ: swapnilsansar.org, cricketcountry.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: