ಸಾಮಾಜಿಕ ಜಾಲ ತಾಣ ತಲೆ ಚಿಟ್ಟು ಹಿಡಿಸಿದೆಯೇ?
ಈ ಮೊಬೈಲ್ ಪೋನ್, ಲ್ಯಾಪ್ ಟಾಪ್, ಟೆಲಿವಿಜನ್, ಜನ ಸಾಮಾನ್ಯರ ಕೈಗೆ ಎಟುಕುವ ಮೊದಲು ಪತ್ರಿಕೆಗಳು, ಕತೆ ಕಾದಂಬರಿ ಪುಸ್ತಕಗಳು, ಬಾಲ ಸಾಹಿತ್ಯ ಪುಸ್ತಕಗಳು, ಮ್ಯಾಗಜೀನ್ ಗಳು ತುಂಬಾ ಉಚ್ಚ್ರಾಯ ಸ್ತಿತಿಯಲ್ಲಿದ್ದು ಓದುಗರ ಅಚ್ಚುಮೆಚ್ಚಾಗಿದ್ದವು. ಮೊಬೈಲ್, ಲ್ಯಾಪ್‌ಟಾಪ್, ಟೆಲಿವಿಶನ್ ಮುಂಚೂಣಿಗೆ ಬಂದಾಗ ಓದುವ ಪತ್ರಿಕೆ, ಕತೆ, ಕಾದಂಬರಿ, ಮ್ಯಾಗಜೀನ್ ಗಳು ಹಿಂದೆ ಸರಿಯಲ್ಪಟ್ಟು ಓದುಗರ ಆಸಕ್ತಿಯನ್ನು ಕಸಿದುಕೊಂಡವು.
ಕೈಯೊಳಗಿನ ಅರಗಿಣಿ ಮೊಬೈಲ್ಲಿನ ಟಚ್ ಸ್ಕ್ರೀನ್ ಬರುತಿದ್ದಂತೆ ಬೆರಳಲ್ಲಿ ಕುಕ್ಕಿ ಬರೆಯುವ ಕೀಲಿಮಣೆ ಜನಪ್ರಿಯವಾಯ್ತು. ಬರಹ ಪ್ರಿಯರಿಗೆ, ಕತೆ ಕವನ ರಚನಕಾರರಿಗೆ ಸಾಹಿತ್ಯಾಸಕ್ತರಿಗೆ ಕುಂತಲ್ಲಿ ನಿಂತಲ್ಲಿ ಅಕ್ಶರಗಳು ಕುಕ್ಕಿ ಸಾಹಿತ್ಯ, ಕತೆ, ಕವನ ರಚನೆಗೆ ಸುಲಬವಾಯ್ತು. ಇವುಗಳ ಪ್ರಕಟಣೆಗೆ ಸಾಹಿತ್ಯಾದಾರಿತ ಅಂತರ‍್ಜಾಲ ಗುಂಪುಗಳು ಹುಟ್ಟಿಕೊಂಡು, ಹೆಚ್ಚು ಹೆಚ್ಚು ಬರಹಗಾರರನ್ನು ಬರೆಯಲು ಉತ್ತೇಜಿಸಿತು. ಇದೊಂದು ಸ್ರುಜನಾತ್ಮಕ ಕೆಲಸವಾದರೂ, ಈ ಅಂತರ‍್ಜಾಲ ಸಾಹಿತ್ಯ ಪ್ರಕಟಣಾ ಗುಂಪುಗಳು ತಾ ಮುಂದು ನಾ ಮುಂದು ಎಂದು ಪೈಪೋಟಿಗೆ ನಿಂತು ಹೆಚ್ಚು ಹೆಚ್ಚು ಬರಹಗಾರರ ಬರಹಗಳನ್ನು ಪ್ರಕಟಿಸಲು ಪ್ರಾರಂಬಿಸಿದವು.
ಇದರ ಜೊತೆಗೆ ವ್ಯಾಟ್ಸಾಪ್, ಇನ್ಸ್ಟಾಗ್ರಾಮ್, ಟ್ವಿಟರ್, ಪೇಸ್‌ಬುಕ್ ಮುಂತಾದವುಗಳಲ್ಲಿ ರೇಜಿಗೆ ಹಿಡಿಸುವಶ್ಟು ವಿಚಾರಗಳು, ಸಾಹಿತ್ಯಗಳು, ರೋಚಕ ವೀಡಿಯೋಗಳು, ಮನರಂಜನಾಬರಿತ ತುಣುಕುಗಳು, ಅಬಿಪ್ರಾಯಗಳು, ಅನಿಸಿಕೆಗಳು, ಚರ‍್ಚೆ, ವಿಮರ‍್ಶೆ, ಹಾಸ್ಯ ಎಲ್ಲವೂ ಪ್ರಕಟಗೊಂಡು, ಓದುಗರಿಗೆ, ನೋಡುಗರಿಗೆ ಯಾವುದು ಓದಬೇಕು, ಯಾವುದು ನೋಡಬೇಕು ಎಂದು ತಲೆ ಚಿಟ್ಟು ಹಿಡಿಸಿ ಬಿಟ್ಟಿತು. ಈಗ ಓದುಗರು, ನೋಡುಗರು ಯಾವುದನ್ನೂ ಸರಿಯಾಗಿ ಓದದೆ, ನೋಡದೆ ಕಾಟಾಚಾರಕ್ಕೆ ಓದಿ, ನೋಡಿ ಕಡೆಗಣಿಸತೊಡಗಿದ್ದಾರೆ. ಹಾಗಾಗಿ ನಮಗೆ ಓದುಗರ ಸಂಕ್ಯೆಗಿಂತ ಬರೆಯುವವರ ಸಂಕ್ಯೆ ಜಾಸ್ತಿ ಎನಿಸುವ ಬ್ರಮೆ ಮೂಡತೊಡಗಿದೆ.
ಒಬ್ಬ ನಿಶ್ಟಾವಂತ ಸಾಹಿತ್ಯಾಸಕ್ತ ಕಂಡಿತವಾಗಿಯೂ ಓದುವುದನ್ನೆ ಇಶ್ಟ ಪಡುತ್ತಾನೆ. ಅಂತಹ ಗುಣಮಟ್ಟದ ಓದುಗರು ಇರುವುದರಿಂದಲೇ ಗಟ್ಟಿ ಬರಹಗಾರರು ಇನ್ನೂ ಉಳಿದುಕೊಂಡಿದ್ದಾರೆ.
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು