ಎರಡರಿಂದ ಬಿಡುಗಡೆಗೆ ’ಮೂರನೇ ವೇದಿಕೆ’

– ಚೇತನ್ ಜೀರಾಳ್.

Federal-front

ಹೋದ ಬರಹದಲ್ಲಿ ನಮ್ಮ ರಾಜ್ಯದ ರಾಜಕೀಯದಲ್ಲಿ ಬೀಸುತ್ತಿರುವ ಹೊಸ ಗಾಳಿ ಹಾಗೂ ಅದು ತರಬಹುದಾದ ಲಾಬದ ಬಗ್ಗೆ ಮಾತನಾಡಿದ್ದೆ. ಈಗ ಬಂದಿರುವ ಮತ್ತೊಂದು ಸುದ್ದಿಯೆಂದರೆ ಬಾರತ ವಿವಿದ ರಾಜ್ಯದ ರಾಜಕೀಯ ಪಕ್ಶಗಳು ಸೇರಿ ರಾಶ್ಟ್ರಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶವನ್ನು ಹೊರಗಿಟ್ಟು ಮೂರನೇ ವೇದಿಕೆ ಕಟ್ಟಲು ಹೊರಟಿರುವುದು. ಪಶ್ಚಿಮ ಬಂಗಾಳದ ಮುಂದಾಳಾಗಿರುವ ಶ್ರೀ ಮಮತಾ ಬ್ಯಾನರ್‍ಜೀ ಅವರ ಮುಂದಾಳ್ತನದಲ್ಲಿ ಹುಟ್ಟುಹಾಕಲು ಹೊರಟಿರುವ ಮೂರನೇ ವೇದಿಕೆಗೆ ತಕ್ಕ ಹೆಸರನ್ನೇ ಇಡಲಾಗಿದೆ. ಈ ವೇದಿಕೆಯ ಹೆಸರು “ಒಕ್ಕೂಟ ವೇದಿಕೆ” (Federal Front)!

ಏನಿದು ಒಕ್ಕೂಟ ವೇದಿಕೆ? ಬೇರೆ ಬೇರೆ ರಾಜ್ಯಗಳ ರಾಜಕೀಯ ಪಕ್ಶಗಳು ಸೇರಿಕೊಂಡು ಹುಟ್ಟು ಹಾಕಲು ಯೋಚಿಸಿದ ರಾಜಕೀಯ ವೇದಿಕೆ ಇದು. ಒಕ್ಕೂಟ ವ್ಯವಸ್ತೆಯನ್ನು ಬಲಪಡಿಸುವ ಪ್ರಾದೇಶಿಕ ಪಕ್ಶಗಳು ಸೇರಿ ರಾಶ್ಟ್ರಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು ದೂರವಿಟ್ಟು ಕಟ್ಟಲು ಯೋಚಿಸಿರುವ ವೇದಿಕೆ.

ಈ ನಿಟ್ಟಿನಲ್ಲಿ ಪಡುವಣ ಬಂಗಾಳದ ತ್ರುಣಮೂಲ ಕಾಂಗ್ರೆಸ್ ಪಕ್ಶದ ಮುಂದಾಳಾಗಿರುವ ಮಮತಾ ಬ್ಯಾನರ್‍ಜೀ ಮುಂದಡಿ ಇಟ್ಟಿದ್ದು, ಈಗಾಗಲೇ ಬಿಹಾರದ ಮುಕ್ಯಮಂತ್ರಿ ನಿತೀಶ್ ಕುಮಾರ್‍, ಜೆ.ಡಿ.ಯುನ ಶರದ್ ಯಾದವ್, ಒಡಿಶಾ ರಾಜ್ಯದ ಮುಕ್ಯಮಂತ್ರಿಯಾಗಿರುವ ನವೀನ್ ಪಟ್ನಾಯಕ್, ಜಾರ್‍ಕಂಡಿನ ಜೆ.ವಿ.ಎಮ್(ಡಿ) ಮುಂದಾಳಾದ ಬಾಬುಲಾಲ್ ಮರಾಂಡಿ ಮುಂತಾದವರನ್ನು ಈ ಒಕ್ಕೂಟ ವೇದಿಕೆಯನ್ನು ಸೇರಿಕೊಳ್ಳಲು ಕರೆ ನೀಡಿದ್ದಾರೆ. ಇದರ ಜೊತೆಗೆ ಆಂದ್ರ ಪ್ರದೇಶದ ತೆಲುಗುದೇಶಂ ಪಕ್ಶ ಸಹ ಈ ಒಕ್ಕೂಟ ವೇದಿಕೆಯನ್ನು ಸೇರಲು ಬಯಸುತ್ತದೆ ಎಂದು ಚಂದ್ರಬಾಬು ನಾಯ್ಡು ಹೇಳಿರುವುದು ಸುದ್ದಿಯಾಗಿದೆ.

ಕುಸಿಯುತ್ತಿರುವ ರಾಶ್ಟ್ರೀಯ ಪಕ್ಶಗಳ ಜನಪ್ರಿಯತೆ

ತೊಂಬತ್ತರ ದಶಕದಿಂದ ಈಚೆಗೆ ರಾಶ್ಟ್ರೀಯ ಪಕ್ಶಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸ್ಪಶ್ಟವಾದ ಬಹುಮತ ಸಿಕ್ಕಿಲ್ಲ. ಹಾಗಾಗಿ ಅವುಗಳು ಕೂಡ ಸರ್‍ಕಾರ ನಡೆಸಲು ಎನ್.ಡಿ.ಎ ಹಾಗೂ ಯು.ಪಿ.ಎ ಅನ್ನುವ ಕೂಟಗಳನ್ನು ಕಟ್ಟಿಕೊಂಡು ತಮಗೆ ಬೆಂಬಲ ನೀಡುವ ಪಕ್ಶಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್‍ಕಾರವನ್ನು ನಡೆಸುತ್ತಾ ಬಂದಿವೆ. ಇನ್ನೊಂದು ಗಮನಿಸಬೇಕಾಗಿರುವ ಅಂಶವೆಂದರೆ ಈ ಪಕ್ಶಗಳ ಮಂದಿಮೆಚ್ಚುಗೆ ಕೂಡ ಕುಸಿಯುತ್ತಿದೆ.

ಪ್ರತಿ ಚುನಾವಣೆಯಲ್ಲೂ ಈ ಪಕ್ಶಗಳು ಗಳಿಸುತ್ತಿರುವ ಸೀಟುಗಳ ಎಣಿಕೆ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಕಾರಣ ಬಲಗೊಳ್ಳುತ್ತಿರುವ ಪ್ರಾದೇಶಿಕ ಪಕ್ಶಗಳು! ಹೆಚ್ಚು ಗಟ್ಟಿಯಾಗಿ ತನ್ನ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸುತ್ತಿರುವ ಈ ಪಕ್ಶಗಳಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಶಗಳು ಸೀಟು ಗೆಲ್ಲುವಲ್ಲಿ ಹಿಂದೆ ಬೀಳುತ್ತಿವೆ.

ಒಕ್ಕೂಟ ವೇದಿಕೆ ಸರಿಯಾದ ದಾರಿಯಲ್ಲಿ ನಡೆಯಬೇಕು

ಈಗ ಶುರುವಾಗುತ್ತಿರುವ ಒಕ್ಕೂಟ ವೇದಿಕೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಶಗಳಿಗೆ ಎದುರಾಗಿ ನಿಂತು ಹೆಸರು ಗಳಿಸುವ ಹೆಜ್ಜೆಯತ್ತ ನಡೆದಿದೆ. ಇಂತಹ ವೇದಿಕೆಯೊಂದು ರಾಶ್ಟ್ರಮಟ್ಟದಲ್ಲಿ ಬೇಕಾಗಿತ್ತು. ಹಾಗಂತ ಈ ಒಕ್ಕೂಟ ವೇದಿಕೆ ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶಗಳನ್ನು ದೂರವಿಟ್ಟು ಸರ್‍ಕಾರ ರಚಿಸಲು ಮಾತ್ರ ಎಂದಾದರೆ ಈಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಶಗಳ ಕೂಟಕ್ಕೂ ಈ ಒಕ್ಕೂಟ ವೇದಿಕೆಗೂ ಯಾವುದೇ ದೊಡ್ಡ ವ್ಯತ್ಯಾಸವಿರುವುದಿಲ್ಲ. ಒಂದು ವೇಳೆ ಈ ಒಕ್ಕೂಟ ವೇದಿಕೆ ಅದಿಕಾರಕ್ಕೆ ಬರುವುದೇ ಆದರೆ ಅದು ಮಾಡಬೇಕಾಗಿರುವ ಮೊದಲ ಕೆಲಸ ನಮ್ಮ ದೇಶದಲ್ಲಿ ನಿಜವಾದ ಒಕ್ಕೂಟ ವ್ಯವಸ್ತೆಯನ್ನು ಜಾರಿಗೆ ತರುವುದು!

ಇಂದು ಹೆಸರಿಗೆ ಮಾತ್ರ ಒಕ್ಕೂಟ ವ್ಯವಸ್ತೆ ಎಂದು ಕರೆಸಿಕೊಳ್ಳುತ್ತಿರುವ ನಮ್ಮ ದೇಶದಲ್ಲಿ ನಿಜವಾದ ಒಕ್ಕೂಟ ವ್ಯವಸ್ತೆಯನ್ನು ಜಾರಿಗೆ ತರಲು ಬೇಕಾಗಿರುವ ಕಾನೂನು ತಿದ್ದುಪಡಿ ಹಾಗೂ ಸಂವಿದಾನದಲ್ಲಿ ಬದಲಾವಣೆಯನ್ನು ಮಾಡಬೇಕು. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಅದಿಕಾರ ಹಂಚಿಕೆಯ ಸೂತ್ರ ಮುಂತಾದ ಬದಲಾವಣೆಯ ಕಡೆಗೆ ಕೆಲಸ ಮಾಡಬೇಕು. ಆಗ ಮಾತ್ರ ಈ ಒಕ್ಕೂಟ ವೇದಿಕೆಯ ಕೆಲಸ ಸರಿದಾರಿಯಲ್ಲಿ ನಡೆದಂತಾಗುವುದು.

ಪ್ರಶ್ನೆ ಹಾಗೂ ಉತ್ತರ

ಬಿಜೆಪಿ ಅತವಾ ಕಾಂಗ್ರೆಸ್ ಜೊತೆ ಹೊಂದಾಣಿಕೆ ಹೊಂದಿಲ್ಲದ ಸರ್‍ಕಾರ ಅದಿಕಾರಕ್ಕೆ ಬಂದರೆ ಈ ದೇಶದ ಪರಿಸ್ತಿತಿ ಏನಾಗುತ್ತದೆ ಎಂದು ಗಾಬರಿ ವ್ಯಕ್ತಪಡಿಸುವವರು ಹಲವಾರು ಜನರಿದ್ದಾರೆ. ಇದಕ್ಕೆ ಹಿಂದಿನ ಚಂದ್ರಶೇಕರ್‍, ಅಯ್.ಕೆ.ಗುಜ್ರಾಲ್ ಹಾಗೂ ಎಚ್. ಡಿ.ದೇವೆಗವ್ಡ ಅವರ ಸರ್‍ಕಾರಗಳು ಕೆಲವೇ ಸಮಯದಲ್ಲಿ ಉರುಳಿ ಬಿದ್ದುದ್ದರ ಉದಾಹರಣೆ ಕೊಡುತ್ತಿದ್ದಾರೆ. ಹಿಂದೆ ಆಗಿದ್ದ ಹೊಂದಾಣಿಕೆ ಸರ್‍ಕಾರಗಳಿಗೂ ಈಗ ಆಗುತ್ತಿರುವ ಒಕ್ಕೂಟ ವೇದಿಕೆಗೂ ಬೇರ‍್ಮೆಯಿದೆ ಎಂದು ಅನ್ನಿಸುತ್ತಿದೆ.

ಹಿಂದಿನವು ಬೇರೆ ಗತಿಯಿಲ್ಲದೇ ಮಾಡಿಕೊಂಡಿದ್ದ ಹೊಂದಾಣಿಕೆಗಳಾದರೆ, ಈಗ ಆಗುತ್ತಿರುವುದು ಒಂದು ಒಕ್ಕೂಟ ವ್ಯವಸ್ತೆಯನ್ನು ಎತ್ತಿ ಹಿಡಿಯುವ ವೇದಿಕೆ ಎನ್ನುವ ಮಾತುಗಳು ಈ ವೇದಿಕೆಯ ಮುಂದಾಳತ್ವವನ್ನು ವಹಿಸಿದವರು ಹೇಳುತ್ತಿದ್ದಾರೆ. ಎರಡನೆಯದಕ್ಕೆ ಹೆಚ್ಚಿನ ಬಲ ಹಾಗೂ ಹೊಗಳಿಕೆ ಈಗಾಗಲೇ ಕೇಳಿಬರುತ್ತಿದೆ. ಬಾರತದ ಒಕ್ಕೂಟ ವ್ಯವಸ್ತೆಯನ್ನು ಸರಿದಾರಿಗೆ ತರುವ ಗುರಿಯನ್ನಿಟ್ಟುಕೊಂಡು ಈ ವೇದಿಕೆ ಕೆಲಸ ಮಾಡಿದ್ದಲ್ಲಿ ಒಳ್ಳೆಯ ಬಲವಿದೆ. ಅದಿಲ್ಲದೇ ಹೋದರೆ ಇದು ಸಹ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಶಗಳು ಮಾಡುವ ಅವಕಾಶವಾದಿ ರಾಜಕಾರಣ ಮಾಡಿದಂತಾಗುತ್ತದೆ.

ಹೀಗೆ ರಾಜ್ಯಗಳ ಪಕ್ಶಗಳು ಸೇರಿ ಸರ್‍ಕಾರ ಮಾಡುವ ಹಾಗಿದ್ದರೆ ಬಾರತದ ಗತಿ ಏನಾಗುತ್ತದೆ? ಬಾರತ ಚೆನ್ನಾಗಿಯೇ ಇರುತ್ತದೆ! ಹೆಚ್ಚಿನ ಬಲವುಳ್ಳ ರಾಜ್ಯಗಳೊಂದಿಗೆ. ಈ ಒಕ್ಕೂಟ ವೇದಿಕೆ ಪ್ರತಿಯೊಂದು ರಾಜ್ಯಗಳ ರಾಜಕೀಯ ಪಕ್ಶಗಳಿಗೆ ತಮ್ಮ ರಾಜ್ಯವನ್ನು ಪ್ರತಿನಿದಿಸಲು ಹೆಚ್ಚಿನ ಬಲ ನೀಡಲು ಸಾದ್ಯವಿದೆ. ಈ ಹಿಂದೆ ಇದ್ದ ಬಿಜೆಪಿ ಅತವಾ ಕಾಂಗ್ರೆಸ್ ಪಕ್ಶಗಳ ಕೂಟದಲ್ಲಿ ಅವುಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಪಕ್ಶಗಳು ಈ ದೊಡ್ಡ ಪಕ್ಶಗಳ ಅಣತಿಯಂತೆ ನಡೆಯಬೇಕಿತ್ತು. ಆದರೆ ಒಕ್ಕೂಟ ವೇದಿಕೆ ಪ್ರತಿಯೊಂದು ರಾಜ್ಯಗಳಿಗೂ ಸಮಾನವಾದ ಅವಕಾಶ ಕೊಡಲು ಶಕ್ತವಾಗಿದೆ ಹಾಗೂ ಇದು ಹೀಗೆಯೇ ಇರಬೇಕು.

ಒಂದು ಸರಿಯಾದ ಒಕ್ಕೂಟ ವ್ಯವಸ್ತೆಯಲ್ಲಿ ರಾಜ್ಯಗಳು ಹೆಚ್ಚಿನ ಅದಿಕಾರ, ತನ್ಬಲವನ್ನು ಹೊಂದಿರುತ್ತವೆ. ಅಲ್ಲಿ ಕೇಂದ್ರಕ್ಕೆ ಹೆಚ್ಚಿನ ಪಾತ್ರವಿರುವುದಿಲ್ಲ. ಕೇಂದ್ರವು ಕಾಳಗಪಡೆ, ವಿದೇಶ ವ್ಯವಹಾರ, ಮುಂತಾದ ಕೆಲವೇ ವಿಶಯಗಳ ಬಗ್ಗೆ ಗಮನಹರಿಸಬೇಕು. ಮಿಕ್ಕೆಲ್ಲಾ ವಿಶಯಗಳಲ್ಲಿ ರಾಜ್ಯಗಳು ತಮಗೆ ಬೇಕಿರುವುದನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ. ಕೇಂದ್ರದ್ದು ಕೇವಲ ಕೇಳಿದ್ದನ್ನು ಕೊಡುವ facilitatorನ ಕೆಲಸ. ಆದರೆ ಇಂದು ಈ ಏರ‍್ಪಾಡು ತಲೆಕೆಳಗಾಗಿದೆ. ಇದನ್ನು ಸರಿ ಮಾಡಬೇಕಾಗಿರುವುದು ಒಕ್ಕೂಟ ವೇದಿಕೆಯ ಮೇಲಿರುವ ದೊಡ್ಡ ಜವಾಬ್ದಾರಿ. ಇದು ಸರಿ ಹೋಗುತ್ತದೆ ಎಂದು ನಾವುಗಳು ಆಶಿಸೋಣ.

(ಚಿತ್ರ: post.jagran.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Maaysa says:

    ಮೂರನೇ ವೇದಿಕೆ, ನಾಲ್ಕನೇ ವೇದಿಕೆ ಎಲ್ಲ ಒಂದೇ ..

    ಭಾರತದಲ್ಲಿ ಇರುವುದು ಕೆಲವ ಬಲಪಂಥೀಯ ರಾಜಕೀಯ ಪಕ್ಷಗಳು ಇಲ್ಲವೇ ಸುಖಾಸುಮ್ಮನೆ ಸಮಾಜವಾದದ ಹೆಸರಿನ ‘ಕುಟುಂಬ’ಗಳ ಪಾರ್ಟಿ .

    ಇನ್ನೂ ಪ್ರಾಂತೀಯತೆ ಹಾಗು ಪ್ರಾದೇಶಿಕತೆಗಳು ಪಕ್ಷದ ಆಧಾರ ಅನ್ನೋದು ಇನ್ನೊಂದು ಬಲಪಂಥೀಯವಾದ!

    ಪ್ರಾದೆಶಕತೆಯೂ ಇರಲಿ ಅದಕ್ಕಿಂತ ಹೆಚ್ಚಿಗೆ ‘social welfare’ ಮುಖ್ಯ. !

ಅನಿಸಿಕೆ ಬರೆಯಿರಿ:

%d bloggers like this: