ನಲ್ಲಿ ನೀರಿನ ಬೀಜಿಂಗ್ ಮ್ಯೂಸಿಯಂ

– .

ನಲ್ಲಿ ನೀರಿನ ಮ್ಯೂಸಿಯಂ (ಟ್ಯಾಪ್ ವಾಟರ್ ಮ್ಯೂಸಿಯಂ) 1908ರಿಂದ ಪ್ರಾರಂಬಗೊಂಡು 90 ವರ‍್ಶಗಳಲ್ಲಿ ನೀರು ಸರಬರಾಜಿನಲ್ಲಿ ಕಂಡ ಪ್ರಗತಿ, ಅಬಿವ್ರುದ್ದಿಯನ್ನು ದಾಕಲಿಸಿರುವ ಐತಿಹಾಸಿಕ ಕೇಂದ್ರವಾಗಿದೆ. 1908ರಲ್ಲಿ ಜಿಂಗ್ಮಿ ಟ್ಯಾಪ್ ವಾಟರ್ ಕಂ. ಲಿಮಿಟೆಡ್ ಪ್ರಾರಂಬವಾದ ದಿನದಿಂದ ತೊಂಬತ್ತು ವರ‍್ಶಗಳ ಅವದಿಯಲ್ಲಿ ನೀರು ಸರಬರಾಜಿನಲ್ಲಿ ಕಂಡ ಪ್ರಗತಿಯ ಪೂರ‍್ಣ ಚಿತ್ರಣ ಈ ವಸ್ತುಸಂಗ್ರಹಾಲಯದಲ್ಲಿ ದೊರಕುತ್ತದೆ. ಬೀಜಿಂಗ್‍ನಲ್ಲಿರುವ ‘ಟ್ಯಾಪ್ ವಾಟರ್ ಮ್ಯೂಸಿಯಂ’ 1908ರಲ್ಲಿ ಚೈನಾದ ಜಿಂಗ್ಮಿ ಟ್ಯಾಪ್ ವಾಟರ್ ಕಂಪನಿ ಪ್ರಾರಂಬವಾದ ಡೋಂಗ್‍ಚೆಂಗ್‍ನ ವಸತಿ ಪ್ರದೇಶದಲ್ಲಿ ಸ್ತಾಪಿತವಾಗಿದೆ. ಮೊದಲ ನೀರು ಸರಬರಾಜು ಕಂಪನಿಯ ವಿಲಕ್ಶಣ ಮ್ಯೂಸಿಯಂ ಇಲ್ಲಿ ನೆಲೆಗೊಂಡಿರುವುದು ಕಂಪನಿಗೆ ಸಂದ ಗೌರವ ಎಂದರೆ ತಪ್ಪಾಗಲಾರದು.

ಚೈನಾದ ಕ್ವಿಂಗ್ ರಾಜವಂಶದ ಅಂತಿಮ ದಿನಗಳಲ್ಲಿ ಬೀಜಿಂಗ್ ನಿವಾಸಿಗಳು, ತಮ್ಮ ನೀರಿನ ಅವಶ್ಯಕತೆಗೆ ನದಿಗಳನ್ನು, ಬಾವಿಗಳನ್ನು ಆಶ್ರಯಿಸಬೇಕಾದ ಪರಿಸ್ತಿತಿ ಉದ್ಬವಿಸಿತ್ತು. ನದಿಯ ನೀರು ಕ್ಶೀಣಿಸತೊಡಗಿದಾಗ ಬಾವಿಗಳನ್ನು ತೆಗೆಯಲು ಪ್ರಾರಂಬಿಸಿದರು. 1885ರ ವೇಳೆಗೆ ಬೀಜಿಂಗಿನಲ್ಲಿ 1245 ಬಾವಿಗಳನ್ನು ಅಗೆಯಲಾಯಿತು. ಆದರೂ ಬಿಸಿಲಿನ ಪ್ರಬಾವದಿಂದ ಬೆಂಕಿಯ ಹಾವಳಿ ಹೆಚ್ಚಾಗಿತ್ತು. ಕುಡಿಯುವ ನೀರಿನ ಅವಶ್ಯಕತೆಯ ಜೊತೆ ಜೊತೆಗೆ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸುವ ಸಲುವಾಗಿ ಹೆಚ್ಚು ಪರಿಣಾಮಕಾರಿ ನೀರು ಸರಬರಾಜಿನ ಮಾರ‍್ಗಗಳ ಅನ್ವೇಶಣೆ ಅಗತ್ಯವಿತ್ತು. ಲಬ್ಯ ದಾಕಲೆಗಳ ಪ್ರಕಾರ, ಜನರಲ್ ಯುವಾನ್ ಶಿಕೈ ಅವರು ನೀರು ಸರಬರಾಜು ವ್ಯವಸ್ತೆಯನ್ನು ನಿರ‍್ಮಿಸಲು ಅವಶ್ಯವಿರುವ ಬಂಡವಾಳವನ್ನು ಸಂಗ್ರಹಿಸಲು ಮತ್ತು ಯೂರೋಪಿನಿಂದ ಅಗತ್ಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಉದ್ಯಮಿಗಳಿಗೆ ಶೇರುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಸಾಮ್ರಾಜ್ನಿ ಸಿಕ್ಸಿಗೆ ಸಲಹೆ ನೀಡಿದರು. ಮಾರ‍್ಚ್ 18, 1908ರಂದು ಕ್ರುಶಿ, ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯದ ಅದಿಕಾರಿಗಳು ಬೀಜಿಂಗ್ ನಲ್ಲಿ ನೀರು ಸರಬರಾಜು ಮಾಡಲು ಅವಶ್ಯವಿರುವ ನಿರ‍್ಮಾಣದ ಬಗ್ಗೆ ವರದಿಯನ್ನು ಸಲ್ಲಿಸಿದರು. ಈ ವರದಿ ಸಹ ಇಂದಿಗೂ ಇದೇ ಮ್ಯೂಸಿಯಂನಲ್ಲಿ ಪ್ರದರ‍್ಶನಕ್ಕೆ ಇಡಲಾಗಿದೆ.

ಈ ವರದಿಯ ಆದಾರದ ಮೇಲೆ ಪ್ರಾರಂಬವಾಗಿದ್ದೇ ಜಿಂಗ್ಮಿ ಟ್ಯಾಪ್ ವಾಟರ್ ಕಂಪನಿ ಲಿಮಿಟೆಡ್. ಇದರಿಂದ ಇಡೀ ಚೀನಾ ದೇಶಕ್ಕೆ ಹೊಸ ಯುಗ ಪ್ರಾರಂಬವಾಯಿತು ಎನ್ನಲಾಗಿದೆ. ಈ ಕಂಪನಿಯು ಚೀನಾದ ಮೊದಲ ಜಂಟಿ-ಸ್ಟಾಕ್ ಉದ್ಯಮಗಳಲ್ಲಿ ಒಂದು. ಅವರಿಗೆ ನೀಡಿದ್ದ ಪರವಾನಗಿ ಮತ್ತು ಶೇರುಗಳೂ ಸಹ ಈ ವಸ್ತು ಸಂಗ್ರಹಾಲಯದಲ್ಲಿದೆ. ವಸ್ತು ಸಂಗ್ರಹಾಲಯವನ್ನು ಪ್ರವೇಶಿಸಿದ ಕೂಡಲೆ ಕಂಡು ಬರುವುದು, ನೀರು ಸರಬರಾಜಿನ ಮೊದಲಲ್ಲಿ ನೀರಿನ ವಿತರಣೆಗಾಗಿ ಬಳಸುತ್ತಿದ್ದ ಮರದ ಚಕ್ರದ ಕೈಬಂಡಿ. ಇದರೊಡನೆ ಎರಡು ಬಕೆಟ್ ಹಾಗೂ ಒಂದು ಸಣ್ಣನೆಯ ಕಂಬ. ನೀರಿನ ಬಂಡಿಯನ್ನು ನಿಲ್ಲಿಸಿದಾಗ, ಅದು ಹಿಂದಕ್ಕಾಗಲಿ ಅತವಾ ಮುಂದಕ್ಕಾಗಲಿ ವಾಲಿ ನೀರು ಪೋಲಾಗದಂತೆ ತಡೆಯಲು, ಬಂಡಿಯ ಹಿಡಿಗೆ ಊರುಗೋಲಾಗಿ ಆ ಸಣ್ಣನೆಯ ಕಂಬ ಉಪಯೋಗಿಸುತ್ತಿದ್ದರು. ಇದು ಆರಂಬದ ದಿನಗಳಲ್ಲಿ ನೀರು ಸರಬರಾಜಿನ ರೀತಿ ನೀತಿಯನ್ನು ಪ್ರೇಕ್ಶಕರ ಮುಂದೆ ತೆರೆದಿಡುತ್ತದೆ. ನಮ್ಮಲ್ಲಿಯೂ ಸಹ ಎತ್ತಿನ ಗಾಡಿಗಳಲ್ಲಿ ಮರದ ಟ್ಯಾಂಕುಗಳನ್ನು ಕಟ್ಟಿ, ಅದರಲ್ಲಿ ನೀರು ತುಂಬಿ ಮನೆ ಮನೆಗೆ ಸರಬರಾಜು ಮಾಡುತ್ತಿದ್ದ ಕಾಲ ಸಹ ನೆನೆಪಿಗೆ ಬರುತ್ತದೆ.

ಮನೆಮನೆಗೆ ನೀರು ಸರಬರಾಜು ಮಾಡುವ ಮೊದಲು, ಅಲ್ಲಲ್ಲೇ ಅರ‍್ಹ ಸಿಬ್ಬಂದಿಗಳಿಂದ ನಿರ‍್ವಹಿಸಲ್ಪಡುವ ನೀರಿನ ಕೇಂದ್ರಗಳಲ್ಲಿ, ಕೈಗಾಡಿಯಲ್ಲಿನ ಟ್ಯಾಂಕಿಗೆ ನೀರನ್ನು ತುಂಬಿಸಲಾಗುತ್ತಿತ್ತು. ನಂತರ ಕೈಗಾಡಿಯನ್ನು ನಿರ‍್ದಿಶ್ಟ ಸ್ತಳಗಳಿಗೆ ಹೋಗಿ ಸರಬರಾಜು ಮಾಡಲಾಗುತ್ತಿತ್ತು. ಇದನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸಲು ನೀರು ಸರಬರಾಜು ಕಂಪನಿಯು ಅನೇಕ ಪ್ರಚಾರದ ತಂತ್ರಗಳನ್ನು ಅಳವಡಿಕೊಂಡಿತ್ತು. ಹಿರಿಯರಿಗೆ, ಅಂಗವಿಕಲರಿಗೆ ಉಚಿತ ನೀರು, ಶೇಕಡ ಐವತ್ತರಶ್ಟು ರಿಯಾಯತಿ, ಶುದ್ದ ನೀರಿನ ಉಪಯೋಗದ ಬಗ್ಗೆ ಮಾಹಿತಿ, ರುಚಿ ನೋಡಲು ಉಚಿತವಾಗಿ ಕುಡಿಯುವ ನೀರನ್ನು ನೀಡುವುದು ಎಲ್ಲಾ ತಂತ್ರಗಾರಿಕೆಯೂ ಉಪಯೋಗಿಸಿದ್ದರು. ಆ ದಿನಗಳಲ್ಲಿ ಮನೆಮನೆಗೆ ನಲ್ಲಿಗಳ ಮೂಲಕ ನೀರು ಸರಬರಾಜು ಇರಲಿಲ್ಲ. ಕುಡಿಯುವ ನೀರಿನ ಮಹತ್ವವನ್ನು ಅರಿತ ಬೀಜಿಂಗ್ ಜನ ಅದಕ್ಕೆ ಅಂಟಿಕೊಂಡರು.

ಈ ಮ್ಯೂಸಿಯಂನಲ್ಲಿ ಸಾಕಶ್ಟು ಮಾದರಿಯ ನಲ್ಲಿಗಳು, ನೀರಿನ ಮೀಟರ‍್ಗಳು, 70 ಮತ್ತು 80ರ ದಶಕದಲ್ಲಿ ಉಪಯೋಗಿಸುತ್ತಿದ್ದ ವಿದ್ಯುತ್ ಉಪಕರಣಗಳು, 1949ರ ನಂತರದ ಯುಗದ ಪೋಟೋಗಳು, ಅಂದಿನ ದಿನಗಳಲ್ಲಿ ನೀರಿನ ಕೇಂದ್ರಗಳಲ್ಲಿ ನೀರಿಗಾಗಿ ವಿತರಿಸುತ್ತಿದ್ದ ನೀರಿನ ಕೂಪನ್ ಗಳು, ನೀರು ಎಲ್ಲಿಂದ ಬರುತ್ತದೆ, ಹೇಗೆ ಅದರ ವಿತರಣೆಯಾಗುತ್ತದೆ ಎಂಬ ಎಲ್ಲಾ ವಿವರಗಳ ನಕ್ಶೆ ಸಹ ಈ ವಸ್ತು ಸಂಗ್ರಹಾಲಯದಲ್ಲಿದೆ. ಮತ್ತೊಂದೆಡೆ ಬೀಜಿಂಗ್ ಜಲಾಶಯದ ನಿರ‍್ಮಾಣ ಸ್ತಳದಲ್ಲಿ ನೀರಿನ ಕಂಪನಿಯ ಉದ್ಯೋಗಿಗಳೊಂದಿಗೆ ಮಾವೋ ಜೆಡಾಂಗ್ ಮತ್ತು ಅಂದಿನ ಪ್ರದಾನಿ ಜೌ ಎನ್ಲೈ ಒಟ್ಟಾಗಿ ಕೆಲಸ ಮಾಡುತ್ತಿರುವ ಪೋಟೋಗಳಿವೆ. ಈ ಪೋಟೋಗಳೇ ಇಂದಿನ ಜನರಿಗೆ, ಅದರಲ್ಲೂ ಯುವಕರಿಗೆ ಸ್ಪೂರ‍್ತಿದಾಯಕ.

ಈ ವಸ್ತು ಸಂಗ್ರಹಾಲಯದಲ್ಲಿ 130 ನೈಜ ವಸ್ತುಗಳು, 110 ಚಿತ್ರಗಳು, 40 ಮಾದರಿಗಳು ಮತ್ತು ಮರಳಿನಿಂದ ತಯಾರಿಸಿದ ಕೋಶ್ಟಕಗಳು ಇದ್ದು, ನೀರು ಸರಬರಾಜಿನ 90 ವರ‍್ಶಗಳ ಇತಿಹಾಸವನ್ನು ಬಿಂಬಿಸುತ್ತವೆ. ಮ್ಯೂಸಿಯಂ ಕಟ್ಟಡವನ್ನು ಮೂಲತಹ 1908ರಲ್ಲಿ ನಿರ‍್ಮಿಸಲಾಯಿತು. 1993ರಲ್ಲಿ ಇದನ್ನು ಮೂರನೇ ದರ‍್ಜೆಯ ಐತಿಹಾಸಿಕ ಸ್ತಳವೆಂದು ಗೋಶಿಸಲಾಯಿತು. ಅದೇ ವರ‍್ಶ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ವಸ್ತುಸಂಗ್ರಹಾಲಯವಾಗಿ ಸಾರ‍್ವಜನಿಕರಿಗೆ ತೆರೆಯಲಾಯಿತು. ಆದರೆ ನವೀಕರಣದ ಕಾರಣ 1998ರಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತಾದರೂ, ನವೀಕರಣಗೊಂಡ ವಸ್ತುಸಂಗ್ರಹಾಲಯ 2000ದ ಏಪ್ರಿಲ್ 30ರಂದು ತೈಪೆಯ ಮೇಯರ್ ಮರು ಉದ್ಗಾಟನೆ ಮಾಡಿದರು.ನಂತರ ನಲ್ಲಿ ನೀರಿನ ಇತಿಹಾಸವನ್ನು ಬಿಂಬಿಸುವ ವಿಶ್ವದ ಏಕೈಕ ವಸ್ತುಸಂಗ್ರಹಾಲಯವಿದು.

( ಮಾಹಿತಿಸೆಲೆ ಮತ್ತು ಚಿತ್ರಸೆಲೆ: thebeijinger.com, chinatoday.com, visitbeijiong.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಹೊನಲು ತಂಡಕ್ಕೆ ಧನ್ಯವಾದಗಳು

ಅನಿಸಿಕೆ ಬರೆಯಿರಿ: