ಅದಿರು ಕಂಪನಿ ಅದಿರಿದೆ ಹಿಂದಿ ಹೇರಿಕೆಯ ಎದಿರು!

ರತೀಶ ರತ್ನಾಕರ.

BL26_KIOCL_1408454f

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಕದ ಬೆಟ್ಟದ ತಪ್ಪಲಿನಲ್ಲಿರುವ ‘ಕುದುರೆಮುಕ ಕಬ್ಬಿಣದ ಅದಿರು ಕಂಪನಿ’ಗೆ, ಒಕ್ಕೂಟ ಸರಕಾರ ಈ ಬಾರಿ ‘ರಾಜಬಾಶಾ ಪ್ರಶಸ್ತಿ’ಯನ್ನು ನೀಡಿದೆ! ಕಬ್ಬಿಣದ ಅದಿರು ಕಂಪನಿಯಲ್ಲಿ ಹಿಂದಿಯನ್ನು ಚೆನ್ನಾಗಿ ಬಳಸಿರುವುದಕ್ಕೆ ಮತ್ತು ಹಿಂದಿಯನ್ನು ಹೆಚ್ಚು ಹೆಚ್ಚು ಬಳಸಬೇಕೆಂದು ಹುರಿದುಂಬಿಸುತ್ತ ಈ ಪ್ರಶಸ್ತಿಯನ್ನು ನೀಡಿದೆ. ಕಬ್ಬಿಣದ ಅದಿರನ್ನು ಸಿದ್ದಗೊಳಿಸುವ ಕುದುರೆಮುಕ ಕಂಪನಿಗೂ, ಹಿಂದಿ ಬಳಕೆಗೂ ಎಲ್ಲಿಂದ ಎಲ್ಲಿಗೆ ಸಂಬಂದ! ಈ ಸುದ್ದಿಯನ್ನು ಓದಿದಾಗ, ಒಕ್ಕೂಟ ಸರಕಾರದ ಹಿಂದಿ ಹೇರಿಕೆಯ ಮೂರ‍್ಕತನಕ್ಕೆ ನಗುವುದೋ ಬಿಡುವುದೋ ಗೊತ್ತಾಗದು.

ಕುದುರೆಮುಕ ಕಂಪನಿಯು ಕಬ್ಬಿಣದ ಅದಿರನ್ನು ಅಗೆದು, ಮಣ್ಣಿನಿಂದ ಕೂಡಿದ ಅದಿರನ್ನು ನಯಗೊಳಿಸಿ, ಗುಣಮಟ್ಟದ ಅದಿರನ್ನು ಹೆರನಾಡುಗಳಿಗೆ ಕಳಿಸಬೇಕು. ಹೆರನಾಡುಗಳ ಜೊತೆ ತಮ್ಮ ವಹಿವಾಟನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಂಪನಿಯು ಹೆಚ್ಚು ಹೊತ್ತು ಕಳೆಯಬೇಕಾಗುತ್ತದೆ. ಅದಕ್ಕಾಗಿ ಹೊಸ ಬಗೆತಿಳಿವರಿವಿನ(Technology) ನೆರವಿನಿಂದ ಇಲ್ಲವೇ ಇನ್ನಾವುದಾದರೂ ಬಗೆಯಿಂದ ಅದಿರನ್ನು ಚೆನ್ನಾಗಿ ನಯಗೊಳಿಸಿ, ಮಾರುಕಟ್ಟೆಯಲ್ಲಿ ಕಂಪನಿಯ ಅದಿರಿಗೆ ಬೇಡಿಕೆ ಬರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇಂತಹ ಕೆಲಸಗಳ ನಡುವೆ ಹಿಂದಿ ಕಲಿಕೆ ಮತ್ತು ಪಸರಿಸುವಿಕೆಯ ಕೆಲಸವನ್ನು ನೀಡುವುದು ಅನವಶ್ಯಕವಾಗಿದೆ. ಹೊಸ ಹೊಸ ಬಗೆತಿಳಿವರಿವನ್ನು ಇಲ್ಲವೇ, ವ್ಯಾಪಾರ ವಹಿವಾಟಿನ ಬೆಳವಣಿಗೆಯ ಕುರಿತು ಕಲಿಯಬೇಕಾಗಿರುವ ಕಂಪನಿಯ ಕೆಲಸಗಾರರು ಜೊತೆಗೆ ಹಿಂದಿಯನ್ನೂ ಕಲಿಬೇಕಿರುವುದು ಯಾವ ಉಪಯೋಗಕ್ಕೂ ಬಾರದು.

ಕೇವಲ ಕುದುರೆಮುಕ ಕಂಪನಿ ಒಂದೇ ಅಲ್ಲ, ಒಕ್ಕೂಟ ಸರಕಾರದ ಎಲ್ಲ ಕಂಪನಿ ಹಾಗೂ ಹಣಮನೆಗಳಲ್ಲಿ ಈ ಸ್ತಿತಿ ಕಾಣಸಿಗುತ್ತದೆ. ಎತ್ತುಗೆಗೆ, ಕರ‍್ನಾಟಕದ ಒಂದು ಹಣಮನೆಯು ತನ್ನ ಯೋಜನೆ ಹಾಗೂ ಕೊಡುಗೆಗಳಿಂದ ಗ್ರಾಹಕರನ್ನು ಸೆಳೆಯಬೇಕು. ಮಂದಿಯ ನುಡಿಯಲ್ಲಿ ಸೇವೆಯನ್ನು ನೀಡುವುದರ ಮೂಲಕ ಗ್ರಾಹಕರ ನಂಬಿಕೆ ಗಳಿಸಬೇಕು ಮತ್ತು ಹಣಮನೆಯ ಸೇವೆಗಳನ್ನು ಸುಲಬವಾಗಿ ಬಳಸುವಂತಹ ಏರ‍್ಪಾಡುಗಳತ್ತ ಯೋಚಿಸಬೇಕು. ಅದರಲ್ಲೂ, ದಿನೇ ದಿನೇ ಹೆಚ್ಚುತಿರುವ ಹೊಸ ಹೊಸ ಹಣಮನೆಗಳು ಹಾಗೂ ಗ್ರಾಹಕರ ಬೇಡಿಕೆಗಳು ಮಾರುಕಟ್ಟೆಯಲ್ಲಿ ದೊಡ್ಡ ಸ್ಪರ‍್ದೆಯನ್ನು ತಂದಿಟ್ಟಿದೆ. ಈ ಪೋಟಿಯಲ್ಲಿ, ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಹಣಮನೆಗಳ ನಡುವೆ ಹೆಸರು ಮತ್ತು ಲಾಬ ಗಳಿಸಬೇಕಾಗುತ್ತದೆ. ಹೀಗೆ, ಹಣಮನೆಯು ಉಳಿದು ಬೆಳೆಯಲು ಹಣಮನೆಯ ಕೆಲಸಗಾರರು ಬಹಳ ನಿಗಾವಹಿಸಿ ಕೆಲಸ ಮಾಡಬೇಕಾಗಿರುತ್ತದೆ. ಇದರ ನಡುವೆ, ಹಿಂದಿ ಕಲಿಕೆ ಮತ್ತು ಪಸರಿಸುವಿಕೆಯ ಜವಾಬ್ದಾರಿಯನ್ನು ಇವರಿಗೆ ವಹಿಸಿದರೆ ತಮ್ಮ ಕೆಲಸದ ಮೇಲೆ ಹೆಚ್ಚಿನ ಗಮನಹರಿಸಲು ತೊಡಕಾಗುತ್ತದೆ.

ಒಕ್ಕೂಟ ಸರಕಾರಕ್ಕೆ, ಹಿಂದಿಯೇತರರ ಮೇಲೆ ಹಿಂದಿಯನ್ನು ಹೇರಲೇಬೇಕು ಎಂಬ ಹಟವಿದ್ದರೆ ಅದಕ್ಕೆಂದೇ ಮಾಡಿಕೊಂಡಿರುವ ಹಿಂದಿ ಪ್ರಚಾರ ಸಬೆಗಳಿಗೆ ಒತ್ತಾಯಿಸಲಿ. ಅದನ್ನು ಬಿಟ್ಟು, ಕರ್‍ನಾಟಕದಲ್ಲಿರುವ ಅದಿರು ಕಂಪನಿಗೋ, ಹಣಮನೆಗೋ, ರಯ್ಲು ವಿಬಾಗಕ್ಕೋ ಇಲ್ಲವೇ ಇತರೆ ಒಕ್ಕೂಟದ ಕಂಪನಿಗಳಿಗೋ ಹಿಂದಿಯನ್ನು ಬಳಸುವ ಒತ್ತಾಯ ಹಾಗೂ ಆಮಿಶಗಳು ನಿಲ್ಲಬೇಕಿದೆ. ಅದಿರು ಕಂಪನಿಯವರು ಅದಿರನ್ನು ಸಿದ್ದ ಮಾಡಬೇಕು, ಹಣಮನೆಯವರು ಹಣಕಾಸಿನ ವ್ಯವಹಾರ ಮಾಡಬೇಕು, ಬದಲಾಗಿ ಇವೆರೆಲ್ಲರೂ ಹಿಂದಿಯನ್ನು ಕಲಿಯುತ್ತ, ಹರಡುತ್ತ ಕುಳಿತರೆ, ಇವರ ನಿಜವಾದ ಕೆಲಸದ ಮೇಲೆ ಹೆಚ್ಚಿನ ಗಮನಹರಿಸಲಾಗದೆ ಈ ಸಂಸ್ತೆಗಳ ಬೆಳವಣಿಗೆಗೆ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ.

(ಚಿತ್ರ ಸೆಲೆ: thehindubusinessline.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: