ಮಮ್ಮಿಯಾಗಿರುವ ರಾಮಾನುಜಾಚಾರ‍್ಯರ ದೇಹ

– .

`ಪಾಶ್ಚಿಮಾತ್ಯರಲ್ಲಿ ಕೆಲವು ಕಡೆ ಸತ್ತವರ ದೇಹವನ್ನು ಮಮ್ಮಿ ಮಾಡಿ ಬಹಳ ವರ‍್ಶಗಳ ಕಾಲ ಸುಸ್ತಿತಿಯಲ್ಲಿ ಇಡುವ ಪದ್ದತಿಯಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ, ಈಜಿಪ್ಟಿನ ಪಿರಮಿಡ್‍‍ಗಳು. ಬೇರೆ ಬೇರೆ ದೇಶಗಳಲ್ಲೂ ಅವರವರದೇ ಆದ ಪದ್ದತಿಯಂತೆ ನಿರ‍್ಜೀವ ದೇಹವನ್ನು ಸಂಸ್ಕರಿಸಿ, ಮಮ್ಮಿ ಮಾಡಿ ಹಲವಾರು ವರ‍್ಶಗಳ ಕಾಲ ಸಂರಕ್ಶಿಸುವ ಕಲೆಯನ್ನು ಅವರುಗಳು ಕರಗತ ಮಾಡಿಕೊಂಡಿದ್ದಾರೆ.ಬಾರತದಲ್ಲೂ ದೇಹವನ್ನು ಕಾಪಿಡುವ ಪದ್ದತಿ ಬಹಳ ಶತಮಾನಗಳಿಂದಲೂ ಜಾರಿಯಲ್ಲಿದೆ. ಇದಕ್ಕೆ ನೇರ ಉದಾಹರಣೆ, ತಿರುಚಿನಾಪಳ್ಳಿಯಲ್ಲಿನ ಶ್ರೀರಂಗನಾತಸ್ವಾಮಿ ದೇವಸ್ತಾನದಲ್ಲಿ ಸಂರಕ್ಶಿಸಿರುವ, ವೈಶ್ಣವ ತತ್ವಜ್ನಾನಿ ಹಾಗೂ ದರ‍್ಮದ ಪ್ರತಿಪಾದಕ ರಾಮಾನುಜಾಚಾರ‍್ಯರ ದೇಹ. ಕ್ರಿಸ್ತ ಶಕ 1137ರಿಂದ ಇದನ್ನು ಈ ದೇವಸ್ತಾನದಲ್ಲಿ ಕೆಡದಂತೆ ಸಂರಕ್ಶಿಸಿ ಇಡಲಾಗಿದೆ.

ರಾಮಾನುಜಾಚಾರ‍್ಯರ ದೇಹ ಈ ದೇವಾಲಯದಲ್ಲಿ, ಸರಿ ಸುಮಾರು 885 ವರರುಶಗಳಿಂದಲೂ, ಸಂರಕ್ನಿಸಿಕೊಂಡು ಬರಲಾಗಿದೆ. ದೇಹದ ಸಂರಕ್ನಣೆಗೆ ಯಾವುದೇ ತೆರೆನಾದ ರಾಸಾಯನಿಕಗಳನ್ನು ಬಳಸಲಾಗಿಲ್ಲ. ಬದಲಿಗೆ ಶ್ರೀಗಂದದ ಪೇಸ್ಟ್ ಮತ್ತು ತಾಜಾ ಕುಂಕುಮವನ್ನು ಬಳಸಲಾಗುತ್ತದೆ. ಇದರೊಂದಿಗೆ ವರ‍್ಶಕ್ಕೆ ಎರಡು ಬಾರಿ ಕೇಸರಿ ಮತ್ತು ಕರ‍್ಪೂರದ ಪೇಸ್ಟ್ ತಯಾರಿಸಿ ರಾಮಾನುಜಾಚಾರ‍್ಯರ ದೇಹಕ್ಕೆ ಲೇಪಿಸಲಾಗುತ್ತದೆ. ಇದು ಆ ದೇಹಕ್ಕೆ ಕಾವಿ ಬಣ್ಣವನ್ನು ನೀಡುತ್ತದೆ. ಈ ಅಬ್ಯಾಸ/ಸಂಪ್ರದಾಯವನ್ನು ಕಳೆದ 878 ವರ‍್ಶಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ.ರಾಮಾನುಜಾಚಾರ‍್ಯರ ದೇಹವನ್ನು ಗರ‍್ಬಗುಡಿಯಲ್ಲಿನ ಪ್ರತಿಸ್ತಾಪಿತ ಮೂಲ ವಿಗ್ರಹದ ಹಿಂಬದಿಯಲ್ಲಿ ಇಡಲಾಗಿದೆ. ಇದು ಬಗವಾನ್ ರಂಗನಾತ ಸ್ವಾಮಿಯ ಆಣತಿಯಂತೆ ಶ್ರೀರಂಗಂ ದೇವಸ್ತಾನದ ಐದನೇ ಸುತ್ತಿನಲ್ಲಿ ಗರ‍್ಬಗುಡಿಯ ನೈರುತ್ಯ ಮೂಲೆಯಲ್ಲಿದೆ. ಸಾರ‍್ವಜನಿಕರಿಗೆ ಮುಕ್ತವಾಗಿ ನೋಡುವ ಅವಕಾಶವನ್ನೂ ಸಹ ಇಲ್ಲಿ ಕಲ್ಪಿಸಲಾಗಿದೆ. ರಾಮಾನುಜಾಚಾರ‍್ಯರ ದೇಹವನ್ನು ಗಮನಿಸಿದರೆ, ಅದರ ಕೈಬೆರಳುಗಳ ಮೇಲಿನ ಉಗುರುಗಳನ್ನು ಗುರುತಿಸಬಹುದು. ಇದರಿಂದ ಇದು ವಿಗ್ರಹವಲ್ಲ ಎಂಬ ಕಾತ್ರಿ ಸಹ ದೊರಕುತ್ತದೆ.

ಬೂಲೋಕದ ವೈಕುಂಟ ಎಂದು ಶ್ಲಾಗಿಸಲ್ಪಡುವ ಶ್ರೀರಂಗಂ ದೇವಾಲಯದಲ್ಲಿರುವ ರಾಮಾನುಜಾಚಾರ‍್ಯರ ದೇಹವನ್ನು ಯಾವುದೇ ಪ್ರಚಾರವಿಲ್ಲದೆ ಯಾವುದೇ ರಾಸಾಯನಿಕವನ್ನು ಬಳಸದೆ ಸಂರಕ್ಶಿಸಿರುವುದು, ಸ್ವತಹ ವೈಶ್ಣವರಲ್ಲಿ ಬಹಳಶ್ಟು ಜನಕ್ಕೇ ತಿಳಿದಿಲ್ಲ. ಆದರೆ ಬೇರೆಡೆ, ಈಜಿಪ್ಟ್ ಆಗಲಿ, ಗೋವಾ ಆಗಲಿ, ದೇಹಗಳನ್ನು ಸಂರಕ್ಶಿಸಿಡಲು ರಾಸಾಯನಿಕಗಳನ್ನು ಹಾಗೂ ಸಂರಕ್ಶಕಗಳನ್ನು ಬಳಸಲಾಗುತ್ತದೆ. ಹಲವಾರು ಪದರಗಳ ರಾಸಾಯನಿಕ ಲೇಪನದ ನಂತರ ಬಟ್ಟೆಯಲ್ಲಿ ಸುತ್ತಿಡಲಾಗುತ್ತದೆ. ಇಲ್ಲಿನ ಮತ್ತೊಂದು ವಿಶೇಶವೆಂದರೆ ವಿದೇಶದಲ್ಲಿ ಕಂಡುಬರುವ ಎಲ್ಲಾ ಮಮ್ಮಿಗಳು ಮಲಗಿರುವ ಸ್ತಿತಿಯಲ್ಲಿದ್ದರೆ, ರಾಮಾನುಜಾಚಾರ‍್ಯರ ದೇಹ ಮಾತ್ರ ಕುಳಿತಿರುವ ಬಂಗಿಯಲ್ಲಿದೆ.ಬಾರತದಲ್ಲಿ ಹಿಂದೂ ದೇವಾಲಯಗಳ ಇತಿಹಾಸವನ್ನು ಕೆದಕುತ್ತಾ ಹೋದಲ್ಲಿ ಕಂಡು ಬರುವ ವಿಸ್ಮಯವೆಂದರೆ, ವಿಶ್ವದಲ್ಲಿ ಇದೊಂದೇ ದೇವಾಲಯದಲ್ಲಿ ಸಂರಕ್ಶಿಸಿರುವ ದೇಹಕ್ಕೆ ಸ್ತಳಾವಕಾಶ ಕಲ್ಪಿಸಿರುವುದು.

ರಾಮಾನುಜಾಚಾರ‍್ಯರು ಜನಿಸಿದ್ದು 1017ರಲ್ಲಿ. ಅಂದಿನ ಮದ್ರಾಸಿನಿಂದ (ಇಂದಿನ ಚೆನ್ನೈ) ಪಶ್ಚಿಮಕ್ಕೆ ಇಪ್ಪತ್ತೈದು ಮೈಲಿ ದೂರವಿರುವ ಪೆರೆಂಬದೂರು ಗ್ರಾಮ ಇವರ ಜನ್ಮಸ್ತಳ. ರಾಮಾನುಜಾಚಾರ‍್ಯರ ತಂದೆಯ ಹೆಸರು ಕೇಶವ ಸೋಮಯಾಜಿ. ತಾಯಿ ಕಾಂತಿಮತಿ. ಆಕೆ ಅತ್ಯಂತ ದಾರ‍್ಮಿಕ ಮತ್ತು ಸದ್ಗುಣ ಶೀಲ ಮಹಿಳೆ. ರಾಮಾನುಜಾಚಾರ‍್ಯರ ಮೂಲ ಹೆಸರು ಇಳಯ ಪೆರುಮಾಳ್. ರಾಮಾನುಜಾಚಾರ‍್ಯರು ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡರು. ತಂದೆಯ ಮರಣಾನಂತರ ಆಚಾರ‍್ಯರು ಕಾಂಚೀಪುರಂಗೆ ಬಂದು ಅಲ್ಲಿ ಅದ್ವೈತ ತತ್ವಜ್ನಾನ ಬೋದಕರಾದ ಯಾದವಪ್ರಕಾಶ ಅವರ ಅಡಿಯಲ್ಲಿ ವೇದಗಳ ಅದ್ಯಯನ ಮಾಡಿದರು. ಶೈವರ ರಾಜನಾದ ಕುಲೋತ್ತುಂಗ ಚೋಳನು ಸಮುದ್ರಕ್ಕೆ ಎಸೆದಿದ್ದ ಗೋವಿಂದರಾಜರ ವಿಗ್ರಹವನ್ನು ತಿರುಪತಿಯಲ್ಲಿ ಮರುಸ್ತಾಪಿಸಿದ್ದು ರಾಮಾನುಜಾಚಾರ‍್ಯರು.

ರಾಮಾನುಜಾಚಾರ‍್ಯರು ಶ್ರೀರಂಗಂನಲ್ಲಿನ ಬಗವಾನ್ ರಂಗನಾತನ ದೇವಾಲಯದಲ್ಲಿ ಕಾಲು ಶತಮಾನದಶ್ಟು ಕಾಲ ದೇವರ ಪೂಜೆಯ ಕೈಂಕರ‍್ಯವನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಿಕೊಂಡು ಬಂದಿದ್ದರು. ಎಂದು ಅಚಾರ‍್ಯರು ತಿರುವಡಿಯನ್ನು (ಕಮಲಪಾದದಲ್ಲಿ ಐಕ್ಯರಾದರೋ/ ದೇಹ ತ್ಯಾಗ ಮಾಡಿದರೋ) ಪಡೆದರೋ ಅಂದಿನಿಂದ ಅವರ ಮೂಲ ಕಳೇಬರವನ್ನು ದೇವಾಲಯದಲ್ಲೇ ಸಂರಕ್ಶಿಸಿಡಲಾಗಿದೆ.

( ಮಾಹಿತಿ ಸೆಲೆ: booksfact.com, srirangapankajam.in ಚಿತ್ರ ಸೆಲೆ: srirangapankajam.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: