ಸಪೋಟ ಹಣ್ಣು

ಶ್ಯಾಮಲಶ್ರೀ.ಕೆ.ಎಸ್.

ಇನ್ನೇನು ಬೇಸಿಗೆ ಕಾಲ ಆರಂಬವಾಗುತ್ತಿದ್ದಂತೆಯೇ, ಬಿಸಿಲಿನ ಬೇಗೆ ತಡೆಯಲಾರದೆ ಜನರು ಕಂಡ ಕಂಡಲ್ಲಿಯೇ ಹಣ್ಣಿನ ಜ್ಯೂಸ್ ಸೆಂಟರ್‍‍ಗಳತ್ತ ಕಣ್ಣು ಹಾಯಿಸಿ ಬೇಟಿ ನೀಡುವುದು ಸಹಜ. ಚಿಕ್ಕೂ ಜ್ಯೂಸ್, ಪೈನಾಪಲ್ ಜ್ಯೂಸ್, ಆಪಲ್ ಮಿಲ್ಕ್ ಶೇಕ್, ಮ್ಯಾಂಗೊ ಜೂಸ್ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇಂತಹ ವೇಳೆಯಲ್ಲಿ ಹಣ್ಣುಗಳಿಗೂ ಬಹಳ ಬೇಡಿಕೆ ಇರುತ್ತದೆ. ಸಾಮಾನ್ಯವಾಗಿ ಹಣ್ಣುಗಳು ಎಲ್ಲಾ ಕಾಲದಲ್ಲೂ ಸಿಗುವಂತಹುದು. ಕೆಲವು ಹಣ್ಣುಗಳು ಮಾತ್ರ ಆಯಾ ರುತುಗಳಿಗೆ ಸೀಮಿತವಾದರೂ, ಮಿಕ್ಕೆಲ್ಲವೂ ಎಲ್ಲಾ ರುತುಗಳಲ್ಲೂ ದೊರಕುವಂತಹುದಾಗಿವೆ. ಸ್ವಾಬಾವಿಕವಾಗಿ ಹಣ್ಣುಗಳು ಸಿಹಿಯಾಗಿದ್ದರೂ, ನಿಸರ‍್ಗದ ಮಡಿಲಿನಿಂದ ನೇರವಾಗಿ ಸಿಗುವುದರಿಂದ ಅವುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಯಾವುದೇ ಅಡ್ಡಿ ಆತಂಕಗಳು ಇಲ್ಲ. ಬದಲಾಗಿ ಆರೋಗ್ಯ ವರ‍್ದನೆಗೆ ಅನುಕೂಲಕಾರಿಗಳೆಂಬುದು ಎಲ್ಲರಿಗೂ ತಿಳಿದ ವಿಶಯ. ಇಂತಹ ಹಣ್ಣುಗಳಲ್ಲಿ ಸಪೋಟ ಹಣ್ಣು ಹೆಚ್ಚು ಪರಿಣಾಮಕಾರಿ ಎಂಬುದು ತಜ್ನರ ಅಬಿಪ್ರಾಯ.

ಸಪೋಟವನ್ನು ಸಾಮಾನ್ಯವಾಗಿ ಚಿಕ್ಕೂಪ್ರೂಟ್ ಎಂದೇ ಕರೆಯುವುದು ವಾಡಿಕೆಯಾಗಿಬಿಟ್ಟಿದೆ. ಸಸ್ಯ ಶಾಸ್ತ್ರದಲ್ಲಿ ‘ಮನಿಲ್ಕರಾ ಜಪೋಟ’(Manilkara Zapota) ಎಂದು ಕರೆಯಲ್ಪಡುವ ಸಪೋಟವು ಮೂಲತಹ ದಕ್ಶಿಣ ಮೆಕ್ಸಿಕೊ ಮತ್ತು ಕೆರೀಬಿಯನ್ ದೇಶದ್ದು. ಇತಿಹಾಸದ ಪ್ರಕಾರ ಪೋರ‍್ಚುಗೀಸರು ಬಾರತಕ್ಕೆ ಬಂದಾಗ ಹಲವು ತರಕಾರಿ, ಹಣ್ಣಿನ ಗಿಡದ ಬೀಜಗಳನ್ನು ತಮ್ಮ ದೇಶದಿಂದ ತಂದು ನೆಟ್ಟಿದ್ದರಂತೆ. ಅವುಗಳಲ್ಲಿ ಸಪೋಟವೂ ಒಂದೆಂಬುದು ಕುತೂಹಲಕಾರಿ ವಿಶಯವಾಗಿದೆ. ಹೀಗೆ ಹೊರದೇಶದಿಂದ ಬಂದ ಸಪೋಟವು ನಮ್ಮ ಸ್ತಳೀಯ ಹಣ್ಣುಗಳ ಸಾಲಿಗೆ ಬಂದು ನಿಂತು ಎಲ್ಲರಿಗೂ ಚಿರಪರಿಚಿತವಾಗಿಬಿಟ್ಟಿದೆ. ಕರ‍್ನಾಟಕದ ಕರಾವಳಿ ಮತ್ತು ಒಳನಾಡುಗಳಲ್ಲಿ ಇದೊಂದು ತೋಟಗಾರಿಕ ಬೆಳೆಯಾಗಿದೆ. ಸಪೋಟ ಬೆಳೆಯನ್ನು ವಾಣಿಜ್ಯ ಬೆಳೆಯೆಂದು ನಿಸ್ಸಂಶಯವಾಗಿ ಹೇಳಬಹುದು.

ಮನೆಯ ಕೈದೋಟಗಳಲ್ಲಿಯೂ ಸಪೋಟವನ್ನು ಬೆಳೆಯಬಹುದಾಗಿದೆ. ಗಾಳಿ, ಬೆಳಕು ನೇರವಾಗಿ ದೊರೆಯುವ, ಮನೆಯ ಮುಂದಿನ ಜಾಗದಲ್ಲಿ ಅಂದರೆ ಕೈತೋಟದಲ್ಲಿ ಕಸಿ ಮಾಡಿದ ಸಪೋಟದ ಪುಟ್ಟ ಗಿಡ ನೆಟ್ಟು, ಸಾವಯವ ಗೊಬ್ಬರವನ್ನು ಚೆಲ್ಲಿ ಆಗಾಗ್ಗೆ ನೀರನ್ನು ಹಾಯಿಸಿದರೆ ಸಾಕು. ಪಲವತ್ತಾದ ಬೂಮಿಯಾದಲ್ಲಿ ರಾಸಾಯನಿಕ ಗೊಬ್ಬರದ ಅವಶ್ಯಕತೆಯೇ ಇಲ್ಲ. ಬಳಿಕ, ಕಾಲಕ್ರಮೇಣ ಈ ಪುಟ್ಟ ಸಸಿಯು ಎರಡು-ಮೂರು ವರ‍್ಶಗಳ ಹೊತ್ತಿಗೆ ಪುಟ್ಟ ಗಿಡವಾಗಿ ಮನೆ ಮಂದಿಯೆಲ್ಲಾ ತಿನ್ನುವಶ್ಟು ಸಪೋಟ ಬಿಡಲು ಸಿದ್ದವಾಗುತ್ತದೆ. ಆರಂಬದಲ್ಲಿ ನೂರರಿಂದ ನೂರೈವತ್ತು ಹಣ್ಣುಗಳು ದಪ್ಪನೆಯ ಗಾತ್ರದಲ್ಲಿ ಬಿಟ್ಟು, ವರ‍್ಶಗಳು ಕಳೆದಂತೆ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿ ಎಲೆಗೊಂದು ಕಾಯಿಯೆಂಬಂತೆ ಗೊಂಚಲು ಗೊಂಚಲಾಗಿ ಬಿಟ್ಟು ನಳ ನಳಿಸುತ್ತವೆ. ಈ ರೀತಿ ವರ‍್ಶಕ್ಕೆ ಸುಮಾರು ಒಂದರಿಂದ ಎರಡು ಸಾವಿರದಶ್ಟು ಹಣ್ಣಗಳು ಬಿಡುವ ಸಾದ್ಯತೆ ಹೆಚ್ಚು. ಒಂದು ವರ‍್ಶದಲ್ಲಿ ಮೂರ‍್ನಾಲ್ಕು ತಿಂಗಳುಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ತಿಂಗಳುಗಳಲ್ಲೂ ಇದು ಲಬ್ಯವಿರುತ್ತದೆ. ಸಪೋಟವು ನೋಡಲು ತುಂಬಾ ತೆಳು ಕಂದು ಬಣ್ಣದಲ್ಲಿದ್ದು ಅದರ ಒಳಗಿನ ತಿರುಳು ತೆಳು ಹಳದಿ ಮತ್ತು ತೆಳು ಕಂದು ಬಣ್ಣ ಮಿಶ್ರಿತವಾಗಿದ್ದು, ಎರಡರಿಂದ ಆರರಶ್ಟು ಕಪ್ಪು ಬಣ್ಣದ ಬೀಜಗಳನ್ನು ಹೊಂದಿರುತ್ತದೆ. ಸಪೋಟ ಗಿಡದ ಎಲೆಗಳು ಹಸಿರಸಿರಾಗಿ ಒಂದು ತೆರನಾದ ಅಂಡಾಕಾರದಲ್ಲಿದ್ದು ಪಲಾವ್ ಎಲೆಯ ಆಕಾರವನ್ನು ಹೋಲುತ್ತದೆ.

ಸಪೋಟದಲ್ಲಿ ಹಲವು ತಳಿಗಳಿರುವುದನ್ನು ಕಾಣಬಹುದು. ಹಲವೆಡೆ ತೆಂಗಿನ ತೋಟಗಳಲ್ಲೂ ಇದನ್ನು ಮಿಶ್ರ ಬೆಳೆಯಾಗಿ ಬೆಳೆಯುವುದನ್ನು ಕಾಣಬಹುದು. ಸಪೋಟ ಹಣ್ಣನ್ನು ಕೀಳುವಾಗ ಬಿಳಿ ಬಣ್ಣದ ದ್ರವ ರೂಪದ ಅಂಟು ಒಸರುತ್ತದೆ. ಸುಮಾರಾದ ದೊಡ್ಡ ಗಾತ್ರದಲ್ಲಿರುವ ಇನ್ನೂ ಮಾಗದಿರುವ ಸಪೋಟ ಕಾಯಿಗಳನ್ನು ಕಿತ್ತು ಗಾಳಿಯಾಡದ ಡಬ್ಬಿಗಳಲ್ಲಿ ಮುಚ್ಚಿ ಹಾಗೆಯೇ ಇಟ್ಟರೂ ಎರಡು ಮೂರು ದಿನಗಳಲ್ಲಿಯೇ ಮಾಗಿ ಸಿಹಿಬರಿತವಾಗುತ್ತದೆ. ಸಪೋಟ ಹಣ್ಣಿನ ಹೊರಪದರ ತೆಳುವಾಗಿದ್ದು, ಚೆನ್ನಾಗಿ ತೊಳೆದು ಬೀಜಗಳನ್ನು ಬಿಡಿಸಿ ಸಿಪ್ಪೆ ಸಮೇತ ತಿನ್ನುವುದರಿಂದ ಸಿಹಿ ಸಿಹಿಯಾಗಿಯೂ ಇರುವುದಲ್ಲದೇ, ಆರೋಗ್ಯಕ್ಕೂ ಬಹಳ ಉಪಯೋಗಕಾರಿ. ಜ್ಯೂಸ್ ಅಂಗಡಿಗಳಲ್ಲಿ ಸಪೋಟ ಹಣ್ಣಿನ ಜ್ಯೂಸ್‍‍ಗೆ ಜನ ಹೆಚ್ಚಾಗಿ ಮೊರೆಹೋಗುವುದೇ ವಿಶೇಶ. ಅದರ ಸಿಹಿ ಅಶ್ಟು ಅದ್ಬುತವಾದುದು. ನಮ್ಮ ಮನೆಗಳಲ್ಲೇ ಸಪೋಟ ಹಣ್ಣಿನ ಜ್ಯೂಸ್ ತಯಾರಿಸುವುದು ಅತೀ ಸುಲಬ. ಪ್ರೂಟ್ ಸಲಾಡ್‍‍ಗಳ ತಯಾರಿಕೆಯಲ್ಲೂ ಇದರ ಪಾತ್ರ ಹಿರಿದು. ಸಪೋಟ ಮಿಲ್ಕ್ ಶೇಕ್, ಸಪೋಟ ಹಲ್ವ, ಹೀಗೆ ಹಲವು ತಿಂಡಿಗಳ ತಯಾರಿಕೆಯಲ್ಲಿ ಇದನ್ನು ಬಳಸಬಹುದು.

ಸಪೋಟ ಹಣ್ಣುಗಳ ಸೇವನೆ ಮುಕ್ಯವಾಗಿ ಚರ‍್ಮದ ಸಂರಕ್ಶಣೆಗೆ ಅಗತ್ಯವಾಗಿದೆ. ವಿಪರೀತ ಸುಸ್ತು ಮತ್ತು ಆಯಾಸವಾದಾಗ ಎನರ‍್ಜಿ ಡ್ರಿಂಕ್ ಆಗಿಯೂ ಸಪೋಟ ಜ್ಯೂಸ್ ಅನುಕೂಲಕರಿಯಾಗಿದೆ. ಈ ಹಣ್ಣನ್ನು ತಿನ್ನುವುದರಿಂದ ಅಗತ್ಯವಾದ ಪ್ರಕ್ಟೋಸ್ ಮತ್ತು ಸುಕ್ರೋಸ್ ಅಂಶಗಳು ನೈಸರ‍್ಗಿಕವಾಗಿ ದೊರೆತು ನಮ್ಮದೇಹವನ್ನು ಸೇರುತ್ತವೆ. ಇದರಿಂದ ರೋಗನಿರೋದಕ ಶಕ್ತಿಯು ಇಮ್ಮಡಿಯಾಗುತ್ತದೆ. ಇದರಲ್ಲಿ ವಿಟಮಿನ್ ‘ಎ’ ಇರುವುದರಿಂದ, ಇದು ಕಣ್ಣಿನ ಆರೋಗ್ಯಕ್ಕೂ ಒಳಿತಾಗಿರಲಿದೆ. ಕ್ಯಾಲ್ಸಿಯಂ ರಂಜಕಗಳಿರುವುದರಿಂದ ಮೂಳೆಗಳ ಬಲವರ‍್ದನೆಗೂ ಸಪೋಟವು ಬಹಳ ಚೇತೋಹಾರಿಯಾಗಿದೆ. ಸಪೋಟ ಹಣ್ಣಿನಲ್ಲಿ ಟ್ಯಾನಿನ್ ಅಂಶ ಹೆಚ್ಚಾಗಿರುವುದರಿಂದ ಅನ್ನನಾಳ, ಜಟರ, ಕರುಳುಗಳ ಉರಿಯೂತವನ್ನು ಕಡಿಮೆ ಮಾಡುವುದರೊಂದಿಗೆ ಜೀರ‍್ಣಕ್ರಿಯೆಗೆ ತುಂಬಾ ಪಲಕಾರಿಯಾಗಿದೆ. ಆಂಟಿ ಆಕ್ಸಿಡೆಂಟ್ ಆಗಿಯೂ ಕಾರ‍್ಯ ನಿರ‍್ವಹಿಸುವ ಮೂಲಕ ಸಪೋಟ ಹಣ್ಣು ಬಹಳ ಉಪಯೋಗಕಾರಿಯಾಗಿದೆ ಎಂಬುದು ತಜ್ನರ ಅಬಿಪ್ರಾಯ. ಈ ಎಲ್ಲ ಅಂಶಗಳಿಂದ ಸಪೋಟ ಹಣ್ಣನ್ನು ಉತ್ತಮ ಪಲವೆಂದು ಹೇಳಬಹುದು.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: