ಉತ್ತಮ ಆರೋಗ್ಯಕ್ಕೆ ಮೂರು ಸೂತ್ರಗಳು

– ಸಂಜೀವ್ ಹೆಚ್. ಎಸ್.

ನನ್ನ ಹಿಂದಿನ ಪ್ರತಿ ಅಂಕಣದಲ್ಲಿ ಉತ್ತಮ ಆರೋಗ್ಯ, ಉತ್ತಮ ಆಹಾರದ ಅವಶ್ಯಕತೆ ಮತ್ತು ಅನಿವಾರ‍್ಯತೆಯ ಬಗ್ಗೆ ಸಾಕಶ್ಟು ಚರ‍್ಚಿಸಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವನ್ನು ಹೊಂದಲು ಆಯುರ‍್ವೇದದ ಕೇವಲ ಮೂರು ಸೂತ್ರಗಳನ್ನು ಅನುಸರಿಸಿದರೆ ಸಾಕು. ಈ ಮೂರು ಸೂತ್ರಗಳು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲು ಸಹಕಾರಿಯಾಗಿವೆ. ತಲೆಯಿಂದ ಹಿಡಿದು ಪಾದದ ತನಕ ಕುರಿತಂತೆ ಎಲ್ಲಾ ವಿಚಾರಗಳನ್ನು ಹೇಳುವಶ್ಟು ಗಟ್ಟಿ ಸೂತ್ರಗಳಿವು. ಈ ಮೂರು ಸೂತ್ರಗಳನ್ನು ಅರಿತವರು ಕಂಡಿತ ಉತ್ತಮ ಆರೋಗ್ಯ ಪಡೆಯುವುದರಲ್ಲಿ ಸಂದೇಹವಿಲ್ಲ.

ಮೊದಲನೇ ಸೂತ್ರ: ಪಾದ ಸದಾ ಬೆಚ್ಚಗಿರಬೇಕು

ಪಾದ ಸದಾ ಬೆಚ್ಚಗಿರಬೇಕು ಅಂದರೆ ಸದಾ ದೇಹ ಚಟುವಟಿಕೆಯಿಂದ ಕೂಡಿರಬೇಕು. ದೇಹದ ಪಾದದಿಂದ ಹಿಡಿದು ಮುಡಿಯವರೆಗೂ ಸುಲಲಿತವಾಗಿ ರಕ್ತ ಸಂಚಾರವಾಗಬೇಕು. ಹೀಗಾದಾಗ ಪಾದ ಕೂಡ ಸದಾ ಬೆಚ್ಚಗಿರುತ್ತದೆ. ಆಲಸ್ಯ ಸೋಂಬೇರಿತನ ಇವೆಲ್ಲವೂ ಮನುಶ್ಯನನ್ನು ಅನಾರೋಗ್ಯದೆಡೆಗೆ ದೂಡುತ್ತದೆ. ಗಂಟೆಗಟ್ಟಲೆ ದೈಹಿಕ ಚಟುವಟಿಕೆ ಇಲ್ಲದೆ ಕೂತಲ್ಲೇ ಕೂತು ಟಿವಿ ಅತವಾ ಮೊಬೈಲ್ ನೋಡುತ್ತಾ ಕುರಕಲು ತಿಂಡಿ ತಿನ್ನುತ್ತಾ ಕಾಲಹರಣ ಮಾಡುವುದು ಈಗಿನ ಟ್ರೆಂಡ್ ಆಗಿದೆ; ಆದರೆ ಇದು ಉತ್ತಮ ಆರೋಗ್ಯದ ಸೂಚಕವಲ್ಲ. ಈಗಿನ ಬಹುಪಾಲು ಆಪೀಸ್ ಕೆಲಸಗಳು ಕೂಡ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೂತು ಮಾಡುವಂತ ಕೆಲಸಗಳಾಗಿವೆ. ಇದರಿಂದ ದೈಹಿಕ ಚಟುವಟಿಕೆ ಕುಂಟಿತವಾಗುತ್ತದೆ. ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವವರು, ಕನಿಶ್ಟ, ಗಂಟೆಗೆ ಒಮ್ಮೆಯಾದರೂ ಒಂದೆರಡು ನಿಮಿಶ ಎದ್ದು ವಾಕ್ ಮಾಡಿ ಬಂದರೆ ದೇಹ ಮತ್ತಶ್ಟು ಉತ್ತೇಜನಗೊಳ್ಳುತ್ತದೆ. ಇನ್ನೊಂದು ಮುಕ್ಯ ವಿಶಯವೆಂದರೆ, ಈಗೆಲ್ಲ ಮನೆಯಲ್ಲಿ ನೆಲಕ್ಕೆ ಟೈಲ್ಸ್ ಅತವಾ ಮೊಸಾಯಿಕ್ ಹಾಕಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಇದು ನಮ್ಮ ದೇಹಕ್ಕೆ ಬಹಳಶ್ಟು ಹಾನಿ ಉಂಟುಮಾಡುತ್ತದೆ. ಇದರಿಂದ ಪಾದ ಮತ್ತು ದೇಹ ತಂಪಾಗಿ ಹಲವಾರು ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ. ಕಾಸು ಕೊಟ್ಟು ಕಾಯಿಲೆ ಕೊಂಡುಕೊಂಡ ಹಾಗಿದು. ಹಿಂದಿನ ಕಾಲದಲ್ಲಿ ಸಗಣಿಯಲ್ಲಿ ಸಾರಿಸಿದ ನೆಲದಲ್ಲಿ ಜೀವನ ಸಾಗಿಸುತ್ತಿದ್ದರು ಅಲ್ಲವೇ!

ಎರಡನೇ ಸೂತ್ರ: ಹೊಟ್ಟೆ ಹಗುರವಾಗಿ ಇರಬೇಕು

ಹೊಟ್ಟೆ ಮಾನವನ ದೇಹದ ಬಹುಮುಕ್ಯ ಅಂಗವಾಗಿದೆ. ಪ್ರತಿನಿತ್ಯ ಜನ ದುಡಿಯುವುದೇ ಇದಕ್ಕಾಗಿ. ಹೊಟ್ಟೆ ತುಂಬಿಸಲು ಮೂರು ಹೊತ್ತು, ಏನಾದರೂ ತಿನ್ನಲೇಬೇಕು. ಹೊಟ್ಟೆ ನಮ್ಮೆಲ್ಲಾ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿದೆ. ಈ ಹೊಟ್ಟೆಯಲ್ಲಿ ಕರುಳು, ಜಟರ, ಈಲಿ, ಪಿತ್ತಕೋಶ  ಬಹುಮುಕ್ಯ ಅಂಗಗಳಾಗಿವೆ. ಎಲ್ಲಾ ಅಂಗಾಂಗಗಳ ಕೆಲಸವನ್ನು ಸಮತೋಲನದಲ್ಲಿಡಲು ನಮ್ಮ ಹೊಟ್ಟೆಗೆ ಸೇರುವ ಆಹಾರ ಮೆದುವಾಗಿರಬೇಕು. ಜೀರ‍್ಣಕ್ರಿಯೆ ನಡೆಯುವುದೇ ಹೊಟ್ಟೆಯಲ್ಲಿ. ತಿಂದದ್ದು ಸರಿಯಾಗಿ ಜೀರ‍್ಣವಾಗದಿದ್ದರೆ ಎಲ್ಲವೂ ಕೂಡ ಸಮಸ್ಯೆ, ಆದ್ದರಿಂದ ಜೀರ‍್ಣಕ್ರಿಯೆ ನಡೆಯುವ ಅಂಗಾಂಗಗಳಿಗೆ ಸರಿಯಾದ ಆಹಾರವನ್ನು ನೀಡುವ ಕರ‍್ತವ್ಯ ನಮ್ಮ ಮೇಲಿರುತ್ತದೆ.

ಸಿಕ್ಕಿದ್ದನ್ನು ಸಿಕ್ ಸಿಕ್ಕಲ್ಲಿ ಸಿಕ್ಕಾಪಟ್ಟೆ ತಿಂದರೆ ಸಿಕ್ ನೆಸ್(ಬೇನೆ) ಬರುವುದು. ಅದರ ಬದಲು, ಉದಾಹರಣೆಗೆ, ನಾಲ್ಕು ಇಡ್ಲಿ ತಿನ್ನುವ ಮನಸಾದರೆ ಎರಡು ಅತವಾ ಮೂರು ಇಡ್ಲಿಗೆ ನಿಲ್ಲಿಸಬೇಕು. ಇದರಿಂದ ಹೊಟ್ಟೆ ಬಾರ ಎನಿಸದೆ, ಹಗುರವಾಗಿರುತ್ತದೆ ಮತ್ತು ನಾವು ಕೂಡ ಬಹಳ ಹೆಚ್ಚು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಗಂಟಲ ತನಕ ಹೊಟ್ಟೆ ಬಿರಿಯುವ ಹಾಗೆ ತಿಂದರೆ ಹೊಟ್ಟೆಬಾರದಿಂದ ಆಲಸ್ಯ ಬಂದು, ಯಾವ ಕೆಲಸವೂ ಸಾಗುವುದಿಲ್ಲ. ಹೆಚ್ಚಿನವರಿಗೆ ಇದರ ಅನುಬವ ಕಂಡಿತ ಆಗಿರುತ್ತದೆ. ಒಂದೇ ಹೊತ್ತಿಗೆ, ಅತಿಹೆಚ್ಚಾಗಿ ತಿಂದು ನಾವೇನೋ ಒಂದು ಕಡೆ ಕುಳಿತು ದೇಹವನ್ನು ಆರಾಮುಗೊಳಿಸುತ್ತೇವೆ. ಆದರೆ ನಿಜವಾಗಿ ದೇಹ ಆರಾಮುಗೊಂಡಿರುವುದಿಲ್ಲ. ಅದರ ಬದಲಾಗಿ ನಮ್ಮ ದೇಹದ ಎಲ್ಲಾ ಅಂಗಾಂಗಗಳಿಗೆ ಕೆಲಸದ ಒತ್ತಡ ಹೆಚ್ಚಾಗಿ ಅವುಗಳ ಕೆಲಸದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಲಗು ಆಹಾರ ಆರೋಗ್ಯಕ್ಕೆ ಒಳ್ಳೆಯದು.

ಮೂರನೇ ಸೂತ್ರ: ತಲೆ ತಣ್ಣಗಿರಬೇಕು

ನಮ್ಮ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕೂಡ ಅತಿಹೆಚ್ಚು ಮುಕ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡು ಒಂದಕ್ಕೊಂದು ಬೆಸೆದುಕೊಂಡಿವೆ. ಮಾನಸಿಕವಾಗಿ ಸ್ವಾಸ್ತ್ಯ ವಿಲ್ಲದಿದ್ದರೆ, ಎಶ್ಟೇ ಒಳ್ಳೆಯ ಆಹಾರ ಸೇವಿಸಿದರೂ ಕೂಡ ನೀರಿನಲ್ಲಿ ಹೋಮ ಮಾಡಿದ ಹಾಗೆ. ಒಳ್ಳೆಯ ಆಹಾರ ಮತ್ತು ಅಬ್ಯಾಸಗಳನ್ನು ಬೆಳೆಸಿಕೊಂಡು ಕೂಡ ಮಾನಸಿಕವಾಗಿ ಚಿಂತೆಗೀಡಾದರೆ, ಅದೆಲ್ಲವೂ ಕೂಡ ವ್ಯರ‍್ತವಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಾಂಬಿನೇಶನ್ ಯಾವಾಗಲೂ ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ. ಮೂರನೇ ಸೂತ್ರ ಹೇಳುವುದು ಇಶ್ಟೇ . ಯೋಚನೆಗಳೆಲ್ಲಾ ಶುರುವಾಗುವುದೆ ನಮ್ಮ ಮೆದುಳಿನಲ್ಲಿ, ಆದ್ದರಿಂದ ನಮ್ಮ ತಲೆಯನ್ನು ತಂಪಾಗಿ ಇರಿಸಬೇಕು. ರಕ್ತದೊತ್ತಡದ ಕಾಯಿಲೆ ಈಗ ಎಲ್ಲರಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಇದೆಲ್ಲದಕ್ಕೂ ಕಾರಣ ಅನವಶ್ಯಕವಾಗಿ ಯೋಚನೆ ಮಾಡುವುದು, ಸದಾ ಚಿಂತೆ ಮಾಡುವುದು ಮತ್ತು ಸದಾ ಒತ್ತಡದಲ್ಲಿರುವುದಾಗಿದೆ. ಇವೆಲ್ಲವೂ ಕೂಡ ನಮ್ಮ ದೇಹಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಸ್ವಸ್ತತೆಯನ್ನು ಕಳೆದುಕೊಳ್ಳುತ್ತಿರುವರ ಸಂಕ್ಯೆ ದಿನೇ ದಿನೇ ಹೆಚ್ಚುತ್ತಿದೆ ಮತ್ತು ಅದಕ್ಕಾಗಿ ಎಲ್ಲಾ ಕ್ಶೇತ್ರಗಳಲ್ಲಿ ಮಾನಸಿಕ ತಜ್ನರ ಅವಶ್ಯಕತೆ ಕೂಡ ಹೆಚ್ಚಾಗುತ್ತಿದೆ.

ಎಶ್ಟೇ ಕಶ್ಟ ಬಂದರೂ ಚಿಂತೆ ಬಿಟ್ಟು ಆದಶ್ಟು ತಲೆಯನ್ನು ತಂಪಾಗಿರಿಸಬೇಕು. ಕೆಲಸದ ಒತ್ತಡ, ಕುಟುಂಬ ನಿರ‍್ವಹಣೆ, ವಿದ್ಯಾಬ್ಯಾಸ ಇತರೆ ಎಲ್ಲಾ ಕೆಲಸಕಾರ‍್ಯಗಳಲ್ಲಿ ಒತ್ತಡ ಇದ್ದೇ ಇರುತ್ತದೆ, ಆದರೆ ಅದನ್ನು ನಿರ‍್ವಹಣೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡು ಜೀವನ ನಡೆಸುವುದೇ ನಿಜವಾದ ಮಾನಸಿಕ ಆರೋಗ್ಯ. ತಲೆ ಹೊಟ್ಟೆ ಮತ್ತು ಪಾದ ಈ ಮೂರು ಸರಿಯಾಗಿದ್ದರೆ ಎಲ್ಲವೂ ಸರಿ ಇದ್ದಂತೆ ಎಂದು ಹೇಳುತ್ತದೆ ಆಯುರ‍್ವೇದ. ತಲೆಯಿಂದ ಪಾದದವರೆಗೆ ಅನುಸರಿಸುವ ಈ ಮೂರು ಸೂತ್ರಗಳಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ. ಇದನ್ನು ಅರಿತು ನಡೆದವ ಜಾಣ. ಈ ನಿಟ್ಟಿನ್ನಲ್ಲಿ ಆರೋಗ್ಯವೇ ಬಾಗ್ಯ ಎಂಬ ನಾಣ್ಣುಡಿಯನ್ನು ಎಂದಿಗೂ ಮರೆಯದಿರೋಣ.

( ಚಿತ್ರಸೆಲೆ: pixabay.com )

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *