‘ಸಮಾಜ’ ಚಿಂತನೆ

– ಅನುಪಮಾ ಜಿ.

‘ಸಮಾಜ’ ಎಂದೊಡನೆಯೇ ನಮ್ಮ ಕಣ್ಣು ಮುಂದೆ ಜನಸಮುೂಹ ಬರುತ್ತದೆ. ಪ್ರಾಣಿಗಳಿಗೆ ಬರೀ ಜೀವನವಶ್ಟೇ ಇರುತ್ತದೆ. ಆದರೆ ಮನುಶ್ಯರಿಗೆ ಆಲೋಚಿಸುವ ಶಕ್ತಿ ಮತ್ತು ವಿವೇಚನಾ ಶಕ್ತಿಯೂ ಇದೆ. ಎಲ್ಲಿ ಬುದ್ದಿ ಮತ್ತು ವಿವೇಚನೆಗಳು ಇರುತ್ತವೆಯೋ ಅಲ್ಲಿ ಚಿಂತನೆ ಇರುತ್ತದೆ. ಈ ಸಮಾಜದಲ್ಲಿ ಪ್ರಾಣಿಗಳು ಬದುಕುತ್ತವೆ ಹಾಗೂ ಮನುಶ್ಯರು ಬದುಕುತ್ತಾರೆ.ಆದರೆ ಎರಡಕ್ಕೂ ಇರುವ ವ್ಯತ್ಯಾಸ ವಿವೇಚನೆಯಶ್ಟೇ. ಪ್ರಾಣಿಗಳು ಕೂಡ ತಮ್ಮ ಸಮೂಹದೊಂದಿಗೆ ಅಂದರೆ ಅವುಗಳ ಸಮಾಜ ಕಟ್ಟಿಕೊಂಡು ಬದುಕುತ್ತವೆ. ಆದರೆ ಮನುಶ್ಯ ತನ್ನ ಬುದ್ದಿವಂತಿಕೆಯಿಂದ ತನ್ನ ಸಮಾಜದಲ್ಲಿ ಬದುಕಲು ಪ್ರಯತ್ನಿಸುತ್ತಾನೆ. ಹೀಗೆ ಪ್ರತಿಯೊಂದು ಜೀವಿಗಳು ತಮ್ಮ ತಮ್ಮ ಸಮಾಜದಲ್ಲಿ ಬದುಕುತ್ತವೆ. ಆದರೆ ಇದರಲ್ಲಿ ಅತ್ಯಂತ ಪ್ರಬಾವಶಾಲಿಯಾದದ್ದು ಮನುಶ್ಯ ಸಮಾಜ. ಏಕೆಂದರೆ ಮೊದಲೇ ಹೇಳಿದಂತೆ ಅಲ್ಲಿ ಚಿಂತನೆ ಅಡಗಿರುತ್ತದೆ.

ಒಂದು ಸಮಾಜ ಕಟ್ಟುವ ಮೂಲ ಉದ್ದೇಶ ಅದರಡಿಯಲ್ಲಿರುವ ಜನರ ಕಶ್ಟಗಳನ್ನು ಆದಶ್ಟು ಪರಿಹರಿಸುವ ಆಲೋಚನೆಯಾಗಿರಬೇಕು. ಆದರೆ ನಮ್ಮ ಜನರು ಬೇಡದ ಚಿಂತನೆ ಮಾಡಿ, ಜಾತಿ ರಾಜಕೀಯ, ದರ‍್ಮದ ಹೆಸರಿನಲ್ಲಿ ಕಿತ್ತಾಡುತ್ತಾ  ಸಮಾಜದ ಅಸ್ತಿತ್ವಕ್ಕೆ ದಕ್ಕೆ ಉಂಟು ಮಾಡುವ ಮಟ್ಟಕ್ಕೆ ತಂದಿದ್ದಾರೆ. ಪ್ರತಿಯೊಬ್ಬರು ಸಮಾಜದ ಹೆಸರಿನಲ್ಲಿ ಅವರವರ ಸ್ವಾರ‍್ತ ಸಾದನೆಯ ಕಾರ‍್ಯದಲ್ಲಿ ತೊಡಗಿದ್ದಾರೆ. ದೇವರು ಮನುಶ್ಯನಿಗೆ ಕೆಲವು ವಿಶಿಶ್ಟ ಶಕ್ತಿಗಳನ್ನು ಕೊಟ್ಟಿರುತ್ತಾನೆ. ಆದರೆ ಮನುಶ್ಯ ಅವುಗಳನ್ನು ದುರ‍್ಬಳಕೆ ಮಾಡಿಕೊಳ್ಳುತ್ತಿದ್ದು ಮನುಶ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿರದಂತಾಗಿ ಹೋಗಿದೆ.

ಈಗಿನ ಸಮಾಜದಲ್ಲಿ ಒಳಿತನ್ನು ಮಾಡುವ ಉದ್ದೇಶ ಹೊಂದಿರುವ ವ್ಯಕ್ತಿಗಳಿದ್ದು ಅವಕಾಶ ಇಲ್ಲದೆ ಅತವಾ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳದೇ ಸಮಾಜ ಕುಗ್ಗುತ್ತಿದೆಯೇ ಹೊರತು ಮೇಲೇಳಲಾಗುತ್ತಿಲ್ಲ. ಸಮಾಜದ ಚಿಂತನೆ ಹೆಸರಿಗಶ್ಟೇ ಮಾಡಿದರೆ ಸಾಲದು ಜನರೆಲ್ಲರ ಮನ ಮುಟ್ಟುವಂತಾಗಬೇಕು. ಹಾಗಾಗುವ ನಿಟ್ಟಿನಲ್ಲಿ ನಾಗರೀಕರೆಲ್ಲರೂ ಪ್ರಯತ್ನಿಸಬೇಕು. ಈ ಸಮಾಜದಲ್ಲಿ ಕೊಲೆ -ಸುಲಿಗೆ, ಕಳ್ಳತನ- ದರೋಡೆ ಮಹಿಳೆಯರಿಗೆ ರಕ್ಶಣೆಯೇ ಇಲ್ಲದಂತಾಗಿದ್ದು ಇವುಗಳನ್ನೆಲ್ಲ ಸರಿಪಡಿಸುವ ಪ್ರಯತ್ನವನ್ನು ಪ್ರತಿಯೊಬ್ಬ ಮನುಶ್ಯನು ಮಾಡಬೇಕು, ಸಲಹೆಗಳನ್ನು ತಿಳಿಸಬೇಕು. ಒಂದು ಬಾರಿ ಪ್ರಯತ್ನ ವಿಪಲವಾಯಿತು ಎಂದು ಕೈ ಚೆಲ್ಲಿ ಕೂರಬಾರದು. ‘ಮರಳಿ ಯತ್ನವ ಮಾಡು’ ಎಂದು ದೊಡ್ಡವರು ಹೇಳಿದಂತೆ ಮರು ಪ್ರಯತ್ನ ಮಾಡುತ್ತಲೇ ಇರಬೇಕು.

ಮುಕ್ಯವಾಗಿ, ‘ಇದು ನನಗೆ ಸಂಬಂದ ಪಡದೇ ಇರುವ ವಿಶಯ ಇದಕ್ಕಾಗಿ ನಾನೇಕೆ ದನಿಯೆತ್ತಬೇಕು?’ ಎಂಬ ಗುಣ ನಮ್ಮಲ್ಲಿದ್ದು ಮೊದಲು ಅದನ್ನು ಕೈ ಬಿಡಬೇಕು. ಸಮಾಜದ ಏಳಿಗೆಯತ್ತ ಪ್ರತಿಯೊಬ್ಬರೂ ಶ್ರಮಿಸಬೇಕು. ಈಗಿನ ವಿಜ್ನಾನ -ತಂತ್ರಜ್ನಾನಗಳ ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ನಡೆಯುವ ಅಕ್ರಮಗಳ ವಿರುದ್ದ ದನಿ ಎತ್ತಿ ಹೋರಾಡಬೇಕು. ಅತ್ಯಂತ ಅಗತ್ಯವಾಗಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಜಾಗ್ರತೆಯನ್ನು ಮೂಡಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಕೊಡುಗೆಗಳನ್ನು ಸಮಾಜಕ್ಕೆ ನೀಡಬೇಕು. ‘ನೀನೇನು ದೇಶಕ್ಕೆ ಕೊಡಬಲ್ಲೆ ಎನ್ನುವುದರ ಮೇಲೆ ನಿನ್ನ ಸುಕ ನಿಂತಿದೆಯೇ ಹೊರತು, ದೇಶದಿಂದ ನೀನೇನು ಪಡೆಯಬಲ್ಲೆ ಎನ್ನುವುದರ ಮೇಲಲ್ಲ’ ಎಂಬ  ಮಾತಿಗೆ ಅರ‍್ತ ತಂದುಕೊಡುವಂತಾಗಬೇಕು.

ಸಮಾಜದ ಒಳಿತಿಗಾಗಿ,ದೇಶದ ಒಳಿತಿಗಾಗಿ, ಸೇವೆಯ ಹೆಸರಲ್ಲಿ ಒಳ್ಳೆಯ ಕೆಲಸ ಕಾರ‍್ಯಗಳನ್ನು ಮಾಡಬೇಕು. ಆಗ ಸಮಾಜದಲ್ಲಿರುವ ಜನರ ಏಳಿಗೆ ಮತ್ತು ದೇಶದ ಅಬಿವ್ರುದ್ದಿ ಎರಡು ಸಕಾಲದಲ್ಲಿ ನೆರವೇರುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಪ್ರತಿಯೊಬ್ಬರಿಗೂ ಈ ರೀತಿಯಲ್ಲಿ ಗೌರವ ಸೂಚಿಸಿದಂತೆ ಆಗುತ್ತದೆ. ದಿನದ ಸ್ವಲ್ಪ ಸಮಯ ಸಮಾಜದ ಚಿಂತನೆ ಮಾಡಿದಲ್ಲಿ ಸ್ವಸ್ತ ಸಮಾಜ ನಿರ‍್ಮಾಣವಾಗುವುದರಲ್ಲಿ ಸಂದೇಹವಿಲ್ಲ.

( ಚಿತ್ರ ಸೆಲೆ:  sparkcentral.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Dhanya Bhat says:

    ಅಕ್ಷರಹ ನಿಜ, ಚೆನ್ನಾಗಿದೆ…ಚಿಂತನಾಲಹರಿಯ ಬರಹರುಪಕೆ ಇಳಿಸುತ್ತರು..ಮುನ್ನಡೆಯುತಿರು??

ಅನಿಸಿಕೆ ಬರೆಯಿರಿ:

%d bloggers like this: