ಕ್ವಾರಿಯೊಳಗೆ ‘ಸೆವೆನ್ ಸ್ಟಾ‍ರ್’ ಹೋಟೆಲ್

– .

ಶಾಂಗೈನಿಂದ ಸುಮಾರು 30 ಕಿಲೋಮೀಟ‍ರ್ ದೂರದ ಸಾಂಗ್ಜಿಯಾಂಗ್ ಜಿಲ್ಲೆಯಲ್ಲಿರುವ ಇಂಟ‍ರ್ ಕಾಂಟಿನೆಂಟಲ್ ಶಾಂಗೈ ವಂಡ‍ರ್ ಲ್ಯಾಂಡ್, ಹೆಸರು ಮಾಡಿರುವುದು ವಿಶ್ವದ ಅತ್ಯಂತ ಆಳವಾದ ಸೆವೆನ್ ಸ್ಟಾ‍ರ್ ಹೋಟೆಲ್ ಎಂದು. ಈ ಐಶಾರಾಮಿ ಹೋಟೆಲ್ ಅನ್ನು ಶೇಶನ್ ನ್ಯಾಶನಲ್ ಪಾರ‍್ಕಿನಲ್ಲಿರುವ ಕೈಬಿಡಲ್ಪಟ್ಟ ಕ್ವಾರಿಯಲ್ಲಿ ಕಟ್ಟಲಾಗಿದೆ. ಈ ಐಶಾರಾಮಿ ಹೋಟೆಲಿನಲ್ಲಿರುವ ಹದಿನೆಂಟೂ ಅಂತಸ್ತುಗಳು ನೆಲದ ಮೇಲ್ಮೈ ಮಟ್ಟಕ್ಕಿಂತ ಕೆಳಗಿದೆ ಎಂದರೆ, ಆ ಕ್ವಾರಿಯ ಆಳವನ್ನು ಊಹಿಸಿಕೊಳ್ಳಬಹುದು.

2018ನೇ ಅಕ್ಟೋಬ‍ರ್ ತಿಂಗಳಿನಲ್ಲಿ ಸಾರ‍್ವಜನಿಕರಿಗೆ ತೆರೆದುಕೊಂಡ ಈ ಐಶಾರಾಮಿ ಹೋಟೆಲಿನ ಹಿಂದೆ ಐದು ಸಾವಿರಕ್ಕೂ ಹೆಚ್ಚು ಜನರ ಹತ್ತು ವರ‍್ಶಗಳ ಪರಿಶ್ರಮ ಅಡಗಿದೆ. ಇದರ ಪ್ರಮುಕ ಶಿಲ್ಪಿ, ದುಬೈನಲ್ಲಿರುವ ಬುರ‍್ಜ್ ಆಲ್ ಅರಬ್ ಹೋಟೆಲಿನ ನಿರ‍್ಮಾಣಕ್ಕೆ ಕಾರಣಕರ‍್ತರಾದ, ಬ್ರಿಟೀಶ್ ಆಟ್ಕಿನ್ಸ್ ಸಂಸ್ತೆಯ ಮಾರ‍್ಟಿನ್ ಜೋಚ್ಮನ್. ಇವರ ಮಾರ‍್ಗದರ‍್ಶನದಲ್ಲೇ ಈ ಹೋಟೆಲಿನ ಪರಿಕಲ್ಪನೆ ಮತ್ತು ಮುಂಬಾಗವನ್ನು ವಿನ್ಯಾಸಗೊಳಿಸಲಾಯಿತು. ಈ ಯೋಜನೆ ಮೊದಲಾದಾಗ ಜೋಚ್ಮನ್, ಬ್ರಿಟೀಶ್ ಆಟ್ಕಿನ್ಸ್ ಸಂಸ್ತೆಯ ಜೊತೆಗಿದ್ದರು. ನಂತರದ ದಿನಗಳಲ್ಲಿ ಆ ಸಂಸ್ತೆಯನ್ನು ತೊರೆದು ತಮ್ಮದೇ ಆದ ಸಂಸ್ತೆಯನ್ನು ಸ್ತಾಪಿಸಿಕೊಂಡು ಈ ಹೋಟೆಲಿನ ನಿರ‍್ಮಾಣ ಕಾರ‍್ಯದಲ್ಲಿ ಮುಂದುವರೆದರು.

‘ಡೀಪ್ ಪಿಟ್ ಹೋಟೆಲ್’ ಎಂದೂ ಕರೆಯಲ್ಪಡುವ ಈ ಹೋಟೆಲಿರುವುದು 88 ಮೀಟ‍ರ್ ಆಳವಾದ ಕ್ವಾರಿಯಲ್ಲಿ. ಇದರಲ್ಲಿ 18 ಮಹಡಿಗಳಿದ್ದು ಒಟ್ಟಾರೆ 380 ಕೋಣೆಗಳಿವೆ. ನೆಲದ ಮಟ್ಟಕ್ಕಿಂತ ಕೆಳಗಿರುವ ಈ ಹದಿನೆಂಟು ಮಹಡಿಗಳಲ್ಲಿ ಎರಡು ಮಹಡಿಗಳು ಕ್ವಾರಿಯ ತಳದಲ್ಲಿರುವ ಹತ್ತು ಮೀಟ‍ರ್ ಆಳದ ನೀರಿನಲ್ಲಿ ಮುಳುಗಿವೆ. ಈ ಎರಡು ಮಹಡಿಗಳಲ್ಲಿ ಕೋಣೆಗಳು ಮತ್ತು ರೆಸ್ಟೋರೆಂಟ್ ಸೇರಿವೆ. ಕೋಣೆಗಳಿಂದ ಇಲ್ಲಿನ ಅಕ್ವೇರಿಯಂ ನೋಡಬಹುದು. ಈ ಐಶಾರಾಮಿ ಹೋಟೆಲಿನ ಮೇಲಿನ ಮಹಡಿಯಲ್ಲಿ ಈಜುಕೊಳ, ದೊಡ್ಡ ಕ್ರೀಡಾ ಕೇಂದ್ರ ಹಾಗೂ ಬೆರಗುಗೊಳಿಸುವ ಸ್ಪಾ ನೆಲೆಗೊಂಡಿದೆ. ತ್ರಿಲ್ ಬಯಸುವವರಿಗೆ ಇಲ್ಲಿ ಬಂಗೀ ಜಂಪಿಂಗ್, ರಾಕ್ ಕ್ಲೈಂಬಿಂಗ್ ರೀತಿಯ ಅನೇಕ ಸಾಹಸ ಚಟುವಟಿಕೆಗಳಿವೆ.

ಈ ಹೋಟೆಲ್ ಸಂಕೀರ‍್ಣದಲ್ಲಿನ ಅದ್ಬುತವಾದ ವಾಸ್ತುಶಿಲ್ಪದ ವೈಶಿಶ್ಟ್ಯವೆಂದರೆ ಹೋಟೆಲಿನ ಮದ್ಯದಲ್ಲಿ ನಿರ‍್ಮಾಣವಾಗಿರುವ ಗಾಜಿನ ಜಲಪಾತ. ಈ ಗಾಜಿನ ಜಲಪಾತವನ್ನು ನೋಡಲು ಹಾಗೂ ಸುತ್ತಮುತ್ತಲಿನ ನೈಸರ‍್ಗಿಕ ಸೌಂದರ‍್ಯವನ್ನು ಸವಿಯಲು ಪ್ರತಿಯೊಂದು ಕೋಣೆಗಳಿಗೂ ಬಾಲ್ಕನಿಗಳನ್ನು ಅಳವಡಿಸಲಾಗಿರುವುದು ವಿಶೇಶ. ಇಲ್ಲಿನ ಪರಿಸರ ಸ್ನೇಹಿ ಚಾವಣಿಯು ರೋಮಾಂಚಕವಾಗಿ ಮರಗಿಡಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ಸಂಪೂರ‍್ಣವಾಗಿ ಹುಲ್ಲಿನ ಸುಂದರವಾದ ಪದರದಿಂದ ಮುಚ್ಚಲ್ಪಟ್ಟಿದೆ. ಇಡೀ ಹೋಟೆಲ್ ದೈನಂದಿನ ಅಗತ್ಯಗಳನ್ನು ಪೂರೈಸಲು ಬೇಕಾಗುವ ವಿದ್ಯುತ್ ಗಾಗಿ ಸೌರಶಕ್ತಿಯನ್ನು ಉತ್ಪಾದಿಸುವ ವ್ಯವಸ್ತೆ ಸಹ ಇಲ್ಲಿ ಮಾಡಲಾಗಿದೆ. ಇಂಟ‍ರ್ ಕಾಂಟಿನೆಂಟಲ್ ಶಾಂಗೈ ವಂಡ‍ರ್ ಲ್ಯಾಂಡ್ ಐಶರಾಮಿ ಹೋಟೆಲಿನಲ್ಲಿ ತಂಗಲು ಒಂದು ದಿನಕ್ಕೆ 490 ಡಾಲ‍ರ್ ಗಳನ್ನು ಕರ‍್ಚು ಮಾಡಬೇಕಾಗುತ್ತದೆ. ಅಂದರೆ ಅಂದಾಜು 39,000 ರೂಪಾಯಿಗಳು. ಈ ದರ ಈ ಹೋಟೆಲ್ ಪ್ರಾರಂಬವಾದ (2018) ವರ‍್ಶದ್ದು. ಈಗ ಮೇಲ್ಮುಕವಾಗಿ ಬದಲಾಗಿರಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: mybestplace.com, forbes.com, mymodernmet.com, ihg.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks