ಮಹಾಪ್ರಾಣಗಳು ಈಗೇಕೆ ಬೇಡ?
ಹಲವಾರು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರ ಗುಂಪೇ ಅವಿರತ. ಮಹಾಪ್ರಾಣಗಳ ಬಗ್ಗೆ ಡಾ|| ಡಿ. ಎನ್. ಶಂಕರ ಬಟ್ಟರು ಮಾತನಾಡುತ್ತಿರುವ ವಿಚಾರಗಳು ಅವಿರತ ಗುಂಪಿನವರನ್ನು ಸೆಳೆದಿದ್ದರಿಂದ, ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕಳೆದ ತಿಂಗಳ 28ರಂದು ಬೆಂಗಳೂರಿನ ಸರ‍್ಕಾರೀ ವಿಗ್ನಾನ ಕಾಲೇಜಿನಲ್ಲಿ ಚರ‍್ಚೆಯ ಕೂಟವೊಂದನ್ನು ಏರ‍್ಪಡಿಸಿದ್ದರು. ಚರ‍್ಚೆಯ ಕೂಟದಲ್ಲಿ ಪಾಲ್ಗೊಂಡವರ ಕೇಳ್ವಿಗಳಿಗೆ ಉತ್ತರಿಸಲು, ನುಡಿಯರಿಮೆಯ ವಿಶಯದಲ್ಲಿ ನಾಡಿನಲ್ಲೇ ಹೆಸರುವಾಸಿಯಾದ ಡಾ|| ಕೆ. ವಿ. ನಾರಾಯಣ ಅವರನ್ನು ಕರೆಯಿಸಲಾಗಿತ್ತು. ಈ ಒಂದು ಚರ‍್ಚೆಯ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೂ ಒದಗಿಬಂದಿತ್ತು.
ಡಾ|| ಕೆ. ವಿ. ನಾರಾಯಣ ಅವರು ಕೂಟದಲ್ಲಿ ಎದ್ದ ಎಲ್ಲ ಕೇಳ್ವಿಗಳಿಗೂ ಸರಿಯಾದ ಉತ್ತರಗಳನ್ನೇ ನೀಡಿದರು. ಬಹುಶಹ ಅವಿರತ ಗುಂಪಿನವರಿಗೂ ಕೆ. ವಿ. ನಾರಾಯಣ ಅವರ ಮಾತುಗಳಿಂದ ನುಡಿಯರಿಮೆ ಬಗ್ಗೆ ಸಾಕಶ್ಟು ವಿಶಯಗಳು ತಿಳಿದಿರಬಹುದು. ಆ ಚರ‍್ಚೆಯ ಕೂಟದಲ್ಲಿ ಎದ್ದ ಕೆಲವು ಕೇಳ್ವಿಗಳೂ ಮತ್ತು ಅವಕ್ಕೆ ನನ್ನ ಓದಿನ ಮಟ್ಟದಲ್ಲಿ ನಾನು ಕಂಡುಕೊಂಡಿರುವ ಉತ್ತರಗಳನ್ನು ಸರಣಿ ಬರಹಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಮೊದಲನೆಯದಾಗಿ ಈ ಕೆಳಗಿನ ಕೇಳ್ವಿಯನ್ನೆತ್ತುಕೊಂಡು ಅದಕ್ಕೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ.
ಕನ್ನಡದ ಸುಮಾರು ಎರಡು ಸಾವಿರ ವರುಶಗಳಶ್ಟು ಇತಿಹಾಸದಲ್ಲಿ ಎಂದಿಗೂ ಏಳದ ಮಹಾಪ್ರಾಣದ ಬಗೆಗಿನ ಕೇಳ್ವಿ ಇವತ್ತಿಗೆ ಯಾಕೆ ಎದ್ದಿದೆ?
ಕನ್ನಡ ಬರಹದ ಇತಿಹಾಸ ಸುಮಾರು ಎರಡು ಸಾವಿರ ವರುಶಗಳಶ್ಟು ಹಿಂದಿನದಿರಬಹುದು. ಕನ್ನಡ ಬರಹದಲ್ಲಿ ಮಹಾಪ್ರಾಣಗಳು ಅವತ್ತಿನಿಂದಲೂ ಇವೆ. ಕನ್ನಡಿಗರ ಮಾತಿನಲ್ಲಿ ಮಹಾಪ್ರಾಣಗಳು ಇರಲಿಲ್ಲ, ಇಂದಿಗೂ ಇಲ್ಲ. ಹಾಗಾಗಿ, ಮಹಾಪ್ರಾಣಗಳನ್ನು ಇಟ್ಟುಕೊಳ್ಳುವುದೋ, ಬಿಟ್ಟುಕೊಡುವುದೋ ಎಂಬ ಕೇಳ್ವಿ ಬರಹಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಮಾತಿನಲ್ಲಿ ಮಹಾಪ್ರಾಣಗಳನ್ನು ಇಟ್ಟುಕೊಳ್ಳುವುದೋ ಬಿಟ್ಟುಕೊಡುವುದೋ ಎಂಬ ತೀರ‍್ಮಾನವನ್ನು ಯಾರೋ ಕೆಲವರು ಮಾಡಲು ಸಾದ್ಯವಿಲ್ಲ. ಮಾತು ಹರಿಯುವ ಹೊಳೆಯಂತೆ ತನ್ನದೇ ಹರಿವು ಪಡೆದುಕೊಂಡಿರುತ್ತದೆ.
ಎರಡು ಸಾವಿರ ವರುಶಗಳ ಹಿಂದೆ ಕನ್ನಡದಲ್ಲಿ ಬರಹ ಮಾಡುತ್ತಿದ್ದವರು ಸಂಸ್ಕ್ರುತವನ್ನೂ ಬಲ್ಲವರಾಗಿದ್ದರು. ಸಂಸ್ಕ್ರುತದಲ್ಲಿ ಬರವಣಿಗೆಯು ಇನ್ನೂ ಮುಂಚಿಂದ ಇದ್ದಿದ್ದರಿಂದ, ಸಂಸ್ಕ್ರುತದ ಬರಿಗೆಮಣೆಯ (ಅಕ್ಶರಮಾಲೆ) ಪ್ರಬಾವ ಕನ್ನಡದ ಬರಿಗೆಮಣೆಯ ಮೇಲೂ ಆಗಿದೆ. ಮೇಲಾಗಿ, ಕನ್ನಡದ ಬರಹಗಳಲ್ಲಿ ಸಂಸ್ಕ್ರುತದ ಪದಗಳನ್ನೂ ಹೇರಳವಾಗಿ ಬಳಸುತ್ತಿದ್ದುದರಿಂದ, ಮಹಾಪ್ರಾಣಗಳನ್ನು ಉಳಿಸಿಕೊಳ್ಳುವುದೇ ಸರಿಯೆಂದು ಅಂದಿನ ಬರಹಗಾರರಿಗೆ ಕಂಡಿರಲಕ್ಕೂ ಸಾಕು.
ಅಂದಿನಿಂದ ಇಂದಿನವರೆಗೂ ಯಾರೊಬ್ಬರೂ ಈ ಬಗ್ಗೆ ಸೊಲ್ಲೆತ್ತಲಿಲ್ಲ ಎಂಬುದು ತಪ್ಪರಿವು. ಆಂಡಯ್ಯ, ನಯಸೇನ ಇವರುಗಳು ಕನ್ನಡದ ಬರವಣಿಗೆಗಳಲ್ಲಿ ಸಂಸ್ಕ್ರುತದ ಪದಗಳ ಬಳಕೆ ತುಂಬಾ ಇದ್ದುದನ್ನು ವಿರೋದಿಸಿದ್ದಾರೆ. “ಇಶ್ಟೊಂದು ಸಂಸ್ಕ್ರುತದ ಪದಗಳೇ ಇರುವಾಗ, ಅವನ್ನು ಕನ್ನಡದ ಪದ್ಯವೆಂದೇಕೆ ಕರೆಯುವಿರಿ? ಸಂಸ್ಕ್ರುತದ ಪದ್ಯವೆಂದೇ ಕರೆಯಿರಿ” ಎಂದೂ ಮಾತನಾಡಿದ್ದಾರೆ ಆಂಡಯ್ಯನವರು. ಕೆಲ ವರುಶಗಳ ಹಿಂದೆ ಕೆ. ಎಸ್. ನರಸಿಂಹಸ್ವಾಮಿಯವರೂ ಈ ಬಗ್ಗೆ ದನಿಯೆತ್ತಿದ್ದರು. ಕರ‍್ನಾಟಕ ಕುಲಪುರೋಹಿತರಾದ ಆಲೂರ ವೆಂಕಟರಾಯರೂ ಕನ್ನಡದ ಮಾತಿನಲ್ಲಿ ಮಹಾಪ್ರಾಣಗಳಿಲ್ಲ ಎಂಬುದನ್ನು ಗಮನಿಸಿ ಬರೆದಿರುವುದುಂಟು.
ಈಗ “ಈ ಹೊತ್ತಿನಲ್ಲಿ ಮಹಾಪ್ರಾಣಗಳಿಲ್ಲದ ಬರಹ ಯಾಕೆ ಬೇಕಾಗಿದೆ?” ಎಂಬ ಕೇಳ್ವಿಗೆ ಬರೋಣ. ಹಿಂದಿಗಿಂತ ಬೇರಾದ ಬದುಕು ಬಗೆಯಲ್ಲಿ ನಾವಿದ್ದೇವೆ. ಹಿಂದಿನ ದಿನಗಳಲ್ಲಿ ಬರಹ ಬಾರದಿದ್ದರೆ ಬದುಕು ಕಶ್ಟ ಎಂಬಂತಹ ಪರಿಸ್ತಿತಿ ಇರಲಿಲ್ಲ. ಇವತ್ತಿನ ದಿನ, ಓದು ಬರಹವು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಓದು-ಬರಹ ಬಾರದಿದ್ದರೆ ಬದುಕು ಸಲೀಸಲ್ಲ ಎಂಬ ಪರಿಸ್ತಿತಿ ಇವತ್ತಿಗೆ. ಮತ್ತು, ಓದು-ಬರಹ ಚೆನ್ನಾಗಿ ಮಾಡಬಲ್ಲವರ ಬದುಕುಮಟ್ಟವು (standard of living) ಓದು-ಬರಹ ಮಾಡಲಾರದವರ ಬದುಕುಮಟ್ಟಕ್ಕಿಂತ ಚೆನ್ನಾಗಿರುತ್ತದೆ. ಹೀಗಾಗಿ ಓದು-ಬರಹವು ಇಂದಿಗೆ ಮಂದಿಯೆಲ್ಲರಿಗೆ ಮುಕ್ಯವಾಗಿದೆ.
ಮಕ್ಕಳು ಓದು ಮತ್ತು ಬರಹ ಕಲಿಯುವಾಗ, ಸದ್ದು ಮತ್ತು ಗುರುತುಗಳ ನಡುವೆ ಮನಸ್ಸಿನಲ್ಲೇ ಬೆಸುಗೆ ಮಾಡಿಕೊಳ್ಳುತ್ತಾರೆ. ’ಅ’ ಎಂಬ ಬರಿಗೆಯನ್ನು ನೋಡಿದಾಗ ಅದನ್ನು ಗುರುತು ಹಚ್ಚಿ ಮತ್ತು ಅದಕ್ಕೆ ’ಅ’ ಎಂಬ ಉಲಿಯನ್ನು ಹೊಂದಿಸಿಕೊಳ್ಳುತ್ತಾರೆ. ಶಾಲೆಗೆ ಬರುವ ಮುನ್ನವೇ ಮಾತು ಕಲಿತಿರುವ ಮಕ್ಕಳು, ’ಶ’ ಮತ್ತು ’ಷ’ ಎರಡನ್ನೂ ’ಶ’ ಎಂದೇ ಉಲಿಯುತ್ತಿರುತ್ತಾರೆ. ಅವರಿಗೆ ಇವೆರಡರ ನಡುವೆ ಸದ್ದಿನ ವ್ಯತ್ಯಾಸ ಏನೂ ಕಾಣಿಸದಿದ್ದರೂ, ಎರಡು ಬರಿಗೆಗಳನ್ನು ನೆನಪಿಟ್ಟುಕೊಳ್ಳುವ ಹೊರೆ ಕನ್ನಡದ ಮಕ್ಕಳಿಗಿದೆ. ತಮ್ಮ ಮಾತಿನಲ್ಲಿ ಇಲ್ಲದ ಇತರ ಮಹಾಪ್ರಾಣಗಳ ಬಗೆಗೂ ಇಂತಹದೇ ಒಂದು ಹೊರೆ ಕನ್ನಡದ ಮಕ್ಕಳ ಮೇಲಿದೆ.
ಪದಗಳನ್ನು ಗುರುತಿಸುವ ಹಂತಕ್ಕೆ ಬಂದಾಗ, “ಗಂಟೆ” ಎಂದೇ ಕೇಳಿ ಗೊತ್ತಿದ್ದರೂ ಬರೆಯುವಾಗ “ಘಂಟೆ” ಎಂದು ಬರೆಯಬೇಕು ಎಂಬುದನ್ನು ಸರಿಯಾಗಿ ಅರಿತುಕೊಳ್ಳಲಾಗದೇ ಗೊಂದಲಕ್ಕೆ ಬೀಳುತ್ತಾರೆ. ಒಂದೆರಡು ಪದದ ಮಟ್ಟಿಗೆ ಮಾತ್ರ ಈ ಗೊಂದಲವಿದ್ದಿದ್ದರೆ ಬಹುಶ ತೊಂದರೆ ಇರುತ್ತಿರಲಿಲ್ಲ, ಆದರೆ, ಮಹಾಪ್ರಾಣಗಳನ್ನು ಬಳಸಿ ಬರೆಯಬೇಕಾದಂತಹ ಎಲ್ಲ ಪದಗಳ ಬಗೆಗೂ ಈ ಗೊಂದಲ ಇರುವುದರಿಂದ, ಅವೆಲ್ಲವನ್ನೂ ಉರು ಹೊಡೆಯಬೇಕಾದ ಕಶ್ಟ ಕನ್ನಡದ ಮಕ್ಕಳಿಗಿದೆ. ಉರು ಹೊಡೆಯಲಾಗದೇ, ತಮ್ಮ ಮನಸಿನಲ್ಲಿರುವ ಸದ್ದಿನಂತೆ ಬರೆದರೆ, “ಅದು ತಪ್ಪು” ಎಂದು ಹೇಳಿಸಿಕೊಳ್ಳುವ ಮಕ್ಕಳು ಕೀಳರಿಮೆಗೀಡಾಗಿ, “ತನಗೆ ಕನ್ನಡ ಬರುವುದೇ ಇಲ್ಲ” ಎಂಬಂತಹ ತೀರ‍್ಮಾನವೊಂದನ್ನು ತಮ್ಮ ಮನಸಿನಲ್ಲೇ ಮಾಡಿಕೊಳ್ಳುವ ತೊಂದರೆಯಿದೆ. ಚಿಕ್ಕಂದಿನಲ್ಲೇ ಅಂತಹ ಕೀಳರಿಮೆಗೆ ಈಡಾದ ಮಗುವಿನ ಓದು ಮತ್ತೆ ಚಿಗುರೊಡೆದು ಹೆಮ್ಮರವಾಗುವ ಸಾದ್ಯತೆ ಕಡಿಮೆಯೇ ಆಗಿರುತ್ತದೆ.
ಹೀಗಾಗಿ, ಮಾತಿನಲ್ಲಿಲ್ಲದ ಬರವಣಿಗೆಯಲ್ಲಿ ಮಾತ್ರ ಇರುವ ಮಹಾಪ್ರಾಣಗಳನ್ನು ಬಿಟ್ಟುಕೊಟ್ಟರೆ, ಲಕ್ಶಾಂತರ ಕನ್ನಡದ ಮಕ್ಕಳಿಗೆ ಓದು/ಬರಹ ಸಲೀಸಾಗುತ್ತದೆ. ಇದು ಕನ್ನಡದಲ್ಲಿ ಮಾತ್ರ ನಡೆಯುತ್ತಿರುವ ಒಂದು ಚಿಂತನೆಯಲ್ಲ, ತಮ್ಮ ತಮ್ಮ ಬರಹಗಳಲ್ಲಿರುವ ತೊಡಕುಗಳನ್ನರಿತು ಅವನ್ನು ಬದಲಿಸಿಕೊಂಡಿರುವ ಕೂಡಣಗಳು ಸಾಕಶ್ಟಿವೆ ಜಗತ್ತಿನಲ್ಲಿ. ಮತ್ತು, ಈ ಬದಲಾವಣೆಗಳಿಂದಾಗಿ ಸಾಕಶ್ಟು ಲಾಬಗಳನ್ನೂ ಆಯಾ ಕೂಡಣಗಳು ಪಡೆದುಕೊಂಡಿವೆ.
ಅಂದಿನ ಚರ‍್ಚೆಯಲ್ಲಿ ಕೇಳಿಬಂದ ಇನ್ನೂ ಕೆಲವು ಕೇಳ್ವಿಗಳ ಬಗ್ಗೆ ಮುಂದಿನ ಬರಹದಲ್ಲಿ ನೋಡೋಣ.
1 Response
[…] ಏರ‍್ಪಡಿಸಿದ್ದ ಮಾತುಕತೆಯೊಂದರ ಬಗ್ಗೆ ಕಳೆದ ಬಾರಿ ಬರೆದಿದ್ದುದನ್ನು ತಾವು ಓದಿರಬಹುದು. ಡಾ|| […]