ಎಲದೆರೀಯಾ ಕೊರೊಮೋಟೊ – ವಿಶ್ವದ ಅತ್ಯುತ್ತಮ ಐಸ್ ಕ್ರೀಮ್ ಪಾರ‍್ಲರ್

– .

ವೆನೆಜುವೆಲಾದ ಮೆರಿಡಾದಲ್ಲಿ ಅವೆನಿಡಾ ಬೀದಿಯಲ್ಲಿ ಕಂಡುಬರುವ ಹಸಿರು ಕಂಬಿಗಳ ಕಿಟಕಿಗಳನ್ನು ಹೊಂದಿರುವ ಒಂದು ಅಂತಸ್ತಿನ ಅರಿಶಿಣ ಬಣ್ಣದ ಮನೆಯನ್ನು ನೋಡಿದರೆ, ಯಾರಿಗಾದರೂ ಮೊದಲ ನೋಟದಲ್ಲಿ ಇದೂ ಒಂದು ಸಾಮಾನ್ಯ ಮನೆ ಎಂದೆನಿಸುತ್ತದೆ ಹೊರತು ಅದರಲ್ಲಿ ಏನೇನೂ ವಿಶೇಶತೆ ಕಂಡುಬರುವುದಿಲ್ಲ. ಅದರೊಳಗೆ ಅಡಗಿರುವುದನ್ನು ಯಾರಿಂದಲೂ ಊಹಿಸಲು ಸಹ ಸಾದ್ಯವೇ ಇಲ್ಲ.

ಹೌದು ಅದೊಂದು ಐಸ್ ಕ್ರೀಮ್ ಪಾರ‍್ಲರ್. ಅತ್ಯಂತ ವೈವಿದ್ಯಮಯ 863 ಕ್ಕೂ ಹೆಚ್ಚು ಸುವಾಸನೆಯುಳ್ಳ ಐಸ್ ಕ್ರೀಮ್ ಗಳನ್ನು ಇಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಅತಿ ಹೆಚ್ಚು ಬಗೆಬಗೆಯ ಸುವಾಸನೆಯುಕ್ತ ಐಸ್ ಕ್ರೀಮ್ಗಾಗಿ ಈ ಪಾರ‍್ಲರ್ ಗಿನ್ನೆಸ್ ದಾಕಲೆಯನ್ನು ತನ್ನದಾಗಿಸಿಕೊಂಡಿದೆ. ಎಲ್ಲಾ 863 ವಿದದ ಐಸ್ ಕ್ರೀಮ್ ಅನ್ನು ಪ್ರತಿದಿನ ಮಾರಾಟಕ್ಕಾಗಿ ತಯಾರಿಸಿಡುವುದಿಲ್ಲ. ಯಾರಿಂದಲಾದರೂ ಬೇಡಿಕೆ ಬಂದಾಗ ಅತವಾ ವಿಶೇಶ ಸಂದರ‍್ಬಗಳಲ್ಲಿ ಮಾತ್ರ ತಯಾರಿಸಿಕೊಡುತ್ತಾರೆ. ಇಲ್ಲಿ ದೊರಕುವ ಐಸ್ ಕ್ರೀಮ್ನಲ್ಲಿ ಕನಸಿನಲ್ಲೂ ಯೋಚಿಸಲಾರದಂತಹ ಸುವಾಸನೆಗಳೂ ಸೇರಿವೆ. ಇವುಗಳಲ್ಲಿ ವಿಚಿತ್ರವಾದವುಗಳಿಂದ ಅತ್ಯಂತ ವಿಲಕ್ಶಣವಾದ, ಅನನ್ಯವಾದ ಮತ್ತು ಊಹಾತೀತವಾದ ಐಸ್ ಕ್ರೀಮ್ಗಳಿವೆ. ಉದಾಹರಣೆಗೆ ಬೀರ್, ಮೀನು, ಈರುಳ್ಳಿ, ಬೆಳ್ಳುಳ್ಳಿ, ಚೀಸ್, ಮೆಣಸಿನಕಾಯಿ ಇವೇ ಮುಂತಾದವು. ನೀವು ಇಂತಹ ಸುವಾಸನೆಯ ಐಸ್ ಕ್ರೀಮ್ ಸವಿಯುವ ಆಸೆಯನ್ನು ವ್ಯಕ್ತಪಡಿಸಿದರೆ, ಅದು ಇಲ್ಲಿ ಲಬ್ಯ.

ಎಲದೆರೀಯಾ ಕೊರೊಮೋಟೊ, ಪೋರ‍್ಚುಗೀಸ್ ವಲಸಿಗ ಮ್ಯಾನುಯಲ್ ಡ ಒಲಿವೆರಾ ಅವರ ಕನಸಿಕ ಕೂಸು. ಇದಕ್ಕೆ ಮುನ್ನ ಆತನಿಗೆ, ಬೇರೆ ಬೇರೆಯವರ ಒಡೆತನದ ದೊಡ್ಡ ದೊಡ್ಡ ಐಸ್ ಕ್ರೀಮ್ ಕಂಪೆನಿಗಳಲ್ಲಿ ಕೆಲಸ ಮಾಡಿದ ಅನುಬವವಿತ್ತು. ಎಲ್ಲಾ ಕಂಪೆನಿಗಳಲ್ಲಿ ತಯಾರಾಗುತ್ತಿದ್ದ ಒಂದೇ ರೀತಿಯ, ನೀರಸ ಅಬಿರುಚಿಯ ಐಸ್ ಕ್ರೀಮ್ ತಯಾರಿಕೆಯಿಂದ ಬೇಸತ್ತು, ಇದರಲ್ಲೇನಾದರೂ ಹೊಸದನ್ನು ತಯಾರಿಸಿ ವಿಶ್ವಕ್ಕೆ ಪರಿಚಯಿಸಬೇಕೆಂಬ ಹಂಬಲದಿಂದ, ಅಲ್ಲಿಂದ ಹೊರ ಬಂದು, 1980ರಲ್ಲಿ ಸ್ವಂತ ಐಸ್ ಕ್ರೀಮ್ ಪಾರ‍್ಲರ್ ಅನ್ನು ತೆರೆದರು. ತಮ್ಮದೇ ಪಾರ‍್ಲರ‍್ನಲ್ಲಿ ಅವರು ಮೊದಲನೆಯದಾಗಿ ಹೊರತಂದಿದ್ದು, ಅವಕಾಡೋ (ಬೆಣ್ಣೆ ಹಣ್ಣು) ಹಣ್ಣಿನ ಸುವಾಸನೆಯಿಂದ ತಯಾರಿಸಿದ ಐಸ್ ಕ್ರೀಮ್. ಇದನ್ನು ಒಂದು ಹದಕ್ಕೆ ತರುವ ಮುನ್ನ, ಸರಿಸುಮಾರು ಐವತ್ತು ಪೌಂಡುಗಳಶ್ಟು ಐಸ್ ಕ್ರೀಮ್ ಅನ್ನು ಹಾಳು ಮಾಡಿದ್ದರು. ಕ್ರಮೇಣ ಒಲಿವೆರಾ ತಯಾರಿಸಿದ ವೈವಿದ್ಯಮಯ ಸುವಾಸನೆಯ ಐಸ್ ಕ್ರೀಮ್ಗಳು, ಪಾರ‍್ಲರ್ ಗ್ರಾಹಕರ ಮನ ಗೆದ್ದಿತು. ಇದಕ್ಕೆ ಒಲಿವೆರಾ ಹಾಕಿದ ಶ್ರಮ, ಕಳೆದ ಸಮಯ ಬಹಳಶ್ಟು.

ಹೊಸ ಹೊಸ ಆವಿಶ್ಕಾರವನ್ನು ಗ್ರಾಹಕರಿಗೆ ಪರಿಚಯಿಸುವ ಯೋಚನೆ ಮ್ಯಾನುಯಲ್ ಡ ಒಲಿವೆರಾ ಅವರಲ್ಲಿ ಪುಟಿಯುತ್ತಿತ್ತು. ಒಮ್ಮೆ ಗ್ರಾಹಕರ ಮನ ಗೆದ್ದ ಮೇಲೆ, ಅವರುಗಳೇ ಎಲದೆರೀಯಾ ಕೊರೊಮೋಟೊ ಪಾರ‍್ಲರ‍್ನ ರಾಯಬಾರಿಗಳಾದರು. ಪಾರ‍್ಲರ್ ಹೆಸರು ವಿಶ್ವಾದ್ಯಂತ ಮನೆಮಾತಾಯಿತು. ಒಲಿವೆರಾ ಅಲ್ಲಿಗೆ ತನ್ನ ಪ್ರಯೋಗಗಳನ್ನು ನಿಲ್ಲಿಸಲಿಲ್ಲ, ಇನ್ನೂ ಹೆಚ್ಚು ವೈವಿದ್ಯಮಯ ಸುವಾಸನೆಗಳನ್ನು ಪರಿಚಯಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುವತ್ತ ಗಮನ ಹರಿಸಿದರು. ಅದರ ಪಲವೇ ಇಂದು 800ಕ್ಕೂ ಹೆಚ್ಚು ಸುವಾಸನೆಯ ಐಸ್ ಕ್ರೀಮ್ಗಳು ಅವರ ಪ್ರಯೋಗಾಲಯದಲ್ಲಿ ಸ್ರುಶ್ಟಿಯಾಗಿರುವುದು. ಇದರಿಂದಾಗಿ ಕೊರೊಮೋಟೊ ಇಂದು ಅತ್ಯಂತ ಯಶಸ್ವಿಯಾಗಿ ಅಬಿವ್ರುದ್ದಿ ಹೊಂದುತ್ತಿರುವ ಐಸ್ ಕ್ರೀಮ್ ಕಂಪೆನಿಯಾಗಿದೆ. ವಿಶ್ವದ ಮೂಲೆ ಮೂಲೆಯಿಂದ ಸುಪ್ರಸಿದ್ದರನ್ನು ಆಕರ‍್ಶಿಸುತ್ತಿರುವುದು ಇದೇ ಕಾರಣಕ್ಕೆ. ಮ್ಯಾನುಯಲ್ ಡ ಒಲಿವೆರಾ ಅವರು ಅವಕಾಡೊ (ಬೆಣ್ಣೆ ಹಣ್ಣು), ಕುಂಬಳಕಾಯಿ, ಅಣಬೆಗಳು ಇವೇ ಮುಂತಾದ ನಂಬಲಾಗದ ಸುವಾಸನೆಯುಳ್ಳ ಐಸ್ ಕ್ರೀಮ್ಗಳನ್ನು ಗ್ರಾಹಕರು ಮೆಚ್ಚುವಂತೆ ತಯಾರಿಸುವುದರಲ್ಲಿ ಸಿದ್ದಹಸ್ತರಾದರು. ಈ ಐಸ್ ಕ್ರೀಮ್ ಪಾರ‍್ಲರ‍್ನಲ್ಲಿ ಆಯಾ ರುತುಮಾನದಲ್ಲಿ ಹೆಚ್ಚು ಸಿಗುವ ನೈಸರ‍್ಗಿಕ ವಸ್ತುಗಳ ಸುವಾಸನೆಯಿಂದ ತಯಾರಿಸಿದ ಐಸ್ ಕ್ರೀಮ್ಗಳು ಸಿಗುತ್ತವೆ.

ಎಲದೆರೀಯಾ ಕೊರೊಮೋಟೊ ಐಸ್ ಕ್ರೀಮ್ ಪಾರ‍್ಲರ್ ನಲ್ಲಿ ದೊರೆಯುವ ಕೆಲವು ಐಸ್ ಕ್ರೀಮ್ಗಳ ಹೆಸರುಗಳು ಸಹ ರೋಚಕವಾಗಿವೆ. ಉದಾಹರಣೆಗೆ ಬ್ರಿಟೀಶ್ ಏರ‍್ವೇಸ್, ಐ ಆಮ್ ಸಾರಿ, ಡಾರ‍್ಲಿಂಗ್ ಹೀಗೆ. ಎಲದೆರೀಯಾ ಕೊರೊಮೋಟೊ ಐಸ್ ಕ್ರೀಮ್ ಪಾರ‍್ಲರ‍್ನಲ್ಲಿ ಯಾವುದೇ ಸಮಯದಲ್ಲಿ ಕಡಿಮೆ ಎಂದರೂ 75 ರಿಂದ 100 ಸುವಾಸನೆಯ ಐಸ್ ಕ್ರೀಮ್ ಗಳನ್ನು ಸವಿಯಬಹುದು. ಇಲ್ಲಿ ಸಿಗುವ ಅಶ್ಟೂ ಐಸ್ ಕ್ರೀಮ್ಗಳಲ್ಲಿ ಬಳಸುವ ಸುವಾಸನೆ ನೈಸರ‍್ಗಿಕವಾದದ್ದು. ಕ್ರುತಕ ಸುವಾಸನೆಗೆ ಇಲ್ಲಿ ಜಾಗವಿಲ್ಲ. ಈ ಐಸ್ ಕ್ರೀಮ್ ಪಾರ‍್ಲರ್ ಮಂಗಳವಾರದಿಂದ ಬಾನುವಾರದವರೆಗೆ ಮದ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗ್ರಾಹಕರಿಗಾಗಿ ತೆರೆದಿರುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, news.bbc.co.uk, foodchannel.com, flickr.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ನನ್ನ ಈ ಬರಹವನ್ನು ಹೊನಲುವಿನಲ್ಲಿ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು ಸರ್

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *