’ಒಡನೆರವಿನ ಸಾಗುವಳಿ’ ಅಂದರೇನು?

– ಬರತ್ ಕುಮಾರ್.

rg_blog_20130105-1

 ಮನುಶ್ಯನು ಗುಂಪು ಗುಂಪುಗಳಲ್ಲಿ ಬಾಳ್ವೆ ನಡೆಸಲು ಮುಂದಾದ ಮೇಲೆ ಅವನ ಬದುಕಿನಲ್ಲಿ ಹಲ ಮಾರ‍್ಪಾಟುಗಳು ತಾನಾಗಿಯೇ ಆದವು. ಗುಂಪುಗಳಲ್ಲಿ ಬಾಳುತ್ತಿದ್ದುದರಿಂದ ಒಬ್ಬರಿಗೊಬ್ಬರು ಮಾತನಾಡಲು ಶುರು ಮಾಡಿದರು. ಒಬ್ಬರಿಗೊಬ್ಬರು ನೆರವೀಯಲು ಮೊದಲು ಮಾಡಿದರು. ತನ್ನಲ್ಲಿರುವುದನ್ನು ಕೊಟ್ಟು ಇಲ್ಲದಿರುವುದನ್ನು ಬೇರೊಬ್ಬರಿಂದ ಪಡೆದುಕೊಳ್ಳುವ ಅಲುವಾಟ ಬೆಳೆದುಬಂತು. ಹೀಗಾಗಿ ಈ ಗುಂಪುಗಳೇ ಕೂಡಣ(society)ಗಳಾದವು. ಈ ಗುಂಪುಗಳ ಆಚರಣಗಳೇ ಮುಂದೆ ನಡೆ(culture)ಯಾಯಿತು. ಹೀಗೆ ಸಾಗುತ್ತ ಮಾನವನು ನಾಗರಿಕತೆಯತ್ತ ಅಡಿಯಿಟ್ಟನು. ನಾಗರಿಕತೆಯಿಂದ ಚಿಂತನೆಗಳು ಹುಟ್ಟಿಕೊಂಡವು. ಹೀಗೆ ಮನುಶ್ಯರು ಗುಂಪು ಮಾಡಿಕೊಂಡು ಒಬ್ಬರಿಗೊಬ್ಬರು ನೆರವೀಯುತ್ತಿದ್ದುದರಿಂದ ಮಾನವನ ಎಲ್ಲ ಬಗೆಯ ಬೆಳವಣಿಗೆ ಸಾದ್ಯವಾಯಿತು.

ಹಲವು ನಾಗರಿಕತೆಗಳು ಮತ್ತು ನಡವಳಿಕೆಗಳು ಹುಟ್ಟಿಕೊಂಡಿದ್ದು ಮಾನವನು ಸಾಗುವಳಿಯನ್ನು ಮಾಡಲು ಶುರು ಮಾಡಿದ ಮೇಲೆಯೇ ಎಂಬುದು ಇಂಗ್ಲಿಶಿನ ‘agriculture’ ಎಂಬ ಪದದಲ್ಲಿರುವ culture’ ಪದದಿಂದ ತಿಳಿಯುತ್ತದೆ.(Culture <Cultivation) ಇದಲ್ಲದೆ ಲ್ಯಾಟೀನ್ ಪದಗಳಾದ ಆರೇಟ್ರಮ್(aratrum), ಆರೇಶಿಯೋನಿಸ್(Arationis), ಆರೇಟರ್(Arator) ಎಂಬ ಪದಗಳಿಗೆ ಕ್ರಮವಾಗಿ ಆರು(ಏರು), ಆರಂಬ, ಆರಂಬಕಾರ ಎಂಬ ಹುರುಳುಗಳಿವೆ. ಸಂಸ್ಕ್ರುತದಲ್ಲಿರುವ ಆರ‍್ಯಎಂಬ ಪದಕ್ಕೆ ಇರುವ ಹುರುಳು ನಡೆಗಾರ’(ಸುಸಂಸ್ಕ್ರುತ) ಎಂಬ ಹುರುಳೇ ಆಗಿದೆ. ಹೀಗಾಗಿ ಆರಂಬಕ್ಕೂ ಮತ್ತು ನಡೆಗೂ ಹತ್ತಿರದ ನಂಟಿದೆ ಎಂಬುದು ಇದರಿಂದ ತಿಳಿಯುತ್ತದೆ. ತನ್ನ ಸುತ್ತಣದೊಂದಿಗೆ ನೆಮ್ಮದಿಯ ಬಾಳು ನಡೆಸಲು ಸಾಗುವಳಿಯು ಒಳ್ಳೆಯ ದಾರಿಯಾಯಿತು. ಬೇರೆ ಬೇರೆ ಮಣ್ಣಿನ ಮತ್ತು ಗಾಳಿಯ ಗುಣಕ್ಕೆ ತಕ್ಕಂತೆ ಬೇರೆ ಬೇರೆ ಬೆಳೆಗಳು, ಬೇರೆ ಬೇರೆ ಬಗೆಯ ಸಾಗುವಳಿಯ ಬಗೆಗಳು ಬೆಳೆದು ಬಂದವು.

ಹೋವರ‍್ಡ್ ಜಿನ್ ಅವರ ಹೊತ್ತಗೆಯಲ್ಲಿ ಹೇಳಿರುವಂತೆ, ಕೊಲಂಬಸ್ ತನ್ನ ಹುಡುಕುಪಯಣದಲ್ಲಿ ಸ್ಪೇನಿನಿಂದ ಸಾಗುತ್ತಾ ಬಂದು ಅಮೇರಿಕದ ಬಹಮಾಸ್ ಎಂಬ ನಡುಗಡ್ಡೆಯಲ್ಲಿ ಇಳಿದಾಗ, ಆಗಲೇ ಅಲ್ಲಿ ಬದುಕುತ್ತಿದ್ದ ಅರವಾಕ್ ಎಂಬ ಬುಡಕಟ್ಟು ಜನಾಂಗದವರು ಅವರನ್ನು ಚೆನ್ನಾಗಿ ನೋಡಿಕೊಂಡರು. ತಮ್ಮಲ್ಲಿದ್ದ ವಸ್ತುಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಕೊಲಂಬಸ್ ಮತ್ತು ಆತನ ಜೊತೆಗಾರರೊಂದಿಗೆ ಹಂಚಿಕೊಂಡರು. ಅಲ್ಲದೆ ಅರವಾಕ್ ಜನಾಂಗದವರು ಆಗಲೇ ಆರಂಬವನ್ನು ಮಾಡುತ್ತಿದ್ದರು ಎಂಬುದನ್ನೂ ಕೊಲಂಬಸ್ ದಾಕಲಿಸುತ್ತಾನೆ. ಹೀಗೆ ಹಂಚಿಕೊಂಡು ಬದುಕುವ ಗುಣವು ಬುಡಕಟ್ಟು ಮಾನವನಿಗೆ ಸಹಜವಾಗಿಯೇ ಒದಗಿತ್ತು ಎಂಬುದು ಇದರಿಂದ ತಿಳಿಯುತ್ತದೆ. ಈ ಹಂಚಿಕೊಂಡು ಬದುಕುವ ಗುಣವೇ ಮುಂದೆ ಒಡನೆರವಿನ ಸಾಗುವಳಿ(cooperative farming)ಗೆ ಕಾರಣವಯಿತೆಂದು ಹೇಳಬಹುದು.

ಒಡನೆರವಿನ ಸಾಗುವಳಿಯಲ್ಲಿ ಯಾವುದೇ ಒಂದು ಗುಂಪಿನ(ಅದು ಸಾವಿರ ಮಂದಿ ಇರುವ ದೊಡ್ದ ಗುಂಪು ಇಲ್ಲವೇ ಹತ್ತಿಪ್ಪತ್ತು ಇರುವ ಸಣ್ಣ ಗುಂಪೇ ಆಗಿರಬಹುದು) ರಯ್ತರು ಸಾಗುವಳಿಗೆ ಬೇಕಾದ

  • ನೆಲ, ಬೀಜ ಮತ್ತು ಗೊಬ್ಬರಕ್ಕೆ ತಗುಲುವ ಕರ‍್ಚನ್ನು ಒಗ್ಗಟ್ಟಾಗಿ ಮತ್ತು ನ್ಯಾಯಯುತವಾಗಿ ಹಂಚಿಕೊಳ್ಳುವುದು.
  • ಬೆಳೆಗಳನ್ನು ಬೆಳೆದ ಮೇಲೆ ಅದನ್ನು ಮಾರುಕಟ್ಟೆಗೆ ತರುವಲ್ಲಿ ಇಲ್ಲವೆ ದೂರಸಾಗಾಣಿಕೆಗೆ ಆಗುವ ಕರ‍್ಚುಗಳನ್ನು ಹಂಚಿಕೊಳ್ಳುವುದು ಇಲ್ಲವೇ ತಾವೇ ದುಡಿದು ಅದನ್ನು ಮಾರುಕಟ್ಟೆಯಲ್ಲಿ ಮಾರುವುದು
  • ಆರಂಬದ ಕೆಲಸಗಳಲ್ಲಿ ಒಬ್ಬರಿಗೊಬ್ಬರು ಒಡನೆರವೀಯುತ್ತಾ ದುಡಿಮೆಯನ್ನು ಹಂಚಿಕೊಳ್ಳಲೂಬಹುದು.
  • ಸಾಗುವಳಿಯಿಂದ ಬಂದ ಆದಾಯವನ್ನು ನ್ಯಾಯಯುತವಾಗಿ ಹಂಚಿಕೊಳ್ಳುವುದು.

ಒಡನೆರವಿನ ಸಾಗುವಳಿಯಲ್ಲಿ ಒಂದು ಗುಂಪಿನ ರಯ್ತರೆಲ್ಲರೂ ಸಮನಾದ ಪ್ರಮಾಣದಲ್ಲಿ ನೆಲವನ್ನು ಹೊಂದಿರಬೇಕೆಂದೇನಿಲ್ಲ, ಬೇರೆ ಬೇರೆ ಪ್ರಮಾಣದಲ್ಲಿ ನೆಲದ ಒಡೆತನವನ್ನು ಹೊಂದಿರಬಹುದು. ನೆಲದ ಪ್ರಮಾಣಕ್ಕೆ ತಕ್ಕಂತೆ ಅವರವರ ಆದಾಯವು ನಿಂತಿರುತ್ತದೆ.

ಒಡನೆರವಿನ ಸಾಗುವಳಿ(.ಸಾ.)ಗೆ ಇದಿರಾಗಿರುವ ಮತ್ತು ಬರೀ ಲಾಬಾಂಶವನ್ನೇ ಗುರಿಯಾಗಿಟ್ಟುಕೊಂಡಿರುವ ಹೂಡಿಕೆದಾರರ ಸಾಗುವಳಿ’ಗೆ ಹೋಲಿಸಿದರೆ ಒ.ಸಾ.ಯಲ್ಲಿ ಹಲವು ತರದಲ್ಲಿ ಒಳಿತುಗಳಿವೆ. .ಸಾ.ಯಲ್ಲಿ ಒಬ್ಬನ ಗಳಿಕೆಗಿಂತ ಊರೊಟ್ಟಿನ ಗಳಿಕೆಯೇ ಹೆಚ್ಚು ತಲೆಮೆಯನ್ನು ಪಡೆದುಕೊಳ್ಳುತ್ತದೆ. ಗುಂಪಿನ ಏಳಿಗೆಯಲ್ಲೇ ಪ್ರತಿಯೊಬ್ಬನ ಏಳಿಗೆಯು ಅಡಗಿಕೊಂಡಿರುತ್ತದೆ. ಇದಲ್ಲದೆ ಇಡೀ ಜಮೀನು ಯಾರೋ ಒಬ್ಬನ ಒಡೆತನದಲ್ಲಿರದೆ ಒಡೆತನವು ಆಯಾ ರಯ್ತಗುಂಪಿನಲ್ಲಿ ಹಂಚಿಹೋಗಿರುತ್ತದೆ. ಹಾಗಾಗಿ ಇಡೀ ಸಾಗುವಳಿ ಮತ್ತು ಅದರಿಂದ ಬರುವ ಆದಾಯವು ಯಾರೋ ಒಬ್ಬನ ಹಿಡಿತದಲ್ಲಿರುವುದಿಲ್ಲ. ಆದ್ದರಿಂದ ಒ.ಸಾ. ಮಂದಿಯಾಳ್ವಿಕೆಯ ಬಯಕೆಗಳನ್ನು ಎತ್ತಿಹಿಡಿಯುತ್ತದೆ. ಈ ಗುಂಪೊಡೆತನವಿರುವುದರಿಂದ ಇಂತಹ ಏರ‍್ಪಾಟಿನಲ್ಲಿ ಪಾಲುದಾರಿಕೆ, ಪಾಲ್ಗೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆ ಹೆಚ್ಚು ಹೆಚ್ಚು ಬಲಗೊಳ್ಳುತ್ತದೆ. ಹಾಗಾಗಿ ಇಂತಹ ಏರ‍್ಪಾಟಿನಲ್ಲಿ ಕೂಡಣವು ಹದುಳದಿಂದಿರುತ್ತದೆ. ಆದರೆ ಹೂಡಿಕೆದಾರರ ಸಾಗುವಳಿಯಲ್ಲಿ ಎಲ್ಲವೂ ಹೂಡಿಕೆದಾರನ ಹಿಡಿತದಲ್ಲಿರುವುದರಿಂದ ದುಡಿಯುವ ರಯ್ತನ ಹಿತ ಕಾಪಾಡುವುದು ಕಶ್ಟವಾಗುತ್ತದೆ.

ಬೇರೆ ಬೇರೆ ನಾಡುಗಳಲ್ಲಿ ಒ.ಸಾ.

ಹೊಸಗಾಲದಲಿ ದೊಡ್ಡ ನಾಡಾದ ಯು.ಎಸ್.ಎ.ಯಿಂದ ಹಿಡಿದು ಅತೀ ಸಣ್ಣ ಆದರೆ ಮುಂದುವರೆದ ನಾಡಾದ ಇಸ್ರೇಲಿನಂತಹ ನಾಡುಗಳಲ್ಲಿ ಇದು ಬಳಕೆಯಲ್ಲಿದೆ. ಇಸ್ರೇಲಿನಲ್ಲಂತೂ ಇದನ್ನು ಬಲಯುತವಾಗಿ ಬೆಳೆಸಲಾಗಿದೆ. ಇದಲ್ಲದೆ ನ್ಯೂಜಿಲ್ಯಾಂಡ್, ಕೆನಡ, ನೆದರ‍್ಲ್ಯಾಂಡ್ಸ್, ಉಕ್ರೇನ್ ದೇಶಗಳಲ್ಲಿ ಒ.ಸಾ. ಚೆನ್ನಾಗಿಯೇ ಬೆಳೆದಿದೆ. ಇನ್ನು ನಮ್ಮ ದೇಶಕ್ಕೆ ಬಂದರೆ ಮಹಾರಾಶ್ಟ್ರದಲ್ಲಿ ಒಡನೆರವಿನ ಸಕ್ಕರೆ ಕಯ್ಗಾರಿಕೆಗಳಿವೆ ಮತ್ತು ಕರ‍್ನಾಟಕದಲ್ಲಿ ಹಾಲು ಉತ್ಪಾದನೆ ಒಡನೆರವಿನ ಸೇರುವೆಗಳಿಂದಲೇ ಆಗುತ್ತಿದೆ. ಕರ‍್ನಾಟಕದ ಒಡನೆರವಿನ ಸೇರುವೆಗಳ ಮೂಲಕ ಆಗುವ ಹಾಲು ಉತ್ಪಾದನೆಯ ಪ್ರಮಾಣ ದೇಶದಲ್ಲೇ ಎರಡನೇ ಸ್ತಾನದಲ್ಲಿದೆ.

ಕೂಡಣದರಿಮೆಯ ಕಣ್ಣಿನಲ್ಲಿ ಒ.ಸಾ.

.ಸಾ.ಯು ಚೆನ್ನಾಗಿ ನೆಲೆ ನಿಲ್ಲಬೇಕಾದರೆ ರಯ್ತಗುಂಪಿನಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಗುಂಪುತನವನ್ನು ಹೆಚ್ಚು ಮಯ್ಗೂಡಿಸಿಕೊಳ್ಳಬೇಕಾಗುತ್ತದೆ. ಇದು ಆಗಬೇಕಾದರೆ ಒಬ್ಬರಿಗೊಬ್ಬರ ಮೇಲೆ ನಂಬಿಕೆ ಮತ್ತು ಗೆಳೆತನ ಬೆಳೆಯಬೇಕಾಗುತ್ತದೆ. ಇಂತಹ ಗುಂಪುಗಳು ಹೆಚ್ಚು ಹೆಚ್ಚು ಎಣಿಕೆಯಲ್ಲಿದ್ದರೆ ಆ ಕೂಡಣದಲ್ಲಿ ಹೆಚ್ಚು ತೊಂದರೆಗಳು ಇರಲಾರವು. ಇವೆಲ್ಲ ಆಗಬೇಕಾದರೆ ಅವರೆಲ್ಲ ಒಂದೇ ನುಡಿಯಾಡುವ ಮಂದಿಯಾಗಿರಬೇಕಾಗುತ್ತದೆ. ಒರ‍್ನುಡಿಯ ಕೂಡಣ(linguistically homogenous society)ದಲ್ಲಿ ಒಬ್ಬರಿಗೊಬ್ಬರು ಚೆನ್ನಾಗಿ ಬೆರೆಯುತ್ತಾರೆ ಎಂಬುದು ಕೂಡಣದ ಅರಕೆಗಳಿಂದ ತೋರಿಸಿಕೊಡಲಾಗಿದೆ. ಈಹೊತ್ತಿನ ಚರ‍್ಚೆಗಳಾದ ತಾಯ್ನುಡಿಯಲ್ಲಿ ಕಲಿಕೆ ಮತ್ತು ಜಾಗತೀಕರಣವ, ಒರ‍್ನುಡಿಯ ಕೂಡಣದಲ್ಲಿ ಚರ‍್ಚೆಯಾಗಿಯೇ ಉಳಿಯುವುದಿಲ್ಲ. ಒರ‍್ನುಡಿಯ ಕೂಡಣದಲ್ಲಿ ಕಲಿಕೆ ತಾಯ್ನುಡಿಯಲ್ಲಿಯೇ ಆಗಬೇಕಾಗುತ್ತದೆ ಯಾಕಂದರೆ ಆ ಒಂದೇ ನುಡಿಯಾಡುವವರು ಒಂದು ಕಡೆ ಸೇರಿ ಬದುಕನ್ನು ಕಟ್ಟಬೇಕಾದರೆ ಅದು ತಾಯ್ನುಡಿಯೇ ಆಗಬೇಕಾಗುತ್ತದೆ (ಇದಕ್ಕೆ ಇಸ್ರೇಲನ್ನು ಎತ್ತುಗೆಯಾಗಿ ಕೊಡಬಹುದು). .ಸಾ ತನ್ನಿಂತಾನೆ ಸಾಗಬಹುದಾದ, ಕಡಿಮೆ ಸಾಮಾಜಿಕ ತೊಂದರೆಗಳಿರುವ ಒಂದು ಕೂಡಣವನ್ನು ಹುಟ್ಟುಹಾಕಬಲ್ಲುದು. “ಎಲ್ಲರಿಗೂ ಸಮಪಾಲುಎಲ್ಲರಿಗೂ ಸಮಬಾಳು” ಎಂಬುದು ಬರೀ ಹೇಳಿಕೆಯಾಗಿ ಉಳಿಯದೆ, .ಸಾ.ಯು ಅದನ್ನು ಎತ್ತಿ ಹಿಡಿಯುತ್ತದೆ.

[ಮುಂದಿನ ಕಂತಿನಲ್ಲಿ ಒಡನೆರವಿನ ಸಾಗುವಳಿಯ ಬಗೆಗಳನ್ನು ಮತ್ತು ಅದರ ಹಣಕಾಸಿನ ವಿಚಾರವಾಗಿ ಹೆಚ್ಚು ತಿಳಿಯೋಣ]

(ಮಾಹಿತಿ ಸೆಲೆಗಳು:
1. http://en.wikipedia.org/wiki/Agricultural_cooperative
2.
Howard Zinn, A People’s History of United States, New Press 2003
3. ಲತೀನ್ ಕನ್ನಡ ನಿಗಂಟು
– 2010 (Dictionarium Latino Canarese – Louis Charbonnaux, 1861)
4. ವಿಚಾರ ಪ್ರಪಂಚ, ಸೇಡಿಯಾಪು ಕ್ರುಶ್ಣಬಟ್ಟ)

(ಚಿತ್ರ ಸೆಲೆ: makanaka.wordpress.com) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks