ಜಪಾನಿನ ರೋಲರ್ ಕೋಸ್ಟರ್ ಸೇತುವೆ ‘ಇಶಿಮ ಒಹಶಿ’!

– ಕೆ.ವಿ.ಶಶಿದರ.

matsue

ಕೆಚ್ಚೆದೆಯ ವಾಹನ ಚಾಲಕರಿಗೆ ಇಲ್ಲಿದೆ ಒಂದು ದೊಡ್ಡ ಸವಾಲು. ಹಿಮಾಲಯ ಪರ‍್ವತದ ತಪ್ಪಲಿನ ದುರ‍್ಗಮ ಹಾದಿಯಲ್ಲಿನ ಸಣ್ಣ ಸಣ್ಣ ಕಡಿದಾದ ರಸ್ತೆಯಲ್ಲಿನ ತಿರುವುಗಳಲ್ಲಿ ನಿರಾಯಾಸವಾಗಿ ವಾಹನವನ್ನು ಡ್ರೈವ್ ಮಾಡಿರುವವರಿಗೆ, ಬಹಳ ಎತ್ತರದಿಂದ ಬಂಗೀ ಜಂಪ್ ಮಾಡಿರುವ ಗಂಡೆದೆಯ ಬಂಟರಿಗೆ, ಕಲ್ಲುಗಳಿಂದ ಸುತ್ತುವರಿದ, ಬಿರುಸಿನಿಂದ ಹರಿಯುವ ನದಿಯಲ್ಲಿ ದೋಣಿಯನ್ನು ಚಲಾಯಿಸಿ ಸಡ್ಡು ಹೊಡೆದವರಿಗೆ ಇಲ್ಲಿದೆ ಸವಾಲು. ಹೆದರದೆ, ಬೆದರದೆ, ಬೆವರು ಹರಿಸದೆ ಜಪಾನಿನ ಇಶಿಮ ಒಹಶಿ ಸೇತುವೆಯ ಅತ್ಯಂತ ಕಡಿದಾದ ಇಳಿಜಾರಿನಲ್ಲಿ ವಾಹನವನ್ನು ಚಲಾಯಿಸುವ ಪಂತಾಹ್ವಾನ. ಈ ಪಂತಾಹ್ವಾನವನ್ನು ಸ್ವೀಕರಿಸಿ ಜಯಗಳಿಸಿದ ಚಾಲಕರು ಬೆರಳೆಣಿಕೆಯಶ್ಟು ಮಾತ್ರ. ಅವರೇ ನಿಜವಾದ ದೈರ‍್ಯಶಾಲಿಗಳು.

ಜಪಾನಿನ ಇಶಿಮ ಒಹಶಿ ಸೇತುವೆ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಹಾಗೂ ಅತ್ಯಂತ ಕಡಿದಾದ ಇಳಿಜಾರನ್ನು ಹೊಂದಿರುವ ಸೇತುವೆ ಎಂದು ಹೆಸರುವಾಸಿಯಾಗಿದೆ. ದೂರದಿಂದ ನೋಡಿದಲ್ಲಿ ನೆಲಕ್ಕೆ ಲಂಬವಾಗಿರುವಂತೆ ಕಾಣುವ ಇದನ್ನು ನಕೂಮಿ ಲೇಕ್‍ಗೆ ಅಡ್ಡವಾಗಿ ನಿರ‍್ಮಿಸಲಾಗಿದೆ. ಮ್ಯಾಟ್ಸು ಶಿಮನೆ ಹಾಗೂ ಸಕೈಮಿನಾಟೊ ಟೊಟ್ಟೊರಿ ನಗರಗಳಿಗೆ ಸಂಪರ‍್ಕ ಕಲ್ಪಿಸುವ ಸೇತುವೆಯಾಗಿದೆ ಇದು. ಇದರಲ್ಲಿ ವಾಹನಗಳ ಓಡಾಟಕ್ಕೆ ಎರಡು ಬೇರೆ ಬೇರೆ ಲೇನ್‍ಗಳಿವೆ.

ಜಪಾನಿ ಬಾಶೆಯಲ್ಲಿ ಒಹಶಿ ಎಂದರೆ ‘ದೊಡ್ಡ ಸೇತುವೆ’ ಎಂಬರ‍್ತ ಬರುತ್ತದೆ. ಹಿಂದೆ ಇದೇ ಎರಡು ಪಟ್ಟಣಗಳನ್ನು ಸಂಪರ‍್ಕಿಸುತ್ತಿದ್ದ ಸೇತುವೆಗೆ ಹೋಲಿಸಿದಲ್ಲಿ ಇಶಿಮ ಒಹಶಿ ನಿಜವಾಗಿಯೂ ದೊಡ್ಡ ಸೇತುವೆಯೇ. ಕಾಂಕ್ರೀಟ್‍ನಿಂದ ನಿರ‍್ಮಿಸಿರುವ ಈ ಸೇತುವೆ ಅಂದಾಜು ಒಂದು ಮೈಲಿ ಉದ್ದವಿದ್ದು 12 ಮೀಟರ್ ಅಗಲವಿದೆ. ಈ ಸೇತುವೆಯ ಅಡಿಯಲ್ಲಿ ಹಡಗುಗಳು ಸಲೀಸಾಗಿ ಓಡಾಡಲು ಅನುಕೂಲವಾಗುವಂತೆ ನಿರ‍್ಮಿಸಲಾಗಿದೆ. ಆದ್ದರಿಂದ ಇದು ಜಪಾನಿನಲ್ಲಿ ಅತಿ ದೊಡ್ಡ ಕಮಾನಿನಾಕಾರದ ಕಾಂಕ್ರೀಟ್ ರಚನೆಯ ಸೇತುವೆ ಎಂಬ ಕ್ಯಾತಿಯನ್ನೂ ಪಡೆದಿದೆ.

ಇಶಿಮ ಒಹಶಿ ಸೇತುವೆ ನಿರ‍್ಮಾಣವನ್ನು 1997ರಲ್ಲಿ ಪ್ರಾರಂಬಿಸಿದ್ದು 2004ರಲ್ಲಿ ಸಾರ‍್ವಜನಿಕರಿಗೆ ತೆರೆಯಲಾಯಿತು. ಇದೀಗ ಇದು ಪ್ರವಾಸಿಗರ ಮುಕ್ಯ ತಾಣವಾಗಿದೆ. ಇದರ ಇಳಿಜಾರನಲ್ಲಿ ಜಾರಿ ರೋಮಾಂಚನವನ್ನು ಹಂಚಿಕೊಳ್ಳಬಯಸುವವರಿಗೆ ಇಲ್ಲಿ ತಡೆಯಿದೆ. ಈ ಸೇತುವೆ ಮೇಲೆ 40 ಕಿ.ಮಿ.ಗಿಂತ ಹೆಚ್ಚಿನ ವೇಗದಲ್ಲಿ ವಾಹನವನ್ನು ಚಲಿಸುವಂತಿಲ್ಲ. ಈ ವೇಗ ಮಿತಿ ಬಹಳಶ್ಟು ಪ್ರವಾಸಿಗರ ಆಸೆಗೆ ತಣ್ಣೀರೆರೆಚಿದಂತೆ ಆಗಿರುವುದಂತೂ ನಿಜ.

ಇಶಿಮ ಒಹಶಿ ಸೇತುವೆಯ ಅಂಕಿ ಅಂಶದ ವಿವರ: ಈ ಸೇತುವೆಯ ಉದ್ದ 1446 ಮೀಟರ್. ನೀರಿನ ಮೇಲ್ಮಯ್‍ನಿಂದ ಇದರ ಎತ್ತರ 44.7 ಮೀಟರ್ ಇರುವುದರಿಂದ ಬಾರಿ ಗಾತ್ರದ ಹಡಗುಗಳೂ ಸಹ ಆರಾಮವಾಗಿ ಇದರಡಿಯಲ್ಲಿ ಚಲಿಸಬಹುದು. ಮ್ಯಾಟ್ಸು ಶಿಮನೆ ಕಡೆಯಿಂದ 6.1% ಇಳಿಜಾರಿದ್ದು, ಸಕೈಮಿನಾಟೊ ಟೊಟ್ಟೊರಿ ಕಡೆಯಿಂದ 5.1% ಇಳಿಜಾರಿದೆ.

ಈ ಸೇತುವೆಯ ಇಳಿಜಾರಿನ ವಿವರವನ್ನು ಕಂಡುಹಿಡಿಯುವುದು ಹೀಗೆ:

ಇಳಿಜಾರು = (ಇಳಿಜಾರಿನ ಎತ್ತರ / ಇಳಿಜಾರಿನ ಉದ್ದ)*100. ನೆಲದಿಂದ ಇಳಿಜಾರಿನ ಎತ್ತರ 3 ಅಡಿ ಇದ್ದಲ್ಲಿ ಹಾಗೂ ಇಳಿಜಾರಿನ ಉದ್ದ 30 ಅಡಿ ಇದ್ದಲ್ಲಿ, ಇಳಿಜಾರು 0.1 ಆಗುತ್ತದೆ. ಇದನ್ನು 100 ರಿಂದ ಗುಣಿಸಿದಲ್ಲಿ 10 ಆಗುತ್ತದೆ. ಆಗ ಇಳಿಜಾರು 10% ಆಗುತ್ತದೆ. ಇಳಿಜಾರಿನ ಶೇಕಡ ಕಡಿಮೆಯಾದಶ್ಟೂ ಅದರ ಉದ್ದ ಹೆಚ್ಚಾಗಿ, ಎತ್ತರ ಕಡಿಮೆಯಾಗಿ ವಾಹನಗಳ ಓಡಾಟಕ್ಕೆ ಸಲೀಸಾಗುತ್ತದೆ. ಇಳಿಜಾರಿನ ಶೇಕಡ ಹೆಚ್ಚಾದಶ್ಟೂ ಉದ್ದ ಕಡಿಮೆಯಾಗಿ ಎತ್ತರ ಹೆಚ್ಚಾಗಿ ವಾಹನ ಓಡಾಟ ತ್ರಾಸಾಗುತ್ತದೆ.

2ನೋಡಲು ಏಕಿಶ್ಟು ಬಯಾನಕ? ದೂರದಿಂದ ನೋಡಿದರೆ ಈ ಬ್ರಿಡ್ಜ್ ನೇರಕೋನದಲ್ಲಿದ್ದಂತೆ ಕಾಣುತ್ತದೆ. ಮೇಲೆ ಹತ್ತುತ್ತಿರುವ ವಾಹನಗಳು ಎಲ್ಲಿ ಹಿಂದಕ್ಕೆ ಬರುತ್ತವೋ ಎಂಬಂತೆ ಹಾಗೂ ಇಳಿಯುತ್ತಿರುವ ವಾಹನಗಳು ಎಲ್ಲಿ ಜಾರುತ್ತವೋ ಎಂಬಂತೆ ಕಾಣುತ್ತವೆ. ನಿಜವಾಗಿಲ್ಲದ್ದು ಮನಸ್ಸಿಗೆ ಇರುವಂತೆ ಕಾಣುವ ಪರಿಗೆ ‘ಆಪ್ಟಿಕಲ್ ಇಲ್ಯೂಶನ್’ (ನೋಟದ ಬ್ರಮೆ) ಎನ್ನುತ್ತಾರೆ. ಹಾಗಾಗಿ ಹೆಚ್ಚು ಜನ ಚಾಲಕರು ಇದರ ಮೇಲೆ ವಾಹನವನ್ನು ಚಲಾಯಿಸಲು ಮೊದಲು ಹಿಂಜರಿಯುತ್ತಾರೆ. ಒಮ್ಮೆ ಓಡಾಡಿದಲ್ಲಿ ಬ್ರಮೆಯೂ ಮಾಯ, ಹೆದರಿಕೆಯೂ ಮಾಯ.

ಮ್ಯಾಟ್ಸು ಶಿಮನೆ ನಗರದಲ್ಲಿನ ಜನಸಂಕ್ಯೆ 2,00,000. ಇದು ಹೊನ್ಶು ದ್ವೀಪದಲ್ಲಿದೆ. ಮಳೆ ಮತ್ತು ತೇವದ ವಾತಾವರಣಕ್ಕೆ ಹೆಸರುವಾಸಿಯಾದ ಹಿನ್ನೆಲೆಯಲ್ಲಿ ಮ್ಯಾಟ್ಸು ಶಿಮನೆ ನಗರವನ್ನು ‘ವಾಟರ್ ಸಿಟಿ’ ಎಂದು ಕರೆಯಲಾಗುತ್ತದೆ. ಇಶಿಮ ಒಹಶಿ ಸೇತುವೆಯ ನಿರ‍್ಮಾಣಕ್ಕೂ ಮುನ್ನ ಇಲ್ಲಿ ಹಳೆಯ ಸೇತುವೆಯಿತ್ತು. ಆ ಸೇತುವೆಯ ಮೇಲೆ ಹೋಗುವ ವಾಹನಗಳು ಹಡಗು ಬಂದಾಗ ನಿಂತು ಮುಂದೆ ಮತ್ತೆ ಸಾಗಬೇಕಾದ ಪರಿಸ್ತಿತಿಯಿತ್ತು. ಇದರೊಂದಿಗೆ ಹೆಚ್ಚಿನ ತೂಕದ ಅಂದರೆ 14 ಟನ್‍ಗಳಿಗೂ ಅದಿಕ ಬಾರದ ವಾಹನಗಳ ಚಾಲನೆಗೆ ನಿರ‍್ಬಂದವಿತ್ತು. ಇಶಿಮ ಒಹಶಿ ಸೇತುವೆಯ ನಿರ‍್ಮಾಣದ ನಂತರ ಅಂದರೆ 2004ರ ಬಳಿಕ ಎಲ್ಲಾ ರೀತಿಯ ವಾಹನಗಳಿಗೆ ಇದು ಮುಕ್ತವಾಯಿತು. ಇದರ ಇಳಿಜಾರನ್ನು ಕಂಡ ಬಹಳಶ್ಟು ವಾಹನ ಚಾಲಕರು ಇದರ ಉಪಯೋಗವನ್ನು ಪಡೆಯಲು ಪ್ರಾರಂಬದಲ್ಲಿ ಹಿಂಜರಿದಿದ್ದರು. ಕ್ರಮೇಣ ಎಲ್ಲಾ ಸ್ತರದ ವಾಹನಗಳೂ ನಿರಾತಂಕವಾಗಿ ಚಲಿಸಲಾರಂಬಿಸಿದ ನಂತರ ಇದರ ಬಳಕೆ ಸಲೀಸಾಯಿತು.

2013ರ ಕೊನೆಯಲ್ಲಿ ಜಪಾನಿನ ಕಾರು ತಯಾರಕರಾದ ಡೈಹಟ್ಸು ಕಂಪನಿಯವರು ತಾವು ತಯಾರಿಸಿದ ‘ಟಾಂಟೊ ಕಸ್ಟಮ್’ ಕಾರಿನ ಕ್ಶಮತೆಯನ್ನು ಓರಗೆ ಹಚ್ಚಿದ್ದು ಇಶಿಮ ಒಹಶಿ ಸೇತುವೆಯ ಮೇಲೆ. ಅಲ್ಲಿಂದ ಮುಂದೆ ಇದು ಬೇರೆ ಬೇರೆ ಕಾರು ತಯಾರಕರ ಕಾರಿನ ಕ್ಶಮತೆಯನ್ನು ಪರೀಕ್ಶಿಸುವ ತಾಣವಾಗಿ ಪರಿವರ‍್ತಿತವಾಗಿದೆ. ಇಲ್ಲಿ ಸೈ ಎನಿಸಿಕೊಂಡ ವಾಹನ ಮತ್ತಾವುದೇ ಸೇತುವೆಯನ್ನಾಗಲಿ ಬೆಟ್ಟ ಗುಡ್ಡಗಳನ್ನಾಗಲಿ ತ್ರಾಸಿಲ್ಲದೆ ಸರಾಗವಾಗಿ ಹತ್ತಿಳಿಯಬಲ್ಲದು ಎಂಬುದು ಸಾಮಾನ್ಯ ಅಬಿಪ್ರಾಯ. ಇದನ್ನೇ ಕಾರು ತಯಾರಕರು ತಮ್ಮ ಜಾಹೀರಾತಿಗೂ ಬಳಸಿಕೊಂಡಿದ್ದಾರೆ ಸಹ.

ಮಾನವನ ಎಲ್ಲಾ ತರಹದ ಕಲ್ಪನೆಗೆ ಸಾಕಾರ ನೀಡುವ ವಾಸ್ತು ಶಿಲ್ಪದ ಕೊಡುಗೆ ಜಗತ್ತಿಗೆ ಅಪಾರ. ಅನಾದಿ ಕಾಲದಿಂದ ನಡೆದು ಬಂದ ಈ ಸಂಸ್ಕ್ರುತಿಗೆ ತಾಜ್‍ಮಹಲ್ ಆಗಲಿ, ಪೀಸಾ ಗೋಪುರವಾಗಲಿ, ಪಿರಮಿಡ್‍ಗಳಾಗಲಿ ಪುಶ್ಟಿ ನೀಡುವ ಉದಾಹರಣೆಗಳು. ಆದುನಿಕ ಪ್ರಪಂಚದ ಬುರ‍್ಜ್ ಕಲೀಪಾ, ಚೀನಾದ ತ್ರೀ ಗಾರ‍್ಗಸ್ ಡ್ಯಾಮ್, ದುಬೈನ ಇನ್ಪಿನಿಟಿ ಟವರ್ ಸಹ ಈ ಗುಂಪಿಗೆ ಸೇರುತ್ತದೆ. ವಾಸ್ತು ಶಿಲ್ಪದ ಮೇರು ಸ್ರುಶ್ಟಿಯಲ್ಲಿ ಇವುಗಳಿಗೆ ಸರಿಸಮನಾಗಿ ನಿಲ್ಲುವ ಬ್ರಿಡ್ಜ್ ಇಶಿಮ ಒಹಶಿ ಎಂದರೆ ತಪ್ಪಾಗಲಾರದು.

(ಚಿತ್ರ ಸೆಲೆ: viajestic.atresmedia.com, industrytap.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: