ಕೆನಡದ ಅಲೆಯುಲಿಯೊಳ್ ಕನ್ನಡಮುಂಟೇ?

ರತೀಶ ರತ್ನಾಕರ

BTP

ಬೆಂಗಳೂರಿನಲ್ಲಿ ಗಾಡಿಗಳನ್ನು ಓಡಿಸುವಾಗ ಯಾವುದಾದರೂ ಸಾರಿಗೆ ಕಟ್ಟಲೆ (traffic rules) ಪಾಲಿಸದೇ ಸಿಕ್ಕಿಬಿದ್ದರೆ, ಟ್ರಾಪಿಕ್ ಪೋಲಿಸಿನವರು ದಂಡ ಕಟ್ಟಿಸಿಕೊಂಡು ಬ್ಲಾಕ್ ಬೆರ್‍ರಿ ಮೂಲಕ ರಶೀದಿಯನ್ನು ನಿಂತಲ್ಲೇ ನೀಡುತ್ತಿದ್ದರು. ಆದರೆ, ಬ್ಲಾಕ್ ಬೆರ್‍ರಿಯಿಂದ ನೀಡಿದ ರಶೀದಿಗಳಲ್ಲಿ ಕನ್ನಡದಲ್ಲಿ ಮಾಹಿತಿ ಇರದೇ ಬರೀ ಇಂಗ್ಲೀಶಿನಲ್ಲಿ ಮಾತ್ರ ಇರುತ್ತಿತ್ತು. ದಂಡ ಕಟ್ಟಿದವರಿಗೆ ತಾವು ದಂಡ ಕಟ್ಟಿರುವ ಕಾರಣ ಮತ್ತು ರಶೀದಿಯ ವಿವರಣೆಗಳು ಕನ್ನಡದಲ್ಲಿ ಸಿಗುತ್ತಿರಲಿಲ್ಲ. ‘ಬೆಂಗಳೂರು ಟ್ರಾಪಿಕ್ ಪೋಲಿಸ್ (ಬಿಟಿಪಿ)’ ರಾಜ್ಯ ಸರ್‍ಕಾರದ ಒಂದು ಸಂಸ್ತೆ,  ಇದು ರಾಜ್ಯದ ಆಡಳಿತ ನುಡಿಯಾದ ಕನ್ನಡದಲ್ಲಿ ಮಾಹಿತಿ, ಸೇವೆ ಮತ್ತು ರಶೀದಿಯನ್ನು ನೀಡಿ ತಾವಾಗಿಯೇ ಆಡಳಿತದಲ್ಲಿ ಪಾರದರ್‍ಶಕತೆಯನ್ನು ತೋರಬೇಕಿತ್ತು. ಆದರದು ನಡೆಯುತ್ತಿರಲಿಲ್ಲ.

ಬಿಟಿಪಿಯವರು ರಶೀದಿ ಹಾಗು ಮಾಹಿತಿಗಳನ್ನು ಕನ್ನಡದಲ್ಲಿ ನೀಡಬೇಕು ಎಂದು ಬಿಟಿಪಿಯವರ ಪೇಸ್‍ಬುಕ್ ಪುಟದಲ್ಲಿ ಹಲವರು ಒತ್ತಾಯ ಮಾಡಿದ್ದರು. ಕೊನೆಗೂ ಒತ್ತಾಯಕ್ಕೆ ಮಣಿದಿರುವ ಬೆಂಗಳೂರು ಟ್ರಾಪಿಕ್ ಪೋಲಿಸ್ ಈಗ ಬ್ಲಾಕ್ ಬೆರ್‍ರಿಯಿಂದ ಕೊಡುತ್ತಿರುವ ರಶೀದಿಗಳಲ್ಲಿ ಕನ್ನಡದಲ್ಲೂ ಮಾಹಿತಿ ನೀಡುತ್ತಿರುವರು. ಬ್ಲಾಕ್ ಬೆರ್‍ರಿ ತಂತ್ರಾಂಶದಲ್ಲಿ ಕನ್ನಡವನ್ನು ಅಳವಡಿಸಿಕೊಂಡಂತೆ ತೋರುತ್ತದೆ. ಇದು ಮಂದಿಯ ಅನುಕೂಲದ ಜೊತೆ ಆಡಳಿತದಲ್ಲಿ ಪಾರದರ್‍ಶಕತೆಯನ್ನು ಬೆಳೆಸುತ್ತದೆ.

ಈ ಹಿಂದೆ, ದಂಡ ಕಟ್ಟಿ ಪಡೆದ ಬ್ಲಾಕ್ ಬೆರ್‍ರಿ ರಶೀದಿಗಳಲ್ಲಿ ಕನ್ನಡ ಏಕಿಲ್ಲ ಎಂದು ಪೋಲಿಸಿನವರನ್ನು ಕೇಳಿದಾಗ ‘ಇದು ಬ್ಲಾಕ್ ಬೆರ್‍ರಿ ಯಿಂದ ಬರುವ ರಶೀದಿ, ಇದರಲ್ಲಿ ಇಂಗ್ಲೀಶ್ ಮಾತ್ರ ಇರುವುದು ಕನ್ನಡ ಬರುವುದಿಲ್ಲ’ ಎಂದು ಮರುನುಡಿಯುತ್ತಿದ್ದರು. ಬ್ಲಾಕ್ ಬೆರ್‍ರಿಯಂತಹ ಅಲೆಯುಲಿಯಲ್ಲಿ ಕನ್ನಡ ಇರುವುದೇ! ಎಂಬ ಅಚ್ಚರಿ ಅವರ ಮಾತಿನಲ್ಲಿ ಕಾಣುತ್ತಿತ್ತು. ಹೆಚ್ಚು ಹೆಚ್ಚು ಮಂದಿ ಕನ್ನಡದಲ್ಲೇ ರಶೀದಿಗಳು ಬೇಕು ಎಂದು ಒತ್ತಾಯಿಸಿದಾಗ ಬೆಂಗಳೂರು ಟ್ರಾಪಿಕ್ ಪೋಲಿಸಿನವರು ಕೆನಡಾ ಮೂಲದ ಕಂಪನಿಯಾದ ‘ರಿಸರ‍್ಚ್ ಇನ್ ಮೋಶನ್’ ಕಂಪನಿಯವರಿಗೆ ಬ್ಲಾಕ್ ಬೆರ್‍ರಿಗಳೊಳಗೆ ಕನ್ನಡವನ್ನು ಅಳವಡಿಸುವಂತೆ ಬೇಡಿಕೆ ನೀಡಿದ್ದಾರೆ. ಬೇಡಿಕೆಯನ್ನು ಮನ್ನಿಸಿರುವ ಬ್ಲಾಕ್ ಬೆರ್‍ರಿಯವರು ತಂತ್ರಾಂಶದಲ್ಲಿ ಕನ್ನಡವನ್ನು ಅಳವಡಿಸಿದ್ದಾರೆ. ಕೊಳ್ಳುಗನು ತನ್ನ ಬೇಡಿಕೆಗಳನ್ನು ಮುಂದಿಟ್ಟಾಗ ಮಾರುಕಟ್ಟೆಯು ಅದನ್ನು ಪೂರಯ್ಸುತ್ತದೆ ಎನ್ನುವುದಕ್ಕೆ ಇದೊಂದು ಎತ್ತುಗೆಯಾಗಿದೆ.

2 ಅನಿಸಿಕೆಗಳು

  1. ಬೇಡಿಕೆ ಪೂರೈಕೆಯನ್ನು ನಿರ್ದರಿಸುತ್ತದೆ ಎನ್ನುವುದು ಒಂದು ಕಡೆಯಾದರೆ, ಪೂರೈಕೆ ಕೂಡ ಬೇಡಿಕೆಯನ್ನು ನಿರ್ದರಿಸುತ್ತದೆ ಎಂದು ಹೇಳಬಹುದು. ಯಾವುದಾದರೂ ಒಂದು ವಸ್ತು ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ, ಅತವಾ ಮಾರುಕಟ್ಟೆ ಬೇಡಿಕೆಯಿರುವ ವಸ್ತುವನ್ನು ಪೂರೈಸಲಾಗುತ್ತಿಲ್ಲ ಎಂದಾದಲ್ಲಿ ಪೂರೈಕೆ ತಂತಾನೇ ಕುಸಿಯುತ್ತದೆ. ಹಾಗಾಗಿ, ಬೇಡಿಕೆ ಮತ್ತು ಪೂರೈಕೆ ಒಂದನ್ನೊಂದು ಅವಲಂಬಿಸಿವೆ. ಇರಲಿ, ಇದು ಇಕನಾಮಿಕ್ಸ್ ಆಯ್ತು. ಸಾರಿಗೆಯವರು ಕನ್ನಡದಲ್ಲಿ ಚೀಟಿ ನೀಡಿದ ಹಾಗೆಯೇ ನಮ್ಮ ಮೊಬೈಲ್ ಪೂರೈಕೆದಾರರಾದ ಬಿಎಸ್ಎನ್ಎಲ್, ಏರ್ಟೆಲ್, ವೊಡಾಫೋನ್, ಐಡಿಯ, ರಿಲಯನ್ಸ್ ಮುಂತಾದವರು ಕೂಡ ತಮ್ಮ ರಸೀದಿ ಹಾಗೂ ಕಾಗದ ಪತ್ರವನ್ನು ಕನ್ನಡದಲ್ಲೇ ಕೊಡುವಂತಾಗಲಿ. ಕೆಲವೊಂದು ಕಂಪನಿಗಳು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆಯಾದರೂ, ಇದು ಎಲ್ಲ ಕಂಪೆನಿಗಳಿಗೂ ಅನ್ವಯಿಸುವಂತಾಗಬೇಕು. ಇದು ಕೇವಲ ಮೊಬೈಲ್ ಸೇವೆಗೆ ಮಾತ್ರವಲ್ಲ, ಎಲ್ಲದಕ್ಕೂ ಅನ್ವಯಿಸುವಂತಾಗಬೇಕು. ಹಾಗಾಗಬೇಕಾದಲ್ಲಿ, ಸರಕಾರದಿಂದ “ಕನ್ನಡ ನೀತಿ”ಯ ಆದೇಶ ಎಲ್ಲ ಸೇವಾ ಪೂರೈಕೆದಾರರನ್ನ ಮುಟ್ಟಬೇಕು. ನೀತಿ ಪಾಲಿಸದಿದ್ದವರ ಲೈಸೆನ್ಸನ್ನು ರದ್ದುಗೊಳಿಸಬೇಕು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.