ಮಕ್ಕಳ ಕತೆ: ಕಾಮನಬಿಲ್ಲು

– ವೆಂಕಟೇಶ ಚಾಗಿ.

 

ತುಂತುರು ಮಳೆ ಬರುವ ಸಮಯದಲ್ಲಿ ಪುಟ್ಟಿ ಹೊರಗಡೆ ಬಂದು ನೋಡಿದಾಗ ಆಗಸದಲ್ಲಿ ಅದೆಂತಹದೋ ಬಣ್ಣ ಬಣ್ಣದ ಬೆಳಕು ಕಾಣುತ್ತಿತ್ತು. ಜೋರಾಗಿ “ಅಮ್ಮಾ.. ಬಾ ಇಲ್ಲಿ.. ಆಕಾಶದಲ್ಲಿ ಅದೇನೋ ಕಾಣ್ತಾ ಇದೆ. ನೋಡು ಬಾ ನೋಡು ಬಾ” ಎಂದು ಜೋರಾಗಿ ಕಿರುಚಿಕೊಂಡಳು. ಮನೆಯ ಒಳಗಿದ್ದ ಅಮ್ಮ ಪುಟ್ಟಿಯ ಕೂಗುವಿಕೆಯನ್ನು ಕೇಳಿ ಹೊರಬಂದರು. ಆಗಸದಲ್ಲಿ ನೋಡುತ್ತಲೇ “ಅಯ್ಯೋ ಪುಟ್ಟಿ ಅದು ಕಾಮನಬಿಲ್ಲು. ಅದು ಏಳು ಬಣ್ಣಗಳಿಂದ ಕೂಡಿರುತ್ತದೆ. ಮಳೆ ಬರುವ ಸಮಯದಲ್ಲಿ ಒಂದು ಕಡೆ ಸೂರ‍್ಯನಿದ್ದು ಇನ್ನೊಂದು ಕಡೆ ಮಳೆ ಬರುತ್ತಿದ್ದರೆ ಎದುರುಗಡೆ ಈ ರೀತಿಯಾಗಿ ಕಾಮನಬಿಲ್ಲು ಮೂಡುತ್ತದೆ. ಚಂದ ಕಾಣುತ್ತಿದೆಯಲ್ಲವೆ..? ನೋಡುತ್ತಾ ಇರು” ಎಂದು ಹೇಳಿ ಮತ್ತೆ ಮನೆಯೊಳಗೆ ಹೊರಟು ಹೋದರು. ಪುಟ್ಟಿಗೆ ಕಾಮನಬಿಲ್ಲು ಹೊಸ ಅನುಬವವನ್ನು ನೀಡುತ್ತಿತ್ತು. ಕಾಮನಬಿಲ್ಲು.. ಕಾಮನಬಿಲ್ಲು ಎಂದು ನೋಡುತ್ತಾ ನಿಂತಳು.

ಪುಟ್ಟಿ ಕಾಮನಬಿಲ್ಲನ್ನು ನೋಡುತ್ತಾ ನೋಡುತ್ತಾ ಕಾಮನಬಿಲ್ಲಿನತ್ತ ಕೈ ಬೀಸುತ್ತಾ “ವಾವ್ ಎಶ್ಟು ಸುಂದರವಾಗಿರುವೆ ನೀನು, ಎಶ್ಟು ಚೆನ್ನಾಗಿರುವೆ ನೀನು..” ಎಂದು ಜೋರಾಗಿ ಕೂಗುತ್ತಿದ್ದಳು. ಕಾಮನಬಿಲ್ಲಿನ ಕಡೆಯಿಂದ ಯಾರೋ ಕೂಗಿದಂತಾಯಿತು. “ಹೌದಾ.. ನಾನು ತುಂಬಾ ಚೆನ್ನಾಗಿದ್ದೀನಾ.? ನಾನು ಸುಂದರವಾಗಿ ಕಾಣುತ್ತಿರುವೆನಾ..?” ಎಂದು ಪುಟ್ಟಿಯನ್ನು ಕೇಳಿದಂತಾಯಿತು. “ಹೌದು.. ಹೌದು.. ಕಾಮನ ಬಿಲ್ಲು ತುಂಬಾ ಚೆನ್ನಾಗಿದೆ. ನೋಡಲು ತುಂಬಾ ಸುಂದರವಾಗಿದೆ. ಎಶ್ಟು ಸುಂದರವಾಗಿದೆ ಗೊತ್ತಾ..?” ಎಂದಳು. ಸ್ವಲ್ಪ ಸಮಯದ ನಂತರ ಪುಟ್ಟಿಗೆ ಮತ್ತೆ ಏನೋ ಹೊಳೆಯಿತು. “ಹೌದು ಯಾರದು ನನ್ನೊಡನೆ ಮಾತನಾಡಿದ್ದು ಎಂದು ಸುತ್ತಲೂ ನೋಡಿದಳು. ಪುಟ್ಟಿಗೆ ಯಾರು ಕಾಣಲಿಲ್ಲ. “ಅರೆ, ನಾನು ಕಾಮನಬಿಲ್ಲು ತುಂಬಾ ಸುಂದರವಾಗಿದೆ ಎಂದು ಹೇಳಿದಾಗ, ಯಾರೋ ನಾನು ತುಂಬಾ ಚೆನ್ನಾಗಿದ್ದೀನಾ.. ಎಂದು ನನ್ನನ್ನು ಕೇಳಿದಂತಾಯಿತು. ಯಾರು ನನ್ನ ಮಾತನಾಡಿಸಿದವರು..? ಯಾರು ಹೇಳಿ ಮುಂದೆ ಬನ್ನಿ..” ಎಂದಳು. ಆಗಸದ ಕಾಮನಬಿಲ್ಲು “ಅರೆ ಎಲ್ಲಿ ನೋಡುತ್ತಿರುವೆ..? ನಾನು ಕಾಮನಬಿಲ್ಲು. ನೀನು ನನ್ನ ಮಾತನಾಡಿಸಿದೆಯಲ್ಲ ಅದಕ್ಕೆ ನಾನು ನಿನ್ನ ಪ್ರಶ್ನೆಗೆ ಉತ್ತರಿಸಿದೆ. ಇತ್ತ ನೋಡು ನಾನು ಕಾಮನಬಿಲ್ಲು. ನಿನ್ನನ್ನೇ ನೋಡುತ್ತಿರುವೆ” ಎಂದಿತು ಕಾಮನಬಿಲ್ಲು .

ಪುಟ್ಟಿಗೆ ಆಶ್ಚರ‍್ಯವಾಯಿತು . ಕಾಮನಬಿಲ್ಲು ಮಾತನಾಡುತ್ತದೆಯೇ ನನಗೆ ಅಮ್ಮ ಹೇಳಲಿಲ್ಲವಲ್ಲ ಕಾಮನಬಿಲ್ಲು ಮಾತನಾಡುತ್ತದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾ, “ನೀನು ಮಾತನಾಡುವುದನ್ನು ಹೇಗೆ ಕಲಿತೆ?” ಎಂದು ಪುಟ್ಟಿ ಕೇಳಿದಳು. “ಇಲ್ಲ.. ನಾನು ಯಾರೊಂದಿಗೂ ಅಶ್ಟೊಂದು ಮಾತನಾಡುವುದಿಲ್ಲ. ನೀನು ಪದೇ ಪದೇ ನನ್ನನ್ನು ಪ್ರಶ್ನಿಸುತ್ತಿದ್ದಾಗ ಸುಮ್ಮನೆ ಇರದೇ ನಾನು ನಿನಗೆ ಉತ್ತರಿಸಬೇಕಾಯಿತು ಹಾಗೂ ನೀನು ನನ್ನನ್ನು ನೋಡಿ ತುಂಬಾ ಸುಂದರವಾಗಿದ್ದೀಯಾ ಎಂದಾಗ ನನಗೆ ತುಂಬಾ ಸಂತೋಶವಾಗಿ ನಿನ್ನೊಂದಿಗೆ ಮಾತನಾಡಿದೆ” ಎಂದಿತು ಕಾಮನಬಿಲ್ಲು. ಆಗ ಪುಟ್ಟಿ ” ಹೌದಾ… ತುಂಬಾ ಸಂತೋಶ. ನಿಜವಾಗಿಯೂ ನೀನು ಸುಂದರವಾಗಿ ಕಾಣುತ್ತಿರುವೆ ಈಗ. ಮಳೆ ಬರುತ್ತಿದೆಯಲ್ಲ ನೀನು ಮಳೆಯಲ್ಲಿ ನೆನೆಯುವುದಿಲ್ಲವೇ? ಮನೆಗೆ ಹೋಗಬಾರದಾಗಿತ್ತೇ..? ಆಗಸದಲ್ಲಿ ನಿಂತು ಏನು ಮಾಡುತ್ತಿರುವೆ?” ಎಂದಳು ಪುಟ್ಟಿ. “ನನಗೆ ಮಳೆ ಎಂದರೆ ತುಂಬಾ ಇಶ್ಟ ಅದರಲ್ಲೂ ತುಂತುರು ಮಳೆ ಹಾಗೂ ಬಿಸಿಲು ಇದ್ದರೆ ತುಂಬಾ ಇಶ್ಟ. ನಾನು ಬಿಸಿಲು ಮತ್ತು ಮಳೆ ಎರಡೂ ಇದ್ದಾಗ ಮಾತ್ರ ಬರುತ್ತೇನೆ. ತುಂಬಾ ಜೋರಾಗಿ ಮಳೆ ಬರುತ್ತಿದ್ದಾಗ ನಾನು ಬರುವುದಿಲ್ಲ. ಈಗ ಸ್ವಲ್ಪ ತುಂತುರು ಮಳೆ ಇದೆ ಹಾಗೂ ಬಿಸಿಲಿದೆ ಆದುದರಿಂದ ನಾನು ಹೊರಗಡೆ ಬಂದಿದ್ದೇನೆ. ಈ ಬೂಮಿಯನ್ನು ನೋಡುತ್ತಿದ್ದೇನೆ. ಇಲ್ಲಿ ಎಶ್ಟು ಸುಂದರವಾಗಿದೆ. ಇಲ್ಲಿಂದ ಬೂಮಿಯನ್ನು ನೋಡಿದಾಗ, ನನಗೆ ಬೂಮಿಯ ಮೇಲಿನ ಬೆಟ್ಟ, ನದಿ, ಕಾಡು, ಮರಗಿಡಗಳು, ಪ್ರಾಣಿಪಕ್ಶಿಗಳು ಎಲ್ಲವೂ ಸುಂದರವಾಗಿ ಕಾಣುತ್ತಿವೆ.” ಎಂದಿತು ಕಾಮನಬಿಲ್ಲು. “ಹೌದಾ… ನಾನು ಮನೆಯಿಂದ ಹೊರಗೆ ಹೋಗುವುದೇ ಕಡಿಮೆ. ನಮ್ಮ ಬೂಮಿ ಅಶ್ಟು ಸುಂದರವಾಗಿದೆಯಾ..?” ಎಂದು ಪುಟ್ಟಿ ಕೇಳಿದಳು.

“ನಿನಗೆ ಗೊತ್ತಿಲ್ಲವೇ.. ಬಾ ನನ್ನ ಬಳಿ ನಿನಗೆ ಈ ಬೂಮಿಯನ್ನು ತೋರಿಸುವೆ” ಎಂದಾಗ, “ನಾನು ಬರುತ್ತೇನೆ ನನ್ನನ್ನು ಕರೆದುಕೋ ಎಂದದಳು. ಆಗ ಕಾಮನಬಿಲ್ಲು ಕೈಯನ್ನು ಚಾಚಿ ಪುಟ್ಟಿಯನ್ನು ಮೇಲಕ್ಕೆ ಎತ್ತಿಕೊಂಡಿತು.

“ಅಬ್ಬಾ ಎಶ್ಟು ಬಣ್ಣಗಳಿವೆಯಲ್ಲ, ಎಶ್ಟು ಸುಂದರವಾಗಿದೆ ಕಾಮನಬಿಲ್ಲು. ತುಂಬಾ ಇಳಿಜಾರು ಇದೆ. ನಾನು ಒಂದೆರಡು ಬಾರಿ ಜಾರಿ ಬಿಡಲೇ?” ಎಂದಳು ಪುಟ್ಟಿ. “ಓ..ಕಂಡಿತವಾಗಿ ನನ್ನಲ್ಲಿ ಏಳು ಬಣ್ಣಗಳಿವೆ. ಏಳು ಬಣ್ಣಗಳಲ್ಲೂ ನೀನು ಆಟವಾಡಬಹುದು” ಎಂದಾಗ ಪುಟ್ಟಿಗೆ ತುಂಬಾ ಸಂತೋಶವಾಯಿತು.

ಒಂದೊಂದೇ ಬಣ್ಣದ ಒಳಗೆ ಈಜಾಡಿ ಜಾರತೊಡಗಿದಳು. ಪುಟ್ಟಿಯ ಆಟವನ್ನು ಕಂಡು ಸಂತೋಶಗೊಂಡ ಕಾಮನಬಿಲ್ಲು, ಪುಟ್ಟಿ ಜಾರುವುದನ್ನು ನೋಡಿ, “ಹುಶಾರು ಮತ್ತೆ ಬೂಮಿಯ ಕಡೆಗೆ ಜಾರಿ ಬಿಟ್ಟೀಯಾ” ಎಂದಿತು.

“ಕಾಮನಬಿಲ್ಲಿನ ಏಳು ಬಣ್ಣಗಳೂ ಚಂದ. ಕಾಮನಬಿಲ್ಲಿನ ಮೇಲಿನಿಂದ ಎಶ್ಟು ಸುಂದರವಾಗಿದೆಯಲ್ಲ ಬೂಮಿ. ತುಂಬಾ ಚೆನ್ನಾಗಿ ಕಾಣುತ್ತಿದೆ. ನೀನು ಬೂಮಿಯನ್ನು ನೋಡಲು ಆಗಾಗ ಬರುವೆ ಅಲ್ಲವೇ” ಎಂದಳು ಪುಟ್ಟಿ. “ಇಲ್ಲಿಂದ ನಮ್ಮ ಮನೆ ಕಾಣುತ್ತದೆಯೇ? ಎಂದು ಪುಟ್ಟಿ ಕೇಳಿದಳು. “ಮಗು ನೋಡು ನಿನ್ನ ಮನೆ ಅಲ್ಲಿ ಕಾಣುತ್ತಿದೆ. ನಿನ್ನ ಮನೆಯ ಸುತ್ತ ಮುತ್ತ ಎಲ್ಲಾ ಮನೆಗಳು ಕಾಣುತ್ತಿವೆ”. ನನ್ನ ಸ್ನೇಹಿತರ ಮನೆಯೂ ಕಾಣುತ್ತಿದೆ. ನಮ್ಮ ಶಾಲೆಯು ಕಾಣುತ್ತಿದೆ . ನಾನು ಎಲ್ಲವನು ಇಲ್ಲಿಂದಲೇ ನೋಡಬಹುದು. ಇಲ್ಲಿಂದಲೇ ನೋಡಬಹುದು” ಎಂದು ಕುಣಿದಾಡಿದಳು.”ಅರೆ ಅಲ್ಲಿ ನೋಡು ನವಿಲೊಂದು ಹಾರುತ್ತಿದೆ. ಅದು ರೆಕ್ಕೆ ಬಿಚ್ಚಿ ಹಾರುತಿದೆ. ಎಶ್ಟು ಸುಂದರವಾಗಿದೆಯಲ್ಲ..? ಎಂದಳು ಪುಟ್ಟಿ ಸಂತಸಗೊಂಡಳು. ಕಾಮನಬಿಲ್ಲಿನಲ್ಲಿ ಮಿಂದಳು.

ಸೂರ‍್ಯ ನಿದಾನವಾಗಿ ತನ್ನ ಮಡಿಲಿಗೆ ಸೇರಿಕೊಳ್ಳುತ್ತಿದ್ದ. ಆಗ ಕಾಮನಬಿಲ್ಲು “ಪುಟ್ಟಿ… ನನಗೆ ಈಗ ಸಮಯವಾಯಿತು. ನಾನು ಹೊರಡಲೇ ಬೇಕು. ಸೂರ‍್ಯ ತನ್ನ ತಾಯಿಯ ಮಡಲಿಗೆ ಸೇರಿಕೊಳ್ಳುತ್ತಿದ್ದಾನೆ.” ಎನ್ನುತ್ತಲೇ ಕಾಮನಬಿಲ್ಲು ನಿದಾನವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳತೊಡಗಿತು. ಪುಟ್ಟಿಯನ್ನು ಮತ್ತೆ ಮನೆಯ ಮುಂದಿನ ಜಗಲಿಗೆ ಇಳಿಸಿತು. ಪುಟ್ಟಿಯ ಮೈಮೇಲೆಲ್ಲಾ ಬಣ್ಣ. ವಿದವಿದ ಬಣ್ಣಗಳು ಹಾಗೆಯೇ ಉಳಿದುಕೊಂಡಿದ್ದವು. “ಬೈ..ಬೈ.. ಹೋಗಿ ಬಾ” ಎಂದು ಪುಟ್ಟಿ ಕಾಮನಬಿಲ್ಲನ್ನು ಕಳಿಸಿಕೊಟ್ಟಳು. “ಮತ್ತೆ ಮಳೆಯಾದಾಗ ಸೂರ‍್ಯನಿದ್ದಾಗ ನಾನು ಕಂಡಿತ ಬರುವೆ. ನಿನ್ನನ್ನು ಬೇಟಿಯಾಗುವೆ” ಎಂದು ಕಾಮನಬಿಲ್ಲು ಮಾಯವಾಯಿತು.

ಅಮ್ಮ ಮನೆಯ ಹೊರಗಡೆಗೆ ಬಂದು “ಪುಟ್ಟಿ ನೀನು ಯಾರೊಂದಿಗೆ ಮಾತನಾಡುತ್ತಿರುವೆ.? ಎಂದು ಕೇಳಿದರು. “ನಾನು ಕಾಮನಬಿಲ್ಲು ನೋಡಿದೆ. ನಾನು ಕಾಮನಬಿಲ್ಲಿನ ಬಳಿ ಹೋಗಿ ಅಲ್ಲಿ ಆಟವಾಡಿದೆ ಗೊತ್ತಾ” ಎಂದಳು. ಮೈಮೇಲೆ ಬಣ್ಣವನ್ನು ಕಂಡು ಅಮ್ಮ “ಅಯ್ಯೋ ಹೋಳಿ ಹಬ್ಬದ ಬಣ್ಣವನ್ನೆಲ್ಲ ಮೈಮೇಲೆ ಸುರಿದುಕೊಂಡಿದ್ದೀಯಲ್ಲ, ಬಾ ಸ್ನಾನ ಮಾಡಿಸುವೆ” ಎಂದು ಮನೆಯೊಳಗೆ ಕರೆದುಕೊಂಡು ಹೋದರು. ಕಾಮನಬಿಲ್ಲನ್ನು ಕಂಡ ಪುಟ್ಟಿ ಅಂದು ತುಂಬಾ ಸಂತೋಶದಿಂದ ಕುಣಿದಾಡಿದ್ದಳು. ಮರುದಿನ ಶಾಲೆಯಲ್ಲಿ ತನ್ನ ಸ್ನೇಹಿತರಿಗೆಲ್ಲ ತಾನು ಕಾಮನಬಿಲ್ಲಿನೊಡನೆ ಕಳೆದ ಸಮಯದ ಬಗ್ಗೆ ಹೇಳಿ ಕುಶಿಪಟ್ಟಳು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *