ಶಿಕ್ಶಣ ಹಾಗೂ ಸಂಸ್ಕಾರ

– ಮಹೇಶ ಸಿ. ಸಿ.

“ಸಂಸ್ಕಾರವಿಲ್ಲದ ಶಿಕ್ಶಣ, ನೀರಿಲ್ಲದ ಪಾಳು ಬಾವಿಯಂತೆ”

ಶಿಕ್ಶಣ ಎಂದರೆ ಮಕ್ಕಳ ಶೈಕ್ಶಣಿಕ ಪ್ರಗತಿ ಅಶ್ಟೆ ಅಲ್ಲ, ಶಾಲೆಯಲ್ಲಿ ಶಿಕ್ಶಕರು ನಮಗೆ ಹೇಳಿಕೊಡುವ ಪಾಟವಶ್ಟೆ ಅಲ್ಲ. ಅದು ನಮ್ಮ ನಡೆ, ನುಡಿಯ ಮೇಲೆ ಅವಲಂಬಿಸಿರುತ್ತದೆ. ಒಂದು ಬಾವಿಯಲ್ಲಿ ನೀರು ಇಲ್ಲದೆ ಇದ್ದರೆ ಹೇಗೆ ಅದು ನಿರಪಯುಕ್ತವಾಗಿ ಪಾಳು ಬಿದ್ದಿರುತ್ತದೆಯೋ ಹಾಗೆಯೇ ನಮ್ಮಲ್ಲಿ ಸಂಸ್ಕಾರವೇ ಇಲ್ಲದೆ ಇದ್ದರೆ, ಸಾಮನ್ಯ ಜ್ನಾನದ ಪರಿವಿಲ್ಲದೆ ಇದ್ದರೆ ಎಶ್ಟೇ ಶಿಕ್ಶಣ ಇದ್ದರೂ ಅದು ವ್ಯರ‍್ತವೇ ಸರಿ ಎನ್ನುವ ಅರ‍್ತವನ್ನು ಮೇಲಿನ ಸಾಲು ಸ್ಪಶ್ಟವಾಗಿ ತಿಳಿಸುತ್ತದೆ.

ಮನೆಯೇ ಮಕ್ಕಳ ಮೊದಲ ಪಾಟಶಾಲೆ ಎನ್ನುತ್ತಾರೆ. ಯಾಕೆ ಎಂದರೆ ಮಗುವಿದ್ದಾಗ ನಮಗೆ ನಡೆಯಲು, ಮಾತನಾಡಲು, ಓಡಾಡಲು ಹಾಗೂ ಇತರೆ ಚಟುವಟಿಕೆಯನ್ನು ಪೋಶಕರೇ ಮೊದಲು ನಮಗೆ ಕಲಿಸುವುದರಿಂದ ನಮ್ಮ ಪ್ರಾತಮಿಕ ಶಿಕ್ಶಣದ ತರಗತಿಗಳು ಮನೆಯಿಂದಲೇ ಮೊದಲಾಗುತ್ತದೆ.

ಮಗುವಿನ ಹಾವ-ಬಾವವನ್ನು ಗುರುತಿಸಿ, ಅದಕ್ಕೆ ಬೇಕಾಗಿರುವ ಹಾಗೂ ಅದರ ಬೆಳವಣಿಗೆಗೆ ಮಹತ್ವ ಕೊಡುವ ಹೆತ್ತವರು ಒಂದು ಕಡೆಯಾದರೆ, ಮಗುವಿನ ಪ್ರಗತಿಯನ್ನು ಗಮನಿಸಿ, ಸರಿ-ತಪ್ಪುಗಳನ್ನು ತಿದ್ದುತ್ತಾ, ಓದು-ಬರಹ ಕಲಿಸುವ ಶಿಕ್ಶಕರು ಮತ್ತೊಂದು ಕಡೆ ಇರುತ್ತಾರೆ. ಇಲ್ಲಿ ಹೆತ್ತವರು ಎಶ್ಟು ಮುಕ್ಯವೋ, ಶಿಕ್ಶಕರು ಅಶ್ಟೇ ಮುಕ್ಯವಾಗಿರುತ್ತಾರೆ.

ಹೆತ್ತವರು ನಡೆಯುವ ಹಾದಿಯಾದರೆ, ಶಿಕ್ಶಕರು ನಮ್ಮ ದಾರಿಗೆ ಗುರಿ ತೋರಿಸುತ್ತಾರೆ. ಈ ಇಬ್ಬರೂ ಕೂಡ ನಮ್ಮ ಎರಡು ಕಣ್ಣುಗಳಿದ್ದ ಹಾಗೆ.
ಇಂದಿನ ದಿನಗಳಲ್ಲಿ ಶಿಕ್ಶಣ ಎಂದರೆ ಕೇವಲ ರ‍್ಯಾಂಕ್, ಅತವಾ ಉನ್ನತ ಶ್ರೇಣಿಯಂತಾಗಿದೆ. ಆದರೆ ಶಿಕ್ಶಣದ ಜೊತೆಗೆ ಮಕ್ಕಳಿಗೆ ಸಾಂಸ್ಕ್ರುತಿಕ ಕಲೆ, ಸಾಮಾಜಿಕ ಜವಾಬ್ದಾರಿ, ಕ್ರೀಡೆಯಲ್ಲಿ ಆಸಕ್ತಿ, ಬದುಕನ್ನು ರೂಪಿಸಿಕೊಳ್ಳುವ ದಾರಿ, ಮುಕ್ಯವಾಗಿ ಸಾಮಾನ್ಯ ಜ್ನಾನದ ತಿಳುವಳಿಕೆ ಇರಬೇಕು. ಇವೆಲ್ಲವೂ ಇದ್ದರಶ್ಟೇ ನಾವು ಪಡೆದ ಶಿಕ್ಶಣಕ್ಕೆ ಬೆಲೆ ಬರುತ್ತದೆ. ಇಲ್ಲದೆ ಇದ್ದರೆ ಶಿಕ್ಶಣ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿ ಮಸ್ತಕ ಕಾಲಿಯಾಗಿರುತ್ತದೆ.

ನಮ್ಮಲ್ಲಿ ಅನೇಕ ಪೋಶಕರು ಬಯಸುವುದು ಕೂಡ ತಮ್ಮ ಮಕ್ಕಳ ಶೈಕ್ಶಣಿಕ ಪ್ರಗತಿಯನ್ನು ಮಾತ್ರ ಎನ್ನುವುದು ಗಮನಾರ‍್ಹ ಸಂಗತಿ. ಆದರೆ ಜೊತೆಗೆ ಮಕ್ಕಳ ಮೇಲೆ ಒಂದು ಗಮನ ಇಟ್ಟಿರಬೇಕು. ಯಾಕೆ ಅಂದರೆ ಮಕ್ಕಳಲ್ಲಿ ಸರಿ-ತಪ್ಪು ಗುರುತಿಸುವ ಜ್ನಾನ ಕಡಿಮೆ ಇರುತ್ತದೆ. ಎಶ್ಟೋ ಸಾರಿ ತಿಳಿಯದೆಲೆ ತಪ್ಪು ದಾರಿಯಲ್ಲಿ ಸಾಗುವ ಸಾದ್ಯತೆ ಇರುತ್ತದೆ. ನಾವು ಎಲ್ಲಿ ಹೇಗಿರಬೇಕು, ಯಾರ ಬಳಿ ಹೇಗೆ ನಡೆದುಕೊಳ್ಳಬೇಕು, ಎಂಬಿತ್ಯಾದಿ ಅಂಶಗಳು ಇದರಲ್ಲಿ ಮುಕ್ಯವಾಗಿವೆ. ಹಾಗಾಗಿ ಅದನ್ನು ಕಲಿಸುವ ನಮ್ಮ ಪೋಶಕರು ಹಾಗೂ ಶಿಕ್ಶಕರು ಬಾಲ್ಯದಲ್ಲಿ ಮಹತ್ವಪೂರ‍್ಣ ವ್ಯಕ್ತಿಗಳಾಗಿ ಇರುತ್ತಾರೆ.

ನಾವು ಇಂದು ಓದುತ್ತಿರುವ ಪಾಟಗಳು ನಮ್ಮ ಮುಂದಿನ ದಿಕ್ಸೂಚಿಯಂತೆ ಇವೆ. ಇದರ ತಳಹದಿಯಲ್ಲಿಯೇ ನಾವು ಜೀವನದಲ್ಲಿ ಮುನ್ನಡೆಯಬೇಕು. ನಾಳೆ ಎಂಬುದು ನಮಗೆ ತಿಳಿಯದ ನಿಗೂಡವಾಗಿದ್ದರೂ ನಾವು ಅದನ್ನು ದೈರ‍್ಯದಿಂದ ಚೇದಿಸುವ ಗುಣವನ್ನು ಬೆಳೆಸುವುದೇ ನಮ್ಮ ಶಿಕ್ಶಣ ಹಾಗೂ ಸಂಸ್ಕಾರ. ಹಾಗಾಗಿ ಮಕ್ಕಳ ಶೈಕ್ಶಣಿಕ ಪ್ರಗತಿಯನ್ನು ಹಾಗೂ ಮಕ್ಕಳ ನಡವಳಿಕೆಯನ್ನು ತಂದೆ ತಾಯಿಗಳು ಹಾಗೂ ಶಿಕ್ಶಕರು ತಿದ್ದಿ ತೀಡಿದರೆ, ಮಕ್ಕಳ ಬವಿಶ್ಯ ಉಜ್ವಲವಾಗಲಿದೆ ಎನ್ನುವುದು ಸತ್ಯ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: