ಮೇಕೆ ಸುಡುವ ಸಂಪ್ರದಾಯ

– .

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಒಂದೊಂದು ದೇಶದಲ್ಲಿ ಒಂದೊಂದು ಬಗೆಯ ಆಚರಣೆ ನಡೆಯುತ್ತದೆ. ಸ್ವೀಡನ್ ಮತ್ತು ಇತರೆ ನಾರ‍್ಡಿಕ್ ದೇಶಗಳಲ್ಲಿ (ಡೆನ್ಮಾರ‍್ಕ್, ನಾರ‍್ವೇ, ಪಿನ್ಲೆಂಡ್, ಐಸ್ಲೆಂಡ್, ಪೆರೋ ಐಲೆಂಡ್ ಹಾಗೂ ಗ್ರೀನ್ ಲ್ಯಾಂಡ್) ಯೂಲ್ ಮೇಕೆಯನ್ನು ಸುಡುವ ಸಂಪ್ರದಾಯ ಹಲವಾರು ಶತಮಾನಗಳಿಂದಲೂ ನಡೆದುಬಂದಿದೆ. ಪ್ರತಿ ವರ‍್ಶ ಡಿಸೆಂಬರ್ ನಲ್ಲಿ ಹುಲ್ಲಿನಿಂದ ಮಾಡಿದ ಸುಮಾರು ಹದಿನಾರು ಮೀಟರ್ ಎತ್ತರದ ಮೇಕೆಗಳನ್ನು ನಾರ‍್ಡಿಕ್ ದೇಶಗಳಲ್ಲಿ ನಿರ‍್ಮಿಸಲಾಗುತ್ತದೆ. ಈ ಗಾತ್ರದ ಒಂದೊಂದು ಮೇಕೆಯ ನಿರ‍್ಮಾಣಕ್ಕೂ ಅಂದಾಜು ಮೂರರಿಂದ ನಾಲ್ಕು ಟನ್ ಹುಲ್ಲಿನ ಅಗತ್ಯವಿದೆ. ಇಶ್ಟೇ ಗಾತ್ರವಿರಬೇಕೆಂಬ ನಿಯಮವಿಲ್ಲ. 1980ರ ದಶಕದ ಮದ್ಯ ಬಾಗದಲ್ಲಿ ಗಿನ್ನಿಸ್ ಬುಕ್ ಆಪ್ ರೆಕಾರ‍್ಡ್ ಗೆ ಸೇರಿಸಲ್ಪಟ್ಟ ಗಾವ್ಲೆ ಮೇಕೆ ಎಲ್ಲಕ್ಕಿಂತ ಹೆಚ್ಚು ಪ್ರಸಿದ್ದಿ ಪಡೆದ ಮೇಕೆಯಾಗಿತ್ತು. ಗಾವ್ಲೆ ಪಟ್ಟಣದ ನ್ಯಾಚುರಲ್ ಸೈನ್ಸ್ ಕ್ಲಬ್ ನ ಈ ಮೇಕೆ 12.5 ಮೀಟರ್ ಎತ್ತರವಿದ್ದ ಕಾರಣ ಮೊದಲ ಬಾರಿಗೆ ಗಿನ್ನಿಸ್ ಬುಕ್‌ನಲ್ಲಿ ಸ್ತಾನ ಪಡೆದಿತ್ತು. ಅಂದಿನಿಂದ ಗಾವ್ಲೆ ಮೇಕೆ ಪ್ರಸಿದ್ದಿ ಪಡೆಯಿತು.

ಯೂಲ್ ಮೇಕೆಗಳು ತಮ್ಮ ಮೂಲವನ್ನು ನಾರ‍್ಸ್ ಪೇಗನ್ ದರ‍್ಮದಲ್ಲಿ ಹೊಂದಿರುವುದಾಗಿ ಕಂಡುಬಂದಿದೆ. ಗುಡುಗಿನ ದೇವರಾದ ಸರ‍್ವಶಕ್ತ ತಾರ್ ರತವನ್ನು ಟ್ಯಾಂಗ್ರಿಸ್ನೀರ್ ಹಾಗು ಟ್ಯಾಂಗ್ನಜೋಸ್ಟ್ ಎಂಬ ಎರಡು ಆಡುಗಳು (ಮೇಕೆಗಳು) ಎಳೆಯುತ್ತವೆ ಎಂದು ನಂಬಲಾಗಿತ್ತು. ನಂತರದ ದಿನಗಳಲ್ಲಿ ಕ್ರಿಶ್ಚಿಯನ್ ದರ‍್ಮವು ತಾರ್ ಅನ್ನು ಉರುಳಿಸಿತು. ಆದರೂ ಅದರ ರತವನ್ನು ಎಳೆಯುತ್ತಿದ್ದ ಮೇಕೆಗಳನ್ನು ಹಾಗೇ ಉಳಿಸಿಕೊಳ್ಳಲಾಯಿತು. ಅಂದಿನಿಂದ ಈ ಮೇಕೆಗಳು ಈ ಪ್ರಾಂತ್ಯದಲ್ಲಿ ಆದುನಿಕ ಸಾಂಟಾ ಕ್ಲಾಸ್ ನ ಪಾತ್ರವನ್ನು ನಿರ‍್ವಹಿಸುತ್ತಾ ವಿದೇಯ ಮಕ್ಕಳಿಗೆ ಉಡುಗೊರೆಗಳನ್ನು ನೀಡಲು ಪ್ರಾರಂಬಿಸಿದವಂತೆ.

ಗಾವ್ಲೆಯಲ್ಲಿನ ರೈತಾಪಿ ಜನ ಒಣ ಹುಲ್ಲಿನಲ್ಲಿ ಕೊಂಚ ಬಾಗ ಉಳಿಸಿ, ಅದನ್ನು ಹುಲ್ಲಿನ ಮೇಕೆ ತಯಾರಿಕೆಯಲ್ಲಿ ಬಳಸುತ್ತಿದ್ದರು. ಈ ಪರಿಪಾಟ ಹೆಚ್ಚುಕಾಲ ಮುಂದುವರೆಯಲಿಲ್ಲ. ಈ ಪ್ರಾಂತ್ಯದ ಚರ‍್ಚಿನ ಮುಕ್ಯಸ್ತರು ಮೇಕೆಗಳು ಸೈತಾನನ ಹಿಂಬಾಲಕರೆಂದು ಗೋಶಿಸಿ, ಅವುಗಳು ಎಲ್ಲೇ ಕಂಡರೂ ಸುಡುವಂತೆ ಒತ್ತಾಯಿಸಲು ಪ್ರಾರಂಬಿಸಿದರು. ಇದು ಹೊಸ ಸಂಪ್ರದಾಯಕ್ಕೆ ನಾಂದಿಯಾಯಿತು. ಮೇಕೆಯನ್ನು ಹುಲ್ಲಿನಲ್ಲಿ ನಿರ‍್ಮಿಸುವ ಮತ್ತು ಚರ‍್ಚಿನ ಆದೇಶದಂತೆ ಸುಡುವ ಎರಡೂ ಸಂಪ್ರದಾಯಗಳು ಏಕಕಾಲದಲ್ಲಿ ನಡೆದು ಬಂದವು. ಕ್ರಮೇಣ ಹಳೆಯ ಸಂಪ್ರದಾಯದಂತೆ ಹುಲ್ಲಿನಿಂದ ನಿರ‍್ಮಿತವಾದ ಮೇಕೆಗಳನ್ನು, ಸುಡುವ ವಿಲಕ್ಶಣ ಪರಿಪಾಟ ನಾಗರೀಕರಲ್ಲಿ ಬೆಳೆದುಬಂದಿತು. ಸಾಂಟಾಕ್ಲಾಸ್ ನ ಬದಲಿಯಾದ ಈ ಹುಲ್ಲಿನ ಮೇಕೆಯನ್ನು ಕಾಪಾಡಿಕೊಳ್ಳುವುದು ಅದನ್ನು ನಿರ‍್ಮಿಸಿದವರ ಕೆಲಸವಾಗಿ ಮಾರ‍್ಪಟ್ಟಿತು. ಅದಕ್ಕಾಗಿ ಎಲ್ಲಾ ರೀತಿಯ ಕಟಿಣ ಕ್ರಮಗಳನ್ನು ಜರುಗಿಸಿ, ದಿನದ 24 ಗಂಟೆಗಳ ಕಾಲ ಪೊಲೀಸರಿಂದ ಕಾವಲು ಕಾಯುವ ಕಾರ‍್ಯ ಸಹ ಆಯೋಜಿಸುತ್ತಿದ್ದರು. ಹುಲ್ಲಿನಿಂದ ನಿರ‍್ಮಿತವಾದ ಮೇಕೆಗಳನ್ನು ಸುಡದಂತೆ ಕಾಪಾಡಲು ರಾಸಾಯನಿಕಗಳನ್ನು ಬಳಸುವುದರೊಂದಿಗೆ, ಅಗ್ನಿಶಾಮಕ ಸಿಬ್ಬಂದಿಯ ನೇಮಕ, ಸ್ವಯಂ ಸೇವಕರಿಂದ ಕಾಯುವಿಕೆ ಹೀಗೆ ಎಲ್ಲಾ ರೀತಿಯ ರಕ್ಶಣಾ ವ್ಯವಸ್ತೆಗಳನ್ನು ಮಾಡುತ್ತಿದ್ದರು. ಇಶ್ಟೆಲ್ಲಾ ಮುಂಜಾಗರೂಕತೆ ಕ್ರಮಗಳನ್ನು ತೆಗೆದುಕೊಂಡರೂ, ಚರ‍್ಚಿನ ಆದೇಶದ ಹಿಂಬಾಲಕರಿಂದ ಮೇಕೆ ಸುಡುವುದನ್ನು ತಪ್ಪಿಸಲಾಗಲಿಲ್ಲ. ಮೇಕೆಗಳನ್ನು ನಾಶ ಮಾಡಲು ಅವರುಗಳು ವಿವಿದ ರೀತಿಯ ಮಾರ‍್ಗಗಳನ್ನು ಕಂಡುಕೊಂಡು, ರಕ್ಶಣೆಯನ್ನು ಬೇದಿಸಿ ಮೇಕೆಗಳನ್ನು ಸುಡುವುದರಲ್ಲಿ ಯಶಸ್ವಿಯಾಗುತ್ತಿದ್ದರು.

1966ರಿಂದ ಇಲ್ಲಿಯವರೆಗೆ ಗಾವ್ಲೆ ಪಟ್ಟಣದಲ್ಲಿ ನಿರ‍್ಮಿತವಾದ ಮೇಕೆಯನ್ನು 23 ಬಾರಿ ಸುಡಲಾಗಿದೆ. ಕೆಲವು ವರ‍್ಶಗಳಲ್ಲಿ ಮೇಕೆಗಳು ನಿರ‍್ಮಾಣವಾದ ಕೆಲವೇ ಗಂಟೆಗಳಲ್ಲಿ ಸುಟ್ಟಂತಹ ಮತ್ತು ಕೆಲವೊಮ್ಮೆ ಮೇಕೆಗಳು ಪೂರ‍್ಣ ಪ್ರಮಾಣದಲ್ಲಿ ನಿರ‍್ಮಾಣವಾಗುವ ಮೊದಲೇ ಸುಟ್ಟ ನಿದರ‍್ಶನಗಳಿವೆ. ಹುಲ್ಲಿನ ಮೇಕೆಗಳನ್ನು ನಾಶಪಡಿಸಲು ಅನೇಕ ವಿಲಕ್ಶಣ ವಿದಾನಗಳನ್ನು ಅನುಸರಿಸಿರುವುದು ಸಹ ಕಾಣ ಬರುತ್ತದೆ. ಮೇಕೆಯನ್ನು ಚೂರು ಚೂರಾಗಿ ಕತ್ತರಿಸುವುದು ಅದರಲ್ಲಿ ಒಂದು. ಒಮ್ಮೆ ಈ ದೈತ್ಯ ಮೇಕೆಯ ಮೇಲೆ ಕಾರನ್ನು ಹರಿಸಿದ ನಿದರ‍್ಶನ ಸಹ ಇದೆ. 2005ರಲ್ಲಿ ಗಾವ್ಲೆಯಲ್ಲಿನ ಮೇಕೆ ಸುಡುವಿಕೆ, ಸ್ವೀಡನ್ನಿನ ಬೇರೆ ಪಟ್ಟಣಗಳಿಗೂ ಹರಡಿ ಅಲ್ಲಿನ ಮೇಕೆಗಳೂ ಸಹ ಬೆಂಕಿಗೆ ಆಹುತಿಯಾಗಿದ್ದಿದೆ.

ಗಾವ್ಲೆ ಪಟ್ಟಣದ ಅದಿಕಾರಿಗಳು 1986ರಲ್ಲಿ ಗಾವ್ಲೆಯ ಎರಡು ವಿಬಿನ್ನ ಬಾಗಗಳಲ್ಲಿ ಮೇಕೆಯನ್ನು ನಿರ‍್ಮಿಸಲು ತೀರ‍್ಮಾನಿಸಿದರು. ಇದೂ ಕೂಡ ಯಾವುದೇ ಪರಿಹಾರವನ್ನು ನೀಡುವಲ್ಲಿ ಸೋತಿತು. ಎರಡೂ ಮೇಕೆಗಳು ಒಂದೇ ರೀತಿಯ ಅಂತ್ಯವನ್ನು ಕಂಡವು. 2009ರಲ್ಲಿ, ಎರಡರಲ್ಲಿ ಒಂದು ಮೇಕೆ ಬೆಂಕಿಗೆ ಆಹುತಿಯಾಗುವುದರಿಂದ ತಪ್ಪಿಸಿಕೊಂಡಿತು. ನಂತರ ಉಳಿದ ಮೇಕೆಯನ್ನೂ ಸಹ ಕಳವುಮಾಡಿ ನೀರಿನಲ್ಲಿ ಎಸೆದು, ನಂತರ ಸುಟ್ಟುಹಾಕಲಾಯಿತು.

ಇಲ್ಲಿ ಪ್ರತಿವರ‍್ಶವೂ ಮೇಕೆಯ ಸುಡುವಿಕೆ ಅವ್ಯಾಹತವಾಗಿ ನಡೆಯುತ್ತಾ ಬಂದಿದ್ದರೂ, ಮೇಕೆಯನ್ನು ಸುಡುವ ಕಿಡಿಗೇಡಿಗಳು ಮಾತ್ರ ಸಿಕ್ಕಿಬಿದ್ದಿಲ್ಲ. ಒಮ್ಮೆ ಮಾತ್ರ, ಅದೂ 2001ರಲ್ಲಿ 51 ವರ‍್ಶದ ಅಮೇರಿಕನ್ ಪ್ರಜೆ ಈ ಕಾರ‍್ಯ ಎಸಗುತ್ತಿರುವಾಗ ಸಿಕ್ಕಿಬಿದ್ದಿದ್ದ. ಆತ ಕಾನೂನಿನಂತೆ 18 ವರ‍್ಶಗಳ ಕಾಲ ಜೈಲುವಾಸ ಅನುಬವಿಸಬೇಕಾಯಿತು. ಇದೆಂತ ವಿಲಕ್ಶಣ ಆದೇಶ ಪಾಲನೆ ಎನಿಸುತ್ತದಲ್ಲವೇ!

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, smithsonianmag.com, atlasobscura.com, thelocal.se, mentalfloss.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: