ನಿದ್ದೆಯೆಂಬ ನಿತ್ಯ ಸಂಜೀವಿನಿ

– ಸಂಜೀವ್ ಹೆಚ್. ಎಸ್.

ನಿದ್ದೆ ಸಕಲ ಜೀವಿಗಳಿಗೂ ದೇವರು ಕೊಟ್ಟಿರುವ ವರ. ಮಾನವನ ಸಹಿತ ಎಲ್ಲಾ ಜೀವರಾಶಿಗಳಿಗೆ ನಿದ್ದೆ ಎಂಬುದು ಬೆಲೆ ಕಟ್ಟಲಾಗದ ಉಡುಗೊರೆ. ಹಗಲಿನಲ್ಲಿ ಬೆಳಕು ಆಗ ಎದ್ದಿರಬೇಕು, ರಾತ್ರಿ ಎಂದರೆ ಕತ್ತಲು ಅಂದರೆ ನಾವೆಲ್ಲ ನಿದ್ದೆ ಮಾಡಿ ವಿಶ್ರಾಂತಿ ಪಡೆಯುವ ಸಮಯವಂತೆ. ಪ್ರಕ್ರುತಿಯಲ್ಲಿ ನಡೆಯುವ ಹಗಲು-ರಾತ್ರಿ ಎಂಬ ವಿಸ್ಮಯಕ್ಕೆ ನಮ್ಮನ್ನು ಹೊಂದಾಣಿಕೆ ಮಾಡಿದ ಬಗವಂತ, ಅದ್ಬುತ ಸ್ರುಶ್ಟಿಕರ‍್ತನೇ ಸರಿ.

ನಿದ್ದೆ ಮತ್ತು ಮಾನವನ ನಂಟು

ಒಬ್ಬ ವಯಸ್ಕ ವ್ಯಕ್ತಿಗೆ ದಿನಕ್ಕೆ 7-8 ಗಂಟೆ ನಿದ್ದೆ ಅವಶ್ಯಕ ಎಂದು ಸಂಶೋದನೆಗಳು ಹೇಳುತ್ತವೆ. ನಮ್ಮ ದೇಹವು ಒಂದು ಯಂತ್ರವಿದ್ದಂತೆ. ದಿನವೆಲ್ಲಾ ಕೆಲಸ ಮಾಡುವ ನಮ್ಮ ಕಣ್ಣು, ಕಾಲು, ಕೈ, ಕಿವಿ, ನಾಲಿಗೆ, ಮೆದುಳು ಹೀಗೆ ಇತರ ಪ್ರಮುಕ ದೇಹದ ಬಾಗಗಳಿಗೆ ವಿಶ್ರಾಂತಿ  ಅತ್ಯವಶ್ಯಕ. ಈ ವಿಶ್ರಾಂತಿಯೇ ನಿದ್ದೆ. ಮನುಶ್ಯನ ನಿತ್ಯದ ಜಂಜಾಟ, ಆಯಾಸ, ಕೆಲಸದ ಒತ್ತಡ ಮತ್ತು ಚಿಂತೆಯ ನಡುವೆ ಒಂದಶ್ಟು ನೆಮ್ಮದಿ ಸಿಗುವುದು ನಿದ್ದೆಯಿಂದ ಮಾತ್ರ ಎಂದರೆ ಅದು ಅತಿಶಯೋಕ್ತಿಯಲ್ಲ. ಸಮಯ ಮತ್ತು ಪರಿಸ್ತಿತಿ ಎಶ್ಟೇ ಕಟಿಣ ಮತ್ತು ದುಸ್ತಿತಿಯಲ್ಲಿ ಇದ್ದರೂ ಕೂಡ ನಮಗರಿಯದೇ ನಮ್ಮನ್ನು ಆವರಿಸಿಕೊಳ್ಳುವ ನಿದ್ರಾ ದೇವತೆ ನಿಜಕ್ಕೂ ನಮ್ಮನ್ನು ಕಾಪಾಡುವ ಬಹುದೊಡ್ಡ ಶಕ್ತಿ. ಉತ್ತಮ ಆರೋಗ್ಯಕ್ಕೆ ಆಹಾರ ಮತ್ತು ವ್ಯಾಯಾಮ ಎಶ್ಟು ಮುಕ್ಯವೋ ಅಶ್ಟೇ ಮುಕ್ಯ ನಿದ್ದೆ ಕೂಡ. ಎಶ್ಟೇ ದಣಿದಿದ್ದರೂ ಒಂದು ಸಣ್ಣ ನಿದ್ದೆ ನಮ್ಮನ್ನು ಚೇತರಿಸಿಕೊಳ್ಳುವ ಹಾಗೆ ಮಾಡುತ್ತದೆ, ಹುಮ್ಮಸ್ಸನ್ನು ತುಂಬಿ ಉಲ್ಲಾಸಬರಿತರನ್ನಾಗಿ ಮಾಡುತ್ತದೆ.

ನಿದ್ದೆ ಇಲ್ಲದಿದ್ದರೆ ಆಗುವ ಅನಾಹುತಗಳು ಒಂದೆರಡಲ್ಲ

ಮನುಶ್ಯನ ನಿದ್ದೆಯ ಸಮಯ, ಆತನಲ್ಲಿ ಹಲವಾರು ರಾಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಇದರಲ್ಲಿ ‘ಸೆರಟೋನಿನ್’ ಎಂಬ ಹಾರ‍್ಮೋನ್ ಅಂಶವೂ ಕೂಡ ಒಂದು. ಯಾರಿಗೆ ಈ ಅಂಶ ಕಡಿಮೆ ಉತ್ಪತ್ತಿ ಆಗುವುದೋ ಅವರು ಕಂಡಿತ ಮಾನಸಿಕ ಕಿನ್ನತೆಗೆ ಒಳಗಾಗುತ್ತಾರೆ. ಆದ್ದರಿಂದ ಮನಸ್ಸಿಗೆ ಯಾವುದೇ ವಿಶಯವನ್ನು ದೀರ‍್ಗಕಾಲದವರೆಗೆ ಹಚ್ಚಿಕೊಂಡು ನಮ್ಮ ನಿದ್ದೆಗೆ ಬಂಗ ತಂದುಕೊಂಡರೆ ಮಾನಸಿಕ ಕಿನ್ನತೆಗೆ ಒಳಗಾಗುವುದು ಕಂಡಿತ. ಕಿನ್ನತೆ ಇದ್ದರೆ ನಿದ್ದೆ ಬರುವುದಿಲ್ಲ, ನಿದ್ದೆ ಬಾರದಿದ್ದರೆ ಕಿನ್ನತೆ ಕಾಡುತ್ತದೆ. ಇವೆರಡು ಒಂದಕ್ಕೊಂದು ನಂಟು ಬೆಳೆಸಿಕೊಂಡಿವೆ.

ಮನುಶ್ಯನಿಗೆ ನಿದ್ದೆ ಬಾರದೆ ಇದ್ದರೆ, ಬೇಡವಾದ ಆಲೋಚನೆಗಳೇ ತಲೆಗೆ ಬಂದು, ಮಾನಸಿಕ ಒತ್ತಡ ಉಂಟು ಮಾಡುತ್ತವೆ. ಇಂತಹ ಸಮಯದಲ್ಲಿ ನಮ್ಮ ದೇಹದ ಚಟುವಟಿಕೆಗಳು ಹೆಚ್ಚಾಗಿ, ರಕ್ತದ ಒತ್ತಡ ಸಾಮಾನ್ಯ ಮಟ್ಟಕ್ಕಿಂತ ಮಿತಿ ಮೀರಿ ಹೋಗುತ್ತದೆ. ಆಗ ಒತ್ತಡಕ್ಕೆ ಸಂಬಂದ ಪಟ್ಟ ಹಾರ‍್ಮೋನುಗಳು ಉತ್ಪತ್ತಿಯಾಗುತ್ತವೆ. ಅದಿಕ ರಕ್ತದ ಒತ್ತಡದಿಂದ ಮನುಶ್ಯನಿಗೆ ಹ್ರುದಯಸ್ತಂಬನ ಅತವಾ ಪಾರ‍್ಶ್ವವಾಯು ಸೇರಿದಂತೆ ಇತರ ಸಮಸ್ಯೆಗಳು ಎದುರಾಗುತ್ತವೆ.

ಉತ್ತಮ ನಿದ್ದೆ ಮನುಶ್ಯನ ನೆನಪಿನ ಶಕ್ತಿಯ ಮೇಲೆ ಒಳ್ಳೆಯ ಪ್ರಬಾವ ಬೀರುತ್ತದೆ ಎಂಬುದು ಸಂಶೋದನೆಯ ಮುಕಾಂತರ ಬೆಳಕಿಗೆ ಬಂದಿದೆ. ಮಲಗಿದ್ದ ಸಮಯದಲ್ಲಿ ಕೇವಲ ಆತನ ಇತರ ಅಂಗಗಳು ವಿಶ್ರಾಂತಿ ತೆಗೆದುಕೊಂಡರೆ ಆತನ ಮೆದುಳು ಮಾತ್ರ ಇಡೀ ದಿನದ ಕಾರ‍್ಯ ವೈಕರಿಯನ್ನು ಮೆಲುಕು ಹಾಕುತ್ತಾ, ಕೆಲವೊಂದು ಸಂದರ‍್ಬಗಳ ನಡುವೆ ಸಂಪರ‍್ಕ ಸಾದಿಸುತ್ತಾ, ಬಾವನೆಗಳು ಮತ್ತು ನೆನಪುಗಳ ಮದ್ಯೆ ಸಾಂಕೇತಿಕ ರೂಪುರೇಶೆಗಳನ್ನು ಅದಲು ಬದಲು ಮಾಡುತ್ತಾ ತನ್ನ ಕೆಲಸದಲ್ಲಿ ತಾನು ಮಗ್ನವಾಗಿರುತ್ತದೆ. ಆಳವಾದ ನಿದ್ದೆಯಿಂದ ನಮ್ಮ ಮೆದುಳಿಗೆ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವಂತಹ ಶಕ್ತಿ ಹೆಚ್ಚಾಗಿ ನೆನಪಿನ ಶಕ್ತಿ ಕೂಡ ಹೆಚ್ಚಾಗುತ್ತದೆ., ಕೆಲಸ ಕಾರ‍್ಯಗಳನ್ನು ಬಹಳ ಚೆನ್ನಾಗಿ ನಿರ‍್ವಹಿಸಿಕೊಂಡು ಹೋಗುವಂತಹ ಮನಸ್ತಿತಿ ಮನುಶ್ಯನಲ್ಲಿ ಉಂಟು ಮಾಡುತ್ತದೆ ನಿದ್ದೆ!

ಕಡಿಮೆ ಸಮಯ ನಿದ್ರಿಸುತ್ತಿದ್ದರೆ, ಮೆದುಳು ಸಂಬಂದಿ ರೋಗ, ನರರೋಗ ಕಾಣಿಸಿಕೊಳ್ಳುವ ಸಾದ್ಯತೆ ಇದೆ ಎಂದು ಈ ಹಿಂದೆ ನಡೆಸಿದ ಸಂಶೋದನೆಯಿಂದ ತಿಳಿದುಬಂದಿದೆ. ಇಟಲಿಯ ಮಾರ‍್ಕೆ ಪಾಲಿಟೆಕ್ನಿಕ್ ವಿವಿಯ ಸಂಶೋದಕರು ಈಗಾಗಲೇ ಸಂಶೋದನೆಯೊಂದನ್ನು ನಡೆಸಿದ್ದು, ಎರಡು ಇಲಿಗಳ ಮೇಲೆ ಪ್ರಯೋಗ ಮಾಡಿದ್ದಾರೆ. ಅದರಲ್ಲಿ, ಕಡಿಮೆ ನಿದ್ರಿಸಿದ ಇಲಿಯ ಮಿದುಳಿನ ಪ್ರಮುಕ ಜೀವಕೋಶಗಳಿಗೆ ಹಾನಿಯಾಗಿತ್ತು.

ಸಂಶೋದಕರ ಅದ್ಯಯನದ ಪ್ರಕಾರ, ಯಾವ ವ್ಯಕ್ತಿ ದಿನದಲ್ಲಿ ಬಹಳ ಕಡಿಮೆ ಸಮಯಗಳ ಕಾಲ ನಿದ್ದೆ ಮಾಡುತ್ತಾನೆಯೋ ಆತನಿಗೆ ಬೊಜ್ಜು ಬೆಳೆದು ದೇಹದ ತೂಕ ಇದ್ದಕ್ಕಿದ್ದಂತೆ ಏರಿಕೆಯಾಗುವ ಸಂಬವ ಹೆಚ್ಚಿರುತ್ತದೆ. ಇದಕ್ಕೆ ಕಾರಣ, ಕಡಿಮೆ ಪ್ರಮಾಣದ ನಿದ್ದೆ ಮನುಶ್ಯನ ದೇಹದಲ್ಲಿ ಹಾರ‍್ಮೋನುಗಳ ಅಸಮತೋಲನ ಉಂಟು ಮಾಡಿ ಹೊಟ್ಟೆ ಹಸಿವಿಗೆ ಸಂಬಂದ ಪಟ್ಟಂತೆ ಮನುಶ್ಯನ ಆರೋಗ್ಯವನ್ನು ಏಕಾಏಕಿ ಅದಲು ಬದಲು ಮಾಡುತ್ತದೆ. “ಗ್ರಲಿನ್” ಮತ್ತು “ಲೆಪ್ಟಿನ್” ಎಂಬ ಎರಡು ಹಾರ‍್ಮೋನುಗಳು ಮನುಶ್ಯನ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುತ್ತವೆಯೆಂದು ತಿಳಿದು ಬಂದಿದೆ. ಆದರೆ ನಿದ್ದೆ ಸರಿಯಾಗಿ ಮಾಡದೆ ಹೋದರೆ ಈ ಹಾರ‍್ಮೋನುಗಳ ಉತ್ಪತ್ತಿ ಮತ್ತು ಬಳಕೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅತ್ಯಂತ ಕಡಿಮೆ ನಿದ್ದೆಯಾದರೆ ನರದೋಶ, ತಲೆನೋವು ಇತ್ಯಾದಿ ರೋಗಗಳು ಅಂಟಿಕೊಳ್ಳುತ್ತವೆ.

ಉತ್ತಮ ಆರೋಗ್ಯ ನಮ್ಮ ಕೈಯ್ಯಲ್ಲೇ ಇದೆ

ಬದಲಾಗುತ್ತಿರುವ ಜೀವನಶೈಲಿಯಲ್ಲಿ ಕಿನ್ನತೆ, ಕೆಲಸದೊತ್ತಡ, ರಾತ್ರಿ ಪಾಳಿ ಕೆಲಸ ಇವೆಲ್ಲವೂ ನಮ್ಮ ದೇಹಾರೋಗ್ಯದ ಮೇಲೆ ಪರಿಣಾಮ ಬೀರಿ ನಿದ್ರಾಹೀನತೆಗೆ ಕಾರಣವಾಗುತ್ತಿವೆ. ಇದೆಲ್ಲವನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದು ಕಂಡಿತವಾಗಿಯೂ ಅವರವರ ಆಲೋಚನೆ ಮತ್ತು ವಿವೇಚನೆಗೆ ಬಿಟ್ಟಿದ್ದು. ನಮ್ಮ ದೇಹದ ಜೈವಿಕ ಗಡಿಯಾರವನ್ನು ಅನುಸರಿಸಿ, ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಿದರೆ ಉತ್ತಮ ಆರೋಗ್ಯ ಮತ್ತು ದೀರ‍್ಗ ಆಯಸ್ಸು ನಮ್ಮದು.

(ಮಾಹಿತಿ ಮತ್ತು ಚಿತ್ರ ಸೆಲೆ: medicalnewstoday.com1, medicalnewstoday.com2, futurity.org, heart.org1, heart.org2, ncbi.nlm.nih.gov1 newscientist.com, sleepfoundation.org, ncbi.nlm.nih.gov2, healthline.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: