ಹೊಸೂರು ಮೇಲ್ಸೇತುವೆಯಿಂದ ಕನ್ನಡಿಗರಿಗೆ ಸಿಕ್ಕಿದ್ದೇನು?

hosurfly

ಮಡಿವಾಳದಿಂದ ಹೊಸೂರಿಗೆ ಹೋಗುವ ಹಾದಿಯಲ್ಲಿ ದೊಡ್ಡತೋಗೂರಿನ ಹೋಬಳಿಯಲ್ಲಿನ ಸಾವಿರಾರು ಎಕರೆಗಟ್ಟಲೆ ಜಾಗವನ್ನು ಮಿಂಕಯ್ಗಾರಿಕೆಗಾಗಿ (electronics industry) ಕರ್‍ನಾಟಕ ಸರ್‍ಕಾರ Keonics ಎಂಬ ಹೆಸರಿನಡಿ ಮೀಸಲಿಟ್ಟಿದ್ದು, ಬಳಿಕ ಅಲ್ಲಿ ಬೆಳೆದೆದ್ದ ಜಾಗವೇ ಎಲೆಕ್ಟ್ರಾನಿಕ್ಸ್ ಸಿಟಿ. ಬೆಂಗಳೂರಿನ ಆಗ್ನೇಯ ತುಂಡಿನಲ್ಲಿರುವ, ಬೆಂಗಳೂರಿಗೇ ಸೇರಿರುವ ಈ ಜಾಗವು ಇಂದು ಬೆಂಗಳೂರಿನೊಳಗೇ ಇದ್ದರೂ ಬೆಂಗಳೂರಿನಿಂದಾಚೆ ಇದ್ದಂತಾಗಿದೆ. ಇಂದು ಅಲ್ಲಿಗೆ ಹೋಗಲು ಈ ಸೇತುವೆ ಬೇಕೇ ಬೇಕು ಎಂದು ಅನಿಸುತ್ತಿದ್ದು ಊರೊಳಗಿನ ಇಂತದ್ದೊಂದು ಜಾಗ ತಲುಪಲೂ ಹೆಚ್ಚುವರಿ ಸುಂಕ ಬೇರೆ ನೀಡಬೇಕು ಎಂಬುದು ದುರಂತ ಅನಿಸುವುದರಲ್ಲಿ ಡವ್ಟೇ ಇಲ್ಲ.

ಈ ಮೇಲ್ಸೇತುವೆಯನ್ನು ಬಿಟ್ಟು ಕೆಳಗಡೆ ಹೆದ್ದಾರಿಯಾಗಿರುವ ಹೊಸೂರು ರಸ್ತೆಯಲ್ಲಿ ಹೊಸೂರಿನತ್ತ ಹೊರಟಾಗ ಎಲ್ಲೆಲ್ಲೂ ಕಾಣುವುದು ಬಗೆ-ಬಗೆಯ ಕಯ್ಗಾರಿಕಾ ಕಟ್ಟಡಗಳು, ಕಾರ್‍ಕಾನೆಗಳು ಹಾಗೂ ಎಲ್ಲೆಲೂ ಗೋಪುರಗಳಂತೆ ಎತ್ತರದ ಗುಬ್ಬಚ್ಚಿ ಗೂಡಿನಂತ ಮಹಡಿ-ಮನೆಗಳು. ಈ ಕಾರ್‍ಕಾನೆಗಳು ಹತ್ತಾರು ವರ್‍ಶಗಳಿಂದಲೂ ಕೆಲಸ ಮಾಡಿಕೊಂಡು ಬಂದಿದ್ದು, ಸುತ್ತಲಿನ ಜನರಿಗೆ ಸಾಕಶ್ಟು ಕೆಲಸ ನೀಡುವ ಮೂಲಕ ಸಾವಿರಾರು ಬೆಂಗಳೂರಿನ ಸಂಸಾರಗಳನ್ನು ಸಾಕಿಕೊಂಡೂ ಬಂದಿವೆ. ಬೆಂಗಳೂರಿನ ಈ ವಲಯದ ಬೆಳವಣಿಗೆಗೆ ಈ ಕಾರ್‍ಕಾನೆಗಳ ಕೊಡುಗೆ ಹಿರಿದಾದದ್ದೇ. ಇಂದಿಗೂ ಮಿಂಕಯ್ಗಾರಿಕೆ ದೊಡ್ಡದಾಗಿ ಬೆಳೆದು ನಿಂತಿದ್ದರೂ ಅವುಗಳ ಬೆನ್ನೆಲುಬಿನಂತೆ ಈ ಇತರೆ ಕಯ್ಗಾರಿಕೆಗಳು ಇವೆ ಎನ್ನಲು ಊಹೆಮಾಡಬೇಕಾಗಿಲ್ಲ. ಹೀಗಿರುವಾಗ ಹೊಸೂರು ರಸ್ತೆಯಲ್ಲಿನ ಒಯ್ಯಾಟ (ಒಯ್ಯುಗೆಗಳ ಓಡಾಟ) ಮಿಂಕಯ್ಗಾರಿಕೆಗಶ್ಟೇ ಮೀಸಲಿರದೆ ಈ ಎಲ್ಲಾ ಹಳೆಯ ಕಯ್ಗಾರಿಕೆಗಳಿಗೂ ನಂಟಿಟ್ಟುಕೊಂಡಿದೆ.

ಬೆಂಗಳೂರಿನಲ್ಲಿ ಒಯ್ಯಾಟದ ದಟ್ಟಣೆಯಿಂದ ದಣಿದಿದೆ ಎಂಬ ಕಾರಣಕ್ಕೆ ಬರೀ ಮಿಂಕಯ್ಗಾರಿಕೆಗೆ ನೆರವಾಗುವಂತೆ ಮಡಿವಾಳದಿಂದ ಹೊಸೂರಿನವರೆಗೂ ನಡುವೆ ಒಂದೇ ಒಂದು ಹೊರದಾರಿಯಿಯೂ ಇರದ ಮೇಲ್ಸೇತುವೆ ಕಟ್ಟಿರುವುದು ಬೆಂಗಳೂರಿನ ಮಿಕ್ಕ ವಲಯಗಳಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್‍ಕವೇನೋ ಸುಗಮಗೊಳಿಸಿರಬಹುದು, ಆದರೆ ಕೆಳಗೆ ಬೆಳೆದು ನಿಂತಿರುವ ಮಿಕ್ಕೆಲ್ಲಾ ಕಾರ್‍ಕಾನೆಗಳಿಗೆ ಇದ್ದ ಒಯ್ಯಾಟಕ್ಕೆ ಇದರಿಂದ ಏನೂ ಸಿಗುತ್ತಿಲ್ಲ. ಮೇಲಾಗಿ ಇದ್ದ ಹೆದ್ದಾರಿಯಲ್ಲಿ ಸಾಕಶ್ಟು ಜಾಗವೂ ಕಡಿಮೆಯಾಗಿ ಹೋಗಿದ್ದು, ಒಯ್ಯಾಟ ದಟ್ಟಣೆ ಇನ್ನೂ ಹೆಚ್ಚೇ ಆಗಿದೆ. ಇದರಿಂದ ಈ ಎಲ್ಲಾ ಕಾರ್‍ಕಾನೆಗಳು ಬೆಂಗಳೂರಿನಿಂದ ದೂರ ಸರಿದು ಹೊಸೂರಿನತ್ತ ಹೋಗುವ ಏರ್‍ಪಾಟು ಹುಟ್ಟುವಂತಾಗಿದೆ. ಇವುಗಳಲ್ಲಿ ಬೆಂಗಳೂರಿಗರಿಗಿದ್ದ ಕೆಲಸಗಳೂ ಹೋಗಲಿವೆ, ತಮಿಳುನಾಡಿಗೆ ಸೇರಿರುವ ಹೊಸೂರಿನ ಜನರಿಗೆ ಸಿಗಲಿವೆ. ಕನ್ನಡ ನಾಡಿನಲ್ಲಿ ಬೆಳೆದ ಕಾರ್‍ಕಾನೆಗಳಿಂದ ಮುಂದಿನ ದಿನಗಳಲ್ಲಿ ನಮ್ಮ ಜನರಿಗೇ ದೊರಕದ ಕೆಲಸದವಕಾಶ ಪಕ್ಕದ ನಾಡಿನ ತಮಿಳರಿಗೆ ದೊರಕಲಿದೆ!

ಈ ಮೇಲ್ಸೇತುವೆ ಹೊಸೂರಿಗೂ ತ್ವರಿತ ಸಂಪರ್‍ಕದಂತೆ ಇರುವುದರಿಂದ ಹೊಸೂರಿನ ಜನರಿಗೆ ಚೆನ್ನಾಗೇ ಬೆಳೆದು ನಿಂತ ಬೆಂಗಳೂರಿನ ಸವ್ಕರ್‍ಯಗಳಿಗೂ ಎಟಕಿಸಿಕೊಟ್ಟಂತಾಗಿದೆ. ಆದರೆ ಇವೆಲ್ಲವೂ ಹೆಚ್ಚಾಗಿ ಕನ್ನಡಿಗರು ಕಟ್ಟಿರುವ ತೆರಿಗೆಗಳಿಂದ ಎಂಬುದು ಬೇಸರದ ವಿಶಯ. ಒಟ್ಟಾರೆ ಈ ಸೇತುವೆ ಕನ್ನಡಿಗರ ಕಯ್ಯಲ್ಲಿದ್ದ ದುಡ್ಡನ್ನು ತೆಗೆದುಕೊಂಡು ಅವರ ಕಣ್ಣ ಮುಂದೆಯೇ ಅವರ ಊರಿನೊಳಗಿನ ಒಂದು ಜಾಗಕ್ಕೆ ಹೋಗಲು ಸುಂಕ ಬೇಕಾಗುವಂತೆ ಮಾಡಿದೆಯಲ್ಲದೆ, ನಮ್ಮ ಜನರೇ ಬೆಳೆಸಿದ ಇತರೆ ಕಾರ್‍ಕಾನೆಗಳಿಗೆ ಕಶ್ಟ ಹೆಚ್ಚಿಸಿ, ಕೆಲವಕ್ಕೆ ಹಂಸರಾಗ ಹಾಡಿಸಿದಲ್ಲದೆ, ಮಿಕ್ಕ ಕೆಲವುಗಳಲ್ಲಿ ಕನ್ನಡಿಗರಿಗಿದ್ದ ಕೆಲಸದವಕಾಶವೂ ಇಳಿಮುಕವಾಗಿಸಿದೆ. ಸೇತುವೆಗಳು ನಮ್ಮನ್ನು ಏಳಿಗೆಯತ್ತ ಒಯ್ಯಲೆಂದು ನಾವು ಕಟ್ಟಿಕೊಳ್ಳುವ ಸಾದನಗಳೇ ಆದಲ್ಲಿ, ಈ ಮೇಲ್ಸೇತುವೆ ನಮ್ಮನ್ನು (ಕನ್ನಡಿಗರನ್ನು) ಯಾವ ಏಳಿಗೆಯತ್ತವೂ ಒಯ್ಯುತ್ತಿಲ್ಲ. ಈ ಮೇಲ್ಸೇತುವೆಯ ಕಟ್ಟುವಲ್ಲಿ ಕೇಂದ್ರ ಸರ್‍ಕಾರದ ಕಯ್ವಾಡ ಇರುವುದರಿಂದ ಎಂದಿನಂತೆ ಅದರಲ್ಲಿ ಕನ್ನಡಿಗರ ಜೀವನದ ಚಿಂತನೆ ಎಳ್ಳಶ್ಟೂ ಸೇರಿಲ್ಲ ಎಂಬುದು ಇಲ್ಲೂ ಗೋಚರವಾಗುತ್ತಿದೆ.

ರೋಹಿತ್ ರಾವ್

(ಚಿತ್ರ: www.flickr.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Maaysa says:

    ಈ ದಿಣ್ಣೆದಾರಿ/ಏರಿಹಾದಿ ಬೇಡಿಕೆಯಿಟ್ಟು ಸರಕಾರವನ್ನು ಇನ್ಫೋಸಿಸ್-ಇತ್ಯಾದಿ ಗೋಳುಹೊಯ್ದುಕೊಂಡಿತ್ತು.

    ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ ಹೊಸ ಗಾಳಿ-ಬಂಡಿ-ನಿಲ್ದಾಣಕ್ಕೂ ದೊಡ್ಡ ದಿಣ್ಣೆದಾರಿ/ಏರಿಹಾದಿಯೊಂದನ್ನು ಕಟ್ತುತ್ತಿಹರು.
    ಆ ಬಗೆಯ ಹಾದಿಗಳ ಕಟ್ಟುವ ಕಂಪನಿಯೊಂದು ಚೆನ್ನಾಗಿ ಲಾಬವನ್ನು ಮಾಡುತ್ತಿದೆ .

ಅನಿಸಿಕೆ ಬರೆಯಿರಿ: