ಎಳವೆಯ ನೆನಪು: ಟಿಟ್ಟಿಬ ಹಕ್ಕಿಯ ಇಂಚರ

– ಮಹೇಶ ಸಿ. ಸಿ.

ಬಾಲ್ಯದಲ್ಲಿ ನಮ್ಮದು ಏಳೆಂಟು ತುಂಟ ಹುಡುಗರ ಗುಂಪು, ವಯಸ್ಸಿನಲ್ಲಿ ಮೂರ‍್ನಾಲ್ಕು ವರ‍್ಶಗಳ ಅಂತರವಿದ್ದರೂ ಸಹ ನಾವು ಅಂದು ಮಾಡಿದ ತುಂಟಾಟ, ತರಲೆಗಳು ನನಗೆ ಆಗಾಗ ನೆನಪಾಗುತ್ತವೆ. ಹೇಗೆ ಮರೆಯಲು ಸಾದ್ಯ ಹೇಳಿ ಆ ಬಾಲ್ಯದ ನೆನಪುಗಳನ್ನು? ಈಗಲೂ ಆ ನೆನಪುಗಳು ಬಹಳ ಉತ್ಸಾಹವನ್ನು ನೀಡುತ್ತದೆ.

ಬಾಲ್ಯದ ದಿನಗಳಲ್ಲಿ ನಮಗೆ ಶನಿವಾರ ಬಂದರೆ ಸಾಕು ಎಲ್ಲಿಲ್ಲದ ಕುಶಿ, ಸಂಬ್ರಮ. ಕಾರಣ ಇಶ್ಟೇ, ಶನಿವಾರ ನಮಗೆ ಅರ‍್ದ ದಿನ ಶಾಲೆ, ಬಾನುವಾರ ಪೂರ್‍ತಿ ರಜೆ ಅನ್ನುವುದು. ಆ ರಜೆಯ ಸಮಯದಲ್ಲಿ ನಾವೆಲ್ಲ ನಮ್ಮ ಮನೆಯ ಅಂಗಳದಲ್ಲಿ ಸೇರುತ್ತಿದ್ದೆವು, ಸೇರಿದ ನಂತರ ನಮ್ಮ ಆ ದಿನದ ಸವಾರಿ ಎಲ್ಲಿಗೆ, ಹೇಗೆ ಮತ್ತು ಏನು ಮಾಡಬೇಕು ಎನ್ನುವ ಮಾಸ್ಟರ್ ಪ್ಲಾನ್ ರೆಡಿಯಾಗುತ್ತಿತ್ತು.

ಒಮ್ಮೆ ನಮ್ಮ ಪಯಣ ನಮ್ಮೂರಿನ ಗುಡ್ಡದ ಕಡೆಯಿಂದ ಶುರುವಾಗಿ ಮೂರ‍್ನಾಲ್ಕು ಊರುಗಳನ್ನು ಸುತ್ತಿ, ನಂತರ ವಾಪಸು ಮನೆಗೆ ಬರುವುದು ಎಂಬುದಾಗಿತ್ತು. ಪ್ರತೀ ವಾರವೂ ಇಂತಹುದೇ ಒಂದೊಂದು ಚಟುವಟಿಕೆ ಇದ್ದದ್ದೇ. ಈ ಬಾರಿ ನಾವೆಲ್ಲ ನಮ್ಮ ಪಯಣ ಶುರುಮಾಡಿ ನಮ್ಮೂರಿನ ಹೊರವಲಯದ ಶನೇಶ್ವರ ದೇವಾಲಯದ ಬಳಿ ಬಂದಾಗ ಅಲ್ಲಿಗೆ ಒಂದು ಪಕ್ಶಿಯೊಂದರ ಇಂಚರ ಕೇಳತೊಡಗಿತು. ಅಂದು ನಮಗೆ ಆ ಪಕ್ಶಿಯ ಪರಿಚಯವಿರಲಿಲ್ಲ, ಆದರೆ ನಂತರ ತಿಳಿದದ್ದು ಅದು ಟಿಟ್ಟಿಬ ಹಕ್ಕಿ ಎಂದು.

ಟಿಟ್ಟಿಬದ ಶಬ್ದ ನಾವು ಹೊರಟಿದ್ದ ಗುಡ್ಡದ ಕಡೆಯಿಂದಲೇ ಬರುತ್ತಿದ್ದ ಕಾರಣ, ಹಾಗೇ ಆ ದನಿಯನ್ನು ಅನುಸರಿಸಿ ಹೊರಟೆವು. ನಾವೆಲ್ಲಾ ಅದರ ಸಮೀಪ ಬರುತ್ತಿದ್ದಂತೆ ಆ ಪಕ್ಶಿಯ ಕೂಗು ಮತ್ತಶ್ಟು ಜೋರಾಗಿ ನಮ್ಮನ್ನ ಬೆದರಿಸುವ ರೀತಿ ಇತ್ತು. ಇದು ಯಾಕೆ ಹೀಗೆ ನಮ್ಮನ್ನ ಬೆದರಿಸುತ್ತಿದೆ ಎಂಬ ಸೂಕ್ಮತೆ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಅದು ತನ್ನ ಮೊಟ್ಟೆಗಳನ್ನು ರಕ್ಶಣೆ ಮಾಡಿಕೊಳ್ಳಲು ಹೀಗೆ ಜೋರು ದ್ವನಿಯಲ್ಲಿ ನಮ್ಮನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡುತ್ತಿತ್ತು.

ಅದೇ ಹೊತ್ತಿಗೆ ಅದೆಲ್ಲಿಂದಲೋ ಮತ್ತೊಂದು ಟಿಟ್ಟಿಬ ನಮ್ಮ ಬಳಿ ಬಂದಿತು. ಈಗ ಅವೆರಡೂ ಹಕ್ಕಿಗಳ ದ್ವನಿಯು ಮತ್ತಶ್ಟು ಹೆಚ್ಚಾಯಿತು. ಆ ದ್ವನಿಗೆ ಅಲ್ಲಿ ಸುತ್ತಮುತ್ತ ಇದ್ದ ಇತರೆ ಬೇರೆ ಬೇರೆ ಪಕ್ಶಿಗಳು ಕಾಲ್ಕಿತ್ತವು. ನಾವು ಇಲ್ಲೇ ಸಮೀಪದಲ್ಲಿ ಅದರ ಗೂಡು ಇರಬಹುದು ಎಂಬ ಊಹೆಯ ಮೇರೆಗೆ ಎಲ್ಲರೂ ಶೋದ ಮಾಡಲು ನಿಂತೆವು. ಆಗ ನಮಗೆ ಕಂಡದ್ದು ಈ ಟಿಟ್ಟಿಬವು ಗೂಡಿನಲ್ಲಿ ಇಟ್ಟಿದ್ದ ಮೊಟ್ಟೆಗಳು.

ನಾವು ಇಂದಿಗೂ ಈ ಬೂಮಿಯಲ್ಲಿ ಎಶ್ಟೊಂದು ವಿಚಿತ್ರಗಳನ್ನ, ವಿಶಿಶ್ಟತೆಗಳನ್ನು ನೋಡುತ್ತಲೇ ಇರುತ್ತೇವೆ. ಅದರಲ್ಲಿ ಹಲವು ಪಕ್ಶಿಗಳ ಜೀವನ ಕ್ರಮವಂತೂ ನಮ್ಮನ್ನು ಬೆರಗುಗೊಳಿಸುತ್ತದೆ. ಅದರಲ್ಲಿ ಈ ಟಿಟ್ಟಿಬ ನಮಗೆ ಅಂದು ಬೆರಗುಗೊಳಿಸಿದ್ದು ಸುಳ್ಳಲ್ಲ. ಕಾರಣ ಈ ಕೆಂಪು ಮತ್ತು ಕಪ್ಪು ಕೊಕ್ಕಿನ, ಬಿಳಿ, ಕಪ್ಪು, ಕಂದು ಬಣ್ಣದ ಮೈಬಣ್ಣ, ಹಾಗೂ ಹಳದಿ ಕಾಲಿನ ಈ ಪಕ್ಶಿಯು ಒಟ್ಟು ನಾಲ್ಕು ಮೊಟ್ಟೆಗಳನ್ನು ಇಟ್ಟಿತ್ತು. ಮೊಟ್ಟೆ ಇಡುವ ಮುಂಚೆ ತನ್ನ ಕೊಕ್ಕಿನಲ್ಲಿ ತರಬಹುದಾದ ಸಣ್ಣ ಒಂದೇ ಗಾತ್ರದ ಮರಳು ಕಲ್ಲುಗಳನ್ನು ಆಯ್ದು ಒಂದೆಡೆ ತಂದು ಅವುಗಳನ್ನು ವ್ರುತ್ತಾಕಾರವಾಗಿ ಜೋಡಿಸಿ ಆ ಕಲ್ಲುಗಳ ಮೇಲೆ ಈ ಮೊಟ್ಟೆಗಳನ್ನು ಟಿಟ್ಟಿಬಗಳು ಇಟ್ಟಿದ್ದವು. ಆ ಮೊಟ್ಟೆಗಳೋ ಆ ಕಲ್ಲಿನ ರೀತಿಯ ಬಣ್ಣದಲ್ಲೇ ಇರುವುದರಿಂದ ಅದನ್ನು ಬೇಗ ಗುರುತಿಸುವುದು ಕಶ್ಟವಾಗಿತ್ತು!

ಆ ಪಕ್ಶಿಗಳ ಕೂಗು ಮತ್ತಶ್ಟು ಹೆಚ್ಚಾಗಿ ನಾವು ಅಲ್ಲಿಂದ ಹೊರಡಲು ಸಿದ್ದರಾದೆವು. ಆದರೆ ನಾವು ಆ ಗೂಡಿರುವ ಜಾಗದಿಂದ ದೂರ ಹೋಗುವವರೆಗೂ ಬಿಡದೆ ಚೀರುತ್ತಾ, ನಮ್ಮ ಮೇಲೆ ಎರಗಿ ಬರುತ್ತಿದ್ದವು ಆ ಟಿಟ್ಟಿಬಗಳು. ನಾವು ದೂರ ಹೋದ ನಂತರ ಅವು ಸುಮ್ಮನಾದವು. ಈಗೆ ಆ ಪಕ್ಶಿಗಳು ತಮ್ಮ ಸಂತತಿಯನ್ನು ಕಾಪಾಡಲು, ಉಳಿಸಿಕೊಳ್ಳಲು ಜೋರು ದ್ವನಿಯ ಮೂಲಕ ಅಲ್ಲಿಗೆ ದಾಳಿ ಮಾಡುವ ಬೇಟೆಗಾರರನ್ನು ಅಲ್ಲಿಂದ ಓಡಿಸುತ್ತಿದ್ದವು. ಇವುಗಳು ಕೆಲವು ರಣಹದ್ದುಗಳ ಹಾಗೂ ಬೆಕ್ಕುಗಳ ದಾಳಿಯನ್ನು ಸಹ ಎದುರಿಸಬೇಕಾಗಿತ್ತು ಎಂಬುದು ಆ ಪರಿಸರ ನೋಡಿದರೆ ತಿಳಿಯುತ್ತಿತ್ತು.

ಬಹು ಸಮಯವನ್ನು ಅಂದು ಅಲ್ಲಿಯೇ ಕಳೆದ ನಮ್ಮ ಗೆಳೆಯರ ಗುಂಪಿನಲ್ಲಿ ಮತ್ತೊಂದು ತೀರ್‍ಮಾನವಾಯಿತು. ಅದೇನೆಂದರೆ ಮುಂದಿನ ವಾರವು ಸಹ ನಾವು ಇಲ್ಲಿಗೆ ಬರೋಣ. ಈ ಪಕ್ಶಿಯ ಮೊಟ್ಟೆಯ ಬೆಳವಣಿಗೆಯನ್ನು ನೋಡೋಣ ಎಂಬುದು. ನಾವು ಮತ್ತೆ ಮುಂದಿನ ವಾರದವರೆಗೂ ಬಕಪಕ್ಶಿಗಳಂತೆ ಕಾದು ಕುಳಿತು ಮತ್ತೆ ಅದೇ ಸ್ತಳಕ್ಕೆ ಹೋದೆವು. ಅಶ್ಟರಲ್ಲಿ ಅಲ್ಲಿದ್ದ ನಾಲ್ಕು ಮೊಟ್ಟೆಯು ಒಡೆದು ಮರಿಗಳು ಆಚೆ ಬಂದಿದ್ದವು. ಆ ಮುದ್ದಾದ ಮರಿಗಳನ್ನು ನಾವು ಸ್ವಲ್ಪ ದೂರದಲ್ಲೇ ನಿಂತು ಗಮನಿಸಿದೆವು.

ಈ ಪಕ್ಶಿಗಳ ಕುರಿತಂತೆ ಪುಸ್ತಕ ಅದ್ಯಯನದಿಂದ ತಿಳಿದದ್ದು ಏನೆಂದರೆ, ಇವು ಮಾರ‍್ಚ್ ತಿಂಗಳಿಂದ ಆಗಸ್ಟ್ ವರೆಗೆ ಹೆಚ್ಚಾಗಿ ತಮ್ಮ ಸಂತತಿಯನ್ನು ಬೆಳೆಸುತ್ತವೆ ಎಂಬುದು. ಇವು ಮೊಟ್ಟೆ ಇಟ್ಟು ಮರಿ ಮಾಡಿ ಅವು ಹಾರಲು ತೆಗೆದುಕೊಳ್ಳುವ ಸಮಯ 28 ರಿಂದ 32 ದಿನಗಳು ಎಂಬುದು ಪಕ್ಶಿತಜ್ನರ ಅಬಿಮತ. ಅಲ್ಲದೆ ಈ ಪಕ್ಶಿಗಳ ಚಲನ-ವಲನದಿಂದ ಕೆಲವು ಬಾಗಗಳಲ್ಲಿ ಪ್ರಕ್ರುತಿಯ ಬಗ್ಗೆ ತಿಳಿದುಕೊಳ್ಳುತ್ತದ್ದರು ಜೊತೆಗೆ ಕೆಲವು ನಂಬಿಕೆಗಳಿವೆ ಎಂಬುದು. ಇವುಗಳು ಇಡುವ ಮೊಟ್ಟೆಗಳ ಸಂಕ್ಯೆಗೆ ಆದಾರವಾಗಿ ಆ ವರುಶದಲ್ಲಿ ಮಳೆಯಾಗಲಿದೆ ಎಂದು. ಇವುಗಳು 4 ಮೊಟ್ಟೆ ಇಟ್ಟರೆ ಆ ಬಾರಿ ಸಮ್ರುದ್ದಿ ಮಳೆಯಾಗುತ್ತದೆ, 2 ಮೊಟ್ಟೆ ಇಟ್ಟರೆ ಸಾದಾರಣ ಮಳೆ ಎಂಬುದು ಕೆಲವು ಪ್ರದೇಶಗಳ ಕೇವಲ ನಂಬಿಕೆ ಅಶ್ಟೇ.

ಟಿಟ್ಟಿಬಗಳು ಹಗಲು ಹಾಗೂ ರಾತ್ರಿ ಎರಡೂ ಸಮಯದಲ್ಲಿ ತಮ್ಮ ಆಹಾರವನ್ನು ಹುಡುಕಿ ತಿನ್ನುತ್ತವೆ. ಇದಲ್ಲದೆ ಈ ಪಕ್ಶಿಗಳು ಹೆಚ್ಚಾಗಿ ಹುಣ್ಣಿಮೆಯ ಬೆಳಕಿನಲ್ಲಿ ಇತರೆ ರಾತ್ರಿಗಳಿಗಿಂತ ಲವಲವಿಕೆಯಿಂದ ಇರುತ್ತವೆ ಎಂಬುದು ವಿಶೇಶ. ಈ ಪಕ್ಶಿಗಳ ಪ್ರಮುಕ ಆಹಾರವೆಂದರೆ ಎರೆಹುಳು, ಕಾಳುಗಳು, ಮತ್ತು ಸಣ್ಣ ಪುಟ್ಟ ಕೀಟಗಳನ್ನು ತಿಂದು ಇವು ಜೀವಿಸುತ್ತವೆ. ಜೊತೆಗೆ ಇವು ಎಲ್ಲಾ ರೀತಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಹೆಚ್ಚಾಗಿ ನದಿಯ ದಡದಲ್ಲಿ ಸುರಕ್ಶತೆಯನ್ನು ನೋಡಿಕೊಂಡು ಇವು ವಾಸಿಸುತ್ತವೆ.

ಇಂದಿಗೂ ನಾನು ಕೆಲಸ ಮಾಡುವ ಪ್ರದೇಶದ ಒಳಗೂ ಸಹ ಇವು ವಾಸಿಸುತ್ತಿವೆ. ಅಂದರೆ ನಮ್ಮ ಗ್ರಾಮದ ಅದೇ ಗುಡ್ಡದಿಂದ ಸ್ವಲ್ಪ ದೂರದಲ್ಲೇ ನಾನು ಕೆಲಸ ಮಾಡುವ ಸ್ತಳ. ಹಾಗಾಗಿ ಟಿಟ್ಟಿಬಗಳು ಇಲ್ಲಿಯೂ ಇವೆ. ಅವಕ್ಕೆ ಹೆಚ್ಚಿನ ಸುರಕ್ಶತೆ ಇರುವ ಕಾರಣ ಇಲ್ಲಿಗೆ ಬರುತ್ತವೆ. ತುಂಬಾ ಸಲ ಮೊಟ್ಟೆ ಇಟ್ಟು ಮರಿ ಮಾಡಿರುವ ಟಿಟ್ಟಿಬಗಳ ಆ ಜೀವನ ಶೈಲಿಯನ್ನ, ಆ ಪುಟ್ಟ ಟಿಟ್ಟಿಬಗಳ ಓಡಾಟವನ್ನು ನಾವು ನೋಡಿ ಕುಶಿ ಪಡುತ್ತಿದ್ದೇವೆ. ನನಗಂತೂ ಅವುಗಳನ್ನು ನೋಡಿದಾಗೆಲ್ಲಾ ನನ್ನ ಬಾಲ್ಯದ ನೆನಪು ಕಣ್ಣ ಮುಂದೆ ಬಂದು ಹೋಗುವುದು ಮಾಮೂಲಿಯಾಗಿದೆ. ಈ ಟಿಟ್ಟಿಬಗಳ ಇಂಚರವು ನನ್ನ ಜೀವನದ ನೆನಪಿನ ಒಂದು ಶಾಶ್ವತ ಬಾಗವಾಗಿ ಹೋಗಿದೆ ಎಂಬುದು ಸುಳ್ಳಲ್ಲ.

(ಚಿತ್ರ ಸೆಲೆ: wikimedia.org, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: