ಬ್ರೆಕ್ಟ್ ಕವನಗಳ ಓದು – 16 ನೆಯ ಕಂತು

– ಸಿ.ಪಿ.ನಾಗರಾಜ

*** ಸರಳಜೀವಿ ನಮ್ಮ ಪ್ರಭುಗಳು ***

(ಕನ್ನಡ ಅನುವಾದ: ಕೆ. ಪಣಿರಾಜ್)

ನಮ್ಮ ಪ್ರಭುಗಳು
ಸಾಮಾನ್ಯ ಮನೆಯಲ್ಲಿ ವಾಸಿಸುತ್ತಾರೆ
ಮಾಂಸ ಸೇವಿಸೋದಿಲ್ಲ
ಹೆಂಡ ಮುಟ್ಟೋದಿಲ್ಲ
ಧೂಮಪಾನ…ಊಹುಂ…ಇಲ್ಲವೇ ಇಲ್ಲ
ಅಂತ ಜನಜನಿತ
ಆದರೆ ಅವರ ರಾಜ್ಯಭಾರದಲ್ಲಿ
ಬಡವರು ಹಸಿವಿನಿಂದ ನೊಂದು ಸಾಯುತ್ತಾರೆ
ಅಂತಾನೂ ಜನ ಹೇಳ್ತಾರೆ

ಇದರ ಬದಲಿಗೆ
ಪ್ರಭುಗಳು ಸಮಾ ಕುಡಿದು
ಸಚಿವ ಸಂಪುಟ ಸಭೆಯಲ್ಲಿ
ಕಂಡವರ ಸಿಗರೇಟು ಚುಟ್ಟಾ ಕಸಿದು ಸೇದುತ್ತಾರೆ
ಕೆಲವು ಬುದ್ಧಿಗೇಡಿಗಳು ಕೂಡಿಕೊಂಡು
ಸದಾ ಕಾನೂನನ್ನು ತಿದ್ದುತ್ತಲೇ ಇರುತ್ತಾರೆ
ಆದರೂ ಈ ರಾಜ್ಯದಲ್ಲಿ  ಬಡವರಿಲ್ಲ
ಅಂತ ಜನ ಹೇಳುವಂತಿದ್ದರೆ
ಎಷ್ಟು ಚೆನ್ನಾಗಿರುತ್ತೆ.

“ಜಗತ್ತಿನ ಯಾವುದೇ ಒಂದು ನಾಡಿನಲ್ಲಿ ಜನರು ಬಡತನದಿಂದ ನರಳುತ್ತಿದ್ದರೆ ಇಲ್ಲವೇ ಬಡತನವಿಲ್ಲದೆ  ನೆಮ್ಮದಿಯಿಂದ ಬಾಳುತ್ತಿದ್ದರೆ, ಅದಕ್ಕೆ ಕಾರಣ ಒಬ್ಬ ವ್ಯಕ್ತಿಯಲ್ಲ; ಆ ನಾಡಿನಲ್ಲಿರುವ  ವ್ಯವಸ್ತೆ” ಎಂಬ ಸಂಗತಿಯನ್ನು ಈ ಕವನದಲ್ಲಿ ವಿಡಂಬನೆಯ ನುಡಿಗಟ್ಟುಗಳ ಮೂಲಕ ಚಿತ್ರಿಸಲಾಗಿದೆ.

‘ವ್ಯವಸ್ತೆ’ ಎಂದರೆ ನಾಡಿನಲ್ಲಿ ಆಚರಣೆಯಲ್ಲಿರುವ ರಾಜಕೀಯ, ಸಾಮಾಜಿಕ, ದಾರ್‍ಮಿಕ ಮತ್ತು ಸಂಪತ್ತಿನ ವಿತರಣೆಯಲ್ಲಿರುವ ಕಟ್ಟುಪಾಡುಗಳು;

ವಿಡಂಬನೆಯ ನುಡಿಗಟ್ಟು=ಮೇಲುನೋಟಕ್ಕೆ ಹಾಸ್ಯ ಇಲ್ಲವೇ ಅಣಕ ಮಾಡುವಂತೆ ಕಂಡುಬಂದರೂ, ಒಳನೋಟದಲ್ಲಿ  ವಾಸ್ತವವನ್ನು/ನಿಜವನ್ನು/ಸತ್ಯವನ್ನು ಹೇಳುವಂತಹ ನುಡಿಗಳು;

ಪ್ರಭು=ನಾಡಿನ ಅದಿಕಾರದ ಗದ್ದುಗೆಯಲ್ಲಿ ಕುಳಿತು ರಾಜ್ಯದ ಆಡಳಿತವನ್ನು ನಡೆಸುವ ವ್ಯಕ್ತಿ;  ನಮ್ಮ ಪ್ರಭುಗಳು=ನಮ್ಮನ್ನು ಆಳುತ್ತಿರುವ ರಾಜ; ಸಾಮಾನ್ಯ=ಯಾವುದೇ ಆಡಂಬರವಿಲ್ಲದ/ಸರಳವಾದ;

ಸಾಮಾನ್ಯ ಮನೆಯಲ್ಲಿ ವಾಸಿಸುತ್ತಾರೆ=ಬೆಲೆಬಾಳುವ ವಸ್ತುಗಳಿಂದ ಸುಸಜ್ಜಿತವಾಗಿಲ್ಲದ  ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅರಮನೆಯನ್ನು ತ್ಯಜಿಸಿ, ಜನಸಾಮಾನ್ಯರಂತೆ ವಾಸಿಸುತ್ತಿದ್ದಾರೆ;

ಸೇವಿಸು=ತಿನ್ನು;

ಮಾಂಸ ಸೇವಿಸೋದಿಲ್ಲ=ಮಾಂಸವನ್ನು ತಿನ್ನುವುದಿಲ್ಲ. ಪ್ರಾಣಿ ಪಕ್ಶಿಗಳ ಜೀವಹತ್ಯೆಗೆ ಕಾರಣವಾಗುವ ಆಹಾರವನ್ನು ತ್ಯಜಿಸಿ, ಜೀವದಯೆಯುಳ್ಳ ವ್ಯಕ್ತಿಯಾಗಿದ್ದಾರೆ; ಹೆಂಡ=ಮದ್ಯ/ಸಾರಾಯಿ/ಕುಡಿದಾಗ ಮತ್ತನ್ನು ತರಿಸುವ ಪಾನೀಯ;

ಹೆಂಡ ಮುಟ್ಟೋದಿಲ್ಲ=ಕುಡಿದಾಗ ಮತ್ತನ್ನು ತರಿಸುವಂತಹ ಯಾವುದೇ ಪಾನೀಯಗಳನ್ನು ಮುಟ್ಟುವುದೂ ಇಲ್ಲ. ವ್ಯಕ್ತಿಯ ವ್ಯಕ್ತಿತ್ವದ ನಾಶಕ್ಕೆ ಕಾರಣವಾಗುವ ಕುಡಿತದ ಚಟದಿಂದ ಬಹುದೂರವಿದ್ದಾರೆ;

ಧೂಮ=ಹೊಗೆ; ಪಾನ=ಕುಡಿಯುವಿಕೆ; ಧೂಮಪಾನ… ಊಹುಂ… ಇಲ್ಲವೇ ಇಲ್ಲ=ಹೊಗೆಸೊಪ್ಪಿನಿಂದ ತಯಾರಿಸಿದ ಬೀಡಿ ಸಿಗರೇಟು ಚುಟ್ಟಾ ಮುಂತಾದುವನ್ನು ಬಳಸುವುದೇ ಇಲ್ಲ. ದೂಮಪಾನವನ್ನು ಮಾಡುವ ವ್ಯಕ್ತಿಯು ತನ್ನ ದೇಹಕ್ಕೂ ಹಾನಿಯನ್ನು ತಂದುಕೊಳ್ಳುತ್ತಾನೆ ಮತ್ತು ಪರಿಸರದ ಆರೋಗ್ಯವನ್ನು  ಹಾಳು ಮಾಡುತ್ತಾನೆ. ಇಂತಹ ದುಶ್ಚಟವನ್ನು ನಮ್ಮ ರಾಜನು ಕಲಿತಿಲ್ಲ; ಅಂತ=ಹಾಗೆ/ಆ ರೀತಿ; ಜನಜನಿತ=ಜನರಲ್ಲಿ ಹಬ್ಬಿರುವ/ಎಲ್ಲರಿಗೂ ತಿಳಿದಿರುವ;

ಅಂತ ಜನಜನಿತ=ನಮ್ಮ ರಾಜನು ಯಾವುದೇ ಕೆಟ್ಟಗುಣ ಮತ್ತು ದುಶ್ಚಟವಿಲ್ಲದ , ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯೆಂದು ನಾಡಿನ ಜನರೆಲ್ಲರೂ ಗುಣಗಾನ ಮಾಡುತ್ತಿದ್ದಾರೆ; ರಾಜ್ಯಭಾರ=ರಾಜ್ಯದ ಆಡಳಿತವನ್ನು ನಡೆಸುವಿಕೆ; ಬಡವರು=ಜೀವನಕ್ಕೆ ಅತ್ಯಗತ್ಯವಾದ “ ಅನ್ನ-ಬಟ್ಟೆ-ವಸತಿ-ವಿದ್ಯೆ-ಉದ್ಯೋಗ-ಆರೋಗ್ಯ”ವನ್ನು ಪಡೆಯಲಾಗದೆ, ಹಸಿವು ಬಡತನ ಮತ್ತು ಅಪಮಾನದಿಂದ ಬಾಳುತ್ತಿರುವವರು; ಅಂತಾನೂ=ಆ ರೀತಿಯಲ್ಲಿಯೂ;

ಆದರೆ ಅವರ ರಾಜ್ಯಭಾರದಲ್ಲಿ ಬಡವರು ಹಸಿವಿನಿಂದ ನೊಂದು ಸಾಯುತ್ತಾರೆ ಅಂತಾನೂ ಜನ ಹೇಳ್ತಾರೆ=ಆದರೆ ಇಂತಹ ಒಳ್ಳೆಯ ಗುಣಗಳಿಂದ ಕೂಡಿದ ರಾಜನ ಆಡಳಿತದಲ್ಲಿ ದುಡಿಯುವ ಶ್ರಮಜೀವಿಗಳಾದ ಬಡವರು ಹಸಿವಿನಿಂದ ತತ್ತರಿಸಿ ಸಾಯುತ್ತಿದ್ದಾರೆ ಅಂತಾನೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಂದರೆ ರಾಜನು ಗುಣವಂತನಾಗಿದ್ದರೂ ಬಡಜನರಿಗೆ ಅದರಿಂದ ಏನೂ ಒಳಿತಾಗಿಲ್ಲ;

ಇದರ ಬದಲಿಗೆ=ಇಂತಹ ಸುದ್ದಿಯೊಂದನ್ನು ಕೇಳಿದ ಕವಿಯು ತನ್ನ ಮನದಲ್ಲಿಯೇ  ರಾಜನ ನಡೆನುಡಿಯನ್ನು ಮತ್ತೊಂದು ರೀತಿಯಲ್ಲಿ ಕಲ್ಪಿಸಿಕೊಂಡು ಬಡತನವಿಲ್ಲದ ಜನರಿಂದ ಕೂಡಿದ  ರಾಜ್ಯದ ಕನಸನ್ನು ಕಾಣತೊಡಗುತ್ತಾನೆ;

ಸಮಾ ಕುಡಿದು=ಕಂಟಮಟ್ಟ ಕುಡಿದು; ಸಚಿವ=ಮಂತ್ರಿ; ಸಂಪುಟ=ಮಂತ್ರಿಮಂಡಲ;  ಕಂಡವರ=ಇತರರ; ಚುಟ್ಟಾ=ಹೊಗೆಸೊಪ್ಪಿನಿಂದ ತಯಾರಿಸಿರುವ ವಸ್ತು; ಕಸಿದು=ಕಿತ್ತುಕೊಂಡು;

ಪ್ರಭುಗಳು ಸಮಾ ಕುಡಿದು ಸಚಿವ ಸಂಪುಟದ ಸಭೆಯಲ್ಲಿ ಕಂಡವರ ಸಿಗರೇಟು ಚುಟ್ಟಾ ಕಸಿದು ಸೇದುತ್ತಾರೆ=ರಾಜರು ಕಂಟಮಟ್ಟ ಕುಡಿದು, ಅಮಲೇರಿ ಮಯ್ ಮನದ ಮೇಲಿನ ಅರಿವನ್ನು ಕಳೆದುಕೊಂಡು, ಸಚಿವ ಸಂಪುಟದ ಸಬೆಯಲ್ಲಿ ಇತರರಿಂದ ಸಿಗರೇಟು ಚುಟ್ಟಾವನ್ನು ಕಿತ್ತುಕೊಂಡು ಸೇದುತ್ತಾರೆ. ಅಂದರೆ ರಾಜನಾಗಿ ಸಚಿವ ಸಂಪುಟದ ಸಬೆಯಲ್ಲಿ ತಾನು ವಹಿಸಬೇಕಾದ ಜವಾಬ್ದಾರಿಯನ್ನೇ ಕಡೆಗಣಿಸಿ, ತಾನು ಮಾಡಬೇಕಾದ ಕೆಲಸವನ್ನೇ ಮರೆತು, ಕುಡಿತದ ಅಮಲಿನಲ್ಲಿ ಮಯ್ ಮರೆತಿದ್ದಾನೆ;

ಬುದ್ಧಿ+ಕೇಡಿ; ಬುದ್ಧಿಗೇಡಿ=ತಿಳುವಳಿಕೆಯಿಲ್ಲದ; ಸದಾ=ಎಲ್ಲ ಕಾಲದಲ್ಲಿಯೂ/ಯಾವಾಗಲೂ; ಕಾನೂನು=ರಾಜ್ಯದ ಆಡಳಿತವನ್ನು ನಡೆಸಲು ಅಗತ್ಯವಾದ ಕಟ್ಟುಪಾಡುಗಳು; ತಿದ್ದು=ಬದಲಾಯಿಸು;

ಕೆಲವು ಬುದ್ಧಿಗೇಡಿಗಳು ಕೂಡಿಕೊಂಡು ಸದಾ ಕಾನೂನನ್ನು ತಿದ್ದುತ್ತಲೇ ಇರುತ್ತಾರೆ=ಆಡಳಿತದ ಗದ್ದುಗೆಗೆ ಹತ್ತಿರದಲ್ಲಿದ್ದುಕೊಂಡು ರಾಜನ ಹೊಣೆಗೇಡಿತನವನ್ನು ಗಮನಿಸಿರುವ  ಕೆಲವು ತಿಳಿಗೇಡಿಗಳು ಜತೆಗೂಡಿ, ರಾಜ್ಯದಲ್ಲಿರುವ  ಕಾನೂನನ್ನು ರಾಜನ ಗಮನಕ್ಕೆ ತರದೆ ತಮ್ಮ ಇಚ್ಚೆಯಂತೆ ಬದಲಾಯಿಸುತ್ತಲೇ ಇರುತ್ತಾರೆ;

ಆದರೂ ಈ ರಾಜ್ಯದಲ್ಲಿ  ಬಡವರಿಲ್ಲ ಅಂತ ಜನ ಹೇಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತೆ=ಇಶ್ಟೆಲ್ಲಾ  ದುಶ್ಚಟಗಳನ್ನುಳ್ಳ ಮತ್ತು ಜವಾಬ್ದಾರಿಯನ್ನೇ ಮರೆತಿರುವ ರಾಜನ ಆಡಳಿತವಿರುವ ರಾಜ್ಯದಲ್ಲಿ “ಬಡವರೇ ಇಲ್ಲ” ಎಂದು ಜನರು ಹೇಳುವಂತಿದ್ದರೆ ಎಶ್ಟು ಚೆನ್ನಾಗಿರುತ್ತದೆ ಎಂದು ಕವಿ ಕಲ್ಪನೆಯು ಕನಸನ್ನು ಕಾಣುತ್ತದೆ.

ಮೇಲುನೋಟಕ್ಕೆ ಈ ಕವನದಲ್ಲಿ ನಿರೂಪಣೆಗೊಂಡಿರುವ ಸಂಗತಿಯು ವಿಚಿತ್ರವಾಗಿ ಕಾಣಿಸುತ್ತದೆ. ನಾಡನ್ನಾಳುವ ರಾಜನು ದುಶ್ಚಟಗಳಿಗೆ ಬಲಿಯಾದರೆ ಆ ನಾಡು ಉಳಿಯುವುದಿಲ್ಲವೆಂಬ ಮತ್ತು ರಾಜನು ಸಜ್ಜನನಾದರೆ ನಾಡು ನೆಮ್ಮದಿಯಿಂದ ಇರುವುದೆಂಬ ಬಾವನೆಯು ನಮ್ಮೆಲ್ಲರನ್ನೂ ಒಳಗೊಂಡಂತೆ ಎಲ್ಲ ಕಾಲದಲ್ಲಿಯೂ ಎಲ್ಲ ಜನಸಮುದಾಯಗಳಲ್ಲಿಯೂ ಇದೆ. ಆದರೆ ಇದು ಕೇವಲ ಜನರ ಒಂದು ಕಲ್ಪಿತ ನಂಬಿಕೆಯೇ ಹೊರತು ವಾಸ್ತವವಲ್ಲ. ಏಕೆಂದರೆ ಇಂದಿಗೂ  ನಾಡನ್ನು ಆಳುವ ವ್ಯಕ್ತಿ ಒಳ್ಳೆಯವನಾಗಿರಲಿ ಇಲ್ಲವೇ ಕೆಟ್ಟವನಾಗಿರಲಿ  ಜಗತ್ತಿನ ಬಹುತೇಕ ದೇಶಗಳೆಲ್ಲವೂ ಒಂದಲ್ಲ ಒಂದು ಬಗೆಯ ಆತಂಕದಿಂದ ತತ್ತರಿಸುತ್ತಿವೆ. ಇದಕ್ಕೆ ಕಾರಣ ಒಬ್ಬ ವ್ಯಕ್ತಿಯಿಂದ ನಾಡು ರೂಪುಗೊಂಡಿಲ್ಲ; ವ್ಯವಸ್ತೆಯಿಂದ ನಾಡು ರೂಪುಗೊಂಡಿರುತ್ತದೆ;

“ರಾಮ ರಾಜ್ಯವನ್ನಾಳಿದರೂ ರಾಗಿ ಬೀಸುವುದು ತಪ್ಪುವುದಿಲ್ಲ” ಎಂಬ ಕನ್ನಡದ ಒಂದು ನಾಣ್ಣುಡಿಯು ಈ ಕವನದಲ್ಲಿ ನಿರೂಪಣೆಗೊಂಡಿರುವ ವಿಚಾರವನ್ನೇ ಪ್ರತಿಪಾದಿಸುತ್ತದೆ. ರಾಮರಾಜ್ಯದಲ್ಲಿಯೂ ದುಡಿಯುವ ಶ್ರಮಜೀವಿಗಳ ಬವಣೆಯಾಗಲಿ ಇಲ್ಲವೇ ಬಡತನವಾಗಲಿ ನಿವಾರಣೆಗೊಳ್ಳಲಿಲ್ಲ. ಏಕೆಂದರೆ ರಾಮನು ಮೇಲುಕೀಳಿನ ವರ್‍ಣಪದ್ದತಿ ಮತ್ತು ಜಾತಿ ಪದ್ದತಿಯನ್ನು ಕಾಪಾಡಿಕೊಂಡು ಬರುವ ರಾಜನಾಗಿದ್ದ. ಪ್ರಾಚೀನ ಕಾಲದಲ್ಲಿ ಇಂಡಿಯಾ ದೇಶದಲ್ಲಿ ರಚನೆಗೊಂಡಿದ್ದ  ದರ್‍ಮದ ಹೊತ್ತಿಗೆಗಳು ಮತ್ತು ಮಹಾಕಾವ್ಯಗಳೆಲ್ಲವೂ “ರಾಜನಾದವನು ಮೇಲುಕೀಳಿನ  ವ್ಯವಸ್ತೆಯುಳ್ಳ ವರ್‍ಣಪದ್ದತಿ ಮತ್ತು ಜಾತಿಪದ್ದತಿಯನ್ನು ಕಾಪಾಡಿಕೊಂಡು ಬರುವುದೇ ದರ್‍ಮ ಪರಿಪಾಲನೆ ಮತ್ತು ದರ್‍ಮ ರಕ್ಶಣೆಯ ಒಳ್ಳೆಯ ಆಡಳಿತ” ಎಂಬ ಆದೇಶವನ್ನು ನೀಡಿವೆ.

ಸಾವಿರಾರು ವರುಶಗಳಿಂದಲೂ ಇಂಡಿಯಾ ದೇಶದ ಜನಸಮುದಾಯದಲ್ಲಿ ವರ್‍ಣ ಪದ್ದತಿ ಮತ್ತು ಜಾತಿ ಪದ್ದತಿಯ ಕಾರಣದಿಂದಾಗಿ “ಬ್ರಾಹ್ಮಣ-ಕ್ಶತ್ರಿಯ-ವೈಶ್ಯರಿಗೆ ಮಾತ್ರ ವಿದ್ಯೆ, ಅದಿಕಾರ ಮತ್ತು ಸಂಪತ್ತಿನ ಮೇಲೆ ಒಡೆತನವಿದ್ದು,  ಶೂದ್ರರು ಮತ್ತು ದಲಿತರು ಮೇಲಿನ ಮೊದಲ ಮೂರು ವರ್‍ಣದವರ ಸೇವೆಯಲ್ಲಿಯೆ ಬಾಳಬೇಕು ಎಂಬ ಸಾಮಾಜಿಕ ಮತ್ತು ದಾರ್‍ಮಿಕ ಕಟ್ಟುಪಾಡುಗಳು ದುಡಿಯುವ ಶ್ರಮಜೀವಿಗಳಾದ ಕೆಳಜಾತಿಯ ಜನಸಮುದಾಯದಲ್ಲಿ ಬಡತನವನ್ನು ಶಾಶ್ವತಗೊಳಿಸಿತ್ತು. ಆಂಗ್ಲರ ಆಡಳಿತಕ್ಕೆ ಒಳಪಟ್ಟ ಇಂಡಿಯಾದೇಶದಲ್ಲಿ ಹತ್ತೊಂಬತ್ತನೆಯ ಶತಮಾನದ ಅಂತ್ಯ ಬಾಗದಿಂದ ಜಾರಿಗೆ ಬಂದ ಸಾರ್‍ವಜನಿಕ ವಿದ್ಯಾಬ್ಯಾಸ ಮತ್ತು ಇಪ್ಪತ್ತನೆಯ ಶತಮಾನದ ಆದಿಯಿಂದ ಬಂದ ಜಾತಿ ಮೀಸಲಾತಿಯ ಕಾರಣದಿಂದಾಗಿ ಶೂದ್ರರು ಮತ್ತು ದಲಿತರು ವಿದ್ಯೆಯನ್ನು ಪಡೆದು ಸಮಾಜದ ಎಲ್ಲ ರಂಗಗಳಲ್ಲಿಯೂ ಸ್ತಾನಮಾನಗಳನ್ನು ಪಡೆದು ಬಡತನದಿಂದ ತುಸು ಹೊರಬರಲು  ಅವಕಾಶ ದೊರಕಿತು. ಇದು ವ್ಯವಸ್ತೆಯಲ್ಲಾದ ಬದಲಾವಣೆಯಿಂದಾಗಿಯೇ  ಹೊರತು, ವ್ಯಕ್ತಿಯೊಬ್ಬನಿಂದ ಆದುದಲ್ಲ;

ಜಗತ್ತಿನ ಇತರ ದೇಶಗಳಲ್ಲಿಯೂ ಕರಿಯರು/ಬಿಳಿಯರು ಎಂಬ ಮಯ್ ಬಣ್ಣದ ತಾರತಮ್ಯ; ಆರ್‍ಯರು, ಯೆಹೂದಿಗಳು, ಮುಸ್ಲಿಮರು ಎಂಬ ಜನಾಂಗ ತಾರತಮ್ಯ; ಪ್ರೊಟಸ್ಟಂಟರು ಮತ್ತು ಕ್ಯಾತೋಲಿಕರು ಎಂಬ ದಾರ್‍ಮಿಕ ಗುಂಪುಗಳ ತಾರತಮ್ಯವುಳ್ಳ ವ್ಯವಸ್ತೆಯಿಂದಾಗಿ ರಾಜಕೀಯ ಅದಿಕಾರ ಮತ್ತು ಸಂಪತ್ತಿನ ಒಡೆತನ ಪ್ರಬಲರ ಪಾಲಿಗೆ ದಕ್ಕುವುದರಿಂದ, ಎಲ್ಲ ದೇಶಗಳಲ್ಲಿಯೂ ಇಂದಿಗೂ ಶೇ 40 ಕ್ಕಿಂತ ಹೆಚ್ಚು ಮಂದಿ  ಬಡವರಾಗಿಯೇ ಹುಟ್ಟಿ, ಬಡತನದಲ್ಲಿಯೇ ಬೆಂದು ನೊಂದು, ಬಡವರಾಗಿಯೇ ಸಾವನ್ನಪ್ಪುತ್ತಿದ್ದಾರೆ.

ಈ ಕವನವನ್ನು ಬರೆದಿರುವ ಬ್ರೆಕ್ಟ್ ಅವರು ಸಮಾಜ ವಿಜ್ನಾನಿ ಕಾರ್‍ಲ್ ಮಾರ್‍ಕ್ಸ್ (1818-1883) ಅವರ ಸಮತಾವಾದವನ್ನು ಒಪ್ಪಿಕೊಂಡವರಾಗಿದ್ದರು. ಆದ್ದರಿಂದ ಮಾನವ ಸಮುದಾಯವು ಬಡತನದ ಸಂಕಟದಿಂದ ಪಾರಾಗಿ, ಜೀವನಕ್ಕೆ ಅತ್ಯಗತ್ಯವಾದ ಅನ್ನ ಬಟ್ಟೆ ವಸತಿ ವಿದ್ಯೆ ಉದ್ಯೋಗ ಆರೋಗ್ಯವನ್ನು ಪಡೆದು ನೆಮ್ಮದಿಯಿಂದ ಬಾಳುವಂತಾಗಬೇಕಾದರೆ ಅದು ಒಬ್ಬ ವ್ಯಕ್ತಿಯಿಂದ ಆಗುವುದಿಲ್ಲ; “ಸರ್‍ವರಿಗೂ ಸಮಪಾಲು, ಸರ್‍ವರಿಗೂ ಸಮಬಾಳು ಎಂಬ ಸರ್‍ವಸಮಾನತೆಯ ವ್ಯವಸ್ತೆಯನ್ನು ಜಾರಿಗೆ ತರುವುದರಿಂದ ಮಾತ್ರ” ಎಂಬ ವಾಸ್ತವವನ್ನು ಈ ಕವನದಲ್ಲಿ ನಿರೂಪಿಸಿದ್ದಾರೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications