ಕಾರ್ ಕಾರ್ F1 ಕಾರ್!

– ಕಾರ‍್ತಿಕ್ ಪ್ರಬಾಕರ್

ಗಂಟೆಗೆ 350 ಕಿಲೋ ಮೀಟರ್‍ ವೇಗದಲ್ಲಿ ಓಡಬಲ್ಲ, ಇಕ್ಕಟ್ಟಾಗಿ ಒಬ್ಬರಿಗಶ್ಟೇ ಕೂರಲು ಜಾಗವಿರುವ, ನೋಡಲು ಕಾರಿನಂತೆ ಕಾಣದ ಆದರೂ ಜಗತ್ತಿನಲ್ಲಿಯೇ ಅತಿ ಹೆಚ್ಚು ಬೆಲೆಬಾಳುವ ಕಾರುಗಳ ಪಟ್ಟಿಯಲ್ಲಿ ಎದ್ದು ಕಾಣುವ, ಚಳಕರಿಮೆಯ ಮೇಲ್ಮೆಯನ್ನು ಸಾರುವ ಕಸುವಿನ ಕಾದಾಟ, ಅದುವೇ Formula 1 ಕಾರ್ ಪಯ್ಪೋಟಿ !

1906 ರ ಹೊತ್ತಿನಲ್ಲಿ ಯುರೋಪಿನಲ್ಲಿ ಶುರುವಾದ ಈ ಪಯ್ಪೋಟಿಯನ್ನು ಮೊದಲಿಗೆ ಗ್ರ್ಯಾಂಡ್ ಪ್ರಿಕ್ಸ್ ಮೊಟಾರ್‍ ರೇಸಿಂಗ್ ಎಂದು ಕರೆಯಲಾಗುತ್ತಿತ್ತು. ಮುಂದೆ 1920 – 1940 ವರೆಗೆ ಹಂತ ಹಂತವಾಗಿ ಪಯ್ಪೋಟಿಯ ಕಟ್ಟಲೆಗಳನ್ನು ಪಾರ್‍ಮುಲಾ (Formula) ಎಂಬ ಹೆಸರಿನಲ್ಲಿ  ತರಲಾಯಿತು. ಎರಡನೇ ಮಹಾಯುದ್ದ ಮುಗಿದ ಮೇಲೆ 1947ರಲ್ಲಿ ಈ ಕಟ್ಟಲೆಗಳ ಹೆಸರನ್ನೇ ಪಯ್ಪೋಟಿಗೆ ಇಡಲಾಯಿತು ಅಂದರೆ ಕಾರ್ ಪಯ್ಪೋಟಿ ಆಗಿನಿಂದ ಪಾರ‍್ಮುಲಾ-1 (Formula-1) ಅನ್ನುವ ಹೆಸರಿನಿಂದಲೇ ಗುರುತಿಸಲ್ಪಟ್ಟಿತು. ಬಳಕೆಯಲ್ಲಿ ಇದನ್ನು ಚುಟುಕಾಗಿ F1 ಅಂತಲೂ ಕರೆಯುತ್ತಾರೆ. ಇದರಡಿಯಲ್ಲಿ 1950 ರಲ್ಲಿ ಕಾರ್ ಓಡಿಸುವವರ ಚಾಂಪಿಯನ್-ಶಿಪ್ ಶುರುವಾದರೆ 1958 ರಲ್ಲಿ ಕಾರು ತಯಾರಕರಿಗೂ ಚಾಂಪಿಯನ್-ಶಿಪ್ ನಡೆಯತೊಡಗಿತು.

ಈ ಪಯ್ಪೋಟಿಯ ಕಟ್ಟಲೆಗಳೇನು? ಗೆದ್ದವರಿಗೆ ಏನು ಸಿಗುತ್ತೆ? ಬಿರುಸಿನಿಂದ ನುಗ್ಗುವ ಈ ಕಾರುಗಳ ಹಿಂದಿರುವ ಚಳಕವೇನು? ಮುಂತಾದ ವಿಶಯಗಳನ್ನೆಲ್ಲಾ ಹಂತ ಹಂತವಾಗಿ ತಿಳಿಯೋಣ.

ಪಯ್ಪೋಟಿಯ ಬಗೆ:

ಗ್ರ್ಯಾಂಡ್ ಪ್ರಿಕ್ಸ್ ಅಂತಲೂ ಕರೆಯಲ್ಪಡುವ ಈ ಪಯ್ಪೋಟಿಯು ಪ್ರತಿ ವರುಶ 18 ರಿಂದ 20 ಬಾರಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯ ಸುತ್ತುಗಳಲ್ಲಿ (circuit) ನಡೆಯುತ್ತದೆ. ಪ್ರತಿಯೊಂದು ಪಯ್ಪೋಟಿಯಲ್ಲೂ ತಂಡ ಮತ್ತು ಕಾರು ಓಡಿಸುಗರು ಪಡೆದ ಸ್ತಾನಕ್ಕೆ ತಕ್ಕಂತೆ ಅಂಕಗಳನ್ನು ಕೊಡಲಾಗುತ್ತದೆ. ಎಲ್ಲಾ ಜಾಗದ ಪಯ್ಪೋಟಿಗಳು ಮುಗಿದ ಮೇಲೆ ಅಂಕಗಳನ್ನು ಒಟ್ಟುಗೂಡಿಸಿ ಆ ವರುಶದಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಂಡ ಮತ್ತು ಓಡಿಸುಗರನ್ನು ಗೆಲುವುಗಾರರೆಂದು ಗುರುತಿಸಲಾಗುತ್ತದೆ.

ಪಯ್ಪೋಟಿಯು ಗುರುವಾರದೊಂದು ಶುರುವಾಗಿ, ಎರಡು ದಿನಗಳ ಅಬ್ಯಾಸದ ಓಟ ಕೊನೆಯಾದ ಮೇಲೆ ಶನಿವಾರದಂದು ಮುಕ್ಯವಾದ ಹಂತ ತಲುಪುತ್ತದೆ. ಶನಿವಾರದಂದು ನಡೆಯುವ ವೇಗಮಿತಿಯ ಸುತ್ತುಗಳಿಂದ ಬಾನುವಾರದ ಪಯ್ಪೋಟಿಯ ಸುತ್ತಿನಲ್ಲಿ ಯಾರು ಯಾವ ಜಾಗದಿಂದ ಓಟ ಶುರುಮಾಡಬೇಕೆಂದು ತೀರ‍್ಮಾನವಾಗುತ್ತದೆ. ಬಾನುವಾರ ಕಾರುಗಳ ಬಿರುಸಿನ ಓಟ ನಡೆದು ಗೆಲುವಿಗೆ ತಕ್ಕಂತೆ ಅಂಕಗಳನ್ನು ನೀಡಲಾಗುತ್ತದೆ. 

ಪಾರ‍್ಮುಲಾ ಅಂದರೆ ಕಟ್ಟಲೆಗಳು, ಅವು ಯಾವವು ?

ಪಯ್ಪೋಟಿಯಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳು ಪಾಲಿಸಬೇಕಾದ ಕಟ್ಟಲೆಗಳ ಹೀಗಿವೆ, 

ಪಯ್ಪೋಟಿಯ ಕಟ್ಟಲೆಗಳು:

 • ತಂಡ ಒಂದು ಪಯ್ಪೋಟಿಯಲ್ಲಿ ಎರಡಕ್ಕಿಂತ ಹೆಚ್ಚು ಕಾರುಗಳನ್ನು ಬಳಸುವಂತಿಲ್ಲ.
 • ಒಂದು ತಂಡವು ನಾಲ್ಕಕ್ಕಿಂತ ಹೆಚ್ಚು ಮಂದಿ ಕಾರು ಓಡಿಸುವವರನ್ನು ಬಳಸಿಕೊಳ್ಳುವಂತಿಲ್ಲ
 • ಶನಿವಾರದ ವೇಗಮಿತಿಯ ಸುತ್ತು ಆದ ಮೇಲೆ ಬಾನುವಾರದ ಪಯ್ಪೋಟಿಗೆ 5 ಗಂಟೆ ಮುಂಚಿತವಾಗಿ ತಂಡಗಳು ಕಾರನ್ನು ಮುಟ್ಟುವಂತಿಲ್ಲ. ಈ ಹೊತ್ತಿನಲ್ಲಿ ಕಾರುಗಳ ತೂಕ ಹಾಗೂ ಚಳಕಗಳನ್ನು (technical limits) ಒರೆಗೆಹಚ್ಚಲಾಗುತ್ತದೆ.
 • ಒಬ್ಬ ಕಾರು ಓಡಿಸುಗ ಇಡೀ ವರುಶಕ್ಕೆ 8 ಬಿಣಿಗೆಗಳನ್ನು (engine) ಮಾತ್ರ ಉಪಯೋಗಿಸಬಹುದು. ಒಂದು ವೇಳೆ 8 ಕ್ಕಿಂತ ಹೆಚ್ಚು ಬಿಣಿಗೆಗಳನ್ನು ಉಪಯೊಗಿಸಿದ್ದಲ್ಲಿ ಪಯ್ಪೋಟಿಯ ಪಟ್ಟಿಯಲ್ಲಿ ಪಡೆದ ಅಂಕಗಳಲ್ಲಿ 10 ಅಂಕಿಗಳನ್ನು ಕಳೆದುಕೊಳ್ಳೆಬೇಕಾಗುತ್ತದೆ.
 • 5 ಗ್ರಾಂಡ್ ಪ್ರಿಕ್ಸ್ ಪಯ್ಪೋಟಿಯಲ್ಲಿ ಪಾಲ್ಗೊಳ್ಳುವವರೆಗೆ ಕಾರಿನ ಹಲ್ಲುಗಾಲಿ ಏರ್‍ಪಾಟನ್ನು (transmission system) ಬದಲಾಯಿಸುವಂತಿಲ್ಲ.
 • ಎಲ್ಲಾ ತಂಡಗಳು ಒಂದೇ ತರಹದ, ಒಂದೇ ಕಂಪನಿ ತಯಾರಿಸಿದ ಗಾಲಿಗಳನ್ನು ಅಳವಡಿಸಿಕೊಳ್ಳಬೇಕು.
 • ಗುರುವಾರದೊಂದು ಶುರುವಾಗುವ ಅಬ್ಯಾಸದ ಸುತ್ತಿನಲ್ಲಿ 11 ಜೊತೆ ಗಾಲಿಗಳಿಂದ ಶುರುಮಾಡಿ ಪಯ್ಪೋಟಿಯ ದಿನದೊಂದು ಪ್ರತಿ ತಂಡಕ್ಕೆ 8 ಜೊತೆ ಗಾಲಿಗಳನ್ನು ಮಾತ್ರ ಇಟ್ಟುಕೊಳ್ಳಲು ಒಪ್ಪಿಗೆ ಇರುತ್ತದೆ. ಮಿಕ್ಕ ಜೊತೆಗಳನ್ನು ತಯಾರಕರಿಗೆ ಹಿಂತಿರುಗಿಸಬೇಕಾಗುತ್ತದೆ.

ಚಳಕರಿಮೆಯ ಕಟ್ಟಲೆಗಳು:

 • ಕಾರಿನ ಬಿಣಿಗೆಯು (engine) ಪೆಟ್ರೋಲನಿಂದ ಓಡುವಂತಿದ್ದು, 2.4 ಲೀಟರ್‍ ಅಳತೆಯನ್ನು ಮೀರದ 8 ಉರುಳೆಯ 90 ಡಿಗ್ರಿ ’V’ ಏರ್‍ಪಾಡಿನದ್ದಾಗಿರಬೇಕು. ತೂಕ 95 ಕಿಲೊ ಮೀರದ ಒಂದೇ ಕಿಡಿಕಡ್ಡಿ (spark plug) ಮತ್ತು ಒಂದೇ ಚಿಮ್ಮುಕ (petrol injector) ಹೊಂದಿರಬೇಕು.
 • ಗಾಳಿದೂಡುಕ (turbocharger) ಇಲ್ಲವೇ ಇನ್ನಾವುದೇ ಕಸುವು ಹೆಚ್ಚಿಸುವ ಏರ್‍ಪಾಡುಗಳನ್ನು ಬಿಣಿಗೆಯಲ್ಲಿ ಬಳಸುವಂತಿಲ್ಲ.
 • ಕಾರುಗಳು 7 ವೇಗದ ಹಲ್ಲುಗಾಲಿ ಏರ್‍ಪಾಡನ್ನು (7 speed transmission) ಹೊಂದಿರಬಹುದು ಆದರೆ ಇದರ ಹಿಡಿತ ಕಾರು ಓಡಿಸುಗರ ಕಯಲ್ಲಿರಬೇಕೆ ಹೊರತು ತಂತಾನೇ ಹೊಂದಿಕೊಳ್ಳಬಲ್ಲ (automatic transmission) ಇಲ್ಲವೇ ಇನ್ನಾವುದೇ ಮಿನ್ಚಳಕದ (electronic) ಏರ‍್ಪಾಡುಗಳನ್ನು ಹೊಂದಿರಬಾರದು.
 • ಕಾರಿನ ಹಿಂಬದಿಯ ರೆಕ್ಕೆಗಳನ್ನು ಹೊರತುಪಡಿಸಿ, ಕಾರಿನ ಹೊರಮಯ್ ಮೇಲೆ ಇರುವ ಯಾವ ಬಾಗವೂ ಅಲ್ಲಾಡುವಂತಿರಬಾರದು ಹಿಂಬದಿಯ ರೆಕ್ಕೆಗಳೂ ಕೂಡಾ ಗೊತ್ತುಪಡಿಸಿದ ಜಾಗದಲ್ಲಿ, ಗೊತ್ತುಪಡಿಸಿದ ಹೊತ್ತಿಗಶ್ಟೇ ಅಲುಗಿಸಬಹುದಾದ ಚಳಕವನ್ನು ಹೊಂದಿರಬೇಕು.
 • ಕಾರಿನ ಹಿಂದಿನ ಹಾಗು ಮುಂದಿನ ಗಾಲಿಗಳೆರಡಕ್ಕೂ ತಡೆ ಏರ್‍ಪಾಡು (brake system)  ಅಳವಡಿಸಿದ್ದು, ಒಂದು ಬಾರಿಗೆ ಒಂದೇ ಗಾಲಿ ಜತೆಗಳನ್ನು ಹಿಡಿತಲ್ಲಿಡಬೇಕು. ತುರ‍್ತು ಪರಿಸ್ತಿಯಲ್ಲಶ್ಟೇ ಎರಡೂ ಜತೆ ಗಾಲಿಗಳಿಗೆ ತಡೆ ಹಾಕಬಹುದು.
 • ತಡೆ ಏರ್‍ಪಾಡು ಕಾರು ಓಡಿಸುವವರ ಹಿಡಿತದಲ್ಲಿರಬೇಕೆ ಹೊರತು ಅದರಲ್ಲಿ ಕಸುವು ತಡೆ (power brakes ) ಇಲ್ಲವೇ ಜಾರು-ತಡೆ ಏರ‍್ಪಾಟಿನಂತಹ  (ABS) ಯಾವುದೇ ತರಹದ ಮಿನ್ಚಳಕದ ಹಿಡಿತಗಳನ್ನು (electronic control) ಅಳವಡಿಸುವಂತಿಲ್ಲ.
 • ಕಾರು ಕುಸಿತ (crash) ಮತ್ತು ಅಪ್ಪಳಿಕೆ (impact) ಪರೀಕ್ಶೆಯಲ್ಲಿ ತೇರ‍್ಗಡೆಯಾಗಿರಬೇಕು. ಕಾರಿನ ಹೊರ ಮಯ್ ತಯಾರಿಕೆಗೆ ಬಳಸುವ ವಸ್ತುಗಳು ಓಡಿಸುಗರ ಕಾಪು (safety) ಕಾಯುವಂತೆ ಅಣಿಗೊಂಡಿರಬೇಕು.
 • ಕಾರಿನ ಅಗಲ 180 ಸೆಂಟಿ ಮೀಟರ್‍ ಅಳತೆಯನ್ನು ಮೀರಬಾರದು.
 • ಮುಂದಿನ ಗಾಲಿಗಳ ಅಗಲ 305 ರಿಂದ 355 ಮಿಲಿ ಮೀಟರ್‍ ಅಳತೆಯ ಒಳಗಿರಬೇಕು ಹಾಗು ಹಿಂದಿನವುಗಳ ಅಗಲ 365 ರಿಂದ 380 ಮಿಲಿ ಮೀಟರ್‍ ಅಳತೆಯ ಒಳಗಿರಬೇಕು.
 • ಗಾಲಿಗಳ ಅಡ್ಡಳತೆ 660 ಮಿಲಿ ಮೀಟರ್‍ ಅಳತೆಯನ್ನು ಮೀರಬಾರದು. ಹಾಗು ಗಾಲಿಗೆ ನಯಟ್ರೋಜನ್ ಇಲ್ಲವೇ ಗಾಳಿಯನ್ನು ಮಾತ್ರವೇ ತುಂಬಬೇಕು ಅದೂ 1.4 ಬಾರ್‍ ಅಳತೆಯ ಒತ್ತಡವನ್ನು ಮೀರಿರಬಾರದು.
 • ಕಾರಿನ ತೂಕ ಓಡಿಸುವವರನ್ನೂ ಸೇರಿಸಿ 642 ಕಿಲೊಗಿಂತ ಕಡಿಮೆ ಇರಬಾರದು. ಕಡಿಮೆ ತೂಕ ಇದ್ದರೆ ಕಾರನ್ನು ಹಿಡಿತಲ್ಲಿಡಲು ಕಶ್ಟ ಹಾಗಾಗಿ ಈ ಕಟ್ಟಲೆ.

ಮೇಲಿನ ಕಟ್ಟಲೆಗಳಿಂದ ತಿಳಿದುಬರುವುದೆಂದರ, F1 ಪಯ್ಪೋಟಿಯು ಹೆಚ್ಚಾಗಿ ಓಡಿಸುಗರ ಮತ್ತು ತಂಡದ ಕಯ್ಚಳಕ, ಜಾಣ್ಮೆ ಮೇಲೆ ನಿಂತಿದ್ದು, ಎಲ್ಲ ತಂಡಗಳಿಗೂ ಸಮಾನವಾದ ಅವಕಾಶವನ್ನು ಒದಗಿಸುತ್ತದೆ ಜತೆಗೆ ಇದರಲ್ಲಿ ಓಡಿಸುಗರ ಕಾಪುವಿಗೆ (safety) ಹೆಚ್ಚಿನ ಮಹತ್ವ ಕೊಡಲಾಗಿದೆ.

F1 ಕಾರು ಪಯ್ಪೋಟಿಗೆ ಇಶ್ಟೆಲ್ಲಾ ಕಟ್ಟಲೆಗಳಿದ್ದರೂ ಬಿರುಸಿನ ಸೆಣಸಾಟ, ಮುಗಿಲು ಮುಟ್ಟುವ ಮಂದಿಯ ಹುರುಪು ವರ‍್ಶಗಳು ಕಳೆದಂತೆ ಹೆಚ್ಚುತ್ತಲೇ ಇದೆ.

ಚಿತ್ರ: www.wowowall.com

ಮಾಹಿತಿ ಸೆಲೆ: http://www.wikipedia.org/

(ಮುಂದುವರೆಯುವುದು…)

ನಿಮಗೆ ಹಿಡಿಸಬಹುದಾದ ಬರಹಗಳು

1 Response

 1. 03/07/2013

  […] ಕಳೆದ ಬರಹವನ್ನು ಮುಂದುವರೆಸುತ್ತಾ, F1 ಪಯ್ಪೋಟಿಯ ಕಟ್ಟಲೆಗಳಿಂದಾಗಿ ಗಾಳಿದೂಡುಕದಂತಹ (turbocharger) ಕಸುವು ಹೆಚ್ಚಿಸುವ ಯಾವುದೇ ಏರ‍್ಪಾಡು ಇಲ್ಲದ್ದಿದ್ದರು 2.4 ಲೀಟರ್ ಅಳತೆಯ ಸಾದಾರಣ ಬಿಣಿಗೆಯಲ್ಲಿ ವೇಗಹೆಚ್ಚಿಸುವ ಸಲುವಾಗಿ ಕಾರಿನಲ್ಲಿ ಏನೇನು ಬದಲಾವಣೆಗಳನ್ನು ತರಲಾಗಿದೆ? ಅಶ್ಟು ಚಿಕ್ಕ ಬಿಣಿಗೆ (engine) ಮತ್ತು ತುಂಬಾ ಕಡಿಮೆ ತೂಕವಿರುವ ಈ ಕಾರು ಗಂಟೆಗೆ 360 ಕಿಲೋ ಮೀಟರ್ ವೇಗದಲ್ಲಿ ಓಡುವಾಗ ಉಂಟಾಗುವ ತೊಂದರೆಗಳೇನು? ಆ ತೊಂದರೆಗಳನ್ನು ಮೀರಿ ವೇಗ ಮತ್ತು ಸ್ತಿರತೆಯನ್ನು ಕಾಪಾಡಿಕೊಳ್ಳುವುದು ಹೇಗೆ? ತಿಳಿಯಬೇಕೆ? ಬನ್ನಿ ಮುಂದೆ ನೋಡೋಣ. […]

ಅನಿಸಿಕೆ ಬರೆಯಿರಿ: