ಸತ್ಯದ ಅಬಯದಾಮ – ಒಂದು ವೈವಿದ್ಯಮಯ ಸುತ್ತಾಟದ ತಾಣ

– .

ಸತ್ಯದ ಅಬಯದಾಮದ ಅಪೂರ‍್ಣ ವಸ್ತುಸಂಗ್ರಹಾಲಯ ತೈಲ್ಯಾಂಡಿನ ಪಟ್ಟಾಯ ಎಂಬಲ್ಲಿದೆ. ಈ ಸಂಗ್ರಹಾಲಯದ ಕಟ್ಟಡದ ವೈಶಿಶ್ಟ್ಯವೇನೆಂದರೆ ಇದನ್ನು ‘ಆಯುತ್ತಾಯ’ ಶೈಲಿಯಲ್ಲಿ ಸಂಪೂರ‍್ಣವಾಗಿ ಮರದಿಂದಲೇ ನಿರ‍್ಮಿಸಲಾಗುತ್ತಿದೆ. ಇದರ ರೂವಾರಿ ತಾಯ್ ಉದ್ಯಮಿ ಲೆಕ್ ವಿರಿಯಪ್ಪನ್. ಇದರ ನಿರ‍್ಮಾಣದಲ್ಲಿ ವಿಶೇಶವಾಗಿ ಮಾಯಿ ಡಿಯಾಂಗ್, ಮಾಯಿ ಟಾಕಿಯನ್, ಮಾಯ್ ಪಂಚಾತ್ ಮತ್ತು ತೇಗದ ಮರಗಳನ್ನು ಬಳಸಲಾಗಿದೆ. ಮರದ ಕೆತ್ತನೆಯ ವಿಗ್ರಹಗಳು ಮತ್ತು ಶಿಲ್ಪಗಳು ಈ ಅಬಯದಾಮದಲ್ಲಿದೆ. ಈ ದೇವಾಲಯದಲ್ಲಿ ಬಳಸಲಾಗಿರುವ ಮೇಲ್ಕಾಣಿಸಿದ ಮರಗಳು ದೀರ‍್ಗ ಕಾಲ ಬಾಳಿಕೆ ಬರುವಂತಹುದಾಗಿದ್ದು, ಗೆದ್ದಲು ಮುಕ್ತ ಸಹ ಹೌದು!.

ಅಬಯದಾಮದ ನಿರ‍್ಮಾಣದ ಸುತ್ತ

1981ರಲ್ಲಿ ಸತ್ಯದ ಅಬಯದಾಮದ ನಿರ‍್ಮಾಣ ಪ್ರಾರಂಬವಾಯಿತು. ನಲವತ್ತು ವರ‍್ಶಗಳಾದರೂ, ಇನ್ನೂ ನಿರ‍್ಮಾಣ ನಡೆಯುತ್ತಲೇ ಇದೆ. ನಿರ‍್ಮಾಣ ಹಂತದಲ್ಲೇ ಇರುವ ಇದರ ವೀಕ್ಶಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ವೀಕ್ಶಕರು ಗಡುಸಾದ ಶಿರಸ್ತ್ರಾಣ(Helmet) ದರಿಸಿ, ತಮ್ಮ ತಲೆಯನ್ನು ಕಾಪಾಡಿಕೊಳ್ಳುವುದು ಕಡ್ಡಾಯ. ಸತ್ಯದ ಅಬಯದಾಮದ ವಸ್ತುಸಂಗ್ರಹಾಲಯ, ಹದಿಮೂರು ಹೆಕ್ಟೇರ್ ನಶ್ಟು ವಿಶಾಲವಾದ ಪ್ರದೇಶದಲ್ಲಿದ್ದರೂ, ದೇವಾಲಯದ ವಿಸ್ತೀರ‍್ಣ ಮಾತ್ರ 2,115 ಚದರ ಮೀಟರ್ ಆಗಿದೆ. ಇದರಲ್ಲಿ ಅನೇಕ ಶಿಕರಗಳಿದ್ದು, ಅವುಗಳಲ್ಲಿ 105 ಮೀಟರಿನ ಗರ‍್ಬಗ್ರುಹದ ಶಿಕರವು ಅತ್ಯಂತ ಎತ್ತರವಾದದ್ದಾಗಿದೆ. ಈಗಾಗಲೇ ತಿಳಿಸಿದಂತೆ ನಲವತ್ತು ವರ‍್ಶಗಳ ಹಿಂದೆ ಪ್ರಾರಂಬವಾದ ಇದರ ನಿರ‍್ಮಾಣ 2025ರ ವೇಳೆಗೆ ಸಂಪೂರ‍್ಣವಾಗಬಹುದು ಎಂಬ ಅಂದಾಜಿದೆಯಂತೆ. ತೈಲ್ಯಾಂಡಿನ ಆಯುತ್ತಾಯ ಶೈಲಿಯನ್ನು ಈ ದೇವಾಲಯದ ಶಿಲ್ಪಗಳಲ್ಲಿ ಕಾಣಬಹುದು. ಆಯುತ್ತಾಯ ಶೈಲಿಯ ಕರಕುಶಲ ಮರದ ಕೆತ್ತನೆಗೆ ಇಲ್ಲಿ ಪ್ರಾಶಸ್ತ್ಯ ನೀಡಲಾಗಿದೆ. ಈ ದೇವಾಲಯದ ರಚನೆಯಲ್ಲಿನ ಪ್ರತಿ ಮೇಲ್ಮೈಯನ್ನೂ ತಾಯ್, ಹಿಂದೂ, ಬೌದ್ದ, ಚೈನೀಸ್ ಮತ್ತು ಕಮೇರ್ ಸಂಪ್ರದಾಯದ ಚಿತ್ತಾರಗಳಿಂದ ಅಲಂಕರಿಸಲಾಗಿದೆ.

ಈ ದೇವಾಲಯದಲ್ಲಿನ ವಿಗ್ರಹಗಳನ್ನು ಮಾಯಿ ಟಾಕಿಯನ್ ಮರದಿಂದ ಕೆತ್ತಲಾಗಿದೆ. ಟಾಕಿಯನ್ ಮರ ಬಹಳ ಆಕರ‍್ಶಣೀಯವಾಗಿದ್ದು, ಆದ್ಯಾತ್ಮಿಕ ಅಯಸ್ಕಾಂತೀಯ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಹಾಗಾಗಿ ಎಲ್ಲಾ ದೇವರ ವಿಗ್ರಹಗಳ ಕೆತ್ತನೆಯಲ್ಲೂ ಇದೇ ಮರ ಬಳಕೆಯಾಗಿದೆ. ಟಾಕಿಯನ್ ಮರವು 600 ವರ‍್ಶಗಳ ಕಾಲ ಉಳಿಯುತ್ತದೆ ಎಂಬ ಬರವಸೆ ಅಲ್ಲಿನ ಜನರಲ್ಲಿದೆ. ಅಲ್ಲದೆ ಇನ್ನೂ ಹೆಚ್ಚು ಬಾಳಿಕೆ ಬರುವ ಅನೇಕ ಮರಗಳನ್ನು ಉಪಯೋಗಿಸಿರುವ ಕಾರಣ ದೇವಾಲಯದ ಮೇಲ್ಮೈ ರಚನೆ ವಿವಿದ ರೀತಿಯಲ್ಲಿದೆ. ಅತಿ ಸೂಕ್ಶ್ಮ ಶಿಲ್ಪದ ಕೆತ್ತನೆಗೆ ತೇಗದ ಮರವನ್ನು ಬಳಸಲಾಗಿದೆ. ಈ ದೇವಾಲಯದ ಗರ‍್ಬಗ್ರುಹದ ಮೇಲೆ ಚತುರ‍್ಮುಕ ಬ್ರಹ್ಮನ ಮೂರ‍್ತಿ ಇದೆ. ದೇವಾಲಯದ ಉತ್ತರ ದಿಕ್ಕಿನ ಸಬಾಂಗಣದಲ್ಲಿ ಗ್ವಾನಿಯನ್ (ಮಹಾಯಾನ ಬೌದ್ದ ದರ‍್ಮವನ್ನು ಸಂಕೇತಿಸುವ) ಮತ್ತು ಇತರೆ ಶಿಲ್ಪಕಲೆಗಳನ್ನು ಕಾಣಬಹುದು. ದಕ್ಶಿಣದ ಸಬಾಂಗಣ ಬ್ರಹ್ಮ, ವಿಶ್ಣು ಮತ್ತು ಶಿವನ ಶಿಲ್ಪಗಳ ಜೊತೆಗೆ ಸೂರ‍್ಯ, ಚಂದ್ರ ಮತ್ತು ಗ್ರಹಗಳ ಕಗೋಳ ವಿಶಯಗಳನ್ನು ಒಳಗೊಂಡಿದೆ. ಪಶ್ಚಿಮ ಸಬಾಂಗಣವು ಬೂಮಿ, ಗಾಳಿ, ನೀರು ಮತ್ತು ಬೆಂಕಿಯನ್ನು ಪ್ರತಿನಿದಿಸುತ್ತದೆ. ಇನ್ನೂ ಪೂರ‍್ವ ದಿಕ್ಕನ್ನು ಗಮನಿಸಿದರೆ, ಅದರಲ್ಲಿ ಕೌಟುಂಬಿಕ ವಿಶಯಗಳಿಗೆ ಪ್ರಾತಿನಿದ್ಯವನ್ನು ನೀಡಲಾಗಿದೆ. ಗರ‍್ಬಗ್ರುಹದ ಗೋಪುರವು 105 ಮೀಟರ್ ನಶ್ಟು ಎತ್ತರವಿದ್ದು, ಅಲ್ಲಿಂದ ಸುತ್ತ ಮುತ್ತಲ, ತೈಲ್ಯಾಂಡಿನ ಕೊಲ್ಲಿಯಂತಹ, ಆಕರ‍್ಶಕ ನೋಟವನ್ನು ವೀಕ್ಶಿಸಬಹುದಾಗಿದೆ.

ಸತ್ಯದ ಈ ಅಬಯದಾಮವನ್ನು “ತಾಯ್ ಕರಕುಶಲತೆಯ ಸ್ಮಾರಕ” ಎಂದು ವರ‍್ಣಿಸಲಾಗಿದೆ. ಈ ದೇವಾಲಯದಲ್ಲಿ ಆನೆಗಳ, ಮನುಶ್ಯರ, ಪ್ರಕ್ರುತಿ ಸೌಂದರ‍್ಯ ದ್ರುಶ್ಯಗಳ, ಅನೇಕಾನೇಕ ಜೀವಿಗಳ ಮತ್ತು ಪುರಾಣದ ದೇವತೆಗಳ ಅದ್ಬುತ ಕೆತ್ತನೆಗಳನ್ನು ಕಾಣಬಹುದು. ಬೂಮಿಯ ಪುರಾತನ ದ್ರುಶ್ಟಿ, ಪ್ರಾಚೀನ ಜ್ನಾನ ಮತ್ತು ಪೂರ‍್ವ ತತ್ವಶಾಸ್ತ್ರದ ಪ್ರತಿಬಿಂಬ ಇವೆಲ್ಲಾ ದೇವಾಲಯದ ಒಳ ಹಾಗೂ ಹೊರ ಗೋಡೆಗಳನ್ನು ಅಲಂಕ್ರುತಗೊಳಿಸಿವೆ. ಸ್ತಳೀಯರು ಇವೆಲ್ಲವನ್ನೂ ಅತ್ಯಂತ ಪ್ರೀತಿ ಮತ್ತು ಆದರದಿಂದ ಗೌರವಿಸುತ್ತಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: bangkok.compattayaunlimited.com , meanderingtales.com , wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: