ಸೋಮಾರಿತನದಿಂದ ಒಳಿತಾಗುವುದೇ? – ಕಂತು 2

– ವಿಜಯಮಹಾಂತೇಶ ಮುಜಗೊಂಡ.

ನಾವು ಕೆಲಸದಲ್ಲಿ ಆಳವಾಗಿ ತೊಡಗಿಕೊಳ್ಳದೇ ಇದ್ದಾಗ ಇಲ್ಲವೇ ಸೋಮಾರಿಯಾಗಿ ಕಾಲಕಳೆಯುತ್ತಿದ್ದಾಗ ಹೊಸ ಹೊಳಹುಗಳು ಹೊಳೆಯುತ್ತವೆ ಎಂದು ಈ ಹಿಂದಿನ ಬರಹದಲ್ಲಿ ಹೇಳಲಾಗಿತ್ತು. ಇದಕ್ಕೆ ಕಾರಣವೇನು, ಇಂತಹ ಹೊತ್ತಿನಲ್ಲಿ ನಮ್ಮ ಗಮನ ಹೇಗೆ ಕೆಲಸ ಮಾಡುತ್ತದೆ? ಇನ್ನಶ್ಟು ವಿಶಯಗಳು ಈ ಬರಹದಲ್ಲಿ.

ಮೆದುಳಿಗೆ ಹೊಸ ಹೊಳಹುಗಳು ಸುಮ್ಮನೆ ಇರುವಾಗ ಏಕೆ ಬರುತ್ತವೆ ಎನ್ನುವುದಕ್ಕೆ ಕಾರಣವೂ ಇದೆ. ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳದಿದ್ದಾಗ ಇಲ್ಲವೇ ಕೆಲಸದಲ್ಲಿ ಗಮನವಿಲ್ಲದೇ ಇದ್ದಾಗ ಮನಸ್ಸು ನಮಗೆ ಆಸಕ್ತಿ ಹುಟ್ಟಿಸುವ ವಿಶಯಗಳ ಕುರಿತು ಯೋಚಿಸುತ್ತಾ, ತನ್ನದೇ ಆದ ಕನಸಿನ ಲೋಕದಲ್ಲಿ ಕಳೆದು ಹೋಗಿರುತ್ತದೆ. ಇಂತಹ ಹೊತ್ತಿನಲ್ಲಿ ಯಾವುದರ ಕುರಿತ ಯೋಚನೆಗಳು ಬರುತ್ತವೆ ಎಂದು ತಿಳಿಯಲು ಹಲವು ಮಂದಿಯ ಮೇಲೆ ಅರಕೆಯೊಂದನ್ನು ನಡೆಸಲಾಯಿತು. ಇದರ ದೊರೆತದ ಪ್ರಕಾರ ಮನಸ್ಸಿನಲ್ಲಿ, 48% ರಶ್ಟು ಹೊತ್ತು ಮುಂಬೊತ್ತಿನ (future) ಬಗ್ಗೆ ಆಲೋಚನೆಗಳಿದ್ದರೆ, 28%  ಹೊತ್ತು ಇಂದಿನ ಮತ್ತು 12% ಹೊತ್ತು ಹಿಂದೆ ನಡೆದ ಗಟನೆಗಳ ವಿಚಾರಗಳು ಮನಸ್ಸಿನಲ್ಲಿರುತ್ತವೆ. ಇನ್ನುಳಿದ ಹೊತ್ತು ನಮ್ಮ ಮನಸ್ಸು ಮಂದವಾಗಿರುತ್ತದೆ, ಇಲ್ಲವೇ ಕಾಲಿಯಾಗಿರುತ್ತದೆ, ಅಂದರೆ ಯಾವುದೇ ಯೋಚನೆಗಳೂ ಇರುವುದಿಲ್ಲ. ಎಲ್ಲರಲ್ಲಿಯೂ ಈ ಶೇಕಡಾವಾರು ಹಂಚಿಕೆ ಒಂದೇ ಆಗಿರಲಿಕ್ಕಿಲ್ಲ. ನಾವು ಏನನ್ನೂ ಮಾಡದೇ, ಸುಮ್ಮನೆ ಸೋಮಾರಿಯಾಗಿ ಕಾಲ ಕಳೆಯುತ್ತಿದ್ದೇವೆ ಎಂದುಕೊಂಡಿರುವ ಹೊತ್ತಿನಲ್ಲಿಯೂ ನಮ್ಮ ಮೆದುಳು ಒಂದಲ್ಲ ಒಂದು ಯೋಚನೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಸುಮ್ಮನೆ ಇರುವುದು ಸೊನ್ನೆ ಮಾಡುಗತನ ಎಂದು ನಾವು ಅಂದುಕೊಂಡರೂ ನಮ್ಮ ಮೆದುಳು ಯೋಚನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುತ್ತದೆ.

ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳದಿರುವಾಗ ಮೆದುಳು ಮುಕ್ಯವಾಗಿ 3 ಬಗೆಯ ಕೆಲಸ ಮಾಡಬಲ್ಲುದು.

  1. ಬಿಡುವು: ಸಾಮಾನ್ಯವಾಗಿ, ವಿಶ್ರಾಂತಿ ಪಡೆಯುವಾಗ ನಮ್ಮ ಗಮನ ಕೂಡ ವಿಶ್ರಾಂತಿಯಲ್ಲಿರುತ್ತದೆ. ಇಂತಹ ಹೊತ್ತಿನಲ್ಲಿ ನಾವು ಆಲೋಚನೆಗಳನ್ನು ಅಂಕೆಯಲ್ಲಿಟ್ಟಿರುವುದಿಲ್ಲ. ಮನಸ್ಸಿಗೆ ಬಿಡುವು ನೀಡುವ ಈ ಸ್ತಿತಿಯಲ್ಲಿ ನಮ್ಮ ಗಮನ ಒಂದೆಡೆ ಇರದೇ ಹಂಚಿಹೋಗಿರುತ್ತದೆ (scatterfocus). ಈ ಸ್ತಿತಿಯಲ್ಲಿ ನಾವು ಆಮೇಲೆ ಮಾಡಬೇಕಾದ ಕೆಲಸವನ್ನು ಹೆಚ್ಚು ಗಮನವಿಟ್ಟು ಮಾಡಲು ಕಸುವು ಕಲೆಹಾಕುತ್ತಿರುತ್ತೇವೆ. ಈ ಸ್ತಿತಿಯಲ್ಲಿ ನಮ್ಮ ಮನಸ್ಸನ್ನು ಬೇರೆಡೆಗೆ ಸೆಳೆಯಬಲ್ಲ ವಸ್ತು ಇಲ್ಲವೇ ವಿಶಯಗಳಿಂದ ದೂರವಿಟ್ಟಿರುತ್ತೇವೆ. ನಮ್ಮ ಮೊಬೈಲ್, ಇಲ್ಲವೇ ಟಿವಿಯಿಂದ ದೂರ ಇದ್ದು ಬಿಡುವು ಪಡೆಯುವುದು ಇದಕ್ಕೊಂದು ಎತ್ತುಗೆ.
  2. ಹಮ್ಮುಗೆ (ಮಾಡಬೇಕಾದ ಕೆಲಸಗಳ/ನಾಳೆಗಳ ಬಗ್ಗೆ ಯೋಚನೆ ಮಾಡುವುದು): ಅರಕೆಯೊಂದರಂತೆ, ಗಮನ ಹಂಚಿಹೋಗಿದ್ದಾಗ, ಅಂದರೆ ಯಾವ ಕೆಲಸದಲ್ಲೂ ತೊಡಗಿಸಿಕೊಳ್ಳದೇ ಇರುವಾಗ, ಬೇರೆ ಕೆಲಸಗಳ ಬಗ್ಗೆ ಇಲ್ಲವೇ ನಾಳೆಗಳ ಬಗ್ಗೆ ಮಾಡುವ ಯೋಚನೆಯು, ಕೆಲಸದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಾಗ ಅದೇ ವಿಚಾರವಾಗಿ ಮಾಡುವ ಯೋಚನೆಗಳಿಗಿಂತ 14 ಪಟ್ಟು ಹೆಚ್ಚಿರುತ್ತದಂತೆ!  ನಮ್ಮ ಗಮನ ಬೇರೆ ಯಾವುದರಲ್ಲೂ ಇಲ್ಲದಿರುವಾಗ, ನಮ್ಮ ಕನಸು ಇಲ್ಲವೇ ಗುರಿಯ ಕುರಿತು 7 ಪಟ್ಟು ಹೆಚ್ಚಾಗಿ ನಾವು ಯೋಚಿಸುತ್ತಿರುತ್ತೇವೆ. ಈ ಸ್ತಿತಿ ನಮ್ಮ ಗುರಿಯನ್ನು ನೆನಪಿಸುವ ಮತ್ತು ಅದಕ್ಕಾಗಿ ತಯಾರಾಗಲು ಹುರಿದುಂಬಿಸುತ್ತದೆ.
  3. ಹೊಳಹುಗಳನ್ನು ಹುಡುಕುವುದು: ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳದೇ ಮನಸ್ಸಿಗೆ ಬಿಡುವು ನೀಡಿದಾಗ, ಹಿಂದೆ, ಇಂದು ಮತ್ತು ಮುಂದಿನ ಯೋಚನೆಗಳಲ್ಲಿ ಹಂಚಿಹೋಗುವ ಮನಸ್ಸು, ಮೂರೂ ಬಗೆಯ ಆಲೋಚನೆಗಳನ್ನು ಒಂದೆಡೆ ಕೇಂದ್ರೀಕರಿಸುತ್ತದೆ. ಇದರಿಂದ ಹೊಸ ಹೊಳಹುಗಳ ಕುರಿತ ಆಳವಾದ ಒಳನೋಟ ಸಿಗುತ್ತದೆ. ಈ ಹಿಂದೆ ಯಾವಾಗಲೋ ಹೊಳೆದ ಹೊಳಹನ್ನು ನಮ್ಮ ಮುಂದಿರುವ ಕೆಲಸಕ್ಕೆ ಅಳವಡಿಸುವುದು ಈ ಸ್ತಿತಿಗೆ ಒಳ್ಳೆಯ ಎತ್ತುಗೆ.

ನಾವು ಮಾಡುವ ಕೆಲಸಗಳಲ್ಲಿ ಹೆಚ್ಚು ಗಮನವಿಟ್ಟು ತೊಡಗಿಸಿಕೊಳ್ಳುವುದು ನಮ್ಮ ಮಾಡುಗತನವನ್ನು ಹೆಚ್ಚಿಸಲು ಇರುವ ಒಂದು ತಂತ್ರ. ಇದರಿಂದ ಕೆಲಸವನ್ನು ಬೇಗ ಮುಗಿಸಲು ಮತ್ತು ನಮ್ಮ ಅಳವನ್ನು ಹೆಚ್ಚಿಸಿಕೊಳ್ಳಲು ಸಾದ್ಯವಾಗುತ್ತದೆ. ಇದರೊಟ್ಟಿಗೆ ಸೋಮಾರಿತನವನ್ನೂ(ಇಲ್ಲಸಲ್ಲದ ವಿಶಯಗಳನ್ನು ತಲೆಗೆ ತುಂಬಿಸಿಕೊಳ್ಳದೇ, ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳದಿರುವುದು) ಸೇರಿಸಿಕೊಂಡರೆ ಮಾಡುಗತನ ಹೆಚ್ಚುತ್ತದೆ. ಸೋಮಾರಿಯಾಗಿರುವಾಗ ನಾವು ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತೇವೆ ಎಂದು ಕಂಡರೂ ನಮ್ಮ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಇದರಿಂದ ಹೊಸ ಆಲೋಚನೆಗಳು ಮತ್ತು ಹೊಳಹುಗಳು ಮೂಡಿ ಕೆಲಸದ ಮಾಡುಗತನ ಹೆಚ್ಚಿಸುತ್ತವೆ.

(ಮಾಹಿತಿ ಮತ್ತು ಚಿತ್ರ ಸೆಲೆ: time.comwedowe.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.