ಸ್ಟುವರ‍್ಟ್ ಬಿನ್ನಿ – ಕರ‍್ನಾಟಕದ ಆಲ್‌ರೌಂಡ್ ಶಕ್ತಿ

– ರಾಮಚಂದ್ರ ಮಹಾರುದ್ರಪ್ಪ.

ಒಬ್ಬ ಯಶಸ್ವಿ ಅಂತರಾಶ್ಟ್ರೀಯ ಕ್ರಿಕೆಟ್ ಆಟಗಾರನ ಮಗನಾಗಿ ಹುಟ್ಟಿ, ಬೆಂಬಲಿಗರ, ಮಾದ್ಯಮದವರ ಹಾಗೂ ವಿಶ್ಲೇಶಕರಿಂದ ಸದಾ ಕೇಳಿ ಬರುವ ಅಪ್ಪನೊಟ್ಟಿಗಿನ ಹೋಲಿಕೆ, ಟೀಕೆಗಳು ಹಾಗೂ ಒತ್ತಡವನ್ನು ಹಿಮ್ಮೆಟ್ಟಿ ತಾನೂ ಕೂಡ ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ಮಟ್ಟಕ್ಕೆ ಬೆಳೆಯುವುದು ತುಂಬಾ ಕಶ್ಟದ ಹಾದಿ. ಹಾಗಾಗಿಯೇ ಆಟಗಾರರ ಮಕ್ಕಳು ಕ್ರಿಕೆಟ್ ನಲ್ಲಿ ಯಶಸ್ಸು ಕಂಡಿರುವುದು ತೀರಾ ವಿರಳ. ಆದರೆ ಈ ಹಾದಿಯಲ್ಲಿ ಸಾಗಿ ತಂದೆಯಂತೆ ಅಂತರಾಶ್ಟ್ರಿಯ ಕ್ರಿಕೆಟ್ ಆಡಿದವರೇ ಕರ‍್ನಾಟಕದ ನಂಬಿಕಸ್ತ ಆಲ್‌ರೌಂಡರ್ (ಬಲಗೈ ಬ್ಯಾಟ್ಸ್ಮನ್ ಹಾಗೂ ಬಲಗೈ ಮದ್ಯಮ ವೇಗಿ ಸ್ವಿಂಗ್ ಬೌಲರ್) ಸ್ಟುವರ‍್ಟ್ ಬಿನ್ನಿ. ತಂದೆ ರೋಜರ್ ರಂತೆ ಸ್ಟುವರ‍್ಟ್ ಕೂಡ ಈ ಗುರಿ ಮುಟ್ಟಿ ಕರ‍್ನಾಟಕದದಿಂದ ಬಾರತದ ಪರ ಆಡಿದ ಮೊದಲ ಹಾಗೂ ಏಕೈಕ ತಂದೆ-ಮಗನ ಜೋಡಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಹುಟ್ಟು – ಎಳೆವೆಯಿಂದಲೇ ಕ್ರಿಕೆಟ್ ನಂಟು

ಬೆಂಗಳೂರಿನಲ್ಲಿ ಜೂನ್ 3, 1984 ರಂದು ಹುಟ್ಟಿದ ಸ್ಟುವರ‍್ಟ್ ತಂದೆಯ ಪ್ರೋತ್ಸಾಹದಿಂದ ಎಳೆಯ ವಯಸ್ಸಿಗೆ ಕ್ರಿಕೆಟ್ ಆಡತೊಡಗಿದರು. ಬೆಂಗಳೂರಿನ ಪ್ರಾಂಕ್ ಆಂತೋನಿ ಪಬ್ಲಿಕ್ ಶಾಲೆಯಲ್ಲಿ ಪ್ರಾತಮಿಕ ಶಿಕ್ಶಣದ ಬಳಿಕ ಸೇಂಟ್‌ ಜೋಸೆಪ್ಸ್ ಹೈಸ್ಕೂಲ್ ನಲ್ಲಿ ಓದು ಮುಂದುವರೆಸಿದ ಬಿನ್ನಿ ಕ್ರಿಕೆಟ್ ಪಟ್ಟುಗಳನ್ನೂ ಕಲಿಯುತ್ತಾ ಹೋದರು. ತಂದೆ ರೋಜರ್ ಬಿನ್ನಿ ಪುಟ್ಟ ಸ್ಟುವರ‍್ಟ್ ಗೆ ಮೊದಲ ಕೋಚ್ ಆದರು. ನಂತರ ಅವರು ಇಮ್ತಿಯಾಜ್ ಅಹಮದ್ ರ ಅಕ್ಯಾಡೆಮಿಯಲ್ಲಿ ವ್ರುತ್ತಿಪರ ಆಟಗಾರನಾಗಲು ಬೇಕಾದ ಹೆಚ್ಚಿನ ತರಬೇತಿ ಪಡೆದರು. ಅಲ್ಲಿಂದ ಬಿ.ಯು.ಸಿ.ಸಿ ಕ್ಲಬ್ ಸೇರಿದ ಬಿನ್ನಿ ವ್ರುತ್ತಿಪರ ಕ್ರಿಕೆಟ್ ಆಡಲು ಮೊದಲು ಮಾಡಿದರು. ಹಲವಾರು ಕಿರಿಯರ ಪಂದ್ಯಾವಳಿಗಳಾದ ವಿಜಯ್ ಮರ‍್ಚೆಂಟ್ ಟ್ರೋಪಿ, ಬುಚ್ಚಿ ಬಾಬು, ಸಿ.ಕೆ ನಾಯ್ಡು ಹಾಗೂ ಕೂಚ್ ಬಿಹಾರ್ ಟ್ರೋಪಿಗಳಲ್ಲಿ ಆಡಿ ತಮ್ಮ ಆಲ್‌ರೌಂಡ್ ಚಳಕ ತೋರಿದರು. ಬೌಲರ್ ಆಗಿ ಚೆಂಡನ್ನು ಎರಡೂ ದಿಕ್ಕಿನಲ್ಲಿ ಸ್ವಿಂಗ್ ಮಾಡುವುದಲ್ಲದೆ ಬಿರುಸಾಗಿ ಬ್ಯಾಟ್ ಕೂಡ ಬೀಸುತ್ತಿದ್ದ ಬಿನ್ನಿ ಆಯ್ಕೆಗಾರರ ಗಮನ ಸೆಳೆದು 2002 ರ ಕಿರಿಯರ ವಿಶ್ವಕಪ್ ಗೆ ಬಾರತ ತಂಡದಲ್ಲಿ ಎಡೆ ಪಡೆದರು. ನ್ಯೂಜಿಲ್ಯಾಂಡ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಪಾರ‍್ತಿವ್ ಪಟೇಲ್ ಮುಂದಾಳ್ತನದ ಬಾರತ ತಂಡ ಸೆಮಿಪೈನಲ್ ನಲ್ಲಿ ಮುಗ್ಗರಿಸಿತು. ಹೆಚ್ಚು ಬ್ಯಾಟಿಂಗ್ ಅವಕಾಶ ಸಿಗದೆ ಬಿನ್ನಿ ಬೌಲಿಂಗ್ ನಲ್ಲಿ 4 ವಿಕೆಟ್ ಪಡೆದರು. 19ರ ಹರೆಯದ ಸ್ಟುವರ‍್ಟ್‌ರ ಬೆಳವಣಿಗೆಯನ್ನು ಕಂಡಿದ್ದ ರಾಜ್ಯದ ಆಯ್ಕೆಗಾರರು ತಡ ಮಾಡದೆ 2003/04 ರ ಸಾಲಿನ ರಣಜಿ ಟೂರ‍್ನಿಗೆ ಅವರಿಗೆ ಮಣೆ ಹಾಕಿದರು.

ರಣಜಿ ಕ್ರಿಕೆಟ್ ಬದುಕು

2003/04 ರಲ್ಲಿ ತಮಿಳುನಾಡು ಎದುರು ಬೆಂಗಳೂರಿನಲ್ಲಿ ಜೆ.ಅರುಣ್ ಕುಮಾರ್ ರ ಮುಂದಾಳ್ತನದಲ್ಲಿ ಬಿನ್ನಿ ಕರ‍್ನಾಟಕದ ಪರ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಮೊದಲ ಇನ್ನಿಂಗ್ಸ್ ನಲ್ಲಿ ಸೊನ್ನೆಗೆ ಔಟ್ ಆದರೂ ಎರಡನೇ ಇನ್ನಿಂಗ್ಸ್ ನಲ್ಲಿ ಬಿರುಸಿನ ಅರ‍್ದಶತಕ (54) ಬಾರಿಸಿ ನೆಲೆ ಕಂಡುಕೊಂಡರು. ಆ ಬಳಿಕ ಸತತ ವೈಪಲ್ಯಗಳನ್ನು ಎದುರಿಸಿ ಮೂರ‍್ನಾಲ್ಕು ವರುಶಗಳು ಕಾಲ ತಂಡದ ಹೊರಗೂ ಒಳಗೂ ಇದ್ದರು. ಒಂದು ಬಗೆಯಲ್ಲಿ ಅವರ ವ್ರುತ್ತಿ ಬದುಕು ಅತಂತ್ರವಾಗಿತ್ತು. ಕಡೆಗೆ 2007 ರಲ್ಲಿ ಟಿ-20 ಲೀಗ್ ಐ.ಸಿ.ಎಲ್ ಮೊದಲ್ಗೊಂಡಾಗ ಕರ‍್ನಾಟಕವನ್ನು ತೊರೆದು ಬಿನ್ನಿ ಈರೆಬೆಲ್ ಲೀಗ್ ನಲ್ಲಿ ಹೈದರಾಬಾದ್ ಹೀರೋಸ್ ಪರ ಆಡತೊಡಗಿದರು. ಟಿ-20 ಮಾದರಿಯಲ್ಲಿ ತಂಡದ ಬೆನ್ನುಲುಬಾಗಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟರು. ವಿದೇಶಿ ಆಟಗಾರರೊಂದಿಗೆ ಆಡಿ ಇನ್ನಶ್ಟು ಪಕ್ವಗೊಂಡರು. ಆ ಬಳಿಕ ಐ.ಸಿ.ಎಲ್ ಕೊನೆಗೊಂಡು ಬಿ.ಸಿ.ಸಿ.ಐ ಹೇರಿದ್ದ ತಡೆಯನ್ನು ಹಿಂದಕ್ಕೆ ಪಡೆದಾಗ 2009/10 ರ ಸಾಲಿನ ರಣಜಿ ಟೂರ‍್ನಿಗೆ ಬಿನ್ನಿ ಕರ‍್ನಾಟಕ ತಂಡಕ್ಕೆ ಮರಳಿದರು. ಮತ್ತೊಮ್ಮೆ ಕಣಕ್ಕಿಳಿದವರೇ ಹೇರಳವಾಗಿ ರನ್ ಗಳಿಸುವುದರ ಜೊತೆಗೆ ವಿಕೆಟ್‌ಗಳನ್ನೂ ಕಬಳಿಸುತ್ತಾ ಹೋದರು. 2010/11 ರಲ್ಲಿ ಹಿಮಾಚಲ್ ಪ್ರದೇಶದ ಎದುರು ತಮ್ಮ ಚೊಚ್ಚಲ ಶತಕ ಸಿಡಿಸಿದರು(109). ಆ ಸಾಲಿನಲ್ಲಿ ಒಟ್ಟು 456 ರನ್ ಗಳಿಸಿ ತಂಡದಲ್ಲಿ ನೆಲೆ ಕಂಡರೆ ಆ ಬಳಿಕ 2011/12 ರಲ್ಲಿ 612 ರನ್ ಮತ್ತು 2012/13 ರಲ್ಲಿ 753 ರನ್ ಪೇರಿಸಿದರು. ಜೊತೆಗೆ ಎರಡು ಸಾಲಿನಲ್ಲಿ 20 ಕ್ಕೂ ಹೆಚ್ಚು ವಿಕೆಟ್ ಗಳನ್ನೂ ಪಡೆದರು. ಬಿನ್ನಿ ಅಕ್ಶರಶಹ ಒಬ್ಬ ಆಲ್ ರೌಂಡರ್ ಆಗಿ ತಮ್ಮ ಆಟದ ಉತ್ತುಂಗ ತಲುಪಿದರು. 2013 ರಲ್ಲಿ ರಾಜಸ್ತಾನ್ ರಾಯಲ್ಸ್ ಪರ ಐಪಿಎಲ್ ನಲ್ಲೂ ಮಿಂಚಿದ ಬಿನ್ನಿ ಬಾರತ-ಎ ಪ್ರವಾಸಗಳಲ್ಲೂ ಪ್ರಾಬಲ್ಯ ಮೆರೆದು ಬಾರತ ತಂಡದ ಹೊಸ್ತಿಲಲ್ಲಿ ಬಂದು ನಿಂತರು.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

2014 ರಲ್ಲಿ ಹ್ಯಾಮಿಲ್ಟನ್ ನಲ್ಲಿ ನ್ಯೂಜಿಲ್ಯಾಂಡ್ ಎದುರು ದೋನಿ ನಾಯಕತ್ವದಲ್ಲಿ ಬಿನ್ನಿ ತಮ್ಮ ಮೊದಲ ಅಂತರಾಶ್ಟ್ರೀಯ ಒಂದು ದಿನದ ಪಂದ್ಯವಾಡಿದರು. ಬೌಲಿಂಗ್ ನಲ್ಲಿ ಕೇವಲ ಒಂದು ಓವರ್ ಮಾಡಲಶ್ಟೇ ಅವಕಾಶ ಸಿಕ್ಕರೆ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗುವುದೇ ಇಲ್ಲ. ಮುಂದೆ ಬಾಂಗ್ಲಾದೇಶ ಎದುರು ಡಾಕಾದಲ್ಲಿ ತಮ್ಮ ಮೂರನೇ ಪಂದ್ಯದಲ್ಲಿ ಸೊಗಸಾದ ಸ್ವಿಂಗ್ ಬೌಲಿಂಗ್ ನಿಂದ ಬರ‍್ಜರಿ (6/4) ದಾಕಲಿಸಿ ಅಲ್ಲಿವರೆಗೂ ಅನಿಲ್ ಕುಂಬ್ಳೆ ಅವರ ಹೆಸರಲ್ಲಿದ್ದ ಬಾರತೀಯನೊಬ್ಬನ ಶ್ರೇಶ್ಟ ಬೌಲಿಂಗ್ (6/12) ಪ್ರದರ‍್ಶನದ ದಾಕಲೆಯನ್ನು ಬಿನ್ನಿ ತಮ್ಮದಾಗಿಸಿಕೊಂಡರು. ಈ ದಾಕಲೆ ಇನ್ನೂ ಬಿನ್ನಿ ಹೆಸರಲ್ಲೇ ಅಚ್ಚಳಿಯದೆ ಉಳಿದಿದೆ. ಆದರೂ ಅವರಿಗೆ ಎಂದೂ ಸತತ ಅವಕಾಶಗಳನ್ನು ನೀಡಲಾಗುವುದಿಲ್ಲ. ಎಶ್ಟೋ ಬಾರಿ ಒಳ್ಳೆ ಆಟ ಆಡಿದ ಮುಂದಿನ ಪಂದ್ಯದಲ್ಲೇ ಅವರನ್ನು ತಂಡದಿಂದ ಕೈಬಿಡಲಾಯಿತು. 2015 ರ ವಿಶ್ವಕಪ್ ಗೆ ಅವರು ತಂಡದಲ್ಲಿದ್ದರೂ ಒಂದೂ ಪಂದ್ಯದಲ್ಲಿ ಅವರಿಗೆ ನಾಯಕ ಮಣೆ ಹಾಕುವುದಿಲ್ಲ. ನಂತರ ಹರಾರೆಯಲ್ಲಿ ಜಿಂಬಾಬ್ವೆ ಎದುರು ತಮ್ಮ ವಯಕ್ತಿಕ ಅತಿಹೆಚ್ಚು 77 ರನ್ ಗಳಿಸಿದ ಸ್ಟುವರ್‍ಟ್‌ರಿಗೆ ಆ ಬಳಿಕ ಕೇವಲ 3 ಪಂದ್ಯಗಳಲ್ಲಶ್ಟೇ ಆಡಿಸಲಾಗುತ್ತದೆ. ಇನ್ನು 2014 ರಲ್ಲಿ ಇಂಗ್ಲೆಂಡ್ ಎದುರು ಟ್ರೆಂಟ್ ಬ್ರಿಡ್ಜ್ ನಲ್ಲಿ ಟೆಸ್ಟ್ ಪಾದಾರ‍್ಪಣೆ ಮಾಡಿದ ಬಿನ್ನಿ ಮೊದಲ ಪಂದ್ಯದಲ್ಲೇ ಸೋಲಿನ ಸುಳಿಯಲ್ಲಿದ್ದ ಬಾರತ ತಂಡವನ್ನು ಕಾಪಾಡುತ್ತಾರೆ. ಎರಡನೇ ಇನ್ನಿಂಗ್ಸ್ ನಲ್ಲಿ ಸಮಯೋಚಿತ ಬ್ಯಾಟಿಂಗ್ ಮಾಡಿ, 78 ರನ್ ಬಾರಿಸಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಹೀಗಿದ್ದರೂ ಒಂದು ದಿನದ ಪಂದ್ಯಗಳಲ್ಲಾದಂತೆ ಅವರನ್ನು ಕಡೆಗಣಿಸಲಾಗುತ್ತದೆ. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಪಂದ್ಯ ಗೆಲ್ಲಿಸಬಲ್ಲ ಅಳವಿದ್ದ ಬಿನ್ನಿ ಮೇಲೆ ಯಾಕೋ ತಂಡದ ಹೊಣೆ ಹೊತ್ತವರಿಗೆ ನಂಬಿಕೆ ಮೂಡುವುದಿಲ್ಲ. ಕಡೆಗೆ 2016 ರಲ್ಲಿ ವೆಸ್ಟ್ ಇಂಡೀಸ್ ಎದುರು ಟಿ-20 ಪಂದ್ಯದಲ್ಲಿ ಓವರ್ ಒಂದರಲ್ಲಿ 5 ಸಿಕ್ಸ್ ನೀಡಿ ಅವರು ತೀವ್ರ ಮುಜುಗುರ, ಟೀಕೆ ಹಾಗೂ ಲೇವಡಿಗೆ ಗುರಿಯಾಗುತ್ತಾರೆ. ಅಲ್ಲಿಗೆ ಬಿನ್ನಿರ ಅಂತರಾಶ್ಟ್ರೀಯ ಕ್ರಿಕೆಟ್ ಬದುಕು ಹಟಾತ್ತನೆ ಕೊನೆಗೊಳ್ಳುತ್ತದೆ. ಸುಮಾರು ಎರಡೂವರೆ ವರ‍್ಶಗಳ ಕಾಲ ತಂಡದೊಂದಿಗಿದ್ದರೂ ಅವರು ಆಡಿದ್ದು ಕೇವಲ 6 ಟೆಸ್ಟ್, 14 ಒಂದು ದಿನದ ಪಂದ್ಯಗಳು ಹಾಗೂ 3 ಟಿ-20 ಪಂದ್ಯಗಳು ಎಂಬುದು ಬೇಸರದ ಸಂಗತಿ. ಟೆಸ್ಟ್ ಗಳಲ್ಲಿ 194 ರನ್ ಮತ್ತು 3 ವಿಕೆಟ್, ಒಂದು ದಿನದ ಪಂದ್ಯಗಳಲ್ಲಿ 230 ರನ್ ಮತ್ತು 20 ವಿಕೆಟ್, ಟಿ-20ಲಿ 35 ರನ್ ಮತ್ತು 1 ವಿಕೆಟ್ ಗಳನ್ನು ಬಿನ್ನಿ ಪಡೆದಿದ್ದಾರೆ.

ಐಪಿಎಲ್ ಕ್ರಿಕೆಟ್ ಬದುಕು

2010 ರಲ್ಲಿ ಮುಂಬೈ ತಂಡದಿಂದ ತಮ್ಮ ಐಪಿಎಲ್ ಬದುಕನ್ನು ಮೊದಲು ಮಾಡಿದ ಬಿನ್ನಿ 2011 ರಲ್ಲಿ ರಾಜಸ್ತಾನ ತಂಡ ಸೇರಿಕೊಂಡರು. ಅಲ್ಲಿ ನಾಯಕ ರಾಹುಲ್ ದ್ರಾವಿಡ್ ರ ಗರಡಿಯಲ್ಲಿ ಪಳಗಿ ತಮ್ಮ ತಂಡದ ನಂಬಿಕಸ್ತ ಆಲ್ರೌಂಡರ್ ಆಗಿಹೊರಹೊಮ್ಮಿದರು. ಕೆಳ ಕ್ರಮಾಂಕದಲ್ಲಿ ಅವರು ಅಂತರಾಶ್ಟ್ರೀಯ ಬೌಲರ್ ಗಳನ್ನೂ ದಿಟ್ಟತನದಿಂದ ಎದುರಿಸಿ ನಿರಾಯಾಸವಾಗಿ ರನ್ ಗಳಿಸುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು. ಬೌಲಿಂಗ್ ನಲ್ಲಿ ಹೆಚ್ಚು ರನ್ ನೀಡದೆ ಬ್ಯಾಟ್ಸ್ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಬಹುತೇಕ ಬಾರಿ ಯಶಸ್ವಿಯಾದರು. 2014 ರಿಂದಾಚೆಗೆ ಒಬ್ಬ ಆಟಗಾರನಾಗಿ ಅಂತರಾಶ್ಟ್ರೀಯ ಮಟ್ಟಕ್ಕೆ ಏರಿದ ಬಿನ್ನಿರನ್ನು 2016 ರಲ್ಲಿ ಬೆಂಗಳೂರು ತಂಡ ದೊಡ್ಡ ಮೊತ್ತ ಚೆಲ್ಲಿ ತಮ್ಮದಾಗಿಸಿಕೊಂಡಿತು. ಬಳಿಕ 2018 ರಲ್ಲಿ ಮತ್ತೊಮ್ಮೆ ರಾಜಸ್ತಾನ ಸೇರಿದ ಅವರು 2019 ರಲ್ಲಿ ತಮ್ಮ ಕಡೇ ಐಪಿಎಲ್ ಪಂದ್ಯ ಆಡಿದರು. ಒಟ್ಟು 95 ಪಂದ್ಯಗಳನ್ನಾಡಿರುವ ಬಿನ್ನಿ 129 ರ ಸ್ಟ್ರೈಕ್ ರೇಟ್ ನಲ್ಲಿ 880 ರನ್ ಗಳಿಸಿದರೆ ಓವರ್ ಗೆ 7.66 ರ ಉತ್ತಮ ಎಕಾನಮಿರೇಟ್ ನೊಂದಿಗೆ 22 ವಿಕೆಟ್ ಗಳನ್ನು ಪಡೆದಿದ್ದಾರೆ. 2014 ರಲ್ಲಿ ಬಾರತ ತಂಡದಲ್ಲಿ ಎಡೆ ಪಡೆಯಲು ಬಿನ್ನಿರ ಸ್ತಿರ ಐಪಿಎಲ್ ಪ್ರದರ‍್ಶನ ಕೂಡ ನೆರವಿಗೆ ಬಂದದ್ದು ಸುಳ್ಳಲ್ಲ.

ಕರ‍್ನಾಟಕದ ಆಲ್‌ರೌಂಡ್ ಶಕ್ತಿ

2010 ರಿಂದಾಚೆಗೆ ರಾಜ್ಯ ತಂಡ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿ ಸತತವಾಗಿ ರಣಜಿ, ಇರಾನಿ ಮತ್ತು ವಿಜಯ್ ಹಜಾರೆ ಟೂರ‍್ನಿಗಳನ್ನು ಗೆಲ್ಲುವಲ್ಲಿ ಬಿನ್ನಿರ ಆಲ್‌ರೌಂಡ್ ಚಳಕದ ಪಾತ್ರ ದೊಡ್ಡದಿದೆ. ಮೇಲಿನ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಬೇಗ ಔಟ್ ಆದಾಗ ಬೌಲರ್ ಗಳ ಒಟ್ಟಿಗೆ ಸೇರಿ ವೇಗವಾಗಿ ರನ್ ಕಲೆ ಹಾಕಿ ಎಶ್ಟೋ ಬಾರಿ ತಂಡವನ್ನು ಕಾಪಾಡಿದ್ದಾರೆ. ಜೊತೆಗೆ ಬೌಲಿಂಗ್ ನಲ್ಲೂ ಕೂಡ ಇವರು ಜೊತೆಯಾಟ ಮುರಿಯುವುದರಲ್ಲಿ ಎತ್ತಿದ ಕೈ. ಎಂತಹ ಪಿಚ್ ಆದರೂ ಗಂಟೆಗೆ (125-130) ಕಿ.ಮೀ ವೇಗದಲ್ಲಿ ಸ್ವಿಂಗ್ ಮಾಡಬಲ್ಲ ಅವರ ಅಳವು ತಂಡದ ಟ್ರಂಪ್ ಕಾರ‍್ಡ್ ಆದದ್ದು ಸುಳ್ಳಲ್ಲ. ಅವರು ಒದಗಿಸುತ್ತಿದ್ದ ಸಮತೋಲನ ತಂಡವನ್ನು ಗಟ್ಟಿಗೊಳಿಸಿತು. ಬುವನೇಶ್ವರದಲ್ಲಿ ಒಡಿಶಾ ಎದುರು (5/51; 5/49) ದಾಳಿಯಿಂದ 10 ವಿಕೆಟ್ ಪಡೆದದ್ದು ಅವರ ಶ್ರೇಶ್ಟ ಬೌಲಿಂಗ್ ಪ್ರದರ‍್ಶನವಾದರೆ, ಉತ್ತರ ಪ್ರದೇಶ ಎದುರು ಶಿವಮೊಗ್ಗದಲ್ಲಿ(94 ಮತ್ತು 189) ಅವರ ಶ್ರೇಶ್ಟ ಬ್ಯಾಟಿಂಗ್ ಪ್ರದರ‍್ಶನ. 2013 ರಲ್ಲೊಮ್ಮೆ ಬೆಂಗಳೂರಲ್ಲಿ ಬುಮ್ರಾ ಹಾಗೂ ಅಕ್ಶರ್ ಪಟೇಲ್ ರ ಬೌಲಿಂಗ್ ಬಲವಿದ್ದ ಗುಜರಾತ್ ಎದುರು 105 ರನ್ ಗಳ ಇನ್ನಿಂಗ್ಸ್ ಹಿನ್ನಡೆ ಅನುಬವಿಸಿ ಎರಡನೇ ಇನ್ನಿಂಗ್ಸ್‌ನಲ್ಲಿ 23/2 ಗೆ ಸಿಲುಕಿ ಸೋಲಿನ ಸುಳಿಯಲ್ಲಿದ್ದ ರಾಜ್ಯ ತಂಡವನ್ನು ಬಿನ್ನಿ ಒತ್ತಡದಲ್ಲೇ ತಮ್ಮ ಸಿಡಿಲಬ್ಬರದ ಶತಕ 114 (99 ಬಾಲ್) ದಿಂದ ಕಾಪಾಡುತ್ತಾರೆ. ಇದು ಬಿನ್ನಿರ ಅಳವಾಗಿತ್ತು. ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಸದಾ ನೆರವಾಗುತ್ತಿದ್ದರು. ಜೊತೆಗೆ ಅವರೊಬ್ಬ ಚುರುಕಾದ ಪೀಲ್ಡರ್ ಆಗಿದ್ದು ಎಶ್ಟೋ ಅಸಾದ್ಯವೆಂಬಂತಿದ್ದ ಕ್ಯಾಚ್ ಗಳನ್ನು ಹಿಡಿದಿರುವ ಎತ್ತುಗೆಗಳಿವೆ. ಅಂತರಾಶ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಬಾವ ಬೀರದಿದ್ದರೂ ಕರ‍್ನಾಟಕ ತಂಡಕ್ಕೆ ಮಾತ್ರ ಅವರು ಅಕ್ಶರಶಹ ಒಬ್ಬ ಶ್ರೇಶ್ಟ ಆಲ್ರೌಂಡರ್ ಆಗಿದ್ದರು. ಬಿನ್ನಿ ಕರ‍್ನಾಟಕದೊಂದಿಗೆ ಒಂದೊಂದು ರಣಜಿ, ಇರಾನಿ ಮತ್ತು ವಿಜಯ್ ಹಜಾರೆ ಟ್ರೋಪಿಗಳನ್ನು ಗೆದ್ದಿದ್ದಾರೆ. ಅದರಲ್ಲಿ 2014 ರ ಇರಾನಿ ಕಪ್ ಲಿ ಅವರು ಗಳಿಸಿದ ಬಿರುಸಿನ ಶತಕ (122) ದೇಸೀ ಕ್ರಿಕೆಟ್ ನಲ್ಲಿ ಆ ಸಾಲಿನ ಶ್ರೇಶ್ಟ ಶತಕಗಳಲ್ಲೊಂದಾಗಿತ್ತು. ನಾಲ್ಕು ರಣಜಿ ಪಂದ್ಯಗಳಲ್ಲಿ ನಾಯಕನಾಗಿ ರಾಜ್ಯ ತಂಡವನ್ನು ಮುನ್ನಡೆಸಿರುವ ಬಿನ್ನಿ ಒಂದರಲ್ಲಿ ಗೆಲುವು ಕಂಡು ಇನ್ನುಳಿದ ಪಂದ್ಯಗಳಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ವ್ರುತ್ತಿಬದುಕಿನಲ್ಲಿ 95 ಮೊದಲ ದರ‍್ಜೆ ಪಂದ್ಯಗಳಲ್ಲಿ 11 ಶತಕ, 22 ಅರ‍್ದಶತಕಗಳೊಂದಿಗೆ 4,796 ರನ್ ಗಳಿಸಿ 148 ವಿಕೆಟ್ ಗಳನ್ನು ಕೆಡವಿದ್ದಾರೆ. ಇನ್ನು 100 ಲಿಸ್ಟ್-ಎ ಪಂದ್ಯಗಳಲ್ಲಿ 1 ಶತಕ, 10 ಅರ‍್ದಶತಕದೊಂದಿಗೆ 1,788 ರನ್ ಗಳಿಸಿ 99 ವಿಕೆಟ್ ಗಳನ್ನು ಪಡೆದರೆ 150 ಟಿ-20 ಪಂದ್ಯಗಳಲ್ಲಿ 1 ಅರ‍್ದಶತಕದೊಂದಿಗೆ 1,641 ಪೇರಿಸಿ 73 ವಿಕೆಟ್ ಗಳನ್ನು ಪಡೆದಿದ್ದಾರೆ. 2019 ರಲ್ಲಿ ಕರ‍್ನಾಟಕ ತೊರೆದು ನಾಗಾಲ್ಯಾಂಡ್ ಪರ ಎರಡು ವರುಶ ಆಡಿದ ಬಿನ್ನಿ ಒಟ್ಟು 18 ವರುಶಗಳ ಸುದೀರ‍್ಗ ವ್ರುತ್ತಿ ಬದುಕಿನ ಬಳಿಕ 2021 ರ ಆಗಸ್ಟ್ ನಲ್ಲಿ ಎಲ್ಲಾ ಬಗೆಯ ಕ್ರಿಕೆಟ್ ನಿಂದ ಅದಿಕ್ರುತವಾಗಿ ನಿವ್ರುತ್ತಿ ಗೋಶಿಸಿದರು. ಅಲ್ಲಿಗೆ ಕರ‍್ನಾಟಕ ಕ್ರಿಕೆಟ್ ನ ಗೆಲುವಿನ ಇತಿಹಾಸದ ಒಂದು ಕೊಂಡಿ ಕಳಚಿದಂತಾಯಿತು.

ಟ್ರೋಲ್ ಗಳಿಗೆ ಆಟದಿಂದ ಬದಲು ನೀಡಿದ ಆಟಗಾರ

ಬಾರತದ ಇತ್ತೀಚಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಲೇವಡಿ, ಟ್ರೋಲ್ ಗಳಿಗೆ ವಿನಾಕಾರಣ ಗುರಿಯಾಗಿರುವ ಆಟಗಾರ ಎಂದರೆ ಅದು ಸ್ಟುವರ‍್ಟ್ ಬಿನ್ನಿ. ಮಂದಿ ಸುಕಾಸುಮ್ಮನೆ ಅವರ ತಂದೆ ರೋಜರ್ ಬಿನ್ನಿರ ಪ್ರಬಾವದಿಂದಲೇ ಸ್ಟುವರ‍್ಟ್ ಬಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಟ್ರೋಲ್ ಮಾಡಿದರೆ ಇನ್ನು ಕೆಲವರು ಅವರ ಹೆಂಡತಿ ಜನಪ್ರಿಯ ನಿರೂಪಕಿ ಮಯಂತಿ ಲ್ಯಾಂಗರ್ ರನ್ನೂ ಗುರಿಯಾಗಿಸಿ ಟ್ರೋಲ್ ಮಾಡಿದ್ದುಂಟು. ಆದರೆ ಇಂತಹ ಯಾವುದೇ ವಯಕ್ತಿಕ ದಾಳಿಗಳಿಂದ ತಾಳ್ಮೆ ಕಳೆದುಕೊಳ್ಳದ ಸಂಬಾವಿತ ಆಟಗಾರ ಸ್ಟುವರ‍್ಟ್ ಸದಾ ಬ್ಯಾಟ್ ಮತ್ತುಬಾಲ್ ನಿಂದಲೇ ಉತ್ತರ ನೀಡಿದರು. ಇಂದಿಗೂ ಸಹ ಅವರ ಸಾಮಾಜಿಕ ಜಾಲತಾಣದ ಕಾತೆಗಳಲ್ಲಿ ಕಮೆಂಟ್ ಆಯ್ಕೆಯನ್ನು ಅವರು ತಡೆ ಹಿಡಿದಿರುವುದು ಸಾದನೆಗೈದ ಒಬ್ಬ ಅಂತರಾಶ್ಟ್ರೀಯ ಆಟಗಾರನನ್ನು ನಾವೆಶ್ಟು ಕೆಟ್ಟದಾಗಿ ನಡೆಸಿಕೊಂಡಿದ್ದೇವೆ ಎಂಬುದಕ್ಕೆ ಎತ್ತುಗೆ. ದೇಸೀ ಕ್ರಿಕೆಟ್ ಅನ್ನು ನೋಡಿದವರಿಗೆ ಮಾತ್ರ ಬಿನ್ನಿ ಅವರ ಬೆಲೆ ಗೊತ್ತು. ಅಲ್ಲಿ ಅವರೊಬ್ಬ ಶ್ರೇಶ್ಟ ಆಲ್ರೌಂಡರ್. ಬಿ.ಸಿ.ಸಿ.ಐ ಅದ್ಯಕ್ಶ ಸೌರವ್ ಗಂಗೂಲಿ ಕೂಡ ಕರ‍್ನಾಟಕ ತಂಡಕ್ಕೆ ಬಿನ್ನಿ ನೀಡಿದ ಕೊಡುಗೆಯನ್ನು ಇತ್ತೀಚಿಗೆ ಕೊಂಡಾಡಿದರು. ಈಗ ಆಟದ ಅಂಗಳದಿಂದ ದೂರ ಸರಿದಿರುವ ಬಿನ್ನಿ ಕೋಚಿಂಗ್ ನತ್ತ ತಮಗಿರುವ ಒಲವನ್ನು ಹೇಳಿಕೊಂಡಿದ್ದಾರೆ. ಅವರ ಮುಂದಿನ ಎಲ್ಲಾ ಕಾರ‍್ಯಗಳಿಗೂ ಶುಬ ಹಾರೈಸುತ್ತಾ ರಾಜ್ಯ ತಂಡಕ್ಕೆ ಬಿನ್ನಿ ನೀಡಿದ ಸೇವೆಗೆ ದನ್ಯವಾದ ಹೇಳೋಣ. ನೀವೊಬ್ಬ ಸೊಗಸಾದ ಆಟಗಾರ, ಸ್ಟುವರ‍್ಟ್! ಒಳ್ಳೆದಾಗಲಿ.

(ಚಿತ್ರ ಸೆಲೆ: business-standard.com, enavabharat.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: