ದುಡ್ಡು-ಉಳಿತಾಯ-ಗಳಿಕೆ: 2ನೇ ಕಂತು
– ನಿತಿನ್ ಗೌಡ.
ಹಿಂದಿನ ಬರಹದಲ್ಲಿ ದುಡ್ಡಿನ ಉಳಿತಾಯ ಮತ್ತು ಗಳಿಕೆಯ ಕಿರುನೋಟವನ್ನು ಪಡೆದಿದ್ದೆವು. ಈ ಬರಹದಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಲು ಇರುವ ಕೆಲವು ಆಯ್ಕೆಗಳನ್ನು ನೋಡೋಣ.
1. ನಮ್ಮ ಹಣವನ್ನು ನೇರವಾಗಿ ಹಣಮನೆಗಳ ಉಳಿತಾಯ ಕಾತೆಯಲ್ಲಿಟ್ಟರೆ, ಒಂದು ವರುಶಕ್ಕೆ 3-4% ಬಡ್ಡಿ ಸಿಗಬಹುದು. 60ವಯಸ್ಸು ಮೇಲ್ಪಟ್ಟವರಾದರೆ ಕೊಂಚ ಹೆಚ್ವು ಬಡ್ಡಿ ಸಿಗಬಹುದು. ಇದು ಅತಿ ಕಡಿಮೆ ಅಪಾಯದ ಆಯ್ಕೆಯಾಗಿದ್ದು ಸರಕಾರದ ಕಟ್ಟಳೆಗಳಿಂದಾಗಿ ಹೆಚ್ಚು ಬದ್ರವಾಗಿದೆ. ಇಲ್ಲಿ ಗಳಿಕೆ ಕೂಡ ಕಡಿಮೆಯೇ.
2. ಹೊತ್ತಿನ ಟೇವಣಿ (Term Deposit)
ಈ ಆಯ್ಕೆಯಲ್ಲಿ ಹಣ ಟೇವಣಿಗೆ ಇಡುವಾಗ ನಿಗದಿ ಪಡಿಸಿದ ಅವದಿಯ(Lock In period ) ಒಳಗೆ ಹಣವನ್ನು ಬಿಡಿಸಿಕೊಳ್ಳಲಾಗಿವುದಿಲ್ಲ.ಇದು ಕೂಡಾ ಅತಿ ಕಡಿಮೆ ಅಪಾಯದ ಆಯ್ಕೆಯಾಗಿದ್ದು ಸರಕಾರದ ಕಟ್ಟಳೆಗಳಿಂದಾಗಿ ಹೆಚ್ಚು ಬದ್ರವಾಗಿದೆ. ಈ ಮೇಲಿನ ಆಯ್ಕೆಗೆ ಹೋಲಿಸಿದಲ್ಲಿ, ಇದು ಕೊಂಚ ಹೆಚ್ಚಿನ ಗಳಿಕೆಯ ಆಯ್ಕೆಯಾಗಿದೆ.
ಇದರಲ್ಲಿ ಎರಡು ಬಗೆ;
- ಸ್ತಿರ ಟೇವಣಿ (Fixed Deposit):
ಯಾರಿಗೆ ತಕ್ಶಣಕ್ಕೆ ಹಣದ ಅಗತ್ಯ ಇರುವುದಿಲ್ಲವೋ ಮತ್ತು ಯಾರಿಗೆ ಒಂದು ಸ್ತಿರ ಬಳುವಳಿ(returns) ಬೇಕೋ ಅವರು ಈ ಆಯ್ಕೆಗೆ ಹೋಗಬಹುದು. ಈ ಆಯ್ಕೆಯಲ್ಲಿ ಹಣ ಟೇವಣಿಗೆ ಇಡುವಾಗ ನಿಗದಿ ಪಡಿಸಿದ ಅವದಿಯ(Lock In period ) ಒಳಗೆ ಹಣವನ್ನು ಬಿಡಿಸಿಕೊಳ್ಳಲಾಗುವುದಿಲ್ಲ. ಬೇಕಾದಲ್ಲಿ ಟೇವಣಿಯ ಮೇಲೆ, ಸಾಲ ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ 10 ದಿನಗಳಿಂದ ಹಿಡಿದು 5 ವರುಶಗಳವರೆಗೂ ಟೇವಣಿ ಇಡಬಹುದು. ಹೆಚ್ಚುಕಾಲ ಇಟ್ಟಶ್ಟೂ ಹೆಚ್ಚಿನ ಬಡ್ಡಿದರ ಸಿಗುತ್ತದೆ(ಅಂದಾಜು 4-7.5%). ಹಿರಿಯ ನಾಗರಿಕರಿಗೆ ಕೊಂಚ ಹೆಚ್ವು ಬಡ್ಡಿ ಸಿಗಬಹುದು.ಇದು ಅತಿ ಕಡಿಮೆ ಅಪಾಯ,ಹೆಚ್ಚು ಬದ್ರತೆ ಮತ್ತು ಉಳಿತಾಯ ಕಾತೆಯಲ್ಲಿ ಹಣ ಇಡುವುದಕ್ಕಿಂತ ಹೆಚ್ಚು ಗಳಿಕೆಯ ಆಯ್ಕೆಯಾಗಿದೆ.
-
ಮರುಕಟ್ಟುವ ಟೇವಣಿ (Recurring Deposit ):
ಯಾರಿಗೆ ಒಂದು ನಿಗದಿ ಪಡಿಸಿದ ಸ್ತಿರ ಅವದಿಯಲ್ಲಿ, ಸ್ತಿರ ಬಳುವಳಿ(returns) ಬೇಕೋ ಅವರು ಈ ಆಯ್ಕೆಗೆ ಹೋಗಬಹುದು. ಸಾಮಾನ್ಯವಾಗಿ, ಈ ನಿಗದಿತ ಅವದಿ, ತಿಂಗಳಿಗೊಮ್ಮೆ ಇರುತ್ತದೆ. ಹಾಗಿದ್ದಲ್ಲಿ, ಪ್ರತಿ ತಿಂಗಳೂ ಟೇವಣಿದಾರರು , ತಮ್ಮ ಟೇವಣಿ ಅವದಿ (maturity) ಮುಗಿಯುವವರೆಗೆ, ಟೇವಣಿ ಜಮೆ ಮಾಡಬೇಕು. ಕೊನೆಗೆ ಕೊನೆ ಅವದಿ ಮುಗಿದ ಮೇಲೆ, ತಮ್ಮ ಒಟ್ಟೂ ಟೇವಣಿಯ ಜೊತೆಗೆ, ಎಲ್ಲಾ ತಿಂಗಳ ಬಡ್ಡಿಯನ್ನು ಸೇರಿ ಪಡೆಯುತ್ತಾರೆ. ಸರಳವಾಗಿ ಹೇಳುವುದಾದರೆ, ಇದೊಂದು ಒಂದೇ ತರಹದ ಕೊನೆ ಅವದಿ ಹೊಂದಿರುವ ಹಲವಾರು ಸ್ತಿರ ಟೇವಣಿಗೆ ಸಮ.
ಯಾರ ಬಳಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಟೇವಣಿ ಇಟ್ಟು, ಸ್ತಿರ ಕಾತೆ ತೆರೆಯಲು ಅನುಕೂಲ ಇರುವುದಿಲ್ಲವೋ, ಅಂತಹವರು ತಿಂಗಳಿಗೊಮ್ಮೆ ಕೊಂಚ ಕೊಂಚವೇ ನಿಗದಿತ ಹಣ ಕಟ್ಟುತ್ತಾ( ನಿಗದಿತ ಅವದಿಯವರೆಗೆ- ಎತ್ತುಗೆಗೆ 1 ವರುಶ), ಒಳ್ಳೆಯ ಬಳುವಳಿ ಪಡೆಯಬಹುದು.
ಸ್ತಿರ ಕಾತೆಗೆ ಹೋಲಿಸಿದಲ್ಲಿ, ಈ ಆಯ್ಕೆಯಲ್ಲಿ ಬಡ್ಡಿ ಕೊಂಚ ಕಡಿಮೆ ಸಿಗುತ್ತಾದರೂ, ದೊಡ್ಡ ಮೊತ್ತದ ಹಣವನ್ನು ಒಂದೇ ಬಾರಿಗೆ ಟೇವಣಿ ಇಡುವುದು ತಪ್ಪುತ್ತದೆ. ಸಾಮಾನ್ಯವಾಗಿ ಸಂಬಳದಾರರಿಗೆ ಈ ಆಯ್ಕೆ ತಕ್ಕುದಾಗಿದೆ. ಕಾರಣಾಂತರದಿಂದ ಯಾವುದಾದರು ಒಂದು ತಿಂಗಳಲ್ಲಿ ಹಣ ಜಮೆ ಮಾಡದೇ ಹೋದಲ್ಲಿ, ಆ ತಿಂಗಳ ದುಡ್ಡಿನ ಬಡ್ಡಿಯನ್ನು, ಅವದಿ ಮುಗಿದ ಮೇಲೆ ಸಿಗುವ ಒಟ್ಟೂ ಮೊತ್ತದಲ್ಲಿ(Maturity amount) ದಂಡದ ರೂಪದಲ್ಲಿ ಕಳೆಯಲಾಗುತ್ತದೆ. ಅದಲ್ಲದೇ ಕಂತುದಾರರು ಈ ಟೇವಣಿ ಮೇಲೆ ಸಾಲವನ್ನೂ ಕೂಡಾ ಪಡೆಯಬಹುದು. ಕೆಲವು ಹಣಮನೆಗಳು ಮರುಕಳಿಸುವ ಟೇವಣಿಯಿಂದ ಸ್ತಿರ ಟೇವಣಿಗೆ ಬದಲಿಸಿಕೊಳ್ಳಲೂ ಅವಕಾಶ ನೀಡುತ್ತವೆ.
ಬಡ್ಡಿ ಲೆಕ್ಕಾಚಾರ ಕಂಡುಕೊಳ್ಳಲು ಸ್ತಿರ ಟೇವಣಿ ಮತ್ತು ಮರುಕಳಿಸುವ ಟೇವಣಿ ತನ್ನದೇ ಆದ ಸೂತ್ರಗಳನ್ನು ಹೊಂದಿವೆ. ಈಗ ಒಂದು ಎತ್ತುಗೆ ಮೂಲಕ ಅರಿತುಕೊಳ್ಳೋಣ.
ಈ ಮೇಲಿನ ಆಯ್ಕೆಗಳಲ್ಲಿ ಗಳಿಸುವ ಬಡ್ಡಿಯು ಆದಾಯ ತೆರಿಗೆಗೆ ಒಳಪಡುತ್ತದೆ. ಸದ್ಯಕ್ಕೆ ಬಾರತದಲ್ಲಿ ಸೆಕ್ಶನ್ 80TTA ಅಲ್ಲಿ ಆಯಾ ಹಣಕಾಸಿನ ವರುಶಕ್ಕೆ( Financial Year ), 10,000 ರೂ ಬಡ್ಡಿಯ ವರೆಗೆ ಆದಾಯ ತೆರಿಗೆಯ ವಿನಾಯಿತಿ ಇದೆ. ಕಾತೆದಾರ ಇದಕ್ಕೂ ಹೆಚ್ಚು ಬಡ್ಡಿ ಪಡೆಯುತ್ತಿದ್ದಲ್ಲಿ; ತನ್ನ ಗಳಿಕೆ ಮತ್ತು ಅದಕ್ಕೆ ಅನ್ವಯವಾಗುವ ಆದಾಯ ತೆರಿಗೆಯ ಮಟ್ಟಕ್ಕೆ( Income tax slab) ಅನುಗುಣವಾಗಿ ತೆರಿಗೆ ಕಟ್ಟಬೇಕಾಗುತ್ತದೆ. ಸ್ತಿರ ಟೇವಣಿ ಮತ್ತು ಮರುಕಳಿಸುವ ಟೇವಣಿಗಳು ಹತ್ತುಸಾವಿರಕ್ಕೂ ಹೆಚ್ಚಿನ ಬಡ್ಡಿಯನ್ನು ಗಳಿಸುತ್ತಿದ್ದಲ್ಲಿ, ಹಣಮನೆಗಳು ಆ ಬಡ್ಡಿಯ ಮೇಲೆ 10% ಕರವನ್ನು(Tax Deducted at source (TDS)- ಬಂಡವಾಳಕ್ಕೆ ಮುರಿದುಕೊಂಡ ಕರ) ಮುರಿದುಕೊಳ್ಳುತ್ತಾರೆ. ಇದರಿಂದ ಟೇವಣಿದಾರನಿಗೆ ತನ್ನ ಹೂಡಿಕೆಯ , ಕೊನೆಯಲ್ಲಿ ಸಿಗುವ ಹಣದಲ್ಲಿ(Maturity amount) ಕೊಂಚ ಬೇರ‍್ಮೆ ಕಾಣಬಹುದು. ಈ ಕಟ್ಟಳೆಗಳು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ.
ಸೂಚನೆ( Disclaimer)
ಈ ಬರಹವು ಯಾವುದೇ ಹೂಡಿಕೆ,ಗಳಿಕೆ, ಹಣಕಾಸು, ಆಸ್ತಿಪಾಸ್ತಿ ಗೆ ಸಂಬಂದ ಪಟ್ಟಂತೆ ನೀಡಲಾಗುವ ಸಲಹೆಯಲ್ಲ. ಇದು ಕೇವಲ ಕಲಿಕೆ(Educational) ಬರಹವಾಗಿದೆ. ಓದುಗರು ತಾವು ಯಾವುದೇ ಆಯ್ಕೆ ಮಾಡುವ ಮುನ್ನ, ಮಾರುಕಟ್ಟೆ ನಿಯಮ, ಸರಕಾರದ ಕಟ್ಟಳೆ ಮತ್ತು ಇತರ ಸಂಸ್ತೆಗಳ ಕಟ್ಟಳೆಗಳನ್ನು ಅರಿತು ಮುನ್ನಡೆಯಬೇಕು ಮತ್ತು ತಮ್ಮ ನಿರ‍್ದಾರಕ್ಕೆ ತಾವೇ ಜವಾಬ್ದಾರರಾಗಿರುತ್ತಾರೆ.
( ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು