ಮಕ್ಕಳ ಕತೆ: ಎರಡು ಹಕ್ಕಿ ಮರಿಗಳು

– ವೆಂಕಟೇಶ ಚಾಗಿ.

ಆ ಮರದಲ್ಲೊಂದು ಗೀಜಗನ ಗೂಡು. ಅದೇ ಮರದ ಪಕ್ಕದ ಮರದಲ್ಲಿ ಮತ್ತೊಂದು ಹಕ್ಕಿಯ ಗೂಡು. ಎರಡೂ ಹಕ್ಕಿಗಳು ಒಂದೇ ಬಾರಿ ಹಾರಿ ಬಂದು ಬೇರೆ ಬೇರೆ ಮರಗಳಲ್ಲಿ ತಮ್ಮ ತಮ್ಮ ಗೂಡುಗಳನ್ನು ಕಟ್ಟಿಕೊಂಡಿದ್ದವು. ದಿನಗಳು ಕಳೆದ ನಂತರ ಎರಡೂ ಹಕ್ಕಿಗಳು ತಮ್ಮ ಗೂಡುಗಳಲ್ಲಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡಿದವು. ಪ್ರತಿದಿನ ಎರಡೂ ಹಕ್ಕಿಗಳು ಜೊತೆಗೂಡಿ ಆಹಾರ ಹುಡುಕಲು ಹಾರಿ ಹೋಗುತ್ತಿದ್ದವು. ನಂತರ ಜೊತೆಗೂಡಿ ಹಾರಿ ಬಂದು ತಮ್ಮ ತಮ್ಮ ಮರಿಗಳಿಗೆ ಗುಟುಕು ನೀಡುತ್ತಿದ್ದವು. ಹಕ್ಕಿಯ ಪುಟ್ಟ ಮರಿಗಳು ಮಲಗಿದ ನಂತರ ಗೂಡುಗಳಿಂದ ಹೊರಬಂದು ಮರದ ಒಂದು ಟೊಂಗೆಯ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದವು.

ದಿನಗಳು ಕಳೆದಂತೆ ಹಕ್ಕಿಗಳ ಪುಟ್ಟಮರಿಗಳು ಕಣ್ಣು ತೆರೆದವು. ಹೊಸ ಜಗತ್ತನ್ನು ನೋಡಿ ಮರಿಗಳಿಗೆ ಕ್ಶಣ ಕ್ಶಣವೂ ಕೌತುಕ ಮೂಡುತ್ತಿತ್ತು .ಹಕ್ಕಿಯ ಮರಿಗಳು ತಮ್ಮ ತಾಯಂದಿರೊಂದಿಗೆ ನೂರಾರು ಪ್ರಶ್ನೆ ಪ್ರಶ್ನೆಗಳನ್ನು ಕೇಳುತ್ತಾ ತಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುತ್ತಿದ್ದವು.

ಒಮ್ಮೆ ತಾಯಿ ಹಕ್ಕಿಗಳು ಆಹಾರ ಹುಡುಕಲು ಹೊರಗಡೆ ಹೋದಾಗ ಎರಡೂ ಹಕ್ಕಿಯ ಮರಿಗಳು ಗೂಡುಗಳಿಂದ ಹೊರಬಂದು ತಮ್ಮ ತಮ್ಮ ಪರಿಚಯ ಮಾಡಿಕೊಂಡವು. ಹಕ್ಕಿಯ ಮರಿಗಳಿಗೆ ತುಂಬಾ ಸಂತೋಶವಾಯಿತು. ತಮ್ಮ ಸುತ್ತಮುತ್ತಲ ನಿಸರ‍್ಗ ಸೌಂದರ‍್ಯವನ್ನು ಕಂಡು ಕುಶಿಪಟ್ಟವು. ಹಾಗೂ ತಾವು ಬೆಳೆದು ದೊಡ್ಡ ಹಕ್ಕಿಗಳಾಗಿ ಮುಗಿಲೆತ್ತರಕ್ಕೆ ಹಾರುವ ಕನಸು ಕಂಡವು. ಅಶ್ಟೊತ್ತಿಗೆ ತಾಯಿ ಹಕ್ಕಿಗಳು ಬಂದವು . ತಮ್ಮ ಸ್ನೇಹದ ಬಗ್ಗೆ ಪರಿಚಯ ಹೇಳಿ ತಮ್ಮ ಸ್ನೇಹಿತರನ್ನು ಕೊಂಡಾಡಿದವು. ತಾಯಿ ಹಕ್ಕಿಗಳೂ ಕೂಡ ಪರಸ್ಪರ ಸ್ನೇಹಿತರು ಎಂಬ ವಿಶಯವನ್ನು ಮರಿಹಕ್ಕಿಗಳಿಗೆ ಹೇಳಿದಾಗ ಮರಿಹಕ್ಕಿಗಳಿಗೆ ಮತ್ತಶ್ಟು ಕುಶಿಯಾಯಿತು.

ಒಮ್ಮೆ ಮರಿ ಹಕ್ಕಿಗಳು ಗೂಡುಗಳಿಂದ ಗಿಡದ ಕೆಳಗೆ ಬಂದಾಗ ಕಲ್ಲು ಮುಳ್ಳುಗಳ, ಒಣಗಿದ ಎಳೆಗಳ ನಡುವೆ ಎರಡೂ ಹಕ್ಕಿಗಳು ನಡೆದಾಡಿದವು. ಅದರಲ್ಲೊಂದು ಹಕ್ಕಿ ಮರಿ, “ಗೆಳೆಯ, ನಮ್ಮ ಮರಗಳ ಸುತ್ತಮುತ್ತದ ಜಾಗ ನೋಡಿದೆಯಾ ಎಶ್ಟು ಅಸಹ್ಯವಾಗಿದೆ. ಇಲ್ಲಿ ಹಸಿರಾದ ಹುಲ್ಲು ಕಾಣುತ್ತಿಲ್ಲ. ಅಲ್ಲಿ ನೋಡು ಹೊಳೆಯುತ್ತಿರುವ ವಸ್ತು ಕಾಣುತ್ತಿದೆ. ಬಾ ನೋಡೋಣ” ಎಂದಿತು. ಹಕ್ಕಿಗಳು ಅದರ ಮೇಲೆ ಕಾಲಿಟ್ಟಾಗ ಅದರಿಂದ ಶಬ್ದ ಬಂದಿತು. ಮತ್ತೊಂದು ಹಕ್ಕಿಯ ಮರಿ ಕಾಲಿಗೆ ಹಾಳೆಯು ಸಿಕ್ಕಿಕೊಂಡಿತು . ಮರಿ ಹಕ್ಕಿ ಆದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಸಾದ್ಯವಾಗಲಿಲ್ಲ. ಎರಡೂ ಮರಿ ಹಕ್ಕಿಗಳು ದುಕ್ಕದಿಂದ ಅಳತೊಡಗಿದವು.

ಅಶ್ಟೊತ್ತಿಗೆ ತಾಯಿ ಹಕ್ಕಿಗಳು ಅಲ್ಲಿಗೆ ಬಂದು ಮರಿಗಳ ಪರಿಸ್ತಿತಿ ಕಂಡು ಮರುಕಪಟ್ಟವು. ಹಾಗೆಯೇ ಮರಿಗಳ ಮೇಲೆ ಸ್ವಲ್ಪ ಕೋಪವೂ ಬಂದಿತು. ಆಗ ತಾಯಿ ಹಕ್ಕಿಯೊಂದು, “ಗೂಡು ಬಿಟ್ಟು ಕೆಳಗೆ ಬರಬೇಡಿ ಎಂದು ಹೇಳಿಲ್ಲವೇ ನಿಮಗೆ. ಇಲ್ಲಿ ನಿಮಗೆ ಅಪಾಯವಿದೆ. ಇಲ್ಲಿ ಮನುಶ್ಯರು ಪ್ಲಾಸ್ಟಿಕ್ ಹಾಳೆಗಳನ್ನು, ಪ್ಲಾಸ್ಟಿಕ್ ವಸ್ತುಗಳನ್ನು, ಅಪಾಯಕಾರಿ ವಸ್ತುಗಳನ್ನು ಬಿಸಾಕಿದ್ದಾರೆ. ಇವುಗಳು ನಿಮಗೆ ಅಪಾಯ ಉಂಟು ಮಾಡುತ್ತವೆ. ಇಲ್ಲಿಗೆ ಬರಬೇಡಿ. ಗೂಡಿನಲ್ಲೇ ಇರಿ” ಎಂದಿತು.

ಆಗ ಮರಿ ಹಕ್ಕಿ ಮರಿಯೊಂದು, ” ಅಮ್ಮ ನಾವಿರುವ ಪರಿಸರ ಎಶ್ಟು ಸುಂದರವಾಗಿದೆ. ಆದರೆ ನೆಲದ ಮೇಲೆ ಮಾತ್ರ ಇಶ್ಟು ಕೊಳೆಯಾಗಿದೆ . ಯಾವಾಗಲೂ ಗೂಡಿನಲ್ಲಿ ಇರುವುದು ನಮಗೆ ಬೇಸರವಾಗುತ್ತಿದೆ. ನೆಲದ ಮೇಲೆ ನಾವಿಬ್ಬರೂ ಆಟವಾಡುತ್ತೇವೆ. ನಮಗೆ ಅಪಾಯ ಉಂಟುಮಾಡುವ ವಸ್ತುಗಳನ್ನು ಯಾರಿಗೂ ಅಪಾಯವಾಗದ ದೂರದ ಪ್ರದೇಶದಲ್ಲಿ ಸಾಗಿಸಿ ಬಿಡೋಣ” ಎಂದಿತು. ಮತ್ತೊಂದು ತಾಯಿ ಹಕ್ಕಿ, ” ಹೌದು, ಮಕ್ಕಳು ಹೇಳುವುದು ಸರಿಯಾಗಿದೆ. ನಮ್ಮ ಸ್ನೇಹಿತರ ಸಹಾಯದೊಂದಿಗೆ ಈ ಜಾಗವನ್ನು ಸ್ವಚ್ಚಗೊಳಿಸೋಣ. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನೆಲ್ಲಾ ಸುಂದರವಾಗಿಸೋಣ” ಎಂದಿತು.

ಅದಕ್ಕಾಗಿ ಎರಡೂ ತಾಯಿ ಹಕ್ಕಿಗಳು ತಮ್ಮ ಸ್ನೇಹಿತರನ್ನು ಸಂಪರ‍್ಕಿಸಿ ಸಹಾಯ ಕೋರಿದವು. ಅನೇಕ ಪಕ್ಶಿಗಳು ಸಹಾಯ ಮಾಡಲು ಮುಂದೆ ಬಂದವು. ಮರುದಿನ ಎಲ್ಲಾ ಪಕ್ಶಿಗಳು ಹಾರಿ ಬಂದು ಬೇಕಾಬಿಟ್ಟಿಯಾಗಿ ಬಿಸಾಡಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ತಮ್ಮ ಕೊಕ್ಕಿನಿಂದ ಎತ್ತಿಕೊಂಡು ಯಾರಿಗೂ ಅಪಾಯವಾಗದ ದೂರದ ತಗ್ಗು ಪ್ರದೇಶದಲ್ಲಿ ಬಿಸಾಕಿದವು. ಕೆಲ ಸಮಯದಲ್ಲಿ ಹಕ್ಕಿಗಳ ಗೂಡಿರುವ ಸುತ್ತಲಿನ ಜಾಗ ಸ್ವಚ್ಚಗೊಂಡಿತು. ಎಲ್ಲಾ ಹಕ್ಕಿಗಳು ಸ್ವಚ್ಚಗೊಂಡ ಪ್ರದೇಶವನ್ನು ಕಂಡು ಸಂತಸಗೊಂಡವು. ತಮ್ಮ ತಮ್ಮ ಗೂಡುಗಳಿರುವ ಜಾಗವನ್ನೆಲ್ಲ ಸ್ವಚ್ಚಗೊಳಿಸುವ ಪಣ ತೊಟ್ಟವು.

ಕೆಲವೇ ದಿನಗಳಲ್ಲಿ ಚಿಕ್ಕ ಚಿಕ್ಕ ಸಸಿಗಳು ಚಿಗುರೊಡೆದವು. ಹಸಿರಾದ ಸಸಿಗಳು ಹಾಗೂ ಹುಲ್ಲಿನಿಂದ ಆ ಪ್ರದೇಶವೆಲ್ಲ ಹಸಿರಾಯಿತು. ಮರಿಹಕ್ಕಿಗಳು ಹಾಗೂ ತಾಯಿ ಹಕ್ಕಿಗಳು ತಮ್ಮ ಸ್ನೇಹಿತರ ಜೊತೆಗೂಡಿ ಸಂತೋಶದಿಂದ ಆಟ ಮಾಡಿದವು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: