ಎಲ್ಲಾ ನುಡಿಗಳೂ ರಾಶ್ಟ್ರಬಾಶೆಗಳಾಗಬೇಕು

ಪ್ರಿಯಾಂಕ್ ಕತ್ತಲಗಿರಿ.

sri_sri_ravi_shankar_official_picture

ಮೊನ್ನೆ ಸೋಮವಾರ ಬೆಂಗಳೂರಿನ ಗಿರಿನಗರದಲ್ಲಿ “ಸಂಸ್ಕ್ರುತ ಬಾರತಿ” ವತಿಯಿಂದ ಏರ‍್ಪಡಿಸಲಾಗಿದ್ದ ಕಾರ‍್ಯಕ್ರಮವೊಂದರಲ್ಲಿ ಮಾತನಾಡುತ್ತಾ “ಆರ‍್ಟ್ ಆಪ್ ಲಿವಿಂಗ್” ಹೆಸರಿನ ಸಂಸ್ತೆಯೊಂದನ್ನು ನಡೆಸುತ್ತಿರುವ ಶ್ರೀ ರವಿಶಂಕರ್ ಗುರುಗಳವರು “ಸಂಸ್ಕ್ರುತವನ್ನು ರಾಶ್ಟ್ರಬಾಶೆಯಾಗಿ ಗೋಶಿಸಬೇಕು” ಎಂದು ನುಡಿದಿರುವುದು ಸುದ್ದಿಹಾಳೆಗಳಲ್ಲಿ ವರದಿಯಾಗಿದೆ.

ಇವತ್ತಿನ ದಿನ ಸಂವಿದಾನದಲ್ಲಿ ಯಾವುದೇ ನುಡಿಗೂ ರಾಶ್ಟ್ರಬಾಶೆ ಎಂಬ ಪಟ್ಟವನ್ನು ಕೊಟ್ಟಿಲ್ಲ. ಹಲನುಡಿಗಳ ನಾಡಾದ ಬಾರತದಲ್ಲಿ ಒಂದು ನುಡಿಗೆ ಮಾತ್ರ ಮೇಲುಪಟ್ಟ ಕೊಡುವುದು ಇತರ ಎಲ್ಲಾ ನುಡಿಗಳಿಗೂ ನೀಡುವ ಕೊಡಲಿಪೆಟ್ಟೇ.

ರಾಶ್ಟ್ರಬಾಶೆ ಎಂದು ಯಾವುದೇ ಒಂದು ನುಡಿಯನ್ನು ಮಾತ್ರ ಕರೆದರೆ, ಅದು ಬರೀ ಒಂದು ಗವ್ರವದ ಸ್ತಾನವಾಗಿ ನಿಲ್ಲುವುದಿಲ್ಲ. ಹಾಗೆ ಕರೆಯಲಾದ ಮರುದಿನದಿಂದಲೇ, ಇತರೆ ನುಡಿಗಳ ಮೇಲೆ ರಾಶ್ಟ್ರಬಾಶೆ ಎಂಬ ಪಟ್ಟ ಹೊತ್ತುಕೊಂಡ ನುಡಿಯ ಸವಾರಿ ಶುರುವಾಗುತ್ತದೆ. ಇಂತಹ ಸವಾರಿಯಿಂದಾಗಿ ಬೇರೆ ಬೇರೆ ನುಡಿಗಳನ್ನಾಡುವ ಜನರಿಗೆ ತೊಂದರೆಯಾಗುತ್ತಿದ್ದರೂ, ಅವರ ತೊಂದರೆಗಳನ್ನೂ ಪಕ್ಕಕ್ಕೆ ತಳ್ಳಿ ರಾಶ್ಟ್ರಬಾಶೆಯ ಹೇರಿಕೆ ನಡೆಸಲಾಗುತ್ತದೆ.

ರಾಶ್ಟ್ರಬಾಶೆಯಲ್ಲದಿದ್ದರೂ ಹಿಂದಿಯನ್ನು ರಾಶ್ಟ್ರಬಾಶೆ ಎಂದು ಕರೆಯುತ್ತಾ, “ಹಿಂದಿ ಬಾರದ ಜನರು ಬಾರತೀಯರೇ ಅಲ್ಲ” ಎಂಬುವ ಅತಿರೇಕದ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತದೆ. ಸುಮಾರು 2,000 ವರುಶಗಳಿಂದ ಈ ನೆಲದಲ್ಲೇ ನೆಲೆಸಿರುವ ಕನ್ನಡಿಗರು, “ನೀವು ಹಿಂದಿ ಕಲಿಯದಿದ್ದರೆ ಈ ನೆಲದವರೇ ಅಲ್ಲ” ಎಂಬರ‍್ತ ಬರುವಂತಹ ಮಾತುಗಳನ್ನು ಕೇಳಬೇಕಾಗಿ ಬಂದಿರುವುದು, ಒಂದು ನುಡಿಯನ್ನು ಮಾತ್ರ ಮೇಲೆತ್ತಿ ಹಿಡಿಯಬೇಕೆನ್ನುವ ರಾಜಕೀಯ ತೀರ‍್ಮಾನದಿಂದಲೇ.

ಕರ‍್ನಾಟಕದ ಒಂದೂರಿನಿಂದ ಇನ್ನೊಂದೂರಿಗೆ ಓಡಾಡುವ ಉಗಿಬಂಡಿಯ ಟಿಕೇಟುಗಳಲ್ಲಿ ಕನ್ನಡದಲ್ಲಿ ಮಾಹಿತಿ ಅಚ್ಚು ಹಾಕದಿದ್ದರೂ, ಹಿಂದಿಯಲ್ಲಿ ಮಾತ್ರ ಅಚ್ಚು ಹಾಕದೇ ಇರುವುದಿಲ್ಲ. ಅಲ್ಲಲ್ಲಿ ಒಂದೊಂದು ಕಡೆ ಎನ್ನುವಂತೆ ಕನ್ನಡದಲ್ಲಿ ಮಾಹಿತಿ ಬರೆಯಲಾಗಿರುತ್ತದೆ. “ಹೀಗೆ ಮಾಡುವುದರಿಂದ ಕನ್ನಡಿಗರಿಗೆ ತೊಂದರೆಯಲ್ಲವೇ?” ಎಂದು ಕೇಳಿದರೆ ಅದನ್ನು ಯಾವ ಅದಿಕಾರಿಗಳೂ ತಲೆಗೆ ಹಾಕಿಕೊಳ್ಳದಂತಹ ಪರಿಸ್ತಿತಿ ಬಂದಿರುವುದು ಒಂದು ನುಡಿಯನ್ನು ಮಾತ್ರ ಮೇಲೆತ್ತಿ ಹಿಡಿಯಬೇಕೆನ್ನುವ ರಾಜಕೀಯ ತೀರ‍್ಮಾನದಿಂದಲೇ.

ಮನೆಮನೆಯಲ್ಲಿ ಉರುವಲಿಗಾಗಿ ಬಳಸುವ ಗ್ಯಾಸ್ ಉರುಳೆ (gas cylinder)ಗಳ ಮೇಲೆ, ಎಚ್ಚರಿಕೆಯ ಮಾಹಿತಿಯನ್ನು ಹಿಂದಿ ಮತ್ತು ಇಂಗ್ಲೀಶಿನಲ್ಲಿ ಮಾತ್ರ ಅಚ್ಚು ಹಾಕಲಾಗಿರುತ್ತದೆ. ಅಪ್ಪಿತಪ್ಪಿಯೂ ಒಂದಕ್ಶರ ಕನ್ನಡದಲ್ಲಿ ಅಚ್ಚು ಹಾಕಿರುವುದಿಲ್ಲ. ಗ್ಯಾಸ್ ಉರುಳೆಯನ್ನು ದುಡ್ದು ಕೊಟ್ಟು ಕೊಂಡುಕೊಳ್ಳುವ ಕನ್ನಡಿಗರ ಒಳಿತಿಗಿಂತ, ಹಿಂದಿ ಬಳಕೆಯೇ ಮುಕ್ಯ ಎಂಬ ಪರಿಸ್ತಿತಿ ಬಂದಿರುವುದು ಒಂದು ನುಡಿಯನ್ನು ಮಾತ್ರ ಮೇಲೆತ್ತಿ ಹಿಡಿಯಬೇಕೆನ್ನುವ ರಾಜಕೀಯ ತೀರ‍್ಮಾನದಿಂದಲೇ.

ಈಗ, ರವಿಶಂಕರ್ ಅವರು ಹೇಳುತ್ತಿರುವುದೂ ಸಂಸ್ಕ್ರುತವನ್ನು ರಾಶ್ಟ್ರಬಾಶೆಯನ್ನಾಗಿ ಮಾಡುವ ಮೂಲಕ ಹಲವಾರು ನುಡಿಗಳ ನಡುವೆ ಬರೀ ಬರವಣಿಗೆಗೆ ಸೀಮಿತವಾಗಿರುವ ಮತ್ತು ಆಡುನುಡಿಯೇ ಅಲ್ಲದ ಸಂಸ್ಕ್ರುತವನ್ನು ಮಾತ್ರ ಮೇಲೆತ್ತಿ ಹಿಡಿಯಬೇಕೆನ್ನುವ ರಾಜಕೀಯ ತೀರ‍್ಮಾನದ ಬಗ್ಗೆಯೇ. ಸದ್ಯಕ್ಕಿರುವ ಹಿಂದಿಯನ್ನು ಮೇಲೆತ್ತಿ ಹಿಡಿಯಬೇಕೆನ್ನುವ ರಾಜಕೀಯ ತೀರ‍್ಮಾನದಿಂದ ಹೊರಬಂದು, ಸಂಸ್ಕ್ರುತವನ್ನು ಮೇಲೆತ್ತಿ ಹಿಡಿಯಬೇಕೆನ್ನುವ ರಾಜಕೀಯ ತೀರ‍್ಮಾನದತ್ತ ನಡೆಯೋಣ ಎಂಬುದು ರವಿಶಂಕರ್ ಅವರ ಮಾತಿನ ತಿರುಳು.

ಹಲನುಡಿಗಳ ತವರೂರಿನಲ್ಲಿ ಹಲತನವೇ ಜೀವಾಳ. ನಮ್ಮ ನಡುವಿರುವ ಹಲತನವನ್ನು ಅಪ್ಪಿಕೊಳ್ಳೋಣ ಮತ್ತು ಹಲತನದಲ್ಲಿ ಪಾಲು ಹೊಂದಿರುವ ಎಲ್ಲರೂ ಸಮಾನರು ಎಂಬ ಮನಸ್ತಿತಿಯ ಕಡೆಗೆ ನಮ್ಮ ನಡೆಯಿರಲಿ. ಅಂತಹ ಮನಸ್ತಿತಿ ನೆಲೆಯೂರಿದ್ದೇ ಆದಲ್ಲಿ, ಬಾರತದ ಜನರ ನಾಲಿಗೆಗಳಾ ಮೇಲೆ ಓಡಾಡುತ್ತಿರುವ ಎಲ್ಲಾ ನುಡಿಗಳೂ ರಾಶ್ಟ್ರಬಾಶೆಗಳೇ ಎಂದು ಏರ‍್ಪಡುತ್ತದೆ. ಎಲ್ಲಾ ನುಡಿಗಳು ಸಮಾನ ಮತ್ತು ಎಲ್ಲಾ ಬಗೆಯ ನಡೆ-ನುಡಿಗಳೂ ಸಮಾನ ಎಂಬಂತೆ ನೋಡುವ ಮೂಲಕ, ಒಂದು ನುಡಿಯು ಇನ್ನುಳಿದೆಲ್ಲಾ ನುಡಿಗಳ ಮೇಲೂ ಸವಾರಿ ಮಾಡುವುದನ್ನು ನಿಲ್ಲಿಸೋಣ. ಬಾರತದಲ್ಲಿನ ಆಯಾ ನುಡಿಗಳು, ಆಯಾ ಊರು, ಆಯಾ ರಾಜ್ಯಗಳಲ್ಲಿ ಬಾಳಿ ಬೆಳಗಲಿ.

ಪ್ರಿಯಾಂಕ್ ಕತ್ತಲಗಿರಿ

(ಚಿತ್ರ: http://www.artofliving.org)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

 1. Maaysa says:

  ಸಂಸ್ಕೃತವೊಂದೇ ರಾಷ್ಟ್ರಭಾಷೆಯಾಗೋದು ಬೇಡ.

  ಆದರೆ ಇಂಡಿಯದಲ್ಲಿ ಇರುವ ಅಷ್ಟೂ ೪೦೦೦ ಸಾವಿರ ಚಿಲ್ಲರೆ ಭಾಷೆಗಳನ್ನೂ ‘ರಾಷ್ಟ್ರಭಾಷೆ’ ಎಂದು ಕರೆದರೆ, ಆಗ ‘ರಾಷ್ಟ್ರಭಾಷೆ’ಎಂಬ ಪಟ್ಟಕ್ಕೆ ಅರ್ಥವೂ ಹಾಗು ಗೌರವವೂ ಇರವು .

  ನನ್ನ ಅನಿಸಿಕೆಯಲ್ಲಿ ೩ ಕೋಟಿಗಿಂತ ಹೆಚ್ಚು ಜನಸಂಖ್ಯೆಯಿರುವ ಭಾಷೆಗಳಿಗೆ ಪ್ರಾಂತೀಯ ಹಾಗು ೫ ಕೋಟಿಗಿಂತ ಹೆಚ್ಚು ಜನಸಂಖ್ಯೆಯಿರುವ ಭಾಷೆಗಳಿಗೆ ರಾಷ್ಟೀಯ ಮಟ್ಟದ ಮನ್ನಣೆಯಿರಬೇಕು

  ಮನ್ನಣೆ ಎಂದರೆ ಆ ಆ ಮಟ್ಟದ ಎಲ್ಲ ಬಗೆಯ ವ್ಯವಹಾರದಲ್ಲೂ ಆ ಆ ಭಾಷೆಯನ್ನೂ ಬಳಸಬಹುದು. ಆ ಆ ಭಾಷೆಗಳಿಗೆ ಆ ಆ ಮಟ್ಟದಲ್ಲಿ ಕಡ್ಡಾಯ ಸವಲತ್ತುಗಳನ್ನು ಕೊಡಬೇಕು .

  • Maaysa says:

   “ನನ್ನ ಅನಿಸಿಕೆಯಲ್ಲಿ ೩ ಕೋಟಿಗಿಂತ ಹೆಚ್ಚು ಜನಸಂಖ್ಯೆಯಿರುವ ಭಾಷೆಗಳಿಗೆ ಪ್ರಾಂತೀಯ ಹಾಗು ೫ ಕೋಟಿಗಿಂತ ಹೆಚ್ಚು ಜನಸಂಖ್ಯೆಯಿರುವ ಭಾಷೆಗಳಿಗೆ ರಾಷ್ಟೀಯ ಮಟ್ಟದ ಮನ್ನಣೆಯಿರಬೇಕು”

   ಅಯ್ಯೋ ಕೋಟಿಗೂ ಮಿಲಿಯನ್ಗೂ confusion . ೩ ಮಿಲಿಯನ್ ಮತ್ತು ೫ ಮಿಲಿಯನ್ ಎಂದು ಓದಿಕೊಳ್ಳಿ .

 1. 26/08/2013

  […] ಸಿವಾ?, ಹಿಂದಿಯ ಪಾಲಾದ ಕನ್ನಡಿಗರ ಬ್ಯಾಂಕು, ಎಲ್ಲಾ ನುಡಿಗಳೂ ರಾಶ್ಟ್ರಬಾಶೆಗಳಾಗಬೇಕು, ಎಲ್ಲಾ ನುಡಿಗಳೂ ಸಮಾನ ಎನ್ನಲು ಏನು […]

ಅನಿಸಿಕೆ ಬರೆಯಿರಿ:

Enable Notifications