ಹಲಬಳಕೆಯ ತೆಂಗಿನಕಾಯಿ

ಶ್ಯಾಮಲಶ್ರೀ.ಕೆ.ಎಸ್.

ಆದುನಿಕತೆಯ ಹಾವಳಿ ಎಶ್ಟೇ ತೀವ್ರತೆಯಲ್ಲಿದ್ದರೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ನಡೆಯುವ ಪೂಜೆ ಪುನಸ್ಕಾರ, ವಿದಿ ವಿದಾನಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಂತೆ ತೋರುತ್ತಿಲ್ಲ. ಹಬ್ಬ ಹರಿದಿನಗಳಲ್ಲಾಗಲಿ, ವಿಶೇಶ ಸಬೆ ಸಮಾರಂಬಗಳಲ್ಲಾಗಲಿ, ದೇವಸ್ತಾನಗಳಲ್ಲಿ, ಮನೆಯ ವಾರದ ಪೂಜೆಯಲ್ಲಾಗಲಿ ತೆಂಗಿನಕಾಯಿಯನ್ನು ಒಡೆಯದೇ ಯಾವುದೇ ದೈವಾರಾದನೆಯು ಪರಿಪೂರ‍್ಣ ಎನಿಸುವುದಿಲ್ಲ. ಪೂಜೆಯೆಂದರೆ ತೆಂಗಿನಕಾಯಿಗೇ ಅಗ್ರಸ್ತಾನ. ದೇವಾನುದೇವತೆ ಲಕ್ಶ್ಮಿಗೆ ತೆಂಗಿನಕಾಯಿಯು ಬಹಳ ಪ್ರಿಯವಾದ್ದರಿಂದ ಇದನ್ನು ‘ಶ್ರೀಪಲ’ ಎಂದು ಕರೆಯುವರು. ಶ್ರೀ ಎಂದರೆ ಸಿರಿ ಅತವಾ ಸಿರಿದೇವಿ ಎಂಬರ‍್ತ ಬರುತ್ತದೆ. ವೀಳ್ಯದೆಲೆಯೊಂದಿಗೆ ತೆಂಗಿನಕಾಯಿ ಇಡುವ ಕಳಸವನ್ನು ಲಕ್ಶ್ಮಿ ದೇವಿಯ ಸ್ವರೂಪವೆಂದೇ ಬಾವಿಸಲಾಗುತ್ತದೆ. ಯಾವುದೇ ಶುಬ ಕಾರ‍್ಯಗಳಲ್ಲಿ ನೀಡುವ ತಾಂಬೂಲದಲ್ಲೂ ತೆಂಗಿನಕಾಯಿಗೆ ಮೊದಲ ಆದ್ಯತೆ.

ಇನ್ನು ನಮ್ಮ ಅಡುಗೆ ಮನೆಗಳ ಮುಕ್ಯ ಸದಸ್ಯ ಈ ತೆಂಗಿನಕಾಯಿ. ‘ಇಂಗು-ತೆಂಗು ಇದ್ದರೆ ಮಂಗನೂ ಅಡಿಗೆ ಮಾಡುತ್ತೆ’ ಎಂಬ ಗಾದೆ ಮಾತಿನಂತೆ ಯಾವುದೇ ಬಗೆಯ ತಿಂಡಿಗಳ ತಯಾರಿಕೆಯಲ್ಲಿ ತೆಂಗು ಮುಕ್ಯವಾಗಿ ಇರಲೇಬೇಕು. ನಿತ್ಯ ಮಾಡುವ ತಿಂಡಿಗಳಲ್ಲಿ, ಪಲ್ಯ, ಸಾಂಬಾರ್‍‍ಗ‌ಳಲ್ಲಿ ತೆಂಗಿನಕಾಯಿ ತುರಿ ಹಾಕದಿದ್ದರೆ ಸ್ವಾದವೇ ಇರುವುದಿಲ್ಲ. ಉಪ್ಪಿಟ್ಟು, ಚಿತ್ರಾನ್ನ ಅವಲಕ್ಕಿ‍‍ಗಳಂತಹ ತಿಂಡಿಗಳಿಗೆ ಕೊನೆಯಲ್ಲಿ ಹಸಿ ತೆಂಗಿನ ತುರಿ ಹಾಕಿದರೆ ಅದರ ರುಚಿ ಸೊಗಸಾಗಿರುತ್ತದೆ. ಇಡ್ಲಿ, ದೋಸೆಯ ಜೊತೆಗೆ ತೆಂಗಿನಕಾಯಿಯ ಚಟ್ನಿಯು ತುಂಬಾ ರುಚಿಬರಿತವಾಗಿರುತ್ತದೆ. ಎಳೆಯ ತೆಂಗಿನಕಾಯಿ ಮತ್ತು ಒಣಕೊಬ್ಬರಿಗಿಂತ ಬಲಿತ ಅಂದರೆ ಪಕ್ವವಾದ ನೀರು ಕಡಿಮೆ ಇರುವ ಹಸಿ ತೆಂಗಿನಕಾಯಿಯ ತುರಿಯೇ ಅಡುಗೆಗೆ ಬಹಳ ಸೂಕ್ತ. ಸಿಹಿ ತಿಂಡಿಗಳಾದ ಪಾಯಸ, ಹೋಳಿಗೆ, ಕಾಯಿಕಡುಬು ಮತ್ತು ಮಿಟಾಯಿ ಹೀಗೆ ಹಲವು ಬಗೆಯ ತಿಂಡಿಗಳ ತಯಾರಿಕೆಯಲ್ಲಿಯೂ ತೆಂಗಿನಕಾಯಿಯದ್ದು ಮುಕ್ಯ ಪಾತ್ರ.

ಹಸಿರು ತೆಂಗಿನಕಾಯಿಯ ಎಳನೀರು ಕುಡಿಯುವುದರಿಂದ ದೇಹದ ಶುಶ್ಕತೆ ತಗ್ಗಿ ಚರ‍್ಮವು ನೈಸರ‍್ಗಿಕವಾಗಿ ಹೊಳೆಯುವುದಲ್ಲದೆ, ದೇಹದ ಕೊಬ್ಬು ಕಡಿಮೆಯಾಗಲು ಕೂಡ ಬಹಳ ಸಹಕಾರಿ. ಕಿಡ್ನಿಗಳಲ್ಲಿನ ಕಲ್ಲುಗಳು ಕರಗಲು, ಉರಿ ಮೂತ್ರ ಆಗದಿರಲು, ಆಹಾರ ಜೀರ‍್ಣಕ್ರಿಯೆಗೆ ಬಹಳ ಉಪಯೋಗಕಾರಿ. ಅದರಲ್ಲೂ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು, ತುಂಬಾ ಪ್ರಯೋಜನಕಾರಿ. ಎಳನೀರಿನ ಕಾಯಿಯಲ್ಲಿರುವ ತಿರುಳು ಸಹ ಆರೋಗ್ಯಕ್ಕೆ ಚೇತೋಹಾರಿ ಮತ್ತು ತಿನ್ನಲು ರುಚಿಯಾಗಿರುತ್ತದೆ. ಆದರೆ ತಜ್ನರ ಪ್ರಕಾರ ರಕ್ತದಲ್ಲಿ ಬೇಡವಾದ ಕೊಬ್ಬು(Bad cholesterol) ಇರುವ ವ್ಯಕ್ತಿಗಳಿಗೆ ಬಲಿತ ತೆಂಗಿನಕಾಯಿಯನ್ನು ಆಹಾರದಲ್ಲಿ ಬಳಸದಂತೆ ಮುನ್ನೆಚ್ಚರಿಕೆ ನೀಡಲಾಗುತ್ತದೆ. ತೆಂಗಿನಕಾಯಿಯ ಕೊಬ್ಬರಿ ಎಣ್ಣೆ ತಲೆಗೆ ತಂಪು ನೀಡುತ್ತದೆ. ಇದನ್ನು ಕೂದಲಿನ ಬುಡಕ್ಕೆ ಲೇಪಿಸುವುದರಿಂದ ಅನೇಕ ಪೋಶಕಾಂಶಗಳನ್ನು ಕೂದಲಿಗೆ ದೊರಕುತ್ತದೆ. ತೆಂಗಿನಕಾಯಿಯ ನಾರು, ಚಿಪ್ಪುಗಳನ್ನು ಹಳ್ಳಿಗಳಲ್ಲಿ ಒಲೆಗಳಿಗೆ ಉರುವಲಾಗಿ ಬಳಸಲಾಗುತ್ತದೆ. ತೆಂಗಿನಕಾಯಿಯ ನಾರನ್ನು ಪಾತ್ರೆಯಲ್ಲಿನ ಕೊಳೆ ತೆಗೆಯಲು, ಜಾನುವಾರುಗಳ ಮೈಕೊಳೆಯನ್ನು ಉಜ್ಜಿ ತೆಗೆಯಲು ಉಪಯೋಗಿಸುವುದನ್ನು ಹಳ್ಳಿಗಳಲ್ಲಿ ಕಾಣಬಹುದು. ತೆಂಗಿನ ನಾರನ್ನು ಗಿಡಗಳ ಬುಡದಲ್ಲಿ ತೇವಾಂಶ ಕಾಪಾಡಲು, ಗೊಬ್ಬರವಾಗಲು ಹಾಕಲಾಗುತ್ತದೆ. ಅನೇಕ ಕರಕುಶಲ ತಯಾರಿಕೆಯಲ್ಲೂ ತೆಂಗಿನ ನಾರು ಉಪಯುಕ್ತ. ಗ್ರಾಮೀಣ ಬಾಗಗಳಲ್ಲಿ ತೆಂಗಿನಕಾಯಿಯ ಮೂಲಕ ಬೂಮಿಯಲ್ಲಿರುವ ಅಂತರ‍್ಜಲವನ್ನು ಪತ್ತೆ ಹಚ್ಚುವುದನ್ನು, ನೀರಿನ ಮಟ್ಟವನ್ನು ಅಳೆಯುವುದನ್ನು ಕೆಲವರು ಪ್ರವ್ರುತ್ತಿ ಮಾಡಿಕೊಂಡಿದ್ದಾರೆ.

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: