ಚೇತಕ್ ಈಗ ಎಲೆಕ್ಟ್ರಿಕ್

– ಜಯತೀರ‍್ತ ನಾಡಗವ್ಡ.

ಹೊಸ ಬಜಾಜ್ ಚೇತಕ್

ಎಲೆಕ್ಟ್ರಿಕ್ ಕಾರು/ಬೈಕ್ ಗಳು ಈಗ ಜಗತ್ತಿನೆಲ್ಲೆಡೆ ಮುನ್ನೆಲೆಗೆ ಬರುತ್ತಿವೆ. ಜಗತ್ತಿನ ಎಲ್ಲ ಪ್ರಮುಕ ಕಾರು, ಬೈಕ್ ತಯಾರಕರು ಮಿಂಚಿನ(Electric) ಬಂಡಿಗಳನ್ನು ತಯಾರಿಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಹೊಗೆಯುಗುಳುವ ಡೀಸೆಲ್, ಪೆಟ್ರೋಲ್ ಒಳ ಉರಿಯುವಿಕೆಯ ಇಂಜಿನ್ ಹೊಂದಿರುವ ಬಂಡಿಗಳಿಗೆ ಎದುರಾಗಿ ಹೊಗೆಯುಗುಳದ ಮಿಂಚಿನ ಬೈಕ್, ಕಾರುಗಳು ಮೆಲ್ಲಗೆ ಮಾರುಕಟ್ಟೆಯನ್ನು ತಮ್ಮದಾಗಿಸುವತ್ತ ಹೆಜ್ಜೆ ಇಟ್ಟಿವೆ. ಇದರಲ್ಲಿ ನಮ್ಮ ಬಾರತವೂ ಹಿಂದೆ ಬಿದ್ದಿಲ್ಲ. ಟಾಟಾ, ಮಹೀಂದ್ರಾ ಸೇರಿದಂತೆ ಹಲವರು ತಮ್ಮ ಮಿಂಚಿನ ಬಂಡಿಗಳನ್ನು ಹೊರ ತಂದಿದ್ದಾರೆ. ಅದರಂತೆ ಬೈಕ್, ಸ್ಕೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಕೂಟದವರು ಈ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. 1980 ರ ಹೊತ್ತಲ್ಲಿ ಸ್ಕೂಟರ್, ಬೈಕ್ ಹೊಂದಿರುವುದು ಹೆಮ್ಮೆಯ ವಿಶಯವಾಗಿತ್ತು. ಬಜಾಜ್ ಚೇತಕ್ ಆ ದಿನಗಳಲ್ಲಿ ಬಾರತದಲ್ಲಿ ಹಲವರ ಅಚ್ಚುಮೆಚ್ಚಿನ ಸ್ಕೂಟರ್. ದಿನಗಳು ವರುಶಗಳು ಕಳೆದಂತೆ, ಹೊಸ ಮಾರುಕಟ್ಟೆಗೆ ಪೈಪೋಟಿ ಒಡ್ಡಲಾಗದೇ ಚೇತಕ್ ಮಾರುಕಟ್ಟೆಯಿಂದ ಮಾಯವಾಗಿತ್ತು. ಇದೀಗ ಇದಕ್ಕೆ ಮರುಜೀವ ನೀಡಲಾಗಿದೆ. ಬಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಎಲೆಕ್ಟ್ರಿಕ್ ಇಗ್ಗಾಲಿ ಬಂಡಿಗಳ ಮಾರುಕಟ್ಟೆಗೆ ಅಡಿಯಿಡಲು, ಬಜಾಜ್ ಕಂಪನಿ ಕೂಡ ಆಸಕ್ತಿ ತೋರಿದೆ. ಇದಕ್ಕಾಗಿ ಆರಿಸಿದ್ದು ಹೆಸರುವಾಸಿ ಹಳೆ ಸ್ಕೂಟರ್ ಚೇತಕ್ ಹೆಸರನ್ನೇ.

ಹೊಸ ಇಲೆಕ್ಟ್ರಿಕ್ ಚೇತಕ್ ಹೇಗಿರಲಿದೆ?

ಹಿಂದಿನ ಚೇತಕ್ ಗೂ, ಹೊಸ ಎಲೆಕ್ಟ್ರಿಕ್ ಚೇತಕ್ ಗೂ ಅಜಗಜಾಂತರ ಬೇರ‍್ಮೆ ಇದೆ. ಮಿಂಚಿನ ಚೇತಕ್ ಹೊಸ ಮೊಗ ಹೊತ್ತು ಬಂದಿದೆ. ಇದರ ಈಡುಗಾರಿಕೆ(Design), ಯುರೋಪಿಯನ್ ಸ್ಕೂಟರ್ ಗಳನ್ನು ಹೋಲುವಂತಿದೆ. ಮುಂಬಾಗದಿಂದ ಹಿಂಬದಿಯವರೆಗೂ ಅಚ್ಚುಕಟ್ಟಾಗಿ ಕಾಣುವ ಅಂಚುಗಳು ಗಮನ ಸೆಳೆಯುತ್ತವೆ. ಗಮನ ಸೆಳೆಯುವ ಮೈಮಾಟವಶ್ಟೇ ಅಲ್ಲದೇ ಚೇತಕ್ ಸ್ಕೂಟರ್ ನ ಒಳನೋಟವು ಮೆಚ್ಚುಗೆಯಾಗುತ್ತದೆ. ಹಿತವಾದ ಕೂರುಮಣೆ(Seat), ಕೂರುಮಣೆ ಕೆಳಗೆ 22ಲೀಟರ್ ನಶ್ಟು ಸರಕುಗೂಡು(Boot Space) ಇದೆ. ಇದರಲ್ಲಿ ನಿಮ್ಮ ಪುಟಾಣಿ ಚೀಲಗಳನ್ನು, ಕಿರಿದಾದ ತಲೆಗಾಪೊಂದನ್ನು(Helmet) ಇಟ್ಟುಕೊಳ್ಳಬಹುದು. ಕಾಲು ಊರಲು ಸಾಕಶ್ಟು ಜಾಗವಿದೆ.

ಬಂಡಿಯ ತೋರುಮಣೆ(Dashboard) ಪೂರ‍್ತಿಯಾಗಿ ಡಿಜಿಟಲ್ ಗೊಂಡಿದೆ. ಓಟದಳಕ(Odometer), ವೇಗದಳಕ(Speedometer)ಗಳೆಲ್ಲವೂ ಡಿಜಿಟಲ್ ತೋರುಮಣೆಯಲ್ಲಿ ಹೊಳೆಯುತ್ತವೆ. ಇದಕ್ಕೆ ಬ್ಲೂಟೂತ್ ಮೂಲಕ ನಿಮ್ಮ ಚೂಟಿಯುಲಿಯೊಂದಿಗೆ(Smartphone) ಜೋಡಿಸಿಕೊಳ್ಳಬಹುದು. ಬಂಡಿಯ ಚಾರ‍್ಜಿಂಗ್ ಪ್ರಮಾಣವೂ ತೋರುಮಣೆಯಲ್ಲಿ ಕಂಡುಬರುತ್ತದೆ. ಬಂಡಿಯ ಚಾರ‍್ಜಿಂಗ್ ಕಡಿಮೆಯಾಗುತ್ತ ಸುಮಾರು 10% ಮಾತ್ರ ಇರುವಾಗ ಸ್ಕೂಟರ್ ವೇಗ ಕಡಿಮೆಯಾಗುತ್ತ ಚಾರ‍್ಜ್ ಮಾಡುವ ಸೂಚನೆ ನೀಡುತ್ತದೆ, 5% ಆದಾಗ ತೆವಳುತ್ತ ನಿಲ್ಲಿಸಬೇಕು.

ಹೊಸ ಇಲೆಕ್ಟ್ರಿಕ್ ಚೇತಕ್ ನ ಒಳನೋಟ

ಹೆಸರುವಾಸಿ ಬಾಶ್ ಕಂಪನಿಯ ಮಿಂಕಟ್ಟು(Battery) ಚೇತಕ್ ಗೆ ಬಲ ತುಂಬಲಿದೆ. 4.1 ಕಿಲೋವ್ಯಾಟ್ ಕಸುವಿನ ಮೋಟರ್(Motor) ಹೊಂದಿರುವ ಚೇತಕ್ 16 ನ್ಯೂಟನ್ ಮೀ. ತಿರುಗುಬಲ(Torque) ಉಂಟುಮಾಡಲಿದೆ. ಇವುಗಳು ತುಸು ಕಡಿಮೆ ಎನ್ನಿಸಬಹುದು, ಆದರೆ ದಿಟವೇನೆಂದರೆ ಈ ಸ್ಕೂಟರ್ ಇತರೆ ಪೆಟ್ರೋಲ್ ಸ್ಕೂಟರ್ ಗಳಂತೆ ಓಡುತ್ತದೆ. ಟ್ರಾಪಿಕ್ ದಟ್ಟಣೆಯಿಂದ ಕೂಡಿರುವ ಮಹಾನಗರಗಳ ಬೀದಿಯಲ್ಲಿ ಚೇತಕ್ ಸ್ಕೂಟರ್ ಅನ್ನು ಜುಮ್ಮನೆ ಓಡಾಡಿಸಿಕೊಂಡು ಹೋಗಬಹುದು. ಚೇತಕ್ ಸ್ಕೂಟರ್‌ಗೆ ಇಕೋ ಮತ್ತು ಸ್ಪೋರ‍್ಟ್ ಮೋಡ್ ಗಳೆಂಬ ಓಡಿಸುವ ಬಗೆಯಿವೆ. ಸಾಮಾನ್ಯ ಓಡಾಟಕ್ಕೆ ಇಕೋ ಬಗೆ ಮತ್ತು ಸ್ವಲ್ಪ ಜುಮ್ಮನೆ ಓಡಲು ಸ್ಪೋರ‍್ಟ್ ಬಗೆಗೆ ಬದಲಾಯಿಸಿ ಓಡಿಸಬಹುದು. ನೀವು ಬಂಡಿಯೋಡಿಸುವಾಗ ಇತರೆ ಬಂಡಿಯನ್ನು ಓವರ್ ಟೇಕ್ ಮಾಡಲೋ ಇಲ್ಲವೇ ಏರು ಪ್ರದೇಶಗಳಲ್ಲಿ ವೇಗ ಹೆಚ್ಚಿಸುವಾಗ, ಬಂಡಿಯ ಅಂಕೆಮಣೆ ಕೂಡಲೇ ಸ್ಪೋರ‍್ಟ್ ಬಗೆಗೆ ಹೊಂದಿಕೊಳ್ಳುತ್ತದೆ. ಇಕೋ ಮತ್ತು ಸ್ಪೋರ‍್ಟ್ ಬಗೆಗೆ ಓಡಿಸುಗನೇ ಗುಂಡಿ ಅದುಮಿ ಬದಲಾಯಿಸುವ ಅವಶ್ಯಕತೆಯೇ ಇಲ್ಲ. ವೇಗಹೆಚ್ಚುಕದ(Accelerator) ಮೂಲಕ, ಓಡಿಸುಗ ತುಸು ವೇಗ ಹೆಚ್ಚಿಸುತ್ತಿದ್ದಾನೆ ಎಂದು ಅಂಕೆಮಣೆಯು(Control Unit), ಅರಿವಿಕದ(Sensor) ಮೂಲಕ ತಿಳಿದುಕೊಂಡು ಕಣ್ ರೆಪ್ಪೆ ಬಡಿಯುವಶ್ಟರಲ್ಲಿ ಈ ಕೆಲಸ ಮಾಡಿರುತ್ತದೆ. ಚೇತಕ್, ಸ್ಪೋರ‍್ಟ್ ಬಗೆಯಲ್ಲಿ 95ಕಿಮೀ ನಶ್ಟು ಮತ್ತು ಇಕೋ ಬಗೆಯಲ್ಲಿ 85ಕಿಮೀ ನಶ್ಟು ದೂರ ಸಾಗಬಲ್ಲದು. ಈ ಸ್ಕೂಟರ್ ನ ವೇಗದ ಬಗ್ಗೆ ಹೇಳುವುದಾದರೆ, ಸುಮಾರು 65-70 ಕಿಮೀ ವೇಗದಲ್ಲಿ ಓಡಿಸಿದ್ದಾಗಿ ಸ್ಕೂಟರ್ ಓಡಿಸಿ ಒರೆಗೆ ಹಚ್ಚಿದ ಕೆಲವರ ಅನಿಸಿಕೆ.

ಕೂರುಮಣೆ ಕೆಳಗೆ ಚಾರ‍್ಜಿಂಗ್ ಕಿಂಡಿ ಇದೆ. ಸ್ಕೂಟರ್ ಜೊತೆ ನೀಡುವ ಚಾರ‍್ಜರ್ ಅನ್ನು ಬಜಾಜ್ ಕಂಪನಿಯವರು ನಿಮಗೆ ಬೇಕಾದ ಜಾಗದಲ್ಲಿ ಜೋಡಿಸಿ ಹೋಗುತ್ತಾರೆ, ಇದಕ್ಕೆ ಹೊಂದಿಸಿ ಚಾರ‍್ಜ್ ಮಾಡಬಹುದು. ಸೊನ್ನೆಯಿಂದ ಪೂರ‍್ತಿಯಾಗಿ 100% ಚಾರ‍್ಜ್ ಮಾಡಲು 5ಗಂಟೆ ಸಮಯ ತಗಲುತ್ತದೆ, 80% ಚಾರ‍್ಜ್ ಆಗಲು 3.5ಗಂಟೆ ತಗಲುತ್ತದೆ. ಅರ‍್ಬನ್ ಮತ್ತು ಪ್ರೀಮಿಯಮ್ ಎಂಬ ಎರಡು ಬಗೆಯಲ್ಲಿ ಚೇತಕ್ ಮಾರಾಟಗೊಳ್ಳುತ್ತದೆ. ಪ್ರೀಮಿಯಮ್ ಬಗೆಯಲ್ಲಿ ಮಾರಾಟಗೊಳ್ಳುವ ಚೇತಕ್ ನಲ್ಲಿ ಮೆತ್ತನೆಯ ಕೂರುಮಣೆ, ಮುಂಬದಿಯ ಗಾಲಿಗಳಿಗೆ ತಟ್ಟೆತಡೆತದ(Disc Brake) ಏರ‍್ಪಾಟು, ಹೆಚ್ಚಿನ ಬಣ್ಣಗಳ ಆಯ್ಕೆ ನೀಡಲಾಗಿರುತ್ತದೆ. ಅದಕ್ಕೆ ಬೆಲೆಯೂ ಹೆಚ್ಚಿರಲಿದೆ.

ಬೆಲೆ

ಸ್ಕೂಟರ್ ನ ಮಿಂಕಟ್ಟು 70,000 ಕಿಮೀವರೆಗೆ ಬಾಳಿಕೆ ಬರಲಿದೆ, ಸ್ಕೂಟರ‍್ಗೆ 3 ವರ‍್ಶ ಇಲ್ಲವೇ 50,000 ಕಿಮೀವರೆಗಿನ ವಾರಂಟಿ ನೀಡಲಾಗಿದೆ. ಸದ್ಯ ಎಲೆಕ್ಟ್ರಿಕ್ ಚೇತಕ್ ಕರ‍್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಮಹಾರಾಶ್ಟ್ರದ ಪುಣೆ, ಔರಂಗಾಬಾದ, ನಾಗಪುರ ನಗರದ ಬಜಾಜ್-ಕೆಟಿಎಮ್ ಮಳಿಗೆಗಳಲ್ಲಿ ಸಿಗುತ್ತದೆ. ಬರುವ ದಿನಗಳಲ್ಲಿ ಇತರೆ ಊರಿನ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದಂತೆ. ಆಸಕ್ತರು chetak.com ನಲ್ಲಿ ಹೆಚ್ಚಿನ ವಿವರ ತಿಳಿಯಬಹುದು.

ದಿನಬಳಕೆಗೆ, ಮನೆಯಿಂದ ಕಚೇರಿ/ಕೆಲಸದೆಡೆ ಇಲ್ಲವೇ ದಿನವೂ ಕಡಿಮೆ ದೂರದ ಜಾಗಗಳಿಗೆ ಹೋಗಲು ಸ್ಕೂಟರ್ ಕೊಳ್ಳಬೇಕೆನ್ನುವವರು ತಮ್ಮ ಅಗತ್ಯಗಳನ್ನು ನೋಡಿಕೊಂಡು, ಚೇತಕ್ ಸ್ಕೂಟರ್ ಟ್ರೈ ಮಾಡಲು ತೊಂದರೆಯಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: autocarindia.com, chetak.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. savita kulkarni says:

    ಒಳ್ಳೆಯ ಮಾಹಿತಿ

ಅನಿಸಿಕೆ ಬರೆಯಿರಿ:

%d bloggers like this: