ಬಾಯಲ್ಲಿ ನೀರೂರಿಸುವ ಜಹಾಂಗೀರ್

– ಸುಹಾಸಿನಿ ಎಸ್.

ಜಹಾಂಗೀರ್ ಅನ್ನು ಜಾಂಗೀರ್, ಜಾಂಗಿರಿ, ಇಮರ‍್ತಿ ಎಂದೂ ಕರೆಯುತ್ತಾರೆ. ಇದು ಉತ್ತರಬಾರತದ ಒಂದು ಸಿಹಿ ತಿನಿಸು. ನೋಡಲು ಹೂವಿನಂತೆ ಕಾಣುವ ರಸಬರಿತ ಜಹಾಂಗೀರನ್ನು ಮಾಡುವುದು ತುಂಬಾ ಸರಳ.

ಏನೇನು ಬೇಕು?

  • ಉದ್ದಿನ ಬೇಳೆ – 3/4 ಕಪ್
  • ಕಾರ‍್ನ್ ಪ್ಲೋರ್ (ಮೆಕ್ಕೆಜೋಳದ ಪುಡಿ) – 3 ಚಮಚ
  • ಪುಡ್ ಕಲರ್ – ಸ್ವಲ್ಪ
  • ಸಕ್ಕರೆ – 1 ಕಪ್
  • ನೀರು – 1/2 ಕಪ್
  • ಏಲಕ್ಕಿ ಪುಡಿ ಸ್ವಲ್ಪ
  • ಹಾಲಿನ ಕವರ್ / ಪೈಪಿಂಗ್ ಬ್ಯಾಗ್

ಮಾಡುವ ಬಗೆ

ಉದ್ದಿನಬೇಳೆಯನ್ನು 1 ತಾಸು ನೆನೆಸಿ, ಅದನ್ನು ಮಿಕ್ಸಿಗೆ ಹಾಕಿ, ನೀರು ಸ್ವಲ್ಪ ಸ್ವಲ್ಪ ಹಾಕುತ್ತಾ ನುಣ್ಣಗೆ ರುಬ್ಬಿ. ಒಂದು ಪಾತ್ರೆಯಲ್ಲಿ ರುಬ್ಬಿದ ಉದ್ದಿನಹಿಟ್ಟನ್ನು ಹಾಕಿ 15 ನಿಮಿಶ ಕೈಯಾಡಿಸಿ. ಇದರಿಂದ ಉದ್ದಿನಬೇಳೆ ಹಿಟ್ಟು ಮ್ರುದುವಾಗುತ್ತದೆ. ನಂತರ ಕಾರ‍್ನ್ ಪ್ಲೋರ್ ಮತ್ತು ಪುಡ್ ಕಲರ್ ಹಾಕಿ ಮತ್ತೆ 15 ನಿಮಿಶ ಈ ಮಿಶ್ರಣ ಹದವಾಗುವ ತನಕ ಕೈಯಾಡಿಸಿ (ಮಿಶ್ರಣ ಗಟ್ಟಿಯೆನಿಸಿದರೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ಕೈಯಾಡಿಸುತ್ತಿರಿ). ಪೈಪಿಂಗ್ ಬ್ಯಾಗ್/ಹಾಲಿನ ಕವರ್ ನಲ್ಲಿ ಈ ಮಿಶ್ರಣವನ್ನು ಹಾಕಿ ಹಿಟ್ಟು ಕಲಿಸಿದ ಪಾತ್ರೆಯಲ್ಲಿ ಹೂವಿನ ಆಕಾರದಲ್ಲಿ ಬಿಡಿಸಿ. ಹೂವಿನ ಆಕಾರ ಸರಿಯಾಗಿ ಬಿಡಿಸಲು ಬಂದರೆ ಜಹಾಂಗೀರ್ ಮಾಡಲು ಹದವಾದ ಮಿಶ್ರಣ ತಯಾರಾದಂತೆ. ಈ ತಿನಿಸಿಗೆ ಬೇಕಾಗುವ ಸಕ್ಕರೆಪಾಕ ಮಾಡಿಕೊಳ್ಳಲು, ಒಂದು ಅಗಲವಾದ ಪಾತ್ರೆಯಲ್ಲಿ ಸಕ್ಕರೆ, ನೀರು, ಪುಡ್ ಕಲರ್ ಹಾಕಿ ಕುದಿಸಿ (ಕುದಿ ಬಂದು ಸ್ವಲ್ಪ ಕೈಗೆ ಅಂಟು ಹತ್ತಿದರೆ ಸಾಕು). ತುಸು ಏಲಕ್ಕಿ ಪುಡಿ ಹಾಕಿ ಕಲಸಿ.

ಬಾಣಲೆಯಲ್ಲಿ ಮಂದ ಉರಿಯಲ್ಲಿ ಎಣ್ಣೆ ಕಾಯಿಸಿ. ಪೈಪಿಂಗ್ ಬ್ಯಾಗ್ ನಿಂದ ಹಿಟ್ಟಿನ ಮಿಶ್ರಣವನ್ನು ಹೂವಿನ ಆಕಾರದಲ್ಲಿ ಬಾಣಲಿಗೆ ಬಿಡುತ್ತಾ, ಎರಡೂ ಬದಿ ಕರಿಯಿರಿ. ಬಿಸಿ ಬಿಸಿ ಜಹಾಂಗೀರನ್ನು ಸಕ್ಕರೆಪಾಕದಲ್ಲಿ ಹಾಕಿ ಎರಡೂ ಕಡೆ ಹೊರಳಾಡಿಸಿ. ಪಾಕ ಹೀರಿಕೊಂಡ ಮೇಲೆ ತೆಗೆದು ಒಂದು ತಟ್ಟೆಗೆ ಹಾಕಿ ಬಾದಾಮಿ, ಗೋಡಂಬಿ, ಪಿಸ್ತಾ ಚೂರುಗಳಿಂದ ಅಲಂಕರಿಸಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications