‘ಚಿಯರ್ ಲೀಡಿಂಗ್’ ಸಾಗಿಬಂದ ಹಾದಿ

– ಕೆ.ವಿ.ಶಶಿದರ.

Cheerleader ಚೀಯರ್ ಲೀಡರ್

ಐಪಿಎಲ್ ಪ್ರಾರಂಬವಾಗುತ್ತಿದ್ದಂತೆ ಆಟ ನೋಡಲು ಮುಗಿಬೀಳುವ ಜನರಿದ್ದಂತೆ ಚಿಯರ್ ಲೀಡರ‍್‌ಗಳನ್ನು ನೋಡಲಿಕ್ಕಾಗಿಯೂ ಜನರು ಮುಗಿಬೀಳುತ್ತಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಕ್ರಿಕೆಟ್ ಅಬಿಮಾನಿಗಳೇ ಅಲ್ಲದೆ, ಕ್ರಿಕೆಟ್ ಕಲಿಗಳೂ ಅದರಲ್ಲಿ ಸೇರಿರುವ ಉದಾಹರಣೆಗಳಿವೆ. ಬಾರತದ ಮೊಹಮ್ಮದ್ ಶಮಿ, ದಕ್ಶಿಣ ಆಪ್ರಿಕಾ ಕ್ವಿಂಟನ್ ಡಿ ಕಾಕ್ ಇವರುಗಳು ಚಿಯರ್ ಲೀಡರ‍್‌ಗಳನ್ನೇ ಬಾಳಸಂಗತಿಯಾಗಿ ಆರಿಸಿಕೊಂಡಿದ್ದಾರೆ.

ಪ್ರಾರಂಬದ ದಿನಗಳಲ್ಲಿ ಚಿಯರ್ ಲೀಡಿಂಗ್ ಗಂಡಸರ ಕೆಲಸವಾಗಿತ್ತು!

ಚಿಯರ್ ಲೀಡರ‍್‌ಗಳ ಹಿನ್ನೆಲೆ ಅರಸುತ್ತಾ ಹೋದಲ್ಲಿ ಇತಿಹಾಸ ಕರೆದೊಯ್ಯುವುದು ನೂರು ವರ್‍ಶ‍ಕ್ಕೂ ಹಿಂದಕ್ಕೆ. ತಾಮಸ್ ಪೀಬಲ್ಸ್ ಈ ಕೆಲಸವನ್ನು ಹುಟ್ಟುಹಾಕಿದಾತ. ಈತ ಮಿನಿಸ್ಸೋಟಾಗೆ ಸ್ತಳಾಂತರಗೊಂಡ ಬಳಿಕ ಮಿನಿಸ್ಸೋಟಾ ಪುಟ್ಬಾಲ್ ತಂಡವನ್ನು ಹುರಿದುಂಬಿಸಲು ಒಂದು ಗುಂಪನ್ನು ಕಟ್ಟಿದ. ಇದರ ಹಿಂದೆ ಇದ್ದ ಬಲವಾದ ಕಾರಣವೆಂದರೆ, ಮಿನಿಸ್ಸೋಟಾದ ಪುಟ್ಬಾಲ್ ಟೀಮ್ ಬಹಳ ಸೋಲುಗಳನ್ನು ಕಂಡಿತ್ತು. ಅವರನ್ನು ಉತ್ತೇಜಿಸಿ ಗೆಲ್ಲುವ ಕುದುರೆಯನ್ನಾಗಿ ಮಾಡಲು ಪ್ರಾರಂಬವಾದುದ್ದೇ ಈ ಚಿಯರ್ ಲೀಡರ್ ಗುಂಪು. ಆರಂಬದಲ್ಲಿ ಎಲ್ಲಾ ಚಿಯರ್ ಲೀಡರ‍್‌ಗಳು ಗಂಡಸರಾಗಿದ್ದರು.

ನವೆಂಬರ್ 2, 1898ರಲ್ಲಿ ಪ್ರಿನ್ಸ್ಟನ್ ಮತ್ತು ಮಿನಿಸ್ಸೋಟಾ ವಿಶ್ವವಿದ್ಯಾಲಯಗಳ ನಡುವಿನ ಪುಟ್ಬಾಲ್ ಪಂದ್ಯದಲ್ಲಿ ಆರು ಜನ ಗಂಡಸರು ಚಿಯರ್ ಲೀಡರ‍್‌ಗಳಾಗಿ ತಮ್ಮ ಟೀಮನ್ನು ಹುರಿದುಂಬಿಸುವುದರ ಜೊತೆಗೆ ನೆರೆದಿದ್ದವರನ್ನು ಮನರಂಜಿಸಿದರು. ಚಿಯರ್ ಲೀಡರ‍್‌ಗಳ ಹುಟ್ಟು ಇದೇ ಎನ್ನುತ್ತದೆ ಇತಿಹಾಸ. 1903ರಲ್ಲಿ ಮೊದಲ ಚಿಯರ್ ಲೀಡರ್ ಗುಂಪು – ಗಾಮಾ ಸಿಗ್ಮಾ ಪ್ರೆಟೆರ‍್ನಿಟಿಯನ್ನು ಹುಟ್ಟುಹಾಕಿದರು. ಅಲ್ಲಿಂದ ಚಿಯರ್ ಲೀಡರ‍್‌ಗಳಾಗಿ ಗಂಡಸರೇ ಕಾರ‍್ಯನಿರ‍್ವಹಿಸುತ್ತಿದ್ದುದಾಗಿ ಇತಿಹಾಸ ಹೇಳುತ್ತದೆ. ಚಿಯರ್ ಲೀಡರ‍್‌ಗಳಾಗಿ ಹೆಂಗಸರ ಪ್ರವೇಶ ಆಗಿದ್ದು 1923ರಲ್ಲಿ. ಎರಡನೇ ವಿಶ್ವ ಸಮರದ ನಂತರ ಚಿಯರ್ ಲೀಡರ‍್‌ಗಳ ತಂಡಗಳು ಬಹುತೇಕ ಹೆಂಗಸರ ತಂಡಗಳಾಗೇ ಬದಲಾಯಿತು.

ಈ ಪರಿಕಲ್ಪನೆಯ ಆರಂಬದಲ್ಲಿ ಚಿಯರ್ ಲೀಡರ‍್‌ಗಳಿಗೆ ಪುರುಶ ಪ್ರದಾನವಾದ ಕ್ರೀಡೆ ಪುಟ್ಬಾಲಿನ ಕಲಿಗಳಿಗೆ ನೀಡುವ ಸ್ತಾನಮಾನವನ್ನೇ ನೀಡಲಾಗುತ್ತಿತ್ತು. ಕಾಲೇಜಿನಿಂದ ಹೊರಬರುವ ವಿದ್ಯಾರ‍್ತಿ ಪಡೆಯಬಹುದಾದ ಅತ್ಯಮೂಲ್ಯ ಶೌರ‍್ಯ ಪ್ರಶಸ್ತಿ ಎಂದರೆ ‘ಚಿಯರ್ ಲೀಡರ‍್‌’ ಎಂಬ ಕ್ಯಾತಿಯನ್ನು ಪಡೆಯುವುದು. ಈ ಕ್ಯಾತಿ ಅವರ ವ್ರುತ್ತಿಪರ ಜೀವನ ಅತವಾ ಸಾರ‍್ವಜನಿಕ ಜೀವನಕ್ಕೆ ಯೋಗ್ಯ ರಹದಾರಿ ಎಂದು ಪರಿಗಣಿಸಲ್ಪಟ್ಟಿತ್ತು. ಪ್ರಚಾರ ಶೀರ‍್ಶಿಕೆಯಾಗಿ ಸಹ ಬಳಸಲು ಸೂಕ್ತ ಎಂಬ ಅಬಿಪ್ರಾಯ ಆಗ ಇತ್ತು. ಪುಟ್ಬಾಲ್ ಕ್ರೀಡೆಯಲ್ಲಿ ಅತ್ಯಂತ ಪ್ರಮುಕ ಸ್ತಾನ ‘ಕ್ವಾರ‍್ಟರ್  ಬ್ಯಾಕ್’ನಶ್ಟೇ ಪ್ರಾಮುಕ್ಯತೆ ಇದಕ್ಕೂ ಇತ್ತು.

ಅಮೇರಿಕಾದ ಅದ್ಯಕ್ಶರಾಗಿದ್ದ ಡ್ವೈಟ್ ಐಸನ್ಹೊವರ್, ಪ್ರಾಂಕ್ಲಿನ್ ರೂಸ್ವೆಲ್ಟ್, ರೊನಾಲ್ಡ್ ರೇಗನ್ ಇವರುಗಳು ಸಹ ಚಿಯರ್ ಲೀಡರ‍್‌ಗಳಾಗಿದ್ದವರು

ಮೊದಲನೇ ವಿಶ್ವ ಸಮರ ಪ್ರಾರಂಬವಾದಾಗ ಯುದ್ದದಲ್ಲಿ ಹೋರಾಡಲು ಗಂಡಸರನ್ನು ನಿಯೋಜಿಸಿದಾಗ ಅದರಲ್ಲಿ ಬಹಳಶ್ಟು ಚಿಯರ್ ಲೀಡರ‍್‌ಗಳು ಇದ್ದರು. ಇದರಿಂದ ಕಾಲಿ ಸ್ತಾನವನ್ನು ತುಂಬಲು ಹೆಂಗಸರನ್ನು ಪ್ರೋತ್ಸಾಹಿಸಲಾಯಿತು. ಇದು ಚಿಯರ್ ಲೀಡಿಂಗ್ ನಲ್ಲಿ ಹೆಂಗಸರು ಬಾಗವಹಿಸಲು ಕಾರಣವಾಯಿತು. ಯುದ್ದ ಮುಗಿದ ನಂತರ ಗಂಡಸರ ಮೇಲುಗೈ ಇದ್ದ ಚಿಯರ್ ಲೀಡಿಂಗ್ ಗೆ ಅವರ ಪುನರಾಗಮನಕ್ಕೆ ವೇದಿಕೆ ಸಜ್ಜು ಮಾಡಿದರು. ಆದರೆ ಅದು ಸಂಪೂರ‍್ಣ ಪ್ಲಾಪ್ ಆಯಿತು. ಅಶ್ಟರಲ್ಲೆ ಮತ್ತೆ ಎರಡನೇ ವಿಶ್ವ ಸಮರ ಪ್ರಾರಂಬವಾದ ಕಾರಣ ಗಂಡಸರು ಮತ್ತೆ ರಣರಂಗಕ್ಕೆ ಹಿಂದಿರುಗಿದರು. ನಂತರದ ವರ‍್ಶಗಳಲ್ಲಿ ಚಿಯರ್ ಲೀಡಿಂಗ್ ಪೂರ‍್ಣವಾಗಿ ಹೆಂಗಸರ ಸ್ವತ್ತಾಯಿತು. ಈಗ ಚಿಯರ್ ಲೀಡರ‍್‌ಗಳ ಕ್ಯಾತಿ ಬದಲಾಗಿದ್ದು, ಚಿಯರ್ ಲೀಡಿಂಗ್ ಗೆ ಸ್ತ್ರೀಯರೇ ಸರಿ ಎನ್ನುವ ಪರಿಕಲ್ಪನೆ ಬಂದಿದೆ.

(ಮಾಹಿತಿ ಸೆಲೆ: mentalfloss.com, varsity.com, thoughtco.com
(ಚಿತ್ರ ಸೆಲೆ: cheerleading.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *