ಕವಿತೆ: ಬಾವ ಶುದ್ದಿಯ ಬೆಡಗು

– ಚಂದ್ರಗೌಡ ಕುಲಕರ‍್ಣಿ.

ಅಮರ ಜ್ನಾನದ ಸುದೆಯನುಣಿಸಿದ
ಮರೆಯಲಾರದ ಗುರುವರ
ಯಾವ ಉಪಮೆಗು ನಿಲುಕಲಾರದ
ಪ್ರೀತಿ ಕರುಣೆಯ ಸಾಗರ

ಉಸಿರು ಆಡುವ ಮಾಂಸ ಮುದ್ದೆಗೆ
ಅರಿವು ನೀಡಿದ ಮಾಂತ್ರಿಕ
ಸಕಲ ವಿದ್ಯೆಯ ವಿನಯ ತೇಜದ
ಗುಟ್ಟು ತಿಳಿಸಿದ ಪ್ರೇರಕ

ಶಿಶ್ಯಕೋಟಿಯ ಬರಡು ಬೂಮಿಗೆ
ಮಳೆಯ ಸುರಿಸಿದ ಮಾರುತ
ಎದೆಯ ಹೊಲದಲಿ ಮೊದಲ ಅಕ್ಶರ
ಸಸಿಯ ಸಲಹಿದ ಪರಿಣತ

ಕಾಡ ಬಿದಿರಿಗೆ ಕೊಳಲ ರೂಪವ
ನೀಡಿ ನುಡಿಸಿದ ಗಾಯಕ
ಮನುಜ ಜೀವಿಯ ದಿಟದ ಏಳ್ಗೆಗೆ
ದಿವ್ಯ ಔಶದಿ ತಾರಕ

ಮನದ ಮಲಿನವ ತೊಳೆದು ಪಾವನ
ದೀಕ್ಶೆ ನೀಡಿದ ಸುರನದಿ
ಬಾವ ಶುದ್ದಿಯ ಬೆಡಗು ತೋರಿದ
ಮರ‍್ತ್ಯಲೋಕದ ತವನಿದಿ

(ಚಿತ್ರಸೆಲೆ : pixabay.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: