’ಎಲ್ಲರಕನ್ನಡ’ದ ಕಟ್ಟಲೆಗಳು ಯಾವ ಸಲುವಾಗಿ?

ಸಂದೀಪ್ ಕಂಬಿ.

horses-mom-an-baby

ಎಲ್ಲರಕನ್ನಡ ಎಂದರೆ ಈ ಕೆಳಗಿನ ಕಟ್ಟಲೆಗಳನ್ನು ಪಾಲಿಸುವ ಬರವಣಿಗೆಯ ಬಗೆ:

 1. ಋ, ಐ, ಔ, , ಃ, ಷ, ಙ, ಞ, ಮತ್ತು ಮಹಾಪ್ರಾಣಗಳನ್ನು ಬಿಟ್ಟು ಬರೆಯಬೇಕು, ಮತ್ತು
 2. ಆದಶ್ಟೂ ಅಚ್ಚಗನ್ನಡದ ಪದಗಳನ್ನು ಬಳಸಿ ಬರೆಯುವ ಮೊಗಸಿರಬೇಕು

ಇವುಗಳು ಏಕೆ ಮತ್ತು ಇವುಗಳಿಂದ ಏನು ಪ್ರಯೋಜನ ಎಂಬುದನ್ನು ನೋಡೋಣ.

ಕನ್ನಡ ಬರಿಗೆಮಣೆಯನ್ನು ಕನ್ನಡಕ್ಕೆ ಹೊಂದಿಸುವುದು

ಋ, ಐ, ಮಹಾಪ್ರಾಣಗಳು ಮುಂತಾದ ಬರಿಗಗಳನ್ನು ಕಯ್ ಬಿಡಬೇಕೆಂದಾಗ, ಹಲವರು ಈ ಮೊಗಸನ್ನು, “ಕನ್ನಡದ ಬರಿಗೆಗಳಿಗೆ ಕತ್ತರಿ ಹಾಕಿ ಕನ್ನಡವನ್ನು ಸಂಕುಚಿತಗೊಳಿಸುವ ಪ್ರಯತ್ನ” ಎಂದು ಬಗೆಯುತ್ತಾರೆ. ಆದರೆ ನಿಜಕ್ಕೂ ಇದರ ಉದ್ದೇಶ ಬರಿಗೆ-ಕಡಿತ ಅಲ್ಲ. ಬದಲಿಗೆ ಕನ್ನಡದ ಬರಿಗೆಮಣೆಯನ್ನು ಕನ್ನಡ ಮಾತು ಮತ್ತು ಉಲಿಕೆಗೆ ಹೊಂದಿಸುವ ಪ್ರಯತ್ನ.

ಇಂತಹ ಪ್ರಯತ್ನ ಇದೇನು ಮೊದಲಲ್ಲ. ಹಳಗನ್ನಡದ ‘ಱ’ ಮತ್ತು ‘ೞ’ಗಳನ್ನು ಹೊಸಗನ್ನಡದಲ್ಲಿ ಬಿಟ್ಟುಕೊಡಲಾಗಿದೆ. ‘ಮಳೆ’ ಎಂಬುದನ್ನು ‘ಮೞೆ’ ಎಂದೂ ‘ಕೆರೆ’ ಎಂಬುದನ್ನು ‘ಕೆಱೆ’ ಎಂದೂ ಉಲಿಯದಿದ್ದರೂ ಹಾಗೇ ಬರೆಯಬೇಕು, ಅದೇ ಸರಿಯಾದ ಕನ್ನಡ ಎಂಬ ಕಟ್ಟಲೆ ಈಗಲೂ ಇದ್ದಿದ್ದರೆ ಕನ್ನಡ ಕಲಿಯುವುದು ಎಶ್ಟು ಕಶ್ಟವಾಗುತ್ತಿತ್ತು, ಅಲ್ಲವೇ? ಇದೇ ಬಗೆಯಾದ ಕಶ್ಟವು  ಮಹಾಪ್ರಾಣಗಳಂತೆ ಮುಂತಾದ ಆಡು ಮಾತಿನಲ್ಲಿ ಬಳಕೆಯಲ್ಲಿಲ್ಲದ ಬರಿಗೆಗಳನ್ನು ಬಳಸುವಲ್ಲಿ ಹಲವು ಕನ್ನಡಿಗರಿಗೆ ಆಗುತ್ತದೆ. ಕನ್ನಡ ಬರಹದಲ್ಲಿನ ಸಾಮಾನ್ಯ ತಪ್ಪುಗಳನ್ನು ಗಮನಿಸಿದರೆ ಈ ಕೆಲವು ಬರಿಗೆಗಳ ಬಳಕೆಯಲ್ಲೇ ಆಗುತ್ತವೆ ಎಂಬುದನ್ನು ಗಮನಿಸಬಹುದು. ಇನ್ನು ಇದನ್ನು ಕಲಿಯುವ ಮಕ್ಕಳಿಗೂ ಇದೇ ತೆರನಾದ ಬೇಡದ ಕಶ್ಟಗಳು ಆಗುತ್ತವೆ. ಹಲವರು ಕಲಿಯಲು ಆಗದೆಯೇ ಬಾಳಿನುದ್ದಕ್ಕೂ ‘ತಪ್ಪು’ಗಳನ್ನು ಮಾಡುತ್ತ ಹಲವರ ಲೇವಡಿಗೆ ಗುರಿಯಾಗುವುದೂ ಉಂಟು.

‘ಱ’, ‘ೞ’ಗಳನ್ನು ಕಯ್ ಬಿಟ್ಟುದು ನೆನೆದರೆ, ಹೀಗೆ ಹೊಸಗನ್ನಡದಲ್ಲಿ ಉಲಿಕೆ ಬದಲಾವಣೆಯನ್ನು ಅಳವಡಿಸಿಕೊಂಡು ನಾವು ಒಳ್ಳೆಯ ಕೆಲಸವನ್ನೇ ಮಾಡಿದ್ದೇವೆ ಎನಿಸುತ್ತದೆ. ಏಕೆಂದರೆ ಮಾತಲ್ಲಿ, ಉಲಿಕೆಯಲ್ಲಿ ಇಲ್ಲದ ಒಂದೇ ಒಂದು ಬರಿಗೆಯನ್ನು ಕಲಿತು ಬಳಸುವುದು ಒಂದು ದೊಡ್ಡ ಹೊರೆಯೇ. ಇನ್ನು ಕನ್ನಡಕ್ಕೆ ಹೊಂದದ ಈ ಹೆಚ್ಚಿನ 18 ಬರಿಗೆಗಳನ್ನು (ಹವ್ದು, 18 ಬೇಡದ ಬರಿಗೆಗಳ ಹೊರೆ ಹೋತ್ತಿದ್ದೇವೆ) ಕಯ್ ಬಿಡುವುದರಿಂದ ಕನ್ನಡ ಬರಹದ ಕಲಿಕೆ ಮತ್ತು ಬಳಕೆ ಎಲ್ಲ ಕನ್ನಡಿಗರಿಗೂ ಸುಳುವಾಗಬಲ್ಲುದು!

ಆದಶ್ಟೂ ಅಚ್ಚಗನ್ನಡದ ಪದಗಳನ್ನು ಬಳಸುವುದು 

ಈ ಎರಡನೇ ಕಟ್ಟಲೆಯನ್ನು ನೋಡಿದರೆ ಎಲ್ಲರ ಕನ್ನಡ ಚಳುವಳಿ, ಕನ್ನಡದ ಶುದ್ದೀಕರಣದ ಉದ್ದೇಶ ಹೊಂದಿರುವಂತೆ ಮೇಲು ನೋಟಕ್ಕೆ ಕಾಣುತ್ತದೆ. ಆದರೆ ನಿಜವಾಗಿಯೂ ಕನ್ನಡವನ್ನು ಶುದ್ದಗೊಳಿಸುವ ಚಳುವಳಿ ಇದಲ್ಲ. ಇದರಿಂದ ನಾವು ಹೆಚ್ಚು ಸಾದಿಸುವುದೂ ಇಲ್ಲ. ಅಚ್ಚಗನ್ನಡ ಪದಗಳ ಬಳಕೆಗೆ ಹೆಚ್ಚು ಒತ್ತು ನೀಡುವ ಉದ್ದೇಶ ಬೇರೆಯದೇ ಇದೆ. ಅದನ್ನು ಮುಂದೆ ಕೆಲವು ಎತ್ತುಗೆಗಳನ್ನು ಕೊಟ್ಟು ವಿವರಿಸುತ್ತೇನೆ.

ಎತ್ತುಗೆಗೆ ಕರ್‍ನಾಟಕದ ಕೆಲವು ಊರುಗಳ ಹೆಸರುಗಳನ್ನು ತೆಗೆದುಕೊಳ್ಳೋಣ. ಕೊಡೆಯಾಲ, ಹೊಳೆಹಟ್ಟಿ, ಸುತ್ತುಕೋಟೆ, ಹೆಬ್ಬಾಡಿ, ಬಲಮುರಿ, ಎಡತಿಟ್ಟು, ಅರಕೆರೆ… ಈ ಹೆಸರುಗಳನ್ನು ಯಾರೋ ಪಂಡಿತರು, ತಿಳಿದವರು ಇಟ್ಟುದಲ್ಲ. ಸಾಮಾನ್ಯ ಮಂದಿ ಇಟ್ಟ ಹೆಸರುಗಳಿವು. ಸುತ್ತಲಲ್ಲೆ ಇರುವ ಮರ, ಗಿಡ, ಬಂಡೆ, ಕೋಟೆ, ಹೊಳೆ, ಕೆರೆ, ಹೇಗೆ ಇವುಗಳನ್ನು ಗಮನಿಸಿ ಹೊಸ ಊರಿನ ಪದಗಳನ್ನು ಕಟ್ಟಿದ್ದಾರೆ ನಮ್ಮ ಮಂದಿ. ಈ ಪದಗಳನ್ನು ಹತ್ತಿರದಿಂದ ಗಮನಿಸಿದರೆ, ಇವು ಕನ್ನಡದಲ್ಲಿ ಬೇರೆ ಬೇರೆ ಬಗೆಯ ಪದಕಟ್ಟಣೆಗೆ ಮಾದರಿಯಂತೆ ಕಂಡು ಬೆರಗು ಹುಟ್ಟಿಸುವುದಲ್ಲದೇ, ಸಾಮನ್ಯ ಮಂದಿಯ, ಹಳ್ಳಿಗರ ಮಾಡುಗತನದ ಅಳವಿಗೆ ಹಿಡಿದ ಕನ್ನಡಿಯಂತಿವೆ.

ಇನ್ನು ಕೆಲವು ಕನ್ನಡದ ಪದಗಳನ್ನು ಗಮನಿಸೋಣ. ‘ತೂತು’ ಎಂಬ ಪದ ‘ತೂರು’ ಎಂಬ ಪದದಿಂದ ಬಂದಿದೆ. ಯಾವುದರ ಒಳಗೆ ತೂರಬಹುದೋ ಅದು ‘ತೂತು’ ಆಯಿತು. ‘ಹೊಗೆ’ ಎಂಬ ಪದ ‘ಹೊಗು’ ಎಂಬ ಪದದಿಂದ ಬಂದಿದೆ. ಯಾವುದು ಎಲ್ಲಿ ಬೇಕಾದರೂ ಹೊಕ್ಕಬಲ್ಲುದೋ ಅದು ‘ಹೊಗೆ’ ಆಯಿತು. ಮೊಣಕಾಲಿಂದ ಕೆಳಗೆ ಅಡಿಯವರೆಗಿನ ಬಾಗವನ್ನು ‘ಕಾಲು’ ಎನ್ನುತ್ತೇವೆ. ಇದು ನಮ್ಮ ಮಯ್ಯ ಅಳತೆಯ ಹೆಚ್ಚು ಕಡಿಮೆ ಕಾಲು (quarter) ಬಾಗದಶ್ಟು ಇದೆ ಎಂಬುದೂ ನಿಜ. ಅದಕ್ಕಾಗಿಯೇ ‘quarter’ ಎಂಬುದಕ್ಕೂ ‘ಕಾಲು’ ಎಂದೇ ಹೇಳುತ್ತೇವೆ. ಬಿಡು-ಬೀಡು, ಕಟ್ಟು-ಕಟ್ಟೆ, ನಿಲ್ಲು-ನೆಲೆ ಹೀಗೆ ಕನ್ನಡದ ಸಾಮಾನ್ಯ ಪದಗಳಲ್ಲಿ ಮಾಡುಗತನವು ಎದ್ದು ಕಾಣುತ್ತದೆ.

ಹೊಸ ಚಳಕಗಳು, ಹೊಸ ಅರಿಮೆಗಳು ಕನ್ನಡ ನಾಡಿಗೆ ಬಂದಾಗಲೂ ಹಿಂದಿನ ಸಾಮಾನ್ಯ ಕನ್ನಡಿಗರು ಇದೇ ಬಗೆಯ ಮಾಡುಗತನವನ್ನು ಮೆರೆದಿರುವುದು ಕಾಣಬಹುದು. ಇದರ ಒಂದು ಎತ್ತುಗೆ ಡಾ|| ಚಿದಾನಂದ ಮೂರ್‍ತಿಯವರ ‘ಕನ್ನಡ ಶಾಸನಗಳ ಸಾಂಸ್ಕ್ರುತಿಕ ಅದ್ಯಯನ’ ಎಂಬ ಹೊತ್ತಗೆಯಲ್ಲಿ ದೊರೆಯಿತು. ಕನ್ನಡ ಶಾಸನಗಳಲ್ಲಿ ದೊರೆತ ಕೆಲವು ಬಗೆಯ ಬಾಣಗಳ ಹೆಸರುಗಳನ್ನು ಅದರಲ್ಲಿ ನೀಡಲಾಗಿದೆ. ಬಿಳಿಯಂಬು (ಬಿಳಿ ಬಾಣ?), ಕೋಲಂಬು (ಕೋಲಿನಂತಹ ಬಾಣ), ಸುಂಗಲಂಬು, ಕೆಲ್ಲಂಬು, ಕಿತ್ತಂಬು (ಚಿಕ್ಕ ಬಾಣ), ನಲ್ಲಂಬು (ಒಳ್ಳೆಯ ಬಾಣ?), ಮಸೆಯಂಬು (ಮಸೆದ ತುದಿಯ ಬಾಣ?), ಬಟ್ಟಿನಂಬು (ದುಂಡಾದ ಬಾಣ), ಕವಲಂಬು, ಅಚ್ಚಲಗಂಬು, ಬೋಳೆಯಂಬು, ಪಾರೆಯಂಬು. ಈ ಕೆಲವು ಹೆಸರುಗಳು ಹಳಗನ್ನಡದ ಕಬ್ಬಗಳಲ್ಲೂ ಕಾಣಸಿಗುತ್ತವೆ.

ಇದರಿಂದ ನಾವು ತಿಳಿಯಬಹುದಾದ್ದು ಏನೆಂದರೆ ಸಾಮಾನ್ಯ ಕನ್ನಡಿಗನೂ (ಓದು ಬರಹ ಕಲಿಯದವನೂ) ಕನ್ನಡ ನುಡಿಯ ಸೊಲ್ಲರಿಮೆ ಮತ್ತು ಪದಕಟ್ಟಣೆಯ ಕಟ್ಟಲೆಗಳನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ. ಇದು ಶಾಲೆಯಲ್ಲಿ ಕಲಿಯಬೇಕಾದ ವಿಶೇಶ ಕಲಿಕೆಯೇನಲ್ಲ. ಮಾತು ಕಲಿತಂತೆ ಚಿಕ್ಕ ಮಕ್ಕಳಿಗೂ ತಾನಾಗೇ ಬರುವ ಸಹಜ ಚಳಕ. ಬೇರೊಂದು ನುಡಿಯನ್ನು ನಾವು ಎಶ್ಟೇ ನಮ್ಮದೆಂದು ನೆಚ್ಚಿಕೊಂಡರೂ ಅದನ್ನು ನಮ್ಮ ತಾಯ್ನುಡಿಯಶ್ಟೇ ಚೆನ್ನಾಗಿ ಕಲಿಯುವವರೆಗೂ, ಇದೇ ಬಗೆಯ ಮಾಡುಗತನವನ್ನು ಆ ನುಡಿಯಲ್ಲಿ ತೋರಿಸಲಾಗದು.

ಈಗಿನ ಕಾಲಕ್ಕೆ ಹೇಗೆ ಈ ವಾದ ಇನ್ನೂ ಹೆಚ್ಚು ಹೊಂದುತ್ತದೆ ಎಂಬುದಕ್ಕೆ ನನ್ನದೇ ಒಂದು ಅನುಬವವನ್ನು ಎತ್ತುಗೆಯಾಗಿ ಇಲ್ಲಿ ಕೊಡುತ್ತೇನೆ. ನಾನು ಎಂಜಿನಿಯರಿಂಗ್ ಓದುತ್ತಿದ್ದಾಗ ಕೆಲವು ವಿಶಯಗಳಲ್ಲಿ ಬರುವ ಪದಗಳಿಗೆ ಕನ್ನಡ ಪದಗಳನ್ನು ಕಟ್ಟಲು ಹೊರಟಿದ್ದೆ. ಎಣಿಕದರಿಮೆ(Computer Science)ಯಲ್ಲಿ ಬರುವ List, Queue, Tree ಎಂಬ ಪದಗಳಿಗೆ ಸಾಮಾನ್ಯ ಕನ್ನಡ ಪದಗಳಾದ ಪಟ್ಟಿ, ಸಾಲು, ಮರ ಎಂಬ ಪದಗಳನ್ನು ಬಳಸಿದೆನಾದರೂ ಕಾನ್ಸೆಪ್ಟ್ ಗಳನ್ನು ತಿಳಿಸುವಾಗ ಎಲ್ಲರಂತೆ ನಾನೂ ಆಯ್ದುಕೊಂಡುದು ಸಂಸ್ಕ್ರುತ ಪದಗಳನ್ನು. Data Structure ಎಂಬುದಕ್ಕೆ ‘ದತ್ತಾಂಶ ರಚನೆ’, Pointer ಎಂಬುದಕ್ಕೆ ಸೂಚಕ, ಹೀಗೆ ಮುಂದುವರೆಯುತ್ತ ‘Hashing’ ಎಂಬ ಪದಕ್ಕೆ ಬಂದು ನಿಂತೆನು. ‘Hashing’ ಎಂದರೆ, ಒಂದು ಸೊಲ್ಲು ಇಲ್ಲವೇ ಪದವನ್ನು ತೆಗೆದುಕೊಂಡು ಅದನ್ನು ಒಂದು ಇಲ್ಲವೇ ಹೆಚ್ಚು ಕಟ್ಟಲೆಗಳ ಬಳಕೆ ಮಾಡಿ, ಕಲಸಿ ಬೆರೆಸಿ, ಕೊನೆಗೆ ಮೊದಲ ಸೊಲ್ಲನ್ನು ಊಹಿಸಿಲಾಗದಂತೆ ಒಂದು ಅಂಕವನ್ನಾಗಿ ಮಾಡಿಬಿಡುವುದು. ಇಂಗ್ಲೀಶಲ್ಲೂ ಇದಕ್ಕೆ ಚೆನ್ನಾಗಿ ಕಲಸಿದ, ಬೆರೆಸಿದ ಎಂಬ ಹುರುಳಿದೆ.

ಇದಕ್ಕೆ ಕನ್ನಡ ಪದ ಕಟ್ಟಲು ಹೊರಟ ನಾನು ಕನ್ನಡ ಸಾಹಿತ್ಯ ಪರಿಶತ್ತಿನ ನಿಗಂಟುಗಳಲ್ಲಿ ತಕ್ಕ ಸಂಸ್ಕ್ರುತ ಪದಗಳನ್ನು ಹುಡುಕಲು ತೊಡಗಿದೆ. ಯಾವುದೂ ಸಿಗಲಿಲ್ಲ. ಆಗ ನನಗೆ ಅನಿಸಿದ್ದು ನಾನು ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟಲು ಇನ್ನೂ ಹೆಚ್ಚು ಸಂಸ್ಕ್ರುತ ಪದಗಳನ್ನು ತಿಳಿಯಬೇಕೆಂದು. ಪದಗಳು ಮಾತ್ರವಲ್ಲ, ಸಂಸ್ಕ್ರುತದ ಸೊಲ್ಲರಿಮೆಯೂ ತಿಳಿಯಬೇಕೆಂದು ಅರಿವಾಗಲು ಹೆಚ್ಚು ಹೊತ್ತು ಹಿಡಿಸಲಿಲ್ಲ. ಈಗ ‘Computer’ ಎಂಬುದಕ್ಕೆ ‘ಗಣಕ’ ಎಂದು ಹೇಳಿದರೂ ಅದರ ಸುತ್ತ ಕೆಲವು ಪದಗಳನ್ನು ಕಟ್ಟಬೇಕಾಗುತ್ತದೆ. ‘ಗಣಕೀಕರಣ’, ‘ಗಣಕೀಕ್ರುತ’ ಹೀಗೆ. ಅದೇ ಬಗೆಯಲ್ಲಿ ನನಗೆ ‘hash’ಗೆ ಸಮನಾದ ಸಂಸ್ಕ್ರುತ ಪದ ಸಿಕ್ಕರೂ ‘hashing’ ಪದ ಹೇಗೆ ಕಟ್ಟುವುದು? ಸಿಕ್ಕ ಪದಕ್ಕೆ ‘ಕರಣ’ ಎಂಬ ಒಟ್ಟು ಸೇರಿಸಿದರೆ ಸಾಕೇ? ಇಂಗ್ಲೀಶಲ್ಲಿ ‘hash’ ಅನ್ನು ಹೆಸರುಪದವಾಗಿ ಮತ್ತು ಎಸಕ (ಕ್ರಿಯಾ) ಪದವಾಗಿ ಬಳಸಲಾಗುತ್ತದೆ. ಈ ರೀತಿಯ ಪ್ರಯೋಗ ನನಗೆ ಸಿಗುವ ಹೊಸ ಸಂಸ್ಕ್ರುತ ಪದದಲ್ಲಿ ಹೇಗೆ ಮಾಡುವುದು? ಈ ಬಗೆಯ ಅನುಮಾನಗಳು ನನ್ನನ್ನು ಕಾಡಿದವು.

ಆಗ ನನಗೆ ಅನಿಸಿದ್ದು ಕನ್ನಡದಲ್ಲಿ ಪದಗಳನ್ನು ಕಟ್ಟಿ ಒಳ್ಳೆಯ ಅರಿಮೆಯ ಬರಹಗಳನ್ನು ನೀಡ ಬೇಕಿದ್ದಲ್ಲಿ ನಾನು ಸಂಸ್ಕ್ರುತವನ್ನು ಕಲಿಯಬೇಕು, ಅದೂ ಚೆನ್ನಾಗಿ ಕಲಿಯಬೇಕು ಎಂದು! ಕೆಲವು ದಿನಗಳ ಹಿಂದೆ ಕನ್ನಡದ ಒಬ್ಬ ಹೆಸರಾಂತ ಬರಹಗಾರರು ಇಂತಹುದೇ ಒಂದು ಹೇಳಿಕೆಯನ್ನು ನೀಡಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಾಹಿತ್ಯ ಮೂಡಿ ಬರಲು ಸಂಸ್ಕ್ರುತ ಕಲಿಕೆಗೆ ಒತ್ತು ನೀಡಬೇಕು ಮತ್ತು ತಮಗೆ ಸಂಸ್ಕ್ರುತದ ತಿಳಿವಿದ್ದಿದ್ದರೆ ಇನ್ನೂ ಮೇಲು ಮಟ್ಟದ ಸಾಹಿತ್ಯವನ್ನು ಬರೆಯುತ್ತಿದ್ದೆ ಎಂದು! ನಮಗೆ ಬಾರದ ನುಡಿಯಲ್ಲಿ ನಮ್ಮ ಅನಿಸಿಕೆಗಳನ್ನು ಹೇಳಲು ಹೊರಟರೆ ಇದೇ ಆಗುವುದು. ಈಗ ನೆನಸಿಕೊಂಡರೆ, ಕಲಸು, ಕಲಬೆರಕೆ, ಕಲಸುಮೇಲೋಗರ ಎಂಬಂತಹ ಸಾಮಾನ್ಯ ಕನ್ನಡ ಪದ ಬಳಕೆಗಳಿಂದಲೇ ‘hash’, ‘hashing’ಗೆ ಕನ್ನಡ ಪದಗಳನ್ನು ಕಟ್ಟಬಹುದಿತ್ತು ಎನಿಸುತ್ತದೆ. ಕಲಸು, ಕಲಸಿಕೆ, ಕಲಸುವಿಕೆ, ಕಲಕ, ಕಲಿಪು ಇಂತಹ ಪದಗಳನ್ನೇ ಬಳಸಬಹುದಿತ್ತು.

ಹೀಗೆ ಹಿಂದಿನ ಕಾಲದ ಕನ್ನಡಿಗರ ಮಾಡುಗತನವನ್ನು ಎತ್ತಿ ತೋರಿಸಿ ಇಂದಿನ ಕಾಲದಲ್ಲಿ ಅದು ಮಾಯವಾಗಿರುವ ಎತ್ತುಗೆಯೊಂದನ್ನು ಕೊಟ್ಟಿರುವುದಕ್ಕೆ ಒಂದು ಕಾರಣವಿದೆ. ನಾವು ಇಂದು ಇರುವುದು ಮಾಹಿತಿಯ ಯುಗದಲ್ಲಿ. ಇಲ್ಲಿ ಮಾಹಿತಿಯ ಪಡೆದು ಅರಿವನ್ನು ಬೆಳೆಸಿಕೊಂಡವನು ಮುಂದೆ ಸಾಗುತ್ತಾನೆ, ಆಗದವನು ಹಿಂದೆ ಬೀಳುತ್ತಾನೆ. ಹೊಸ ಮಾಹಿತಿ, ಹೊಸ ಹೊಳಹುಗಳನ್ನು ಹೇಳಲು, ತಿಳಿಸಲು ಮತ್ತು ತಿಳಿಯಲು ದಿನವೂ ಹೊಸ ಪದಗಳನ್ನು ಕಟ್ಟಬೇಕಾಗುತ್ತದೆ. ಇಂಗ್ಲೀಶಿನ ಎತ್ತುಗೆಯನ್ನು ತೆಗೆದುಕೊಂಡರೆ ದಿನವೊಂದಕ್ಕೆ ಸುಮಾರು 14-15 ಹೊಸ ಪದಗಳು ನುಡಿಗೆ ಸೇರ್‍ಪಡೆಯಾಗುತ್ತಿವೆಯಂತೆ (ಸೆಲೆ: Global Language Monitor).  ಈ ಹೊಸ ಪದಗಳನ್ನು ಕಟ್ಟುತ್ತಿರುವವರು ಯಾರೋ ನುಡಿಯರಿಗರೂ, ಸಾಹಿತಿಗಳೂ ಅಲ್ಲ. ಸಾಮಾನ್ಯ ಮಂದಿ, ನಮ್ಮ ನಿಮ್ಮಂತವರೇ! ಈ ಬಗೆಯ ಹೊಸ ಪದಗಳು ಲ್ಯಾಟಿನ್ ನುಡಿಯಲ್ಲಿ ಕಟ್ಟಬೇಕೆಂಬ ಕಟ್ಟಲೆಯೇನಾದರೂ ಇಂಗ್ಲೀಶಲ್ಲಿ ಮಾಡಿಕೊಂಡಿದ್ದರೆ, ಆ ನುಡಿ ಈಗ ಬೆಳೆದುದರ ಕಾಲು ಪಾಲಶ್ಟು ಬೆಳೆಯುತ್ತಿರಲಿಲ್ಲ.

ಕನ್ನಡದ ವಿಶಯವೂ ಹೀಗೇ. ನಮ್ಮ ನುಡಿ ನಮಗೆ ಬೇಕಾದ ಎಲ್ಲ ಅರಿವು ತಿಳಿವುಗಳನ್ನು ಕೊಡುವಂತಾಗಬೇಕಿದ್ದಲ್ಲಿ ಕೂಡಣದ ಎಲ್ಲ ವರ್‍ಗದ ಮಂದಿಯೂ ಕೂಡಿ ಅದನ್ನು ಆ ಮಟ್ಟಕ್ಕೆ ಕಟ್ಟಬೇಕು. ಹಾಗೆ ಕಟ್ಟಬೇಕಿದ್ದಲ್ಲಿ ಎಲ್ಲರೂ ತಮ್ಮ ಮಾಡುಗತನದ ಕೊಡುಗೆಯನ್ನು ನೀಡಬೇಕು. ಅದು ಸಾದ್ಯವಾಗುವುದು ಕನ್ನಡದ ಸೊಗಡಿರುವ ಪದಗಳಿಂದಲೇ. ಮೊದ ಮೊದಲು ಒಂದೆರಡು ಸಲ ಓದುವಾಗ ಎಲ್ಲರಕನ್ನಡದ ಬರಹಗಳು ವಿಚಿತ್ರವೆನಿಸಬಹುದು, ಕೆಲವರಿಗೆ ಕಶ್ಟವೆನಿಸಲೂಬಹುದು. ಇದಕ್ಕೆ ಕಾರಣ ಹಿಂದೆಂದೂ ಈ ಬಗೆಯ ಬರಹಗಳನ್ನು ನಾವು ಓದಿರುವುದಿಲ್ಲ, ನೋಡಿರುವುದಿಲ್ಲ. ಆದರೆ ಒಮ್ಮೆ ಎಲ್ಲರಕನ್ನಡದಲ್ಲಿ ಓದಲು ಬರೆಯಲು ತೊಡಗಿದರೆ ತೀರಾ ಸುಲುಬವಾಗುತ್ತದೆ. ಚಿಕ್ಕ ಮಕ್ಕಳಿಗೆ ಮತ್ತು ಓದು ಬರಹ ತಿಳಿಯದವರಿಗೆ ಕಲಿಸಲು ತುಂಬಾ ಸುಳುವಾಗುತ್ತದೆ. ಇನ್ನು ಓದು ಬರಹ ಆಗಲೇ ಕಲಿತವರಿಗೆ ಇದರಲ್ಲಿ ಇನ್ನು ಹೆಚ್ಚು ಕಲಿಯುವುದು ಏನೂ ಇಲ್ಲ. ಈಗ ಕಲಿತಿರುವ ಗೊಂದಲಗಳನ್ನು ಮರೆತರೆ ಸಾಕು.

ಚಿತ್ರ: www.free-picture.net

ನಿಮಗೆ ಹಿಡಿಸಬಹುದಾದ ಬರಹಗಳು

5 Responses

 1. bhatdns says:

  ಸಂದೀಪ್ ಕಂಬಿ ಅವರೇ, ವಿಶಯವನ್ನು ತುಂಬಾ ಚನ್ನಾಗಿ ವಿವರಿಸಿದ್ದೀರಿ.

 2. ಓಳ್ಳೆಯ ಬರಹ ಸಂದೀಪ್ – ಕಾಲು, ಹೊಗೆ ಈ ಪದಗಳ ಹೇಳಿದ್ದು ಕುತೂಹಲಕಾರಿಯಾಗಿದೆ. ಇದೇ ರೀತಿ ಬಾಳೆಗೊನೆ, ಅಡಿಕೆ ಕೊನೆ ಎಂಬು ಬಳಕೆಯಲ್ಲಿದೆ. ಇವೆರಡು ಮರದ ಕೊನೆಯಲ್ಲಿರುತ್ತವೆ 🙂 ಅಲ್ಲದೆ ಬಾಳೆಗೊನೆ – ಬಾಳೆಮರಕ್ಕೆ ಕೊನೆಗಾಲವೂ ಹೌದು, ಗೊನೆಯಾದ ನಂತರ ಬಾಳೆಯ ಮರವನ್ನು ಕಡಿದು ಹಾಕಲಾಗುತ್ತದೆ. ಉಳಿದ ಚಿಗುರುಗಳನ್ನು ಬೆಳೆಯುವಂತೆ ನೋಡಿಕೊಳ್ಳುತ್ತಾರೆ 🙂

  • Sandeep Kn says:

   ನನ್ನಿ ಗಿರೀಶ್!

   ಕೊನೆ-ಗೊನೆ ಪದಗಳ ನಂಟೂ ಕುತೂಹಲಕಾರಿಯಾಗಿದೆ. ಇಂತಹ ಪದಗಳು ಸಾಮಾನ್ಯ ಮಂದಿಯ ಸ್ವತಂತ್ರ ಯೋಚನೆ ಮತ್ತು ಮಾಡುಗತನದ ಎತ್ತುಗೆಗಳು.

 1. 19/12/2013

  […] ನಾನೂ ಒಮ್ಮೆ ಮಾಡಿದ್ದೆ. ಇದರ ಬಗ್ಗೆ ಈಗಾಗಲೇ ಬರೆದಿದ್ದೇನೆ. ಎಲ್ಲರೂ ಮಾಡುವಂತೆ ನಾನೂ ಮೊದಲು […]

ಅನಿಸಿಕೆ ಬರೆಯಿರಿ:

Enable Notifications