’ಆರಂಬ’ ಆರಂಬವಾಗಿದ್ದೇ ಹೆಂಗಸರಿಂದ!

– ಸಿದ್ದರಾಜು ಬೋರೇಗವ್ಡ

ಆರಂಬ - ೩

ನಮ್ಮದು ಇಂದಿನವರೆಗೂ ತಂದೆ-ಪಾರುಪತ್ತೆಯ (patriarchal) ಕೂಡಣವಾಗಿದೆ. ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ಆಚರಣೆ ನಮ್ಮಲ್ಲಿದೆ. ಕೂಡಣವು ಹೆಚ್ಚಾಗಿ ರಯ್ತರಿಂದಲೇ ಮಾಡಲ್ಪಟ್ಟಿದ್ದಾಗ ಇಂತಾ ಏರ‍್ಪಾಟು ಒಂದು ಬಗೆಯಲ್ಲಿ ಬೇಕಿತ್ತು ಎಂಬ ಸಮರ‍್ತನೆ ಇದೆ. ಇಂದಿಗೂ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಹೊಲಮಾಳದ ಆಸ್ತಿಯಲ್ಲಿ ಪಾಲು ಸಿಗವುದು ಕಡಿಮೆಯೇ. ಮಂದಿಯಾಳ್ವಿಕೆ ಬಂದಮೇಲೆ ಹೆಣ್ಣುಮಕ್ಕಳೂ ಸರಿಸಾಟಿಯಾದ ಹಕ್ಕುದಾರರು ಎಂಬ ಕಟ್ಟಳೆ ಮಾಡಿದ್ದರೂ ಅದು ಆಚರಣೆಗೆ ಬಂದಿರುವುದು ಬಹಳ ಅಪರೂಪ.

ಆದರೆ, ಮಂದಿಯು ಹತ್ತು-ಹದಿನಯ್ದು ಸಾವಿರ ವರ‍್ಶಗಳ ಹಿಂದೆ ಆಯ್ದು-ಆಡಿ (ಹಣ್ಣು-ಅಂಪಲು ಆಯ್ದು, ಬೇಟೆಯಾಡಿ) ತಿನ್ನುತ್ತಿದ್ದ ಕಾಲದಲ್ಲಿ ಮೊದಮೊದಲು ಅಕ್ಕಿ-ಗೋದಿ-ಕಾಳುಗಳನ್ನು ಬೆಳೆಯಲು ಆರಂಬಿಸಿದವರು ಗಂಡಸರಲ್ಲ ಎಂಬುದು ಗೊತ್ತೇ? ಆಯ್ದು-ಆಡಿ ತಿನ್ನುತ್ತಿದ್ದ ಮಂದಿಗೆ ಆರಂಬ ಮಾಡಲು ಕಲಿಸಿಕೊಟ್ಟು ಪೊಳಲಿಕೆಯ (civilization) ಕಿಡಿ ಹತ್ತಿಸಿದ್ದು ಹೆಂಗಸರು ಎಂಬುದು ತಿಳಿದಿದೆಯೇ? ಬನ್ನಿ ತಿಳಿದುಕೊಳ್ಳೋಣ!

ಪಡುವಣ ಏಸಿಯಾದ ಸುಮೆರಿಯಾದಲ್ಲಿ ಹತ್ತು-ಹದಿನಯ್ದು ಸಾವಿರ ವರ‍್ಶಗಳ ಹಿಂದೆ ಮಂದಿಯು ಸಣ್ಣ-ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದರು. ಹತ್ತು ಅಡಿ ಅಗಲದ ಸುತ್ತುಗೋಡೆಯ ಮೇಲೆ ನೆರಿಕೆಯನ್ನು ಕಟ್ಟಿ ಗುಡಿಸಲು ಮಾಡಿಕೊಂಡಿರುತ್ತಿದ್ದರು. ಸತ್ತುಹೋದವರನ್ನು ತಮ್ಮ ಗುಡಿಸಲುಗಳ ಕೆಳಗೆ ಗುಂಡಿ ತೋಡಿ ಹೂತುಹಾಕುತ್ತಿದ್ದರು. ದೇಹ ಕೊಳೆತುಹೋದ ಮೇಲೆ ಗುಂಡಿಯನ್ನು ಮತ್ತೆ ತೋಡಿ ತಲೆಬುರುಡೆಗಳನ್ನು ಹೊರತೆಗೆದು ನಾವಿಂದು ಹಿರಿಯರ ತಿಟ್ಟಗಳನ್ನು ಇಟ್ಟುಕೊಳ್ಳುವಂತೆ  ಗುಡಿಸಲುಗಳಲ್ಲಿ ಇಟ್ಟುಕೊಳ್ಳುತ್ತಿದ್ದರು. ಇಟ್ಟುಕೊಂಡು ಪೂಜಿಸುತ್ತಿದ್ದರು. ಇವುಗಳು ಮಂದಿಯು ಕಂಡುಕೊಂಡ ಮೊದಮೊದಲ ದೇವರುಗಳು!

ಆರಂಬ - ೨

ಸುಮೇರಿಯಾದಲ್ಲಿ ನೇಸರವಾದ ಕೆರೆ-ಕುಂಟೆ-ಕಾಲುವೆಗಳ ಹಿನ್ನೀರಿನಲ್ಲಿ ಹುಲ್ಲುಗಳು ಬೆಳೆದಿರುತ್ತಿದ್ದವು. ಆಯ್ದು-ಆಡಲು ಹೊರಡುತ್ತಿದ್ದ ಗಂಡಸರಿಗೆ ಅವುಗಳು ಯಾವಾಗಲೂ ದಾರಿಗೆ ಅಡ್ಡಬರುವ ಕಾಡುಹುಲ್ಲುಗಳು ಮಾತ್ರ. ಹತ್ತು ಅಡಿ ಅಗಲದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಹೆಂಗಸರಿಗೆ ಅವು ಹೊಸತನ್ನು ಕಂಡುಹಿಡಿಯುವ ಅರಕೆಯ ಸಾಮಗ್ರಿಗಳು! ಕೆರೆಗಳ ಹಿನ್ನೀರಿನಲ್ಲಿ ಬೆಳೆಯುತ್ತಿದ್ದ ಆ ಹುಲ್ಲೇ ಕಾಡುಗೋದಿ!

ಅಶ್ಟರಲ್ಲಾಗಲೇ ಮಂದಿಯು ಬೆಂಕಿಯನ್ನು ಹತೋಟಿಯಲ್ಲಿಟ್ಟು ಬೇಕಾದಂತೆ ಬಳಸಿಕೊಳ್ಳುವುದನ್ನು ಕಲಿತಿದ್ದರು. ಹೆಂಗಸರು ಮುಂದುವರಿದು ಕಾಡುಗೋದಿಯ ಕಾಳುಗಳನ್ನು ಕಿತ್ತುತಂದು, ಅವುಡುಕುಟ್ಟಿತೆಗೆದು, ಬೆಂಕಿಯಲ್ಲಿ ಹುರಿದು ಗರುಮ್ ಗರುಮ್ ಎಂದು ತಿನ್ನುತ್ತಿದ್ದರು. ಮಕ್ಕಳಿಗೂ, ಬೇಟೆ ಸಿಗದೇ ಬಸವಳಿದು ಬರಿಗಯ್ಯಲ್ಲಿ ಬಂದ ಪೆದ್ದು ಗಂಡಸರಿಗೂ ತಿನ್ನಿಸುತ್ತಿದ್ದರು!

ಇದು  ಮಂದಿಯಲ್ಲಿ ಹಸಿವನ್ನು ಎಶ್ಟರ ಮಟ್ಟಿಗೆ ನೀಗಿಸುತ್ತಿತ್ತು ಎಂದರೆ ಹಸಿವಿನ ಕೊರತೆ ಕಡಿಮೆಯಾಗಿ ಹುಟ್ಟಿದ ಮಕ್ಕಳು ಹೆಚ್ಚು ಹೆಚ್ಚು ಬದುಕತೊಡಗಿದವು. ಹಾಗಾಗಿ ಮಂದಿಯೆಣಿಕೆ ಹೆಚ್ಚತೊಡಗಿತು. ಕೆರೆಕುಂಟೆ-ಕಾಲುವೆಗಳ ಹಿನ್ನೀರಿನಲ್ಲಿ ತಾನಾಗೇ ಬೆಳೆಯುತ್ತಿದ್ದ ಕಾಡುಗೋದಿಯು ಸಾಲದಾಯಿತು. ನಂತರ ಮನೆಯೊಡತಿಯರು ಕಂಡುಕೊಂಡಿದ್ದು ಕಾಡುಗೋದಿಯ  ಬಿತ್ತನೆಯ ಕೆಲಸ! ಆಮೇಲೆ ಗಂಡಸರೂ ಕಾಯ್ಜೋಡಿಸತೊಡಗಿದರು.

ಈಗ ಗೋದಿಯ ಜೊತೆ ನವಣೆ, ಜೋಳ, ಮತ್ತು ಕಾಳುಗಳ ಬಿತ್ತನೆಯೂ ಆರಂಬವಾಯಿತು. ಗೊದಿಯನ್ನು ತುಂಬಲು ತೊಗಲಿನ ಜೋಳಿಗೆಗಳನ್ನೂ, ಕುಯ್ಲು ಮಾಡಲು ಕಲ್ಲಿನ ಕುಡುಗೋಲುಗಳನ್ನೂ ಬಳಸುತ್ತಿದ್ದರು. ನೀರಿನ ತೀರ ಇರುವೆಡೆಗಳಲ್ಲಿದ್ದ ಸಣ್ಣಸಣ್ಣ ಗುಂಪುಗಳು ಈಗ ಸಣ್ಣಸಣ್ಣ ಊರುಗಳಾಗತೊಡಗಿದವು. ಹಿನ್ನೀರು ಬಿತ್ತನೆಗೆ ಸಾಕಾಗದೇ ನೀರನ್ನೇ ಮಣ್ಣಿಗೆ ತಿರುಗಿಸುವ ನೀರಾವರಿ ಆರಂಬವಾಯಿತು.

ಹೆಚ್ಚುಕಡಿಮೆ ಅದೇ ಗಳಿಗೆಯಲ್ಲಿ ಬಾರತ, ಚೀನ, ಆಪ್ರಿಕಾದ ಮತ್ತು ಅಮೇರಿಕಾದ ಹಲವೆಡೆ ಬಿತ್ತನೆಯು ಆರಂಬವಾಯಿತು. ಗುಂಪುಗಳು ಊರುಗಳಾಗುತ್ತಿದ್ದಂತೆಯೇ ಪಾರುಪತ್ತೆ (management), ಆಳ್ವಿಕೆ ಮತ್ತು ಒಗ್ಗೂಡಿಮಾಡುವ ಪೂಜೆಗಳು (organized worship) ಆರಂಬವಾದವು. ಕುಟುಂಬಗಳು ಆರಂಬವಾಗಿ ಬಹುಬೇಗ ಮನೆಯ ಪಾರುಪತ್ತೆಯು ಗಂಡಸರ ಕಯ್ಯಿಗೆ ಹೋಯಿತು. ಕರ‍್ನಾಟಕದ ಹಲವು ಹಳ್ಳಿಗಳಲ್ಲಿನ ರಯ್ತರನ್ನು ಗಮನಿಸಿದರೆ ಹೆಂಗಸರಿಂದ ಆರಂಬವಾವ ಆರಂಬವು ಒಂದು ಸುತ್ತು ಬಂದಿರುವಂತೆ ತೋರುತ್ತದೆ.

ಇತ್ತೀಚೆಗೆ ಬೇಸಾಯದ ಹೊಣೆ ಹೆಚ್ಚಾಗಿ ಹೆಂಗಸರ ಮೇಲೆಯೇ ಬೀಳುತ್ತಿದೆ. ಹಯ್ನುಗಾರಿಕೆಯಿಂದಿಡಿದು ಹೊಲಮಾಳಗಳ ಕೆಲಸಗಳನ್ನೂ ಹೆಂಗಸರೇ ಮಾಡುತ್ತಿದ್ದಾರೆ. ಗಂಡಸರು ಮಯ್ಗಳ್ಳರಾಗಿ ಜೂಜಾಡಿಕೊಂಡು, ರಾಜಕೀಯ ಮಾಡುತ್ತೇವೆ ಎಂದುಕೊಂಡು ಅಲೆದಾಡುತ್ತಿದ್ದಾರೆ.  ಆದರೆ ತಂದೆ-ಪಾರುಪತ್ತೆ ಮತ್ತದು ಉಂಟುಮಾಡಿದ ಪಿಡುಗುಗಳನ್ನು ಹತ್ತಿಕ್ಕುವುದು ಮಾತ್ರ ಕಶ್ಟವಾಗೇ ಉಳಿದುಕೊಂಡಿದೆ.

ವರದಕ್ಶಿಣೆಯ ಪಿಡುಗನ್ನು ತಪ್ಪಿಸುವುದು ಗಂಡಿನ ಮನೆಯವರ ಕಯ್ಯಲ್ಲಿಲ್ಲ. ಅದು ತಂದೆ ತಾಯಂದಿರ ಕಯ್ಯಲ್ಲಿದ್ದೆ. ತಂದೆ-ತಾಯಂದಿರು ಹೆಣ್ಣು ಮಕ್ಕಳನ್ನೂ ಗಂಡು ಮಕ್ಕಳಶ್ಟೆ ಸಮಾನರಾದ ಹಕ್ಕುದಾರರೆಂದು ಗುರುತಿಸುವುದನ್ನು ಆರಂಬಿಸಬೇಕು. ‘ತಂದೆ-ಪಾರುಪತ್ತೆ’ಯು ತೊಲಗಿ ‘ತಂದೆ-ತಾಯಂದಿರ ಪಾರುಪತ್ತೆ’ಯ ಆರಂಬವಾಗಬೇಕು. ಆರಂಬವನ್ನೇ ಆರಂಬಿಸಿದ ತಾಯಂದಿರಿಗೆ ಪಾರುಪತ್ತೆಯು ದೊಡ್ಡ ಮಾತೇನಲ್ಲ.

ತಿಟ್ಟ:

1. http://www.goimonitor.com/story/reaping-harvest-happiness
2. http://frontiers-of-anthropology.blogspot.com 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಸಕತ್ ಸರಳವಾದ ಬರಹ. ಹಾಯಸ್ಕೂಲಿನ ನಮ್ಮ ಹೊತ್ತಗೆಗಳಿಗಿಂತ ಸರಳವಾಗಿದೆ.

ಅನಿಸಿಕೆ ಬರೆಯಿರಿ: