ಆಚೆ ಸುನಾಮಿ ಮ್ಯೂಸಿಯಂ

– .


ಇಂಡೋನೇಶ್ಯಾದ ಉತ್ತರ ಸುಮಾತ್ರದ ಪಶ್ಚಿಮ ಕರಾವಳಿಯ ಕೇಂದ್ರ ಬಿಂದುವಿನಲ್ಲಿ ಡಿಸೆಂಬರ್ 26, 2004, ಮುಂಜಾನೆ ಎಂಟರ ಸುಮಾರಿಗೆ 9.1 ರಿಂದ 9.3 ತೀವ್ರತೆಯ ಬೂಕಂಪನ ಸಂಬವಿಸಿತು. ಸಾಗರದೊಳಗೆ ಸಂಬವಿಸಿದ ಈ ಬೂಕಂಪದಿಂದ ಹಿಂದೂ ಮಹಾಸಾಗರದಲ್ಲಿ ದೈತ್ಯ ಅಲೆಗಳ ಸುನಾಮಿ, ಸುತ್ತಮುತ್ತಲಿನ ಕರಾವಳಿಯನ್ನು ಹಂಚಿಕೊಂಡಿದ್ದ ಹದಿನಾಲ್ಕು ದೇಶಗಳಲ್ಲಿನ ಕರಾವಳಿಯನ್ನು ದ್ವಂಸಗೊಳಿಸಿತ್ತು. ಎರಡು ಲಕ್ಶಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿತು. ಇತಿಹಾಸಕಾರರು ಇದನ್ನು 21ನೇ ಶತಮಾನದ ಮಾರಣಾಂತಿಕ ನೈಸರ‍್ಗಿಕ ವಿಕೋಪವೆಂದು ಬಣ್ಣಿಸಿದ್ದಾರೆ.

ಈ ನೈಸರ‍್ಗಿಕ ವಿಕೋಪದಲ್ಲಿ ಅತಿ ಹೆಚ್ಚು ಸಾವು ಸಂಬವಿಸಿದ್ದು ಇಂಡೋನೇಶ್ಯಾದ ಆಚೆ ಪ್ರದೇಶದಲ್ಲಿ. ಇಲ್ಲಿನ ಜನಸಂಕ್ಯೆಯಲ್ಲಿ 120 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಈ ಸುನಾಮಿಯ ದುರಂತದ ನೆನೆಪಿಗಾಗಿ ಇಂಡೋನೇಶ್ಯಾದ ಪಶ್ಚಿಮಕ್ಕಿರುವ ಆಚೆ ಪ್ರಾಂತ್ಯದಲ್ಲಿ (Aceh Province) ವಸ್ತು ಸಂಗ್ರಹಾಲಯವೊಂದನ್ನು ನಿರ‍್ಮಿಸಲು ಉದ್ದೇಶಿಸಲಾಯಿತು. ಅದರಂತೆ 2008ರ ಪೆಬ್ರವರಿಯಲ್ಲಿ ವಸ್ತು ಸಂಗ್ರಹಾಲಯ ಉದ್ಗಾಟನೆಗೊಂಡಿತು. ಈ ವಸ್ತು ಸಂಗ್ರಹಾಲಯ ಸುನಾಮಿ ಪ್ರದೇಶದ ಅಬಿವ್ರುದ್ದಿಯ ಜೊತೆಗೆ ಶೈಕ್ಶಣಿಕ ಕೇಂದ್ರವಾಗಿದೆ. ವಸ್ತು ಸಂಗ್ರಹಾಲಯದ ಒಳ ಹೊಕ್ಕರೆ, ಸುನಾಮಿಯ ಅಗಾದತೆಯನ್ನು ನೆನೆಪಿಸುವಂತೆ ಗೋಡೆಯ ಎರಡೂ ಬದಿಯಿಂದ ನುಗ್ಗುತ್ತಿರುವ ನೀರಿನ ಅಲೆಯ ಮೊರೆತದ ಸದ್ದು ಕೇಳಿಬರುತ್ತದೆ. ಮುಂದೆ ಹೆಜ್ಜೆಯಿಟ್ಟರೆ, 2004ರ ಸುನಾಮಿಯ ಬೂಕಂಪದ ಕರಾಳತೆಯನ್ನು ನೆನೆಪಿಸುವ ಚಾಯಾಚಿತ್ರಗಳ ಪ್ರದರ‍್ಶನ ಹಾಗೂ ಬದುಕುಳಿದವರ ಸಾಹಸಗಾತೆಯ ಕತೆಗಳ ಚಿತ್ರಣಗಳು ಕಾಣಬರುತ್ತವೆ.

ಆಚೆ ಮತ್ತು ನಿಯಾಸ್ ಪುನರ‍್ನಿಮಾಣ ಸಂಸ್ತೆ, ಇಂದನ ಮತ್ತು ಕನಿಜ ಸಂಪನ್ಮೂಲ ಸಚಿವಾಲಯ, ಆಚೆ ಸರ‍್ಕಾರ, ಬಂದಾ ಆಚೆ ಸರ‍್ಕಾರ , ಇಂಡೋನೇಶಿಯನ್ ಆರ‍್ಕಿಟೆಕ್ಟ್ಸ್ ಅಸೋಸಿಯೇಶನ್ ಹಾಗೂ ಇತರೆ ಹಲವಾರು ಸಂಸ್ತೆಗಳ ಸಹಕಾರದಿಂದ ಈ ವಸ್ತು ಸಂಗ್ರಹಾಲಯ ರೂಪುಗೊಂಡಿದೆ.
ಆಚೆ ವಸ್ತು ಸಂಗ್ರಹಾಲಯದ ಕಟ್ಟಡದ ವಿನ್ಯಾಸವನ್ನು ರಚಿಸಲು ಸ್ಪರ‍್ದೆಯನ್ನು ಏರ‍್ಪಡಿಸಲಾಗಿತ್ತು. ಬಂಡಂಗ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿನ ವಾಸ್ತುಶಿಲ್ಪದ ಉಪನ್ಯಾಸಕರಾದ ಎಂ. ರಿದ್ವಾನ್ ಕಾಮಿಲ್ ರಚಿಸಿದ ವಿನ್ಯಾಸ ಈ ಸ್ಪರ‍್ದೆಯಲ್ಲಿ ಗೆದ್ದಿತು. ವಸ್ತು ಸಂಗ್ರಹಾಲಯದ ಕಟ್ಟಡದ ವಿನ್ಯಾಸ ಸಾಗರ ಅಲೆಯ ಸುನಾಮಿ ಕೇಂದ್ರ ಬಿಂದುವನ್ನು ಹೊಲುವಂತೆ ರಚಿಸಲಾಗಿದೆ.

ಆಚೆ ವಸ್ತು ಸಂಗ್ರಹಾಲಯವು ಆಸರೆಯ ತೊಲೆಗಳ ಮೇಲೆ ನಿರ‍್ಮಿತವಾಗಿದೆ. ಈ ಪ್ರದೇಶದಲ್ಲಿ ಈ ರೀತಿಯಲ್ಲಿ ಮನೆಯನ್ನು ನಿರ‍್ಮಿಸುವುದು ಸಾಂಪ್ರದಾಯಿಕ. ಇದಕ್ಕೆ ಮೂಲ ಕಾರಣ ಪದೇ ಪದೇ ಬರುವ ಪ್ರವಾಹಗಳಿಂದ ಕಾಪಾಡಿಕೊಳ್ಳಲು. ಈ ಕಟ್ಟಡವನ್ನು ದೂರದಿಂದ ನೋಡಿದಾಗ, ಚಿಮಣಿ ಹೊಂದಿರುವ ಹಡಗನ್ನು ಹೋಲುವಂತೆ ಕಾಣುತ್ತದೆ. ಎಪ್ಪತ್ತು ಶತಕೋಟಿ ಇಂಡೋನೇಶ್ಯನ್ ರುಪಾಯಿಗಳನ್ನು ವಿನಿಯೋಗಿಸಿ ನಿರ‍್ಮಿಸಲಾಗಿರುವ ಈ ವಸ್ತು ಸಂಗ್ರಹಾಲಯವು ಎರಡು ಅಂತಸ್ತಿನಿಂದ ಕೂಡಿದೆ. ಮೊದಲ ಮಹಡಿಯಲ್ಲಿ ಹೊರಗಿನಿಂದ ನೋಡಬಹುದಾದ ತೆರೆದ ಪ್ರದೇಶವಾಗಿದ್ದು, 2004ರಲ್ಲಿ ಸಂಬವಿಸಿದ ಸುನಾಮಿಯ ಸ್ಮರಣಾರ‍್ತವಾಗಿದೆ. 2004ರಲ್ಲಿನ ಸುನಾಮಿಯ ದಾಕಲೆಗಳನ್ನು ಹೊಂದಿರುವ ಹಲವಾರು ಕೋಣೆಗಳಿವೆ. ಈ ಕೋಣೆಗಳಲ್ಲಿ ಸುನಾಮಿ ‘ಶೋರೂಮ್’ ಸುನಾಮಿಯ ಮುಂಚೆ ಹೇಗಿತ್ತು? ಸುನಾಮಿ ಅಪ್ಪಳಿಸಿದಾಗ ಹೇಗಿತ್ತು? ಅಪ್ಪಳಿಸಿದ ಸುನಾಮಿ ತಣ್ಣಗಾದ ಮೇಲೆ ಹೇಗಿತ್ತು? ಹೀಗೆ ಎಲ್ಲದರ ವಿವರಗಳಿವೆ.

ಎರಡನೆಯ ಮಹಡಿಯಲ್ಲಿ ಸ್ಮರಣಿಕೆಗಳ ಅಂಗಡಿಯ ರೂಪದಲ್ಲಿ ಸೂಚನಾ ಮಾದ್ಯಮದ ಗ್ರಂತಾಲಯ ಮುಂತಾದವುಗಳಿವೆ. ಇವುಗಳ ಜೊತೆ ಬೂಕಂಪ ನಿರೋದಕ ಕಟ್ಟಡಗಳ ವಿನ್ಯಾಸ, ಬೂಮಿಯಲ್ಲಿನ ದುರ‍್ಬಲ ಪ್ರದೇಶಗಳನ್ನು ಸೂಚಿಸುವ ರೇಕಾಚಿತ್ರ, ಬಾಹ್ಯಾಕಾಶದ ಚಿತ್ರಕಲೆ, ಡಿಯೋರಾಮಾ, ಕೆಪೆ ಸಹ ಸೇರಿವೆ. ಆಚೆ ಸುನಾಮಿ ವಸ್ತು ಸಂಗ್ರಹಾಲಯದ ಹೊರ ಬಾಗವು ಬಿದಿರಿನ ನೇಯ್ಗೆಯಂತಹ ಪಾರದರ‍್ಶಕತೆಯನ್ನು ಹೊಂದಿದೆ. ಇದು ಆಚೆಯ ಸಾಂಸ್ಕ್ರುತಿಕ ವೈವಿದ್ಯತೆಯನ್ನು ಸೂಚಿಸುತ್ತದೆ. ಈ ವಸ್ತು ಸಂಗ್ರಹಾಲಯ ಬಂದಾ ಆಚೆಯ (ಆಚೆ ಪ್ರಾಂತ್ಯದ ರಾಜದಾನಿ) ಜಲನ್ ಇಸ್ಕಂದರ್ ಮುದ್ರಾದಲ್ಲಿದೆ. ಪ್ರತಿದಿನ 10:00 ರಿಂದ 12:00 ಮತ್ತು 15:00 ರಿಂದ 17:00 ವರೆಗೆ ತೆರೆದಿರುತ್ತದೆ. ಶುಕ್ರವಾರ ಮುಚ್ಚಿರುತ್ತದೆ.

(ಮಾಹಿತಿ ಮತ್ತು ಚಿತ್ರಸೆಲೆ: pixabay.com, indonesia.travel, egypttoday.com, indonesia-tourism.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: