ಅಚ್ಚರಿಗೊಳಿಸುವ ಅರಿಮೆಯ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ.

ಅರಿಮೆ ಎಂದರೆ ಅದೊಂದು ಸೋಜಿಗ. ಹೆಚ್ಚಿನ ಅರಿಮೆಯ ಸಂಗತಿಗಳು ಅಚ್ಚರಿಯನ್ನು ಉಂಟು ಮಾಡಿದರೆ, ಕೆಲ ಸಂಗತಿಗಳು “ಇದು ಹೇಗೆ ಸಾದ್ಯ?” ಎನ್ನಿಸುವಂತಿರುತ್ತವೆ. ಕೆಲವು ನಮ್ಮ ನಂಬಿಕೆ ಮತ್ತು ತಿಳುವಳಿಯಕೆನ್ನು ಬುಡಮೇಲು ಮಾಡುತ್ತವೆ. ಅಂತಹ ಕೆಲವು ವಿಶಯಗಳು ಇಲ್ಲಿವೆ.

ಜಗತ್ತಿನ ಶೇ. 50ಕ್ಕೂ ಹೆಚ್ಚು ಉಸಿರ್‍ಗಾಳಿ ಬರುವುದು ಕಡಲಿನಿಂದ!

ಗಿಡಗಳು ಉಸಿರ್‍ಗಾಳಿಯನ್ನು(oxygen) ಹೊರಹಾಕುವುದು ನಮಗೆಲ್ಲ ತಿಳಿದೇ ಇದೆ. ಹೀಗಾಗಿ ಬೂಮಿಯ ಮೇಲಿರುವ ಹೆಚ್ಚಿನ ಉಸಿರ್‍ಗಾಳಿಯ ಮೂಲ, ಕಾಡುಗಳು ಎಂದುಕೊಳ್ಳುತ್ತೇವೆ. ಆದರೆ ಸಮುದ್ರದ ಆಳದಲ್ಲಿರುವ ಕಡಲಕಳೆ(seaweed) ಮತ್ತು ಪ್ಲಾಂಕ್ಟನ್‌ ಗಳೆಂಬ ಜೀವಿಗಳಿಂದ ಹೆಚ್ಚಿನ ಉಸಿರ್‍ಗಾಳಿ ಹುಟ್ಟುತ್ತದೆ. 200 ನ್ಯಾನೋ ಮೀಟರಿಗಿಂತ ಚಿಕ್ಕದಾಗಿರುವ ಪೈಟೊಪ್ಲಾಂಕ್ಟನ್‌ಗೆಳೆಂಬ ಜೀವಿಗಳು ಜಗತ್ತಿನ ಶೇ. 50 ರಶ್ಟು ಉಸಿರ್‍ಗಾಳಿಯನ್ನು ಉಂಟುಮಾಡುತ್ತವೆ!

ಮನುಶ್ಯನ ಹೊಟ್ಟೆಯಲ್ಲಿರುವ ಆಸಿಡ್ ಅದೆಶ್ಟು ಬಲಶಾಲಿ?

ಹುಳಿಯನ್ನು (ಆಸಿಡ್‌) pH ಎನ್ನುವ ಅಂಶದಿಂದ ಅಳೆಯಲಾಗುತ್ತದೆ. pH ಅನ್ನು 0-14 ಪ್ರಮಾಣದಲ್ಲಿ ಗುರುತಿಸಲಾಗುತ್ತದೆ. pH ಮಟ್ಟ ಕಡಿಮೆ ಇದ್ದಶ್ಟು, ಆಸಿಡ್ ಹೆಚ್ಚು ಬಲವಾಗಿರುತ್ತದೆ. ನಮ್ಮ ಹೊಟ್ಟೆಯಲ್ಲಿರುವ ಆಸಿಡ್ ಸಾಮಾನ್ಯವಾಗಿ 1.0-2.0 pH ಮಟ್ಟದಲ್ಲಿರುತ್ತದೆ. ಇದು ಸಣ್ಣ ಮೊಳೆ ಇಲ್ಲವೇ ಬ್ಲೇಡ್ ಗಳನ್ನು ಕರಗಿಸುವಶ್ಟು ಬಲಶಾಲಿಯಾಗಿದೆ!

ಚುಕ್ಕೆಗಳ ಎಣಿಕೆಯನ್ನು ಮೀರಿಸುವುದುಂಟೇ?

ನಾಸಾದ ಅರಿಗರು ಹೇಳುವಂತೆ ನಮ್ಮ ಹಾಲುಹಾದಿ (milky way) ಗ್ಯಾಲಕ್ಸಿಯಲ್ಲಿ ಸುಮಾರು 400 ಬಿಲಿಯನ್ ಚುಕ್ಕೆಗಳಿವೆ. ಆದರೆ ಬೂಮಿಯ ಮೇಲಿರುವ ಗಿಡಗಳ ಸಂಕ್ಯೆ ಇದಕ್ಕಿಂತಲೂ ಮಿಗಿಲು. ಬೂಮಿಯ ಮೇಲೆ ಸುಮಾರು 3 ಟ್ರಿಲಿಯನ್ ಗಿಡಗಳಿವೆ. ಅಂದರೆ ಗ್ಯಾಲಕ್ಸಿಯಲ್ಲಿರುವ ಚುಕ್ಕೆಗಳ ಎಣಿಕೆಯ ಸುಮಾರು ಏಳೂವರೆ ಪಟ್ಟು ಗಿಡಮರಗಳು ಬೂಮಿಯ ಮೇಲಿವೆ.

ಎಲ್ಲಿ ಮಾಯವಾದವು ಎಲುಬುಗಳು?

ಹುಟ್ಟಿದ ಕೂಸುಗಳಲ್ಲಿ ಮೊದಲಿಗೆ ಸುಮಾರು 300 ಮೂಳೆಗಳಿರುತ್ತವೆ. ಹೆಚ್ಚಿನ ಸಂಕ್ಯೆಯ ಮೂಳೆಗಳು ಹೆರಿಗೆ ಹೊತ್ತಿನಲ್ಲಿ ಸುಳುವಾಗಿ ಚಲಿಸಲು ಮತ್ತು ಮೊದಲ ಹಂತದ ಬೆಳವಣಿಗೆಗೆ ಅನುಕೂಲವಾಗುತ್ತವೆ. ಬೆಳವಣಿಗೆಯಾಗುತ್ತಿದ್ದಂತೆ ಹಲವು ಮೂಳೆಗಳು ಒಂದಕ್ಕೊಂದು ಬೆಸೆದುಕೊಂಡು ದೊಡ್ಡ ಎಲುಬುಗಳಾಗಿ ಮಾರ್‍ಪಾಟಾಗುತ್ತವೆ. ವಯಸ್ಕರಲ್ಲಿ ಸಾಮಾನ್ಯವಾಗಿ 206 ಮೂಳೆಗಳಿರುತ್ತವೆ.

ಬದಲಾಗುತ್ತಿದೆ ಬೂಮಿಯ ರಚನೆ!

ಬೂಮಿಯ ಗಡುಸಾದ ಮದ್ಯಬಾಗ ಟೆಕ್ಟಾನಿಕ್ ಪ್ಲೇಟ್‌ಗಳೆಂಬ ತುಕಡಿಗಳಿಂದ ಮಾಡಲ್ಪಟ್ಟಿದೆ. ಬೂಮಿಯ ನಡುಬಾಗದಲ್ಲಿರುವ ಬಿಸಿಯಿಂದಾಗಿ ಈ ಪ್ಲೇಟ್‌ಗಳು ಸದಾ ಸರಿದಾಡುತ್ತಿರುತ್ತವೆ. ಇದರಿಂದಾಗಿ ಬೂಮಿಯ ಮೇಲ್ಬಾಗದ ರಚನೆಯಲ್ಲೂ ಬದಲಾವಣೆಗಳಾಗುತ್ತವೆ. ಇಂದು ಸುಮಾರು 5,000 ಕಿಲೋಮೀಟರ್ ದೂರಲ್ಲಿರುವ ಉತ್ತರ ಅಮೆರಿಕಾದ ಅಲಾಸ್ಕಾ ಮತ್ತು ಪ್ಯಾಸಿಪಿಕ್ ಸಾಗರದಲ್ಲಿರುವ ಹವಾಯಿ ದ್ವೀಪಗಳು ಒಂದಕ್ಕೊಂದು ಹತ್ತಿರವಾಗುತ್ತಿವೆ. ಪ್ರತಿ ವರುಶ ಈ ಎರಡೂ ಬೂಬಾಗಗಳು ನಡುವಿನ ದೂರ ಸುಮಾರು 7.5 ಸೆಂಟಿ ಮೀಟರ್ ನಶ್ಟು ಕಡಿಮೆಯಾಗುತ್ತದೆ.

ನೇಸರ ಮರೆಯಾದರೆ ಏನಾಗುತ್ತದೆ?

ನಮಗೆಲ್ಲ ತಿಳಿದಿರುವ ಹಾಗೆ ಬೆಳಕು ಅತಿ ವೇಗದಲ್ಲಿ ಅಂದರೆ ಸೆಕೆಂಡಿಗೆ 3 ಲಕ್ಶ ಕಿಲೋಮೀಟರ್ ದೂರ ಚಲಿಸಬಲ್ಲುದು. ಸೂರ‍್ಯನಿಂದ ಹೊರಟ ಬೆಳಕು ಬೂಮಿಯನ್ನು ತಲುಪಲು ಸುಮಾರು 8 ನಿಮಿಶಗಳು, 20 ಸೆಕೆಂಡುಗಳು ಬೇಕು. ಒಂದು ವೇಳೆ ನೇಸರ ಹಟಾತ್ತಾಗಿ ಮಾಯವಾದರೆ ಇಲ್ಲವೇ ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಇದು ನಮಗೆ 8 ನಿಮಿಶಗಳ ಬಳಿಕವೇ ಗೊತ್ತಾಗುತ್ತದೆ!. ಅಶ್ಟೊತ್ತಿನೊಳಗೆ ಗುರುತ್ವಬಲ ಕೆಲಸ ಮಾಡುವುದನ್ನು ನಿಲ್ಲಿಸಿ, ಸೌರವ್ಯೂಹದ ಗ್ರಹಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತವೆ.

ನಮ್ಮ ಬಾಯಲ್ಲಿರುವ ಉಗುಳಿನಿಂದ ನಮಗೆಶ್ಟು ಅನುಕೂಲ?

ನಮ್ಮ ಆಹಾರವನ್ನು ಸವಿಯಲು ಉಗುಳಿನ ಅಗತ್ಯವಿದೆ. ಯಾವುದೇ ಆಹಾರವು ನಮಗೆ ರುಚಿಸಬೇಕಾದರೆ, ಆಹಾರದಿಂದ ಬರುವ ರಾಸಾಯನಿಕಗಳು ಉಗುಳಿನಲ್ಲಿ ಕರಗಬೇಕು. ಆಹಾರದಲ್ಲಿನ ರಾಸಾಯನಿಕಗಳು ಕರಗಿದ ನಂತರವೇ, ಅವುಗಳನ್ನು ನಮ್ಮ ರುಚಿ ಮೊಗ್ಗುಗಳಲ್ಲಿನ ಅರಿವುಕಗಳು (sensors) ಗುರತಿಸಬಲ್ಲವು!

(ಮಾಹಿತಿ ಮತ್ತು ಚಿತ್ರ ಸೆಲೆ: edclass.com, vedantu.com, microsoft.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: