ತಿನ್ನೋದಕ್ಕೇ ಹುಟ್ಟಿದವರು ನಾವುಗಳು!

.

ಈಗೇನಿದ್ದರೂ ಪಾರ‍್ಟಿ ಜಮಾನ. ಇನ್ನೊಬ್ಬರು ಕೊಡುವ ಪಾರ‍್ಟಿಗಾಗಿಯೇ ಕಾಯುವ ಗಿರಾಕಿಗಳು ನಾವು. ಪಾರ‍್ಟಿ ಎಂದರೆ ನಮಗೆ ಹೊಟ್ಟೆ ತುಂಬಾ ತಿನ್ನುವುದೇ ಎಂದರ‍್ತ. ಸಣ್ಣ ಪುಟ್ಟ ವಿಶಯಗಳಿಗೂ ಪಾರ‍್ಟಿ ಕೇಳುವುದು ನಮ್ಮ ಬಳಗಕ್ಕೆ ಒಂದು ರೀತಿ ಹುಚ್ಚು ಚಟ. ತಿನ್ನುವುದು ನಮ್ಮ ಮುಕ್ಯ ಕಾಯಕ ಎಂದು ವರ‍್ತಿಸುವ ನಾವುಗಳು ಕಾಲೇಜು ಇದ್ದಾಗ ಕೆಲವೊಮ್ಮೆ ರುಚಿ ರುಚಿಯಾದ ಹೋಟೆಲ್ ಅರಸಿ ಹೊರಟುಬಿಡುತ್ತೇವೆ. ಆದರೆ ಟ್ರಿಪ್ ಹೋದಾಗ ಮಾತ್ರ ಅಲ್ಲಿನ ಕಾದ್ಯ ರುಚಿ ನೋಡುವ ಹೊತ್ತು ಒದಗಿ ಬರುವುದಿಲ್ಲ. ಹೊಸ ಪೆನ್ನು ತಗೆದುಕೊಂಡರೂ ಪಾರ‍್ಟಿ, ಚಪ್ಪಲಿ ತೆಗೆದುಕೊಂಡರೂ ಪಾರ‍್ಟಿ ಕೇಳುವ ಬುದ್ದಿ ನಮ್ಮ ಕಾಲೇಜಿನ ಗ್ಯಾಂಗ್ ಗೆ.

ಒಮ್ಮೆ ಸ್ನೇಹಿತೆ ಜೊತೆ ಮಾತನಾಡುತ್ತಿದ್ದಾಗ ತಿನ್ನುವ ವಿಶಯ ಚರ‍್ಚೆಗೆ ಬಂದಿತ್ತು. ಆಗ ಆಕೆ ನಾವು ರಜೆ ಇದ್ದಾಗ ಎಶ್ಟೇ ಹೊರಗಡೆ ಹೋದರು ಅಲ್ಲಿ ಏನೂ ತಿನ್ನುವುದೇ ಇಲ್ಲ. ತಿನ್ನುವ ಹಣ ಉಳಿದು ಬಿಡುತ್ತದೆ. ಎಲ್ಲಿಗೆ ಹೋದರೂ ಕೊನೆಗೆ ದೇವಸ್ತಾನದ ಬೋಜನ ಪ್ರಸಾದವೇ ನಮ್ಮ ಆಯ್ಕೆ ಎಂದಿದ್ದಳು.

ಗುರಿ ಇಲ್ಲದೆ ಎಲ್ಲಿಗಾದರೂ ಹೋಗುವುದು ನಮಗೆ ಒಂದು 3-4 ಜನರಿಗೆ ರೂಡಿ. ಎಲ್ಲಿಗಾದರೂ ಹೋಗಬೇಕು ಎಂದು ಪಕ್ಕಾ ಪ್ಲಾನ್ ಮಾಡಿ ಹೋಗುವ ನಮ್ಮ ಯೋಜನೆಗಳು ಯಶಸ್ವಿ ಆಗಿದಕ್ಕಿಂತ ಉಲ್ಟಾ ಪಲ್ಟಾ ಆಗಿದ್ದೇ ಜಾಸ್ತಿ. ಹಾಗಾಗಿ ನಾವೆಲ್ಲ ಉಡುಪಿ ಜಿಲ್ಲೆಯಲ್ಲಿ ಎಲ್ಲಿಗಾದರೂ ಹೋಗಬೇಕು ಎಂದಾಗ, ಕಾಲೇಜು ಮುಗಿದ ಬಳಿಕವೇ ಹೋಗುವುದೇ ಜಾಸ್ತಿ . ಅದು ಬೀಚ್ ಆಗಿರಲಿ, ದೇವಸ್ತಾನವು ಆಗಿರಲಿ. ನಮ್ಮದು ಸಡನ್ ಪ್ಲಾನ್, ಆ ದಿನ ಕ್ಲಾಸ್ ಇಲ್ಲ ಅಂದರೆ ಯಾವುದಾದರೂ ಜಾಗಕ್ಕೆ ಸಮಯ ಕಳೆಯುವುದಕ್ಕೆ ಹೋಗುವುದು ನಮಗೆ ಅಬ್ಯಾಸ.

ನಮ್ಮ ನಡುವೆ ಎಶ್ಟೇ ಜಗಳ ಇದ್ದರೂ, ಒಬ್ಬರನ್ನು ನೋಡಿ ಒಬ್ಬರಿಗೆ ಆಗದೇ ಇರುವಶ್ಟು ಹೊಟ್ಟೆಯುರಿ ಇದ್ದರೂ ನಾವುಗಳು ಈ ತಿರುಗುವುದು ಮತ್ತು ತಿನ್ನುವ ವಿಶಯದಲ್ಲಿ ಎಂದೂ ರಾಜಿ ಆಗುವುದಿಲ್ಲ. ಆದರೆ ಅದ್ಯಾಕೋ ಗೊತ್ತಿಲ್ಲ ಕಾಲೇಜು ರಜೆ ಇದ್ದಾಗ ಮಾತ್ರ ನಾವು ಟ್ರಿಪ್ ಹೋದರೆ ಹೊರಗಡೆ ತಿನ್ನುವ ಬಾಗ್ಯ ನಮಗಿಲ್ಲ. ಕಾಲೇಜಿನಲ್ಲಿ ಸಣ್ಣ ಬುತ್ತಿಯಲ್ಲಿ ಯಾರಾದ್ರೂ ಊಟ ತಂದರೆ ಅದನ್ನು ಒಂದೇ ಬಾಯಿಗೆ ತಿಂದು ಮುಗಿಸುವ ನಾವುಗಳು ನಮ್ಮ ದುಡ್ಡು ಕರ‍್ಚು ಮಾಡಿ ತಿರುಗಾಟ ಹೋದಾಗ ತಿನ್ನುವುದರಲ್ಲಿ ಜಿಪುಣರು, ಜೂನಿಯರ್ ಮನೋಜ್ ಕಾಲ್ ಮಾಡಿದಾಗೆಲ್ಲಾ, ಕಾರಣವಿಲ್ಲದಿದ್ದರೂ ಪಾರ‍್ಟಿ ಕೊಡಿಸುವ ಡಿಮ್ಯಾಂಡ್ ಇಡುತ್ತಿದ್ದ. ದೀಪಿಕಾ ಪಿ.ಟಿಯಲ್ಲಿ, ಅತವಾ ಊರಿಗೆ ಹೋದಾಗ ಏನಾದರೂ ರುಚಿಯಾದ ಅಡುಗೆ ಮಾಡಿಕೊಂಡು ಬರುತ್ತಾಳೆ, ಆ ಅಡುಗೆಯೆಲ್ಲಾ ಕ್ಶಣ ಮಾತ್ರಕ್ಕೆ ನಾವು ಆಸ್ವಾದಿಸಿ ಬಿಡುತ್ತಿದ್ದೆವು. ಅದರಲ್ಲೂ ನಾನ್ ವೆಜ್ ತಂದರೆ, ಬುತ್ತಿ ತಂದವರಿಗೆ ಕಾಲಿ ಬುತ್ತಿ ಮಾತ್ರ ಗತಿ ಎನ್ನುವ ಮಟ್ಟಿಗಿನ ಹೊಟ್ಟೆಬಾಕರು ನಾವುಗಳು.

ಊಟ ಒಮ್ಮೊಮ್ಮೆ ನಮ್ಮನ್ನು ಮಾನಸಿಕಗಿ ಸ್ವಸ್ತವಾಗಿರಿಸುತ್ತದೆಯಂತೆ. ಹಾಗಾಗಿ ಮನುಶ್ಯರಿಗೆ ತಿನ್ನುವುದರ ಕಡೆ ಒಲವು ಜಾಸ್ತಿ. ಕನ್ನಡ ಡಿಪಾರ‍್ಟ್‌ಮಂಟ್ ಕಡೆ ಹೋದರಂತೂ ಸರ್ ಟೇಬಲಿನಲ್ಲಿ ಚಾಕ್ಲೇಟ್ ತಡುಕಾಡುವ ಬುದ್ದಿ ನನಗೂ, ದೀಪಿಕಾಳಿಗೂ. ಪರೀಕ್ಶೆಯಲ್ಲಿ ಕೊಂಚ ಮಾರ‍್ಕ್ ಜಾಸ್ತಿ ಬಂದರೆ ಹೊಸ ಬಟ್ಟೆ, ಸ್ಕಾಲರ್ ಶಿಪ್ ಸಿಕ್ಕಿದ್ದರೂ ನಮ್ಮ ಬೇಡಿಕೆ ಶುರು. ನಮ್ಮ ಪಾರ‍್ಟಿಯ ಮೆನುವಿನಲ್ಲಿ ಇದೇ ಆಗಬೇಕು ಎನ್ನುವ ಡಿಮ್ಯಾಂಡ್ ಇಲ್ಲ. ಜ್ಯೂಸ್,ಕಬಾಬ್ ನಿಂದ ಹಿಡಿದು ಬಿರಿಯಾನಿ ತನಕ ಯಾವ ಪಾರ‍್ಟಿಯಾದರೂ ನಮಗೆ ನಡೆಯುತ್ತದೆ. ಮುರುಡೇಶ್ವರ ಚಿಕ್ಕಮಗಳೂರು ಟ್ರಿಪ್‌ ಹೋದಾಗ ಅಲ್ಲಿ ಏನಾದರೂ ತಿನ್ನಬೇಕೆಂದುಕೊಂಡರೂ ಸಾದ್ಯವಾಗದೇ ವಾಪಸು ಬಂದದ್ದು ಕೂಡ ಇದೆ. ತಿನ್ನುವುದು ಇಶ್ಟ ಪಡುವ ನಮಗೆ ಹೊರ ಜಿಲ್ಲೆಗಳಿಗೆ ಹೋದಾಗ ಅದ್ಯಾಕೋ ಅವಕಾಶ ಒದಗಿ ಬರುವುದಿಲ್ಲ.

12 ಗಂಟೆ ಆದರೆ ಸಾಕು ಊಟಕ್ಕೆ ಎಲ್ಲಿಗೆ ಹೋಗುವುದು ಎನ್ನುವುದೇ ನಮ್ಮ ಅತಿ ಗಂಬೀರ ಚರ‍್ಚೆ! ಕಡಿಮೆ ಬೆಲೆ ರುಚಿ ಅಡುಗೆ ಸಿಗುವ ಕಡೆ ನಮ್ಮ ನಡೆ, ನಮಗೆ ಊಟದ ಜೊತೆಗೆ ಅಲ್ಲಿನ ಮಾಲೀಕರು ಕೂಡ ಅಶ್ಟೇ ಮುಕ್ಯ. ಅವರು ನಮ್ಮನ್ನು ಚೆನ್ನಾಗಿ ಮಾತನಾಡಿಸಿದರೆ ಮಾತ್ರ ಮಾರನೆಯ ದಿನ ಅಲ್ಲಿಗೆ ಹೋಗುವುದು. ಇಲ್ಲ ಅಂದರೆ ಆ ಕಡೆ ಮುಕ ಮಾಡುವುದು ಬಹಳ ಕಮ್ಮಿ.

ಸಮಯದ ಉಳಿತಾಯ, ಹತ್ತಿರ ಆಗುತ್ತೆ, ಕಡಿಮೆ ಬೆಲೆ, ಶುಚಿ-ರುಚಿ ಊಟ ಎನ್ನುವ ಕಾರಣಕ್ಕೆ ನಾವೆಲ್ಲ ಹೆಚ್ಚಾಗಿ ಹೋಗುವುದೇ ಸಮ್ಮಾನ ಮಣಿಪಾಲ್ ಪಾಸ್ಟ್ ಪುಡ್ ಪಾಯಿಂಟ್, ಡಾಲ್ಪಿನ್. ಪ್ರತಿ ದಿನ ಊಟ ಮಾಡುವಾಗ ನಾಳೆಯಿಂದ ಮನೆಯಿಂದ ಊಟ ತರಬೇಕು, ಸುಮ್ಮನೆ ಹಣ ಕರ‍್ಚು ಎಂದು ಜ್ನಾನೋದಯ ಆದವರಂತೆ ವರ‍್ತಿಸುವ ನಾವು ಮಾರನೆಯ ಬುತ್ತಿ ತಂದರೂ ಹೊಟ್ಟೆ ಬಯಸುವುದು ಮಾತ್ರ ಹೋಟೆಲ್ ಊಟವನ್ನೇ. ಹೋಟೆಲ್ ಊಟ ಅಲ್ಲದಿದ್ದರೂ ಕೊನೆಗೊಂದು ಕಬಾಬ್ ಆದರೂ ನಮ್ಮ ಮೆನು ಪಟ್ಟಿಯಲ್ಲಿ ಕಾಯಂ. ನಮ್ಮ ದಿನಚರಿಯಲ್ಲಿ ಹಲವು ಬದಲಾವಣೆಗಳು ಆಗುತ್ತವೆ, ಆದರೆ ನಮ್ಮ ತಿನ್ನುವ ಆಯ್ಕೆಯಲ್ಲಿ ಬದಲಾವಣೆ ಕಮ್ಮಿ, ತಿನ್ನುವುದಕ್ಕೆ ಹುಟಿದ್ದವರು ಎನ್ನುವ ಹಾಗೆ ಎಂದಿಗೂ ನಮ್ಮ ಹೊಟ್ಟೆ ಬರ‍್ತಿಯ ವಿಶಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: