ವಿಶ್ವದ ಅತಿದೊಡ್ಡ ಕ್ರುತಕ ಉಪ್ಪು ಪರ‍್ವತ – ಮಾಂಟೆ ಕಾಳಿ
– ಕೆ.ವಿ.ಶಶಿದರ.
ವಿಶ್ವದ ಅತಿದೊಡ್ಡ ಕ್ರುತಕ ಉಪ್ಪಿನ ಪರ‍್ವತ, ಮಾಂಟೆ ಕಾಲಿ ಇರುವುದು ಮದ್ಯ ಜರ‍್ಮನಿಯ ಹೆರಿಂಗೆನ್ ಪಟ್ಟಣದ ಬಳಿ. ಇದಕ್ಕೆ ಕಾರಣ 1903 ರಲ್ಲಿ ಮೊದಲಾದ ಪೊಟ್ಯಾಶ್ ಗಣಿಗಾರಿಕೆ. ಮೊದಮೊದಲು ಪೊಟ್ಯಾಶನ್ನು ಸೋಪು ಮತ್ತು ಗಾಜಿನ ಉತ್ಪನ್ನಗಳ ತಯಾರಿಕೆಯಲ್ಲಿ ಮಾತ್ರ ಬಳಸಲಾಗುತ್ತಿತ್ತು. ಇಂದಿನ ದಿನದಲ್ಲಿ ಇದನ್ನು ರಸಗೊಬ್ಬರ, ಸಂಶ್ಲೇಶಿತ ರಬ್ಬರ್ ಮತ್ತು ಹಲವು ಔಶದಿಗಳ ತಯಾರಿಕೆಯಲ್ಲಿ ಪ್ರಮುಕ ಕಚ್ಚಾ ವಸ್ತುವಾಗಿ ಬಳಸಲ್ಪಡುತ್ತಿದೆ. ಇದರಿಂದಾಗಿ ಪೊಟ್ಯಾಶ್ನ ಅಗತ್ಯ ಹೆಚ್ಚಾಗಿ, ಈ ಲವಣಗಳ ಗಣಿಗಾರಿಕೆ ತೀವ್ರಗೊಂಡಿದೆ. ಬೂಮಿಯಲ್ಲಿ ದೊರಕುವ ಕಚ್ಚಾ ವಸ್ತುವಿನಿಂದ ಪೊಟ್ಯಾಶ್ ಬೇರ‍್ಪಡಿಸುವಾಗ ಅತಿ ಹೆಚ್ಚು ಪ್ರಮಾಣದಲ್ಲಿ ಸೋಡಿಯಂ ಕ್ಲೋರೈಡ್ ಲವಣವು ಹೊರಬರುತ್ತದೆ. ಹೀಗೆ ಉಪ ಉತ್ಪನ್ನವಾಗಿ ಬರುವ ಸೋಡಿಯಂ ಕ್ಲೋರೈಡ್ (ಅಡುಗೆ ಉಪ್ಪು) ಅನ್ನು ಶೇಕರಿಸಿಡಲು ಸ್ತಳದ ಅಗತ್ಯವಿತ್ತು. ಹೆರಿಂಗೆನ್ ಪಟ್ಟಣದ ಸಮೀಪ ಪೊಟ್ಯಾಶ್ ಗಣಿಗಾರಿಕೆ ನಡೆಸುವ ಕಂಪನಿಗಳು, ಉಪ-ಉತ್ಪನ್ನವಾದ ಅಡುಗೆ ಉಪ್ಪನ್ನು ಅಲ್ಲಿಂದ ಕೆಲವು ಮೈಲಿಗಳಶ್ಟು ದೂರದಲ್ಲಿ ಸುರಿಯಲು ಪ್ರಾರಂಬಿಸಿದವು. ಕೆಲವೇ ವರ‍್ಶಗಳಲ್ಲಿ ದೊಡ್ಡ ಉಪ್ಪಿನ ಪರ‍್ವತಗಳು ನಿರ‍್ಮಾಣವಾದವು. ಅಲ್ಲಿನ ಸ್ತಳೀಯರು ಈ ರೀತಿಯಲ್ಲಿ ತಲೆ ಎತ್ತಿದ ದೊಡ್ಡ ಉಪ್ಪಿನ ಪರ‍್ವತಗಳನ್ನು’ಮಾಂಟೆ ಕಾಲಿ’ ಅತವಾ ‘ಕಾಲಿಮಂಜಾರೋ’ ಎಂದು ಗುರುತಿಸಲು ಪ್ರಾರಂಬಿಸಿದರು. (ಪೋಟ್ಯಾಶ್ ಅನ್ನು ಜರ‍್ಮನ್ ಬಾಶೆಯಲ್ಲಿ ಕಾಲಿಸಾಲ್ಜ್ ಎನ್ನುತ್ತಾರೆ).
ಹೆರಿಂಗೆನ್ ಪ್ರದೇಶದಲ್ಲಿ ಸುರಿಯಲಾಗುತ್ತಿದ್ದ ಉಪ್ಪು 2017ರ ಹೊತ್ತಿಗೆ ಸಮುದ್ರ ಮಟ್ಟದಿಂದ 530 ಮೀಟರ್ (1740 ಅಡಿ) ಎತ್ತರಕ್ಕೆ ಬೆಳೆದು ನಿಂತಿತ್ತು. ಇದರೊಂದಿಗೆ ಸರಿ ಸುಮಾರು 100 ಹೆಕ್ಟೇರಿಗಿಂತಲೂ ಹೆಚ್ಚಿನ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಹೆರಿಂಗೆನ್ ಪ್ರದೇಶದ ಯಾವ ಜಾಗದಿಂದಲಾದರೂ ಇದನ್ನು ನೋಡಬಹುದು. ಬಿಳಿ ಹಿಮಚ್ಚಾದಿತ ಪರ‍್ವತದಂತೆ ಕಾಣುವ ಇದು ಪ್ರವಾಸಿ ಆಕರ‍್ಶಣೆಯಾಗಿದೆ. ಈ ದೈತ್ಯ ಉಪ್ಪಿನ ಪರ‍್ವತವನ್ನು ಹತ್ತಲು ಕಡಿಮೆ ಎಂದರೂ 15 ನಿಮಿಶಗಳ ಅವಶ್ಯಕತೆಯಿದೆ. ಒಮ್ಮೆ ಮೇಲೆ ತಲುಪಿದರೆ, ಮೇಲಿನ ಸಮತಟ್ಟಾದ ಪ್ರದೇಶದಲ್ಲಿ ನಿಂತು ನೋಡಿದರೆ ಸುತ್ತ ಮುತ್ತಲಿನ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ. ಮೇಲಿನಿಂದ ವೆರ‍್ರಾ ಕಣಿವೆ, ರೀನ್ ಮತ್ತು ತುರಿಂಗಿಯನ್ ಅರಣ್ಯ ಪ್ರದೇಶದ ಸಂಪೂರ‍್ಣ ನೋಟವನ್ನು ನಮ್ಮದಾಗಿಸಿಕೊಳ್ಳಬಹುದು.
ಈ ಉಪ್ಪಿನ ಪರ‍್ವತದಲ್ಲಿ ಎಶ್ಟು ಪ್ರಮಾಣದ ಉಪ್ಪು ಶೇಕರಣೆಯಾಗಿದೆ? ಎಂದು ಅಂದಾಜು ಮಾಡುವುದು ಬಹಳ ಕಶ್ಟದ ಕೆಲಸ. ಈ ಉಪ್ಪಿನ ಪರ‍್ವತದಲ್ಲಿ ಸರಿ ಸುಮಾರು 236 ಮಿಲಿಯನ್ ಟನ್ ದ್ರವ್ಯರಾಶಿ ಇರಬಹುದು ಎಂದು ಅಂದಾಜಿಸಲಾಗಿದೆ. ಇಂದಿನ ದಿನಗಳಲ್ಲಿ ಪ್ರತಿ ಗಂಟೆಗೆ 1000 ಟನ್ ಗಳಿಗಿಂತಲೂ ಹೆಚ್ಚಿನ ಪ್ರಮಾಣ ಇದರಲ್ಲಿ ಸೇರ‍್ಪಡೆಯಾಗುತ್ತಿದೆ. ಈ ಗಾತ್ರದ ಉಪ್ಪಿನ ಪರ‍್ವತ ನಿರ‍್ಮಾಣವಾಗಿದ್ದರ ಹಿನ್ನೆಲೆಯಲ್ಲಿ, ಇದರಿಂದಾಗಿ ಪರಿಸರಕ್ಕೆ ಹಾನಿಯಾಗಿದೆಯೇ? ಎಂದರೆ ಉತ್ತರ ಹೌದು. ಈ ಉಪ್ಪಿನ ಪರ‍್ವತಗಳ ಮೇಲೆ ಬೀಳುವ ಮಳೆ ಹಾಗೂ ಗಾಳಿಯಲ್ಲಿನ ತೇವವನ್ನು ಹೀರಿಕೊಂಡ ನೀರು ಸಾಕಶ್ಟು ಉಪ್ಪನ್ನು ತನ್ನೊಂದಿಗೆ ತೆಗೆದುಕೊಂಡು ಹರಿದು ಹೋಗುವುದರಿಂದ, ಉಪ್ಪಿನ ಪರ‍್ವತದ ಸುತ್ತಲಿನ ಪ್ರದೇಶವೆಲ್ಲಾ ಬರಡಾಗಿದೆ. ಪಕ್ಕದಲ್ಲೇ ಹರಿಯುವ ವೆರಾ ನದಿಯ ನೀರು ಸಹ ಉಪ್ಪುಪ್ಪಾಗಿದೆ. ಈ ಪ್ರದೇಶದ ಅಂತರ‍್ಜಲದ ನೀರೂ ಸಹ ಉಪ್ಪಾಗಿದೆ. ಇಲ್ಲಿ ಉಪ್ಪಿನ ಪರ‍್ವತ ಬೆಳೆಯುವ ಮುನ್ನ ವೆರಾ ನದಿಯು 60 ರಿಂದ 100 ಪ್ರಬೇದಗಳ ಜಲಚರಗಳಿಗೆ ಆಶ್ರಯ ತಾಣವಾಗಿತ್ತು. ನದಿಯ ನೀರು ಉಪ್ಪಾಗುತ್ತಾ ಹೋದ ಹಿನ್ನೆಲೆಯಲ್ಲಿ ಜಲಚರಗಳ ಸಂಕ್ಯೆ ಇಳಿಮುಕವಾಗಿ ಈಗ ಅಲ್ಲಿ ಕೇವಲ ಒಂದೆರೆಡು ಪ್ರಬೇದಗಳು ಮಾತ್ರ ಉಳಿದಿವೆ.
ಈ ಉಪ್ಪಿನ ಪರ‍್ವತದಿಂದ ಪರಿಸರಕ್ಕೆ ವಿಪತ್ತು ಒದಗಿಬಂದಿರುವುದಂತೂ ನಿಜ. ಸದ್ಯದಲ್ಲಿ ಇದಕ್ಕೆ ಪರಿಹಾರವೇ ಕಾಣುತ್ತಿಲ್ಲ. ಏಕೆಂದರೆ ಪೊಟ್ಯಾಶ್ ಉದ್ಯಮ ಈ ಪ್ರದೇಶದಲ್ಲಿ ಅಗಾದವಾಗಿ ಬೆಳೆದು ನಿಂತಿದೆ. ಅದರಂತೆ ಪೊಟ್ಯಾಶ್ ನ ಬೇಡಿಕೆ ಸಹ. ಇಲ್ಲಿ ಪೊಟ್ಯಾಶ್ ಗಣಿಗಾರಿಕೆ ಮಾಡುತ್ತಿರುವ ಕಾಲಿ ಅಂಡ್ ಸಾಲ್ಟ್ ಕಂಪನಿಯ ಪರವಾನಗಿಯನ್ನು 2060ರ ವರೆವಿಗೂ ನವೀಕರಿಸಲಾಗಿದೆ. ಇದರೊಂದಿಗೆ ಉಪ್ಪಿನ ಪರ‍್ವತವನ್ನು ವಿಸ್ತರಿಸಲು ಮತ್ತೆ 25 ಹೆಕ್ಟೇರುಗಳಶ್ಟು ಪ್ರದೇಶವನ್ನು ನೀಡುವಂತೆ ಕಂಪನಿಯು ಕೋರಿದ್ದನ್ನು 2020ರಲ್ಲೇ ಪುರಸ್ಕರಿಸಲಾಗಿದೆ. ಕಾಲಿ ಅಂಡ್ ಸಾಲ್ಟ್ ಕಂಪನಿಯ ಉತ್ಪನ್ನಗಳಲ್ಲಿ ಉಪವಸ್ತುವಾದ ಉಪ್ಪನ್ನು 1.5 ಕಿಲೋಮೀಟರ್ ಉದ್ದದ ಕನ್ವೇಯರ್ ಗಳ ಮೂಲಕ ಈ ದಿಬ್ಬಗಳ ಮೇಲೆ ಸುರಿಯುವ ವ್ಯವಸ್ತೆಯನ್ನು ಕಂಪನಿ ಮಾಡಿದೆ. ಪ್ರತಿ ಟನ್ ಪೊಟ್ಯಾಶ್ ಉತ್ಪಾದನೆಯಾದಲ್ಲಿ ಹಲವಾರು ಟನ್ನುಗಳಶ್ಟು ಉಪ್ಪು ಬೈ ಪ್ರಾಡಕ್ಟ್ ಆಗಿ ಹೊರಬರುತ್ತದೆ. ಹಾಗಾಗಿಯೇ ಈ ಮಾನವ ನಿರ‍್ಮಿತ ಕ್ರುತಕ ಬಿಳಿ ಪರ‍್ವತ, ಮಾಂಟೆ ಕಾಲಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: amusingplanet.com, dailymail.co.uk, djaunter.com, wikipedia.org )
ಧನ್ಯವಾದಗಳು ಈ ಬರಹವನ್ನು ಪ್ರಕಟಿಸಿದ್ದಕ್ಕೆ 🙏