ಗೀಜಗವೆಂಬ ಸೋಜಿಗ

– ಮಹೇಶ ಸಿ. ಸಿ.

ನಿಜಕ್ಕೂ ಹಳ್ಳಿಗಾಡಿನ ಜನರು ಎಶ್ಟೊಂದು ಅದ್ರುಶ್ಟವಂತರು ಎಂದರೆ ಒಂದರ‍್ತದಲ್ಲಿ ಪ್ರಕ್ರುತಿಯ ಜೊತೆ ಆಡಿ ಬೆಳೆದವರು. ಹಳ್ಳಿಯಲ್ಲಿನ ತಂಪಾದ ಗಾಳಿ, ಹೊಲ ಗದ್ದೆ, ಕಾಲುವೆ, ದನ-ಕರು, ಪಕ್ಶಿಗಳ ಕಲರವ, ಇವು ನಿಜಕ್ಕೂ ಅದ್ಬುತ. ನಾನು ಈ ವಿಚಾರದಲ್ಲಿ ಅದ್ರುಶ್ಟವಂತ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಾನು ಚಿಕ್ಕವನಿದ್ದಾಗ ಕಂಡ ಪಕ್ಶಿ ಸಂಕುಲದಲ್ಲಿ, ಗುಬ್ಬಿ ಜಾತಿಗೆ ಸೇರಿದ ಪಕ್ಶಿ ಗೀಜಗವನ್ನು ತೀರ ಹತ್ತಿರದಿಂದ ನೋಡಿದ್ದೇನೆ. ಅದರ ಚೀವ್ ಗುಡುವ ಸದ್ದು, ಅದು ಗೂಡು ಕಟ್ಟುವ ಕಲೆ, ಒಗ್ಗಟ್ಟಾಗಿ ಬಾಳುವ ಇವುಗಳ ಚಲನವಲನ ಈಗಲೂ ಸಹ ನನ್ನನ್ನು ಆ ಹಳೆಯ ನೆನಪಿಗೆ ಮತ್ತೊಮ್ಮೆ ಕೊಂಡೊಯ್ಯುತ್ತದೆ. ಒಮ್ಮೆ ಗೆಳೆಯರೊಡನೆ ಹೋಗಿ ಅದರ ಕಾಲಿ ಇರುವ ಗೂಡನ್ನು ಕಿತ್ತು ಮನೆಗೆ ತಂದಾಗ ಮನೆಯಲ್ಲಿ ಬೈದದ್ದು ಉಂಟು, ನಂತರ ಅದನ್ನು ಇದ್ದ ಜಾಗಕ್ಕೆ ಇಟ್ಟು ಬಂದದ್ದೂ ಇದೆ.

ಗೂಡು ಕಟ್ಟುವ ರೋಚಕ ಕಲೆ

ಪಕ್ಶಿ ಸಂಕುಲದ ಎಂಜಿನೀಯರ್ ಎಂದು ಹೇಳಲಾಗುವ ಈ ಗೀಜಗ, ಗೂಡು ಕಟ್ಟುವ ಕಲೆಯೇ ಒಂದು ರೋಚಕ ಸಂಗತಿ. ಇವು ಗೂಡು ಕಟ್ಟಲು ಆಯ್ಕೆ ಮಾಡುವ ಪ್ರದೇಶದಿಂದಲೇ ಇವುಗಳು ಅದೆಶ್ಟು ಬುದ್ದಿವಂತ ಪಕ್ಶಿಗಳು ಎಂಬುದನ್ನು ತಿಳಿಯಬಹುದು. ನದಿಗಳ ಇಕ್ಕೆಲದಲ್ಲಿ ಜೋತು ಬೀಳುವ ರೆಂಬೆಗಳು, ಎತ್ತರದ ಮುಳ್ಳಿನ ಮರಗಳು, ಈಚಲ ಮರದ ತುತ್ತ ತುದಿ, ಆಹಾರ ಸುಲಬವಾಗಿ ಸಿಗುವ ಪ್ರದೇಶಗಳು, ಹಳೆಯ ನೆಲಬಾವಿಗಳ ಅಂಚಿನಲ್ಲಿ ಬೆಳೆವ ಗಿಡದ ರೆಂಬೆಗಳು ಹೀಗೆ ಅವುಗಳಿಗೆ ಅತೀ ಸುರಕ್ಶಿತವೆನಿಸಿದ ಪ್ರದೇಶಗಳಲ್ಲಿ ಮಾತ್ರ ಗೂಡು ಕಟ್ಟುತ್ತವೆ. ಗಂಡು ಗೀಜಗ ಮಾತ್ರ ಗೂಡು ಕಟ್ಟುತ್ತದೆ ಎಂಬುದು ಇಲ್ಲಿ ವಿಶೇಶ. ಅಲ್ಲದೆ ಗಂಡು ಗೀಜಗ ಹೆಣ್ಣು ಗೀಜಗವನ್ನು ಒಲಿಸಿಕೊಳ್ಳಲು ಅರ‍್ದ ಗೂಡು ಕಟ್ಟಿ ತೋರಿಸುತ್ತದೆ, ಆ ಗೂಡು ಅದಕ್ಕೆ ಇಶ್ಟವಾದರಶ್ಟೇ ಅದು ಗೂಡು ಕಟ್ಟಲು ಮುಂದುವರೆಸುತ್ತದೆ ಮತ್ತು ಆಗ ಹೆಣ್ಣು ಹಕ್ಕಿ ಅದಕ್ಕೆ ಸಹಾಯ ಮಾಡುತ್ತದೆ. ಒಂದು ವೇಳೆ ಹೆಣ್ಣು ಹಕ್ಕಿಗೆ ಅದರ ಗೂಡು ಇಶ್ಟವಾಗದ ಪಕ್ಶದಲ್ಲಿ ಆ ಗಂಡು ಗೀಜಗವು ಮತ್ತೊಂದು ಗೂಡನ್ನು ಕಟ್ಟಲು ಶುರು ಮಾಡುತ್ತದೆ ಎನ್ನುವುದು ಅಶ್ಟೇ ಸೋಜಿಗ.

ಗೂಡನ್ನು ಕಟ್ಟಲು ಈ ಪಕ್ಶಿಗಳು ತೆಂಗಿನ ಮರದ ನಾರು, ಬಿದುರಿನ ಎಲೆಗಳ ನಾರು, ಬತ್ತದ ನಾರು, ಹೀಗೆ ಅದಕ್ಕೆ ಅನುಕೂಲವಾಗಿ ಸಿಗುವ ಇತರ ನಾರುಗಳಿಂದ ತನ್ನ ಶಂಕಾಕ್ರುತಿಯ ಕೊಕ್ಕಿನ ಹಾಗೂ ಎರಡು ಕಾಲುಗಳ ಸಹಾಯದಿಂದಲೇ ಗೂಡು ಕಟ್ಟಲು ಶುರು ಮಾಡುತ್ತದೆ. ಜೊತೆಗೆ ಅವು ಗೂಡು ಕಟ್ಟುವಾಗ ಅದರ ಸುರಕ್ಶತೆಯನ್ನು ಗಮನದಲ್ಲಿ ಇಟ್ಟುಕೊಂಡು ಗೂಡನ್ನು ನಿರ‍್ಮಾಣ ಮಾಡುತ್ತವೆ. ಇವು ಒಮ್ಮೆ ಗೂಡು ಕಟ್ಟಲು 20 ರಿಂದ 25 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತವೆ. ಗೀಜಗವು ಗೂಡು ಕಟ್ಟಿ ಮುಗಿದ ನಂತರ ಇದರಲ್ಲಿ ಒಮ್ಮೆ 2 ಮೊಟ್ಟೆಗಳನ್ನು ಮಾತ್ರ ಇಡುತ್ತವೆ. ಈ ಮೊಟ್ಟೆಗೆ 10 ರಿಂದ 15 ದಿನಗಳವರೆಗೆ ಕಾವು ಕೊಡುತ್ತವೆ. 15 ದಿನಗಳ ಕಾವು ಕೊಟ್ಟ ನಂತರ ಮರಿಗಳು ಮೊಟ್ಟೆ ಒಡೆದುಕೊಂಡು ಆಚೆ ಬರುತ್ತವೆ. ತನ್ನ ಮರಿಗೆ ಆಹಾರವನ್ನು ಗಂಡು ಮತ್ತು ಹೆಣ್ಣು ಎರಡು ಗೀಜಗಗಳು ನೀಡುತ್ತವೆ. ಇವು ಕಾಳುಗಳು, ಹುಳ, ಹುಪ್ಪಟವನ್ನು ಚೆನ್ನಾಗಿ ಜಗಿದು ಮರಿ ಹಕ್ಕಿಗೆ ನೀಡುತ್ತವೆ. ಸರಿ ಸುಮಾರು 30 ದಿನಗಳಾದ ಮೇಲೆ ಮರಿ ಗೀಜಗವು ಗೂಡಿನಿಂದ ಆಚೆ ಬಂದು ಸ್ವತಂತ್ರವಾಗಿ ಹಾರಾಡುವಂತಾಗುತ್ತದೆ.

ಗೀಜಗದ ಜೀವನ ಕ್ರಿಯೆ ಹೀಗೆ ಮುಂದುವರೆಯುತ್ತದೆ. ಆದರೆ ಒಮ್ಮೆ ಇದರ ಪ್ರಕ್ರಿಯೆ ಮುಗಿದ ಬಳಿಕ ಇವು ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಮತ್ತೊಂದು ರುತುಮಾನಕ್ಕೆ ಮೊಟ್ಟೆ ಇಡಲು ತನ್ನ ಗೂಡನ್ನು ಹುಡುಕಿ ಮರಳಿ ಅದೇ ಗೂಡಿಗೆ ಬರುತ್ತವೆ ಎಂದು ಪಕ್ಶಿಪ್ರಿಯರು ವಿವರಿಸುತ್ತಾರೆ.ಎಶ್ಟೊಂದು ರೋಚಕ ನಮ್ಮ ಗೀಜಗದ ಜೀವನ ಕ್ರಮ ಅಲ್ಲವೇ? “ಗೀಜಗ ನಿಜಕ್ಕೂ ಸೋಜಿಗವೇ ಸರಿ” ಎಂದು ಎಂತವರಿಗಾದರೂ ಅನಿಸದೆ ಇರದು. ಇತ್ತೀಚಿನ ದಿನಗಳಲ್ಲಿ ಇದರ ಗೂಡನ್ನು ಕಿತ್ತು ಮನೆಯ ಅಲಂಕಾರಿಕ ವಸ್ತುವನ್ನಾಗಿ ಬಳಸುವುದು ಇದೆ. ಆದರೆ ಇದು ತಪ್ಪು. ದಯಮಾಡಿ ಯಾರೂ ಕೂಡ ಅದರ ಗೂಡನ್ನು ಕೀಳಬೇಡಿ. ವನ್ಯಜೀವಿ ಸಂರಕ್ಶಣಾ ಕಾಯ್ದೆಯ ಪ್ರಕಾರ ಗೂಡನ್ನು ಕೀಳುವುದು ಹಾಗೂ ಮಾರುವುದು ಇಂದು ಅಪರಾದವಾಗಿದೆ. ಅಂತಹ ವ್ಯಕ್ತಿಗಳಿಗೆ ಕಾನೂನಿನ ಪ್ರಕಾರ ದಂಡ ಹಾಕಲಾಗುತ್ತದೆ ಹಾಗೂ ಜೈಲಿಗೂ ಕೂಡ ಹೋಗಬೇಕಾಗುತ್ತದೆ.

( ಚಿತ್ರ ಸೆಲೆ pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: