ನಮ್ಮ ಆಣೆಕಟ್ಟೆಗಳಲ್ಲಿ 49.1 ಟಿ.ಎಂ.ಸಿ-ಅಡಿ ಹೂಳಿದೆ!

hoolu

ಈಗಾಗಲೇ ಕರ್‍ನಾಟಕದ ರಾಜದಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ, ಕುಡಿಯುವ ನೀರಿನ ಸಮಸ್ಯೆ ಕಾಣತೊಡಗಿದೆ. ಹೋದ ವರ್‍ಶ ಕಯ್ಕೊಟ್ಟ ಮಳೆಯಿಂದಾಗಿ ರಾಜ್ಯದ ಬಹುತೇಕ ಕಡೆ ಈ ನೀರಿನ ಸಮಸ್ಯೆ ಕಾಣಿಸುತ್ತಿದೆ ಅನ್ನೋದು ಸರ್‍ಕಾರದ ವಾದ. ಮಳೆ ಕಯ್ಕೊಟ್ಟಿದ್ದರಿಂದ ಕ್ರುಶಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕಾಣಿಸತೊಡಗುತ್ತದೆ ನಿಜ. ಆದರೆ ಕರ್‍ನಾಟಕಕ್ಕೆ ಈ ಪರಿಸ್ತಿತಿಯನ್ನು ನಿಯಂತ್ರಿಸುವ ಶಕ್ತಿ ಇದೆಯೇ? ಕಂಡಿತವಾಗಿಯೂ ಇದೆ. ಕರ್‍ನಾಟಕ ರಾಜ್ಯ ನಯ್ಸರ್‍ಗಿಕವಾಗಿ ಶ್ರೀಮಂತವಾಗಿರುವ ನಾಡು.

ಹಲವಾರು ಪ್ರಮುಕ ನದಿ ಹಾಗೂ ಉಪನದಿಗಳು ಈ ನಾಡಿನಲ್ಲಿ ಹರಿಯುತ್ತವೆ. ಈ ನೀರನ್ನು ಹಿಡಿದಿಟ್ಟುಕೊಳ್ಳಲು ಹಲವಾರು ಆಣೆಕಟ್ಟೆಗಳನ್ನು ನಿರ್‍ಮಿಸಲಾಗಿದೆ. ಅವುಗಳಲ್ಲಿ ಪ್ರಮುಕವಾಗಿ ಆಲಮಟ್ಟಿ, ಬಸವ ಸಾಗರ, ಬದ್ರಾ, ಹಾರಂಗಿ, ಕ್ರಿಶ್ಣರಾಜ ಸಾಗರ, ಲಿಂಗನಮಕ್ಕಿ, ನಾರಾಯಣಪುರ, ಸುಪಾ, ತುಂಗಬದ್ರಾ, ವಾಣಿವಿಲಾಸ ಸಾಗರ. ಈ ಆಣೆಕಟ್ಟೆಗಳಲ್ಲಿ ಹಿಡಿದಿಡಲಾಗುವ ನೀರನ್ನು ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಲಾಗುತ್ತದೆ.

ಕರ್‍ನಾಟಕದಲ್ಲಿ ಹುಟ್ಟುವ ನದಿಗಳಿಂದ ಸರಿಸುಮಾರು 3475 ಟಿ.ಎಂ.ಸಿ ಯಶ್ಟು ನೀರು ಸಿಗುತ್ತದೆ ಎನ್ನುತ್ತವೆ ಸರ್‍ಕಾರಿ ದಾಕಲೆಗಳು. ಆದರೆ ಇದರಲ್ಲಿ ಉಪಯೋಗಿಸಬಹುದಾದ ನೀರಿನ ಪ್ರಮಾಣ 1695 ಟಿ.ಎಂ.ಸಿ. ಮತ್ತು ಈ ನೀರನ್ನು ಸರಿಯಾಗಿ ಉಪಯೋಗಿಸಲು ವಿವಿದ ನಿಗಮಗಳನ್ನು ಸಹ ರಚಿಸಲಾಗಿದೆ. ಆದರೂ ಸಹ ನಮ್ಮ ರಾಜ್ಯದಲ್ಲಿ ಯಾಕೆ ಕುಡಿಯುವ ನೀರಿನ ಹಾಗೂ ಕ್ರುಶಿ ಅವಶ್ಯಕತೆಗಳನ್ನು ಪೂರಯ್ಸಲು ಸಾದ್ಯವಾಗುತ್ತಿಲ್ಲ. ಈ ನೀರನ್ನು ಬಳಸಿಕೊಳ್ಳಲು ಮಾಡಿರುವ ಯೋಜನೆಗಳಲ್ಲಿ ಹಲವಾರು ಇನ್ನೂ ಆರಂಬಿಕ ಹಂತದಲ್ಲಿದ್ದರೆ, ಇನ್ನೂ ಕೆಲವು ಕುಂಟುತ್ತಾ ಸಾಗುತ್ತಿವೆ. ಕೆಲವು ಮಾತ್ರ ಪೂರ್‍ಣಗೊಂಡಿವೆ. ಇದಕ್ಕೆ ಹಲವಾರು ರಾಜಕೀಯ, ಕಾನೂನು ಹಾಗೂ ಆರ್‍ತಿಕ ಕಾರಣಗಳಿರಬಹುದು. ಆದರೆ ಇವನ್ನೆಲ್ಲಾ ಮೀರಿಸುವ ಅಪಾಯವೊಂದು ನಮ್ಮ ಮುಂದೆ ಎರಗುತ್ತಿದೆ.

ಆಣೆಕಟ್ಟೆಗಳನ್ನು ತುಂಬುತ್ತಿರುವ ಹೂಳು!!!

ಹವ್ದು, ನಮ್ಮ ನಾಡಿನಲ್ಲಿರುವ ಹಲವಾರು ಆಣೆಕಟ್ಟೆಗಳಲ್ಲಿ ಹೂಳು ತುಂಬಿಕೊಳ್ಳುತ್ತಾ ಹೋಗುತ್ತಿದೆ. ಈ ಹೂಳು ತುಂಬಿಕೊಳ್ಳುತ್ತಾ ಹೋದಂತೆ ನಮಗೆ ಅಪಾಯ ತಪ್ಪಿದ್ದಲ್ಲ. ಹೂಳು ಎಂದರೆ ಸಂಪತ್ಬರಿತ ಮಣ್ಣು. ಹವ್ದು! ವಿವಿದ ಮೂಲಗಳಲ್ಲಿ ಹುಟ್ಟುವ ನದಿಗಳು ತಾವು ಹರಿದು ಬಂದ ದಾರಿಯಲ್ಲಿ ಸಿಗುವ ಮಣ್ಣು, ಕನಿಜ, ಸತ್ವ, ಕಸ ಹೀಗೆ ಎಲ್ಲವನ್ನು ಹೊತ್ತುಕೊಂಡು ಬರುತ್ತವೆ. ಹೀಗೆ ಹೊತ್ತುಕೊಂಡು ಬಂದ ಮಣ್ಣನ್ನು ನೀರನ್ನು ಹಿಡಿದಿಡಲು ಮಾಡಿರುವ ಆಣೆಕಟ್ಟೆಯ ತಳದಲ್ಲಿ ತಂದು ಒಗೆಯುತ್ತವೆ. ಈ ಪ್ರಕ್ರಿಯೆ ದಿನವೂ ನಡೆಯುವುದರಿಂದ ಪ್ರತಿದಿನವೂ ಹೂಳು ಆಣೆಕಟ್ಟೆಯ ತಳದಲ್ಲಿ ಶೇಕರಣೆಯಾಗುತ್ತಲೇ ಹೋಗುತ್ತದೆ. ಈ ಹೂಳನ್ನು ನಾವು ಕಾಲಕಾಲಕ್ಕೆ ತೆರವುಗೊಳಿಸದಿದ್ದರೆ ಆ ಆಣೆಕಟ್ಟೆಯಲ್ಲಿ ನೀರನ್ನು ಶೇಕರಿಸುವ ಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ!!! ಇಂತಹುದೇ ಅಪಾಯ ಈಗ ನಮ್ಮ ನಾಡಿನಲ್ಲಿ ಒದಗಿ ಬಂದಿದೆ. ಇತ್ತೀಚಿನ ಗಣಿಗಾರಿಕೆ, ಕಾಡು ನಾಶ, ಅಕ್ರಮ ಮರಳು ಗಣಿಗಾರಿಕೆ ಮುಂತಾದವುಗಳು ನಿರೀಕ್ಶಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಹೂಳು ಆಣೆಕಟ್ಟೆಗೆ ಸೇರುವಂತೆ ಮಾಡುತ್ತಿವೆ ಅನ್ನೋದು ದಿಟ. ಕಳೆದ ಮೂವತ್ತು-ನಲವತ್ತು ವರ್‍ಶಗಳಲ್ಲಿ ಹೆಚ್ಚಿನ ಹೂಳು ಶೇಕರಣೆಯಾಗುತ್ತಿದೆ ಅನ್ನುತ್ತವೆ ಸರ್‍ಕಾರಿ ದಾಕಲೆಗಳು.

ಏನು ಅಪಾಯ?

ಮೊದಲನೆಯದಾಗಿ ವರ್‍ಶದಿಂದ ವರ್‍ಶಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋದರೆ, ನಾವು ಅಂದುಕೊಂಡ ಹಾಗೆ ಹೊಸ ನೀರಾವರಿ ಯೋಜನೆಗಳನ್ನು ಮಾಡಲು ಆಗುವುದಿಲ್ಲ. ಯಾಕಂದ್ರೆ ಈಗಿರುವ ಯೋಜನೆಗಳಿಗೆ ನೀರು ಸಾಲದಾದರೆ ಹೊಸ ಯೋಜನೆಗಳಿಗೆ ನೀರು ಎಲ್ಲಿಂದ ತರೋದು? ಎರಡನೆಯ ದೊಡ್ಡ ಅಪಾಯವೆಂದರೆ ನಮ್ಮ ನಾಡಿನಲ್ಲಿ ಹುಟ್ಟುವ ಬಹುತೇಕ ನದಿಗಳು ಬೇರೆ ರಾಜ್ಯದಲ್ಲೂ ಸಹ ಹರಿಯುತ್ತವೆ. ಅಲ್ಲಿಯ ಜನರೂ ಸಹ ಆ ನದಿಗಳ ಮೇಲೆ ಅವಲಂಬಿತರಾಗಿದ್ದಾರೆ. 1956 ರ ನದಿ ನೀರು ಹಂಚಿಕೆಯ ಸೂತ್ರದ ಅನ್ವಯ ನಮ್ಮ ನದಿ ನೀರು ವಿವಿದ ರಾಜ್ಯಗಳ ನಡುವ ಹಂಚಿಕೆಯಾಗಿದೆ. ಅದರ ಅನ್ವಯ ನಾವು ಪ್ರತಿ ವರ್‍ಶ ಅಶ್ಟು ಪ್ರಮಾಣದ ನೀರನ್ನು ಬೇರೆ ರಾಜ್ಯಗಳಿಗೆ ಹರಿಸಲೇ ಬೇಕು. ಹೂಳು ತುಂಬಿರುವುದರಿಂದ ಮೊದಲೇ ಕಡಿಮೆಯಾಗುವ ಪ್ರಮಾಣದಿಂದಾಗಿ ಬೇರೆ ರಾಜ್ಯಕ್ಕೆ ನೀರು ಹರಿಸಿದರೆ ನಮಗೆ ಸಿಗುವ ನೀರು ಇನ್ನೂ ಕಡಿಮೆ! ಇದರ ಪರಿಣಾಮ ನಮ್ಮ ರಾಜ್ಯದ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಯ ಮೇಲೆ ಆಗುತ್ತದೆ.

ಇವತ್ತು ನಮ್ಮ ಆಣೆಕಟ್ಟೆಗಳಲ್ಲಿರುವ ಹೂಳು ಎಶ್ಟು?

ವಿವಿದ ಮೂಲಗಳ ಮಾಹಿತಿಯ ಪ್ರಕಾರ ಇವತ್ತು ನಮ್ಮ ರಾಜ್ಯದ 7 ಆಣೆಕಟ್ಟೆಗಳಲ್ಲಿ ತುಂಬಿರುವ ಹೂಳಿನ ಮೊತ್ತ ಬರೋಬ್ಬರಿ 49.1 ಟಿ.ಎಂ.ಸಿ ಅಡಿಗಳು. ತುಂಗಾಬದ್ರ ಆಣೆಕಟ್ಟೆಯಲ್ಲಿ ತುಂಬಿರುವ ಹೂಳಿನ ಪ್ರಮಾಣ 28 ಟಿ.ಎಂ.ಸಿ!! ಹೂಳು ತುಂಬಿರುವುದರಿಂದ ನಾರಾಯಣಪುರ ಜಲಾಶಯದಲ್ಲಿ 10 ಟಿ.ಎಂ.ಸಿ ಯಶ್ಟು ನೀರು ಕಡಿಮೆ ಶೇಕರಣೆಯಾಗುತ್ತಿದೆ. ಆಲಮಟ್ಟಿಯಲ್ಲಿ ಸುಮಾರು 7 ಟಿ.ಎಂ.ಸಿ ಯಶ್ಟು ಹೂಳು ಇದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಕ್ರುಶ್ಣರಾಜಸಾಗರದಲ್ಲಿ 5 ಟಿ.ಎಂ.ಸಿ ಅಡಿ, ಹಾರಂಗಿ ಹಾಗೂ ಕಬಿನಿ ಆಣೆಕಟ್ಟೆಗಳಲ್ಲಿ ಕೂಡ ಹೂಳು ತುಂಬಿಕೊಂಡಿದೆ.

ಒಂದು ಟಿ.ಎಂ.ಸಿ ಅಡಿ ನೀರು ಎಂದರೆ ಒಂದು ಕೊಳವೆಯಲ್ಲಿ ಒಂದು ಕ್ಶಣಕ್ಕೆ 33,000 ಲೀಟರ್ ನೀರನ್ನು 24 ಗಂಟೆಗಳ ತನಕ ಹರಿಸಿದರೆ ಸಿಗುವ ನೀರು ಒಂದು ಟಿ.ಎಂ.ಸಿ ಅಡಿ.!! ಇವತ್ತು ಬೆಂಗಳೂರಿಗೆ ಬೇಕಾಗಿರುವ ನೀರಿನ ಪ್ರಮಾಣ ಕೇವಲ 12 ಟಿ.ಎಂ.ಸಿ ನೀರು ಮಾತ್ರ.

ಹೂಳು ತಗೆದು ಹಾಕಿ!!

ಹವ್ದಲ್ವ? ಹೂಳಿನಿಂದ ತೊಂದರೆಯಾಗುವುದಾದರೆ ಆ ಹೂಳನ್ನು ತಗೆಯುವುದು ಒಳ್ಳೆಯದಲ್ಲವೇ? ಹವ್ದು ಅದು ನಿಜ. ಹೂಳು ತಗೆಯುವುದು ಇದಕ್ಕೆ ಪರಿಹಾರ. ಆದರೆ ಅದು ಅಂದುಕೊಂಡಶ್ಟು ಸುಲಬವಾಗಿದೆಯೇ? ಕಂಡಿತ ಇಲ್ಲಾ! ಯಾಕಂದ್ರೆ ಒಂದು ಟಿ.ಎಂ.ಸಿ ಅಡಿ ಹೂಳು ಎತ್ತಲು ಬರೋಬ್ಬರಿ 1200 ಕೋಟಿ ರೂಪಾಯಿಗಳು ಬೇಕಂತೆ. ಅದಲ್ಲದೇ ಒಂದು ಟಿ.ಎಂ.ಸಿ ಹೂಳಿನಲ್ಲಿ ಸಿಗುವ ಮಣ್ಣನ್ನು ಬೇರೆಡೆಗೆ ಸಾಗಿಸಲು 20 ಟನ್ ಹೊರುವ ಸಾಮರ್‍ತ್ಯ ಇರುವ 25 ಲಕ್ಶ ಲಾರಿಗಳು ಬೇಕಾಗುತ್ತವೆ!! ಇನ್ನೂ 50 ಟಿ.ಎಂ.ಸಿ ಹೂಳು ತಗೆಯಲು ಬೇಕಾಗಿರುವ ಮೊತ್ತ 60,000 ಕೋಟಿ ರೂಪಾಯಿಗಳು!!

ಹಾಗಿದ್ರೆ ಇದಕ್ಕೆ ಪರಿಹಾರ ಏನು? ಜಗತ್ತಿನ ಬೇರೆ ದೇಶಗಳಲ್ಲಿ ಈ ತರಹದ ಪ್ರಯೋಗಗಳು ನಡೆದಿರುವ ಬಗ್ಗೆ ವರದಿಗಳಿವೆ. ಅವನ್ನು ಬಳಸಿಕೊಂಡು ನಾವು ಈ ಹೂಳನ್ನು ತಗೆದು ಹಾಕಬೇಕು. ಹೆಚ್ಚು ಹೂಳು ಆಣೆಕಟ್ಟೆಯನ್ನು ಸೇರದಂತೆ ಮಾಡಲು ಚೆಕ್ ಡ್ಯಾಂಗಳನ್ನು ನಿರ್‍ಮಿಸಬೇಕು. ಇದರಿಂದ ನೀರು ಬೇಕಾದ ಹಾಗೆ ತಿರುಗಿಸಿಕೊಳ್ಳ ಬಹುದು ಹಾಗೂ ಹೆಚ್ಚು ಹೂಳು ಆಣೆಕಟ್ಟೆ ತಲುಪದಂತೆ ಮಾಡಬಹುದು. ಹೆಚ್ಚು ಮರಗಿಡಗಳನ್ನು ಬೆಳೆಸಬೇಕು, ಗಲ್ಲಿ ಪ್ಲಗ್ಗಿಂಗ್ ಉಪಯೋಗಿಸಿ ಬೂ ಸವಕಳಿಯನ್ನು ತಪ್ಪಿಸಬಹುದು.

ಈ ಹೂಳು ಪಲವತ್ತಾಗಿರುವುದರಿಂದ ರಯ್ತರಿಗೆ ತಮ್ಮ ಜಮೀನುಗಳಿಗೆ ಬಳಸಿಕೊಳ್ಳಲು ಬಿಡಬೇಕು. ಬರುವ ಹೂಳನ್ನು ಮಾರುವುದರಿಂದ ಸರ್‍ಕಾರಕ್ಕೆ ಕೋಟ್ಯಾಂತರ ರೂಪಾಯಿ ಲಾಬ ವಾಗುತ್ತದೆ. ಹೂಳು ಬಳಸುವುದರಿಂದ ಅಕ್ರಮವಾಗಿ ಆಗುವ ಮರುಳು ಗಣಿಗಾರಿಕೆಗೆ ತಡೆಹಾಕಬಹುದು. ಮರುಳು ಗಣಿಗಾರಿಕೆಯಿಂದ ನೀರಿನ ಇಂಗುವಿಕೆಯನ್ನು ಹಾಳಾಗುತ್ತದೆ. ಹೂಳಿನಲ್ಲಿರುವ ಕನಿಜ ಸಂಪತ್ತನ್ನು ಉಪಯೋಗ ಮಾಡ್ಕೊಳ್ಳಬಹುದು. ಹೂಳು ತುಂಬಿಕೊಳ್ಳುವುದನ್ನು ತಡೆಯಲು ಹೆಚ್ಚು ಕಾಡನ್ನ ಬೆಳಸಬೇಕು ಹಾಗೂ ಬೂಮಿ ಸವಕಳಿಯನ್ನು ತಪ್ಪಿಸಬೇಕು, ವಯ್ಗ್ನಾನಿಕ ಹಾಗೂ ನಿಯಮಿತವಾದ ಗಣಿಗಾರಿಕೆ ನಡೆಸಬೇಕು. ಇವೆಲ್ಲವೂ ನಮ್ಮ ಕಯ್ಯಲ್ಲೇ ಇವೆ ಅದನ್ನು ನಾವು ಹಾಗೂ ನಮ್ಮ ಸರ್‍ಕಾರ ಮಾಡಬೇಕಶ್ಟೇ. ಅಲ್ಲವೇ?

– ಚೇತನ್ ಜೀರಾಳ್

(ಚಿತ್ರ: ಒಂಚೂರು ಅದು! ಇದು!)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: