ಬರಹಕ್ಕೆ ಮೇಲ್ಮೆ ಬಂದುದು ಹೇಗೆ?

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 14

nudi_inukuಮೊನ್ನೆ ಮೊನ್ನೆಯ ವರೆಗೂ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತರೆ ಸಾಕಿತ್ತು; ಉಳಿದವರೆಲ್ಲ ಅದರಿಂದ ದೂರವೇ ಉಳಿಯಬಹುದಿತ್ತು, ಮತ್ತು ಹೀಗೆ ಬರಹದಿಂದ ದೂರ ಉಳಿದುದರಿಂದಾಗಿ ಅವರಿಗೆ ಜೀವನದಲ್ಲಿ ಯಾವ ತೊಂದರೆಯೂ ಉಂಟಾಗುತ್ತಿರಲಿಲ್ಲ.

ಆದರೆ, ಇವತ್ತು ಎಲ್ಲಾ ಜನರೂ ಬರಹವನ್ನು ಕಲಿಯಬೇಕಾಗಿದೆ, ಮತ್ತು ಕಲಿತು ಬಳಸುತ್ತಿರಬೇಕಾಗಿದೆ. ಯಾಕೆಂದರೆ, ಹಾಗೆ ಮಾಡದವರಲ್ಲಿ ಹೆಚ್ಚಿನವರೂ ಇವತ್ತು ತಮ್ಮ ಜೀವನದಲ್ಲಿ ಸೋತುಹೋಗುತ್ತಿದ್ದಾರೆ. ಒಂದು ಸಮಾಜದ ಏಳಿಗೆಯಾಗಬೇಕಿದ್ದರೂ ಅದಕ್ಕೆ ಸೇರಿದ ಜನರೆಲ್ಲ ಬರಹವನ್ನು ಕಲಿಯುವುದು ಮತ್ತು ಬಳಸುವುದು ಇವತ್ತಿನ ಮಟ್ಟಿಗೆ ಅತ್ಯವಶ್ಯವಾಗಿದೆ.

ಇದುವರೆಗೂ ಇಲ್ಲದಿದ್ದ ಈ ಮೇಲ್ಮೆ ಬರಹಕ್ಕೆ ಬಂದುದು ಹೇಗೆ? ಮಿಲಿಯಗಟ್ಟಲೆ ವರ‍್ಶಗಳಿಂದಲೂ ಜನರ ನಡುವಿನ ಸಂಪರ‍್ಕಕ್ಕೆ ಕೊಂಡಿಯಾಗಿ, ಮತ್ತು ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ಬೇರೆಯವರಿಗೆ ತಿಳಿಸಲು ಬೇಕಾಗುವ ಒಯ್ಯುಗೆಯಾಗಿ ಮಾತನ್ನೇ ಬಳಸಲಾಗುತ್ತಿತ್ತು. ಆದರೆ, ಸುಮಾರು ನಾಲ್ಕಯ್ದು ಸಾವಿರ ವರ‍್ಶಗಳಶ್ಟು ಹಿಂದೆ, ಮಾತನ್ನು ಬರಹಕ್ಕಿಳಿಸುವ ಬಗೆಯನ್ನು ಕಂಡುಹಿಡಿಯಲಾಯಿತು. ಮೊದಲಿಗೆ ಇದನ್ನು ನೆನಪಿಗೆ ನೆರವಾಗುವಂತಹ ಕೆಲಸಗಳಲ್ಲಿ ತೊಡಗಿಸಲಾಯಿತು; ಆದರೆ ಆಮೇಲೆ, ದೂರ ಇರುವವರನ್ನು ಸಂಪರ‍್ಕಿಸುವುದಕ್ಕಾಗಿಯೂ ಇದನ್ನು ಬಳಸಲು ತೊಡಗಲಾಯಿತು.

ಹೀಗಿದ್ದರೂ, ಬರಹವೆಂಬುದು ಮೊನ್ನೆ ಮೊನ್ನೆಯ ವರೆಗೂ ಕೆಲವೇ ಕೆಲವು ಜನರ ಸೊತ್ತಾಗಿ ಮಾತ್ರ ಉಳಿದಿತ್ತು, ಮತ್ತು ಕೆಲವೇ ಕೆಲವು ನುಡಿಗಳನ್ನು ಆಡುವವರಲ್ಲಿ ಮಾತ್ರ ಅದು ಬಳಕೆಯಲ್ಲಿತ್ತು. ಸುಮಾರು ಮುನ್ನೂರು-ನಾನ್ನೂರು ವರ‍್ಶಗಳಶ್ಟು ಹಿಂದೆ ಬರಹಗಳನ್ನು ಅಚ್ಚುಹಾಕುವ ಬಗೆಯನ್ನು ಕಂಡುಹಿಡಿದುದು ಈ ವಿಶಯದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿತು; ಅದರಲ್ಲೂ ಬರಹದಲ್ಲಿ ಬರುವ ಒಂದೊಂದು ಬರಿಗೆಗೂ ಒಂದೊಂದು ಮೊಳೆಯನ್ನು ಬಳಸಿ ಅಚ್ಚುಹಾಕುವ ಬಗೆಯನ್ನು ಕಂಡುಹಿಡಿದುದು ಈ ಕ್ರಾಂತಿ ಇನ್ನಶ್ಟು ವೇಗವಾಗಿ ಹಲವಾರು ನುಡಿಗಳನ್ನು ಆವರಿಸುವ ಹಾಗೆ ಮಾಡಿತು.

ಈ ಕ್ರಾಂತಿ ನಡೆಯುವ ಮೊದಲು, ಬರಹಗಳನ್ನು ಕಯ್ಯಲ್ಲಿ ನಕಲುಮಾಡಬೇಕಾಗಿತ್ತು; ಇದು ತುಂಬಾ ತೊಡಕಿನ ಮತ್ತು ತುಂಬಾ ಸಮಯ ತಗಲುವ ಕೆಲಸವಾಗಿತ್ತು; ಕೆಲವು ಮಂದಿ ಮಾತ್ರ ಈ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು, ಮತ್ತು ಇದರಿಂದಾಗಿ, ಬರಹವನ್ನು ಬಳಸುವವರ ಎಣಿಕೆ ತುಂಬಾ ಕಡಿಮೆಯಾಗಿಯೇ ಉಳಿದಿತ್ತು.

ಆದರೆ, ಬರಹಗಳನ್ನು ಅಚ್ಚುಹಾಕಿಸಲು ತೊಡಗಿದುದರಿಂದಾಗಿ, ಮತ್ತು ಅದಕ್ಕಾಗಿ ತೊಗಲು, ತೊಗಟೆ ಮೊದಲಾದವುಗಳನ್ನು ಬಳಸುವ ಬದಲು ಕಾಗದವನ್ನು ಬಳಸಲು ತೊಡಗಿದುದರಿಂದಾಗಿ, ಅವನ್ನು ತುಂಬಾ ಕಡಿಮೆ ಬೆಲೆಗೆ ಉಂಟುಮಾಡಲು, ಮತ್ತು ತುಂಬಾ ಸುಲಬವಾಗಿ ಉಂಟುಮಾಡಲು ಸಾದ್ಯವಾಯಿತು. ಇದರಿಂದಾಗಿ, ಅವುಗಳ ಪ್ರತಿಗಳನ್ನು ಒಮ್ಮೆಗೇನೇ ಸಾವಿರಾರು ಜನರಿಗೆ ತಲುಪಿಸಲು ಸಾದ್ಯವಾಯಿತು. ಇದಲ್ಲದೆ, ಅವನ್ನು ಬಳಸುವ ಕೆಲಸವೂ ತುಂಬಾ ಸುಲಬವಾಯಿತು.

ಬರಹಗಳನ್ನು ಅಚ್ಚುಹಾಕಿಸಲು ತೊಡಗಿದುದರಿಂದಾಗಿ, ಬರಹಗಳಲ್ಲಿ ಬಳಕೆಯಾಗುವ ಬರಿಗೆ(ಅಕ್ಶರ)ಗಳು, ಪದಗಳು, ಸೊಲ್ಲುಗಳು ಮೊದಲಾದುವೆಲ್ಲ ಎಲ್ಲಾ ಕಡೆಗಳಲ್ಲೂ ಹೆಚ್ಚುಕಡಿಮೆ ಒಂದೇ ರೂಪದಲ್ಲಿ ಉಳಿಯುವಂತಾಯಿತು, ಮತ್ತು ಇದರಿಂದಾಗಿ, ನಾಡಿನ ಒಂದು ಮೂಲೆಯಲ್ಲಿ ಉಂಟುಮಾಡಿದ ಬರಹವನ್ನು ಎಲ್ಲಾ ಕಡೆಗಳಲ್ಲಿರುವ ಜನರೂ ಸುಲಬವಾಗಿ ಓದಿ ತಿಳಿದುಕೊಳ್ಳುವಂತೆ ಮಾಡಲು ಸಾದ್ಯವಾಯಿತು.

ಹಿಂದಿನ ಕಾಲದಲ್ಲಿ ಬರಹಗಳನ್ನು ಯಾರಾದರೂ ಒಬ್ಬರು ದೊಡ್ಡದಾಗಿ ಓದುತ್ತಿದ್ದರು, ಮತ್ತು ಉಳಿದವರು ಅವರ ಸುತ್ತಲೂ ಕುಳಿತು ಅದನ್ನು ಕೇಳುತ್ತಿದ್ದರು; ಎಲ್ಲರಿಗೂ ತಮ್ಮವೇ ಆದ ಬರಹಗಳ ಪ್ರತಿಗಳು ದೊರೆಯತೊಡಗಿದ ಮೇಲೆ, ಅವನ್ನು ಗಟ್ಟಿಯಾಗಿ ಓದುವ ಬದಲು ಮನಸ್ಸಿನಲ್ಲೇನೇ ಓದುವ ಬಗೆ ಬಳಕೆಗೆ ಬಂತು. ಇದಕ್ಕನುಗುಣವಾಗಿ, ಬರಹಗಳ ಬಗೆಗಳಲ್ಲೂ ಹಲವು ಮಾರ‍್ಪಾಡುಗಳು ನಡೆದುವು.

ದಿನಪತ್ರಿಕೆ, ವಾರಪತ್ರಿಕೆ ಮೊದಲಾದುವನ್ನು ಅಚ್ಚುಹಾಕಿಸಿ, ಅವು ಒಮ್ಮೆಗೇನೇ ಲಕ್ಶಾಂತರ ಜನರನ್ನು ತಲಪುವ ಹಾಗೆ ಮಾಡಲಾಯಿತು, ಮತ್ತು ಬರಹವನ್ನು ಕಲಿಯುವವರಿಗೆಲ್ಲ ಅವರದೇ ಆದ ಕಲಿಕೆಯ ಪುಸ್ತಕಗಳು ಸಿಗುವಂತೆ ಮಾಡಲಾಯಿತು. ಬರಹದ ಬಳಕೆಯಲ್ಲಿ ಮತ್ತು ಕಲಿಕೆಯಲ್ಲಿ ಇಂತಹ ಹಲವಾರು ಮಾರ‍್ಪಾಡುಗಳು ಅವನ್ನು ಕಾಗದದಲ್ಲಿ ಅಚ್ಚುಹಾಕಲು ತೊಡಗಿದ ಮೇಲೆ ನಡೆದುಹೋಗಿವೆ. ಹಲವಾರು ಒಳನುಡಿಗಳನ್ನಾಡುವ ಜನರ ನಡುವೆ ಒಂದೇ ಬಗೆಯ ಬರಹದ ನುಡಿ ಬಳಕೆಗೆ ಬಂದಿರುವುದಕ್ಕೂ ಈ ರೀತಿ ಬರಹಗಳನ್ನು ಅಚ್ಚುಹಾಕಲು ತೊಡಗಿದುದೇ ಕಾರಣವಾಗಿದೆ.

ಬರಹಕ್ಕೆ ಈ ರೀತಿ ಹೆಚ್ಚು ಹೆಚ್ಚು ಮೇಲ್ಮೆ ಸಿಗುತ್ತಿದ್ದಂತೆ, ಜನರ ನಡವಳಿಕೆಗಳಲ್ಲೂ ಹಲವು ಬಗೆಯ ಮಾರ‍್ಪಾಡುಗಳು ಉಂಟಾಗತೊಡಗಿದುವು: ಜನರು ತಿಳಿವನ್ನು ಕೂಡಿಡುವ ಬಗೆ ಬೇರಾಯಿತು; ಮೊದಲಿಗೆ ಎಲ್ಲವನ್ನೂ ನೆನಪಿನಲ್ಲಿಯೇ ಉಳಿಸಿಕೊಳ್ಳಬೇಕಾಗಿತ್ತು; ಆದರೆ ಬರಹ ಹೆಚ್ಚು ಹೆಚ್ಚು ಬಳಕೆಗೆ ಬಂದಂತೆ, ತಿಳಿವನ್ನು ಹಲವು ಬಗೆಯ ಬರಹಗಳಲ್ಲಿ ಮತ್ತು ಪುಸ್ತಕಗಳಲ್ಲಿ ಕೂಡಿಡಲಾಯಿತು.

ಗಾದೆಗಳು, ಹಾಡುಗಳು, ಸೂತ್ರಗಳು, ನೀತಿಕತೆಗಳು ಮೊದಲಾದುವೆಲ್ಲ ತಿಳಿವನ್ನು ನೆನಪಿನಲ್ಲಿ ಕೂಡಿಡಲು ಬೇಕಾಗುವಂತಹ ಬಗೆಗಳು; ಬರಹಗಳಲ್ಲಿ ಕೂಡಿಡುವುದಕ್ಕೆ ಇಂತಹ ನೆನಪಿಸಲು ನೆರವಾಗುವ ಬಗೆಗಳು ಬೇಕಾಗುವುದಿಲ್ಲ. ಇದಕ್ಕೆ ಬದಲು, ಪುಸ್ತಕಗಳಲ್ಲಿ ಕಾಣಿಸುವಂತಹ ತಲೆಬರಹಗಳು, ಪಸುಗೆಗಳು, ದಪ್ಪಬರಿಗೆ, ತೆಳುಬರಿಗೆ ಮೊದಲಾದ ಬರಿಗೆರೂಪಗಳು, ಪಟ್ಟಿಗಳು, ಸುಟ್ಟಗೆಗಳು ಮೊದಲಾದ ಓದುವಲ್ಲಿ ನೆರವಾಗುವ ಬೇರೆಯೇ ಹಲವು ಬಗೆಗಳನ್ನು ಬಳಕೆಗೆ ತರಬೇಕಾಯಿತು.

ತಿಳಿವನ್ನು ಕೂಡಿಡುವ ಬಗೆಯಲ್ಲಿ ಮಾರ‍್ಪಾಡಾದುದರಿಂದಾಗಿ, ತಿಳಿವಿಗೂ ವಯಸ್ಸಿಗೂ ನಡುವಿದ್ದ ಸಂಬಂದ ಇಲ್ಲವಾಯಿತು; ಯಾವ ವಿಶಯದಲ್ಲಿ ಬೇಕಿದ್ದರೂ ಪುಸ್ತಕಗಳನ್ನು ಓದುವ ಮೂಲಕ, ದೊಡ್ಡವರಿಗಿಂತ ಹೆಚ್ಚು ತಿಳಿವನ್ನು ಚಿಕ್ಕವರು ಪಡೆಯಬಲ್ಲವರಾದರು. ಇದಲ್ಲದೆ, ಎಶ್ಟು ತಿಳಿವನ್ನು ಮತ್ತು ಎಶ್ಟು ಬಗೆಯ ತಿಳಿವನ್ನು ಪುಸ್ತಕಗಳಲ್ಲಿ ಕೂಡಿಡಬಲ್ಲೆವು ಎಂಬುದಕ್ಕೆ ಒಂದು ಮಿತಿಯೇ ಇಲ್ಲದಿರುವ ಹಾಗಾಯಿತು. ಹೊಸ ಹೊಸ ತಿಳಿವುಗಳನ್ನು ಪಡೆಯುತ್ತಿರುವಾಗಲೂ ಹಳೆಯವನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳಲು ಸಾದ್ಯವಾಯಿತು.

ತಿಳಿವನ್ನು ಬರಹರೂಪದಲ್ಲಿ ಉಳಿಸಿಕೊಳ್ಳಲು ತೊಡಗಿದುದರಿಂದಾಗಿ ಜನರು ಅದನ್ನೊಂದು ವಸ್ತುವಿನ ಹಾಗೆ ಕಾಣಲು ತೊಡಗಿದರು, ಮತ್ತು ಅದನ್ನು ಕಂಡುಹಿಡಿದವರು ಅದರ ಮೇಲೆ ತಮ್ಮ ಒಡೆತನವನ್ನು ಹೇರಲು ತೊಡಗಿದರು. ತಾವು ಕಂಡುಹಿಡಿದ ತಿಳಿವನ್ನು ಒಂದು ಪುಸ್ತಕದ ರೂಪದಲ್ಲಿ ಅಚ್ಚುಹಾಕಿಸಿ, ಅದನ್ನು ಸಾವಿರಾರು ಜನರಿಗೆ ತಲಪಿಸುವ ಮೂಲಕ, ಕೆಲವರು ಸಾಕಶ್ಟು ಹಣವನ್ನೂ ಕಲೆಹಾಕಿದರು.

ತಿಳಿವು ಎಂಬುದು ಬರಹವನ್ನು ಬಳಸಲು ತಿಳಿಯದವರಲ್ಲಿ ಅವರು ಮಾಡುವ ಕೆಲಸದ ಅಂಗವಾಗಿರುತ್ತದೆ; ಕೆಲಸ ಮಾಡಿದ ಅನುಬವವೇ ಅವರಲ್ಲಿ ತಿಳಿವಿನ ರೂಪದಲ್ಲಿರುತ್ತದೆ; ಅದನ್ನು ಅವರು ಆ ಕೆಲಸದಿಂದ ಬೇರ‍್ಪಡಿಸಿ ಪರಿಶೀಲಿಸಲಾರರು; ಅದರ ಕುರಿತಾಗಿ ಅವರು ಆಡಬಲ್ಲ ಮಾತುಗಳೂ ಅದನ್ನು ಬಳಸಿ ನಡೆಸಬಲ್ಲ ಕೆಲಸದೊಂದಿಗೆ ಹೆಣೆದುಕೊಂಡಿರುತ್ತವೆ.

ಇದಕ್ಕೆ ಬದಲು, ಕಾಗದದಲ್ಲಿ ಬರೆದ ಇಲ್ಲವೇ ಅಚ್ಚುಹಾಕಿದ ತಿಳಿವು ಅದನ್ನು ಬಳಸಿ ನಡೆಸುವ ಕೆಲಸಕ್ಕಿಂತ ಬೇರಾಗಿ ಉಳಿಯುತ್ತದೆ; ಅದನ್ನು ತಿರುತಿರುಗಿ ಓದಿ, ಆ ತಿಳಿವು ಸರಿಯೋ ತಪ್ಪೋ ಎಂದು ವಿಮರ‍್ಶಿಸಲು ಬರುತ್ತದೆ. ಹಾಗಾಗಿ, ಬರಹವನ್ನು ಬಳಸುವವರಿಗೂ ಅವನ್ನು ಬಳಸದವರಿಗೂ ನಡುವೆ ಅವರು ಆಲೋಚಿಸುವ ಬಗೆಯಲ್ಲೇ ಹಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.

ನಿಜಕ್ಕೂ ಬರಹ ಬಾರದವರು ಬರಹ ಬಲ್ಲವರಿಗಿಂತ ಜಾಣ್ಮೆಯಲ್ಲಾಗಲಿ, ಬುದ್ದಿವಂತಿಕೆಯಲ್ಲಾಗಲಿ ಕಡಿಮೆಯೇನಲ್ಲ; ಬರಹ ಬಲ್ಲವರಶ್ಟೇ ಜಾಣ್ಮೆಯಿಂದ ಮತ್ತು ಅವರಶ್ಟೇ ಚನ್ನಾಗಿ ಬರಹ ಬಾರದವರೂ ತಮ್ಮ ಜೀವನವನ್ನು ನಡೆಸಬಲ್ಲರು. ಆದರೆ, ಈ ಎರಡು ಬಗೆಯ ಜನರೂ ಒಂದೇ ನಾಡಿನಲ್ಲಿ ನೆಲೆಸಿದ್ದು, ಆ ನಾಡಿನ ಆಡಳಿತವನ್ನು ನಡೆಸುವ ಮತ್ತು ಅದರ ಕುರಿತಾಗಿ ತೀರ‍್ಮಾನಗಳನ್ನು ಕಯ್ಗೊಳ್ಳುವ ಮಂದಿಯೆಲ್ಲ ಬರಹಬಲ್ಲವರಾಗಿದ್ದಲ್ಲಿ, ಆ ನಾಡಿನಲ್ಲಿರುವ ಬರಹ ಬಾರದ ಜನರಲ್ಲಿ ಹೆಚ್ಚಿನವರೂ ತಮ್ಮ ಜೀವನದಲ್ಲಿ ಸೋತುಹೋಗುತ್ತಲೇ ಇರಬೇಕಾಗುತ್ತದೆ.

ಅದರಲ್ಲೂ ನಮ್ಮ ನಾಡಿನಲ್ಲಿರುವ ಹಾಗೆ ಆಡಳಿತವು ಮಂದಿಯಾಳ್ವಿಕೆಯದಾಗಿದ್ದಲ್ಲಿ, ಎಲ್ಲಾ ಮಂದಿಯೂ ಅದರಲ್ಲಿ ಸರಿಯಾಗಿ ತಮ್ಮ ಹೊಣೆಯನ್ನರಿತು ಪಾಲ್ಗೊಳ್ಳಬೇಕಾಗುತ್ತದೆ; ಹಾಗಾಗಿ, ಒಂದು ನಾಡಿನ ಮಂದಿಯಾಳ್ವಿಕೆ (ಪ್ರಜಾಪ್ರಬುತ್ವ) ಚನ್ನಾಗಿ ನಡೆಯಬೇಕಿದ್ದಲ್ಲಿ, ಎಲ್ಲರಿಗೂ ಬರಹದ ತಿಳಿವಿರುವುದು ಅತ್ಯವಶ್ಯ. ಇಲ್ಲವಾದರೆ, ಆ ನಾಡಿನಲ್ಲಿರುವ ಬರಹ ಬಾರದವರು ತಮ್ಮ ಏಳಿಗೆಗೆ ಮಾತ್ರವಲ್ಲದೆ ಇಡೀ ನಾಡಿನ ಏಳಿಗೆಗೂ ತೊಡಕಾಗುತ್ತಾರೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 13

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 13/11/2013

    […] << ನುಡಿಯರಿಮೆಯ ಇಣುಕುನೋಟ – 14 […]

ಅನಿಸಿಕೆ ಬರೆಯಿರಿ:

Enable Notifications OK No thanks