ಕವಿತೆ: ಕೋಪವೆಂಬ ಕೂಪದಲ್ಲಿ

– ಶ್ಯಾಮಲಶ್ರೀ.ಕೆ.ಎಸ್

ಕೋಪವೆಂಬ ಕೂಪದಲ್ಲಿ
ಸರಸರನೆ ಬೀಳುವೆಯೇಕೆ ಮನವೇ
ಸಹನೆಯ ಸರದಿ
ಬರುವವರೆಗೆ ನೀ ಕಾಯಬಾರದೇ

ಬಿರುಗಾಳಿಯ ಬಿರುಸಿಗೆ
ಪ್ರಕ್ರುತಿಯು ಬೆದರುವಂತೆ
ಸಿಟ್ಟಿನ ಸಿಡಿಲ ಬಡಿತಕ್ಕೆ
ಬಾಂದವ್ಯದಲ್ಲಿ ಬಿರುಕಾಗದಿರದೇ

ಪ್ರವಾಹದ ಪ್ರತಾಪಕ್ಕೆ
ಊರು ಮುಳುಗುವಂತೆ
ಕ್ರೋದವೆಂಬ ಕಡಲಿನಲ್ಲಿ
ಬಾಳಿನ ದೋಣಿ ಮುಳುಗದಿರದೇ

ಮಣ್ಣಿನ ಬಟ್ಟಲಿನಲ್ಲಿ
ನಂದಾದೀಪ ಮಿರುಗುವಂತೆ
ಮನಸ್ಸಿನ ಗೂಡಿನಲ್ಲಿ
ತಾಳ್ಮೆಯ ಹಣತೆ ಬೆಳಗಬಾರದೇ

ಕತ್ತಲೆಯ ಬದುಕಿನಲ್ಲಿ
ಬೆಳಕು ಮೂಡಬಾರದೇ?

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: