ಕನ್ನಡಕ್ಕೆ ‘ರಾಶ್ಟ್ರಕೂಟ’ರ ಕೊಡುಗೆ

 ಹರ‍್ಶಿತ್ ಮಂಜುನಾತ್.

800px-Jain_Narayana_temple1_at_Pattadakal

ರಾಶ್ಟ್ರಕೂಟ ಎಂಬ ಶಬ್ದವು ಮೂಲತಹ ಅದಿಕಾರವಾಚಕವಾಗಿದ್ದು, ಕಾಲಾಂತರದಲ್ಲಿ ಇದು ಒಂದು ಮನೆತನದ ಹೆಸರಾಯಿತು. ಗ್ರಾಮಕೂಟ ಎಂಬುದು ಗ್ರಾಮದ ಮುಕ್ಯ ಅದಿಕಾರಿ ಎಂದು ಸೂಚಿಸುವಂತೆ, ರಾಶ್ಟ್ರಕೂಟ ಎಂಬುದು ಒಂದು ಪ್ರದೇಶದ ಮೇಲಾದಿಕಾರಿ ಎಂದು ಸೂಚಿಸುತ್ತದೆ. ರಾಶ್ಟ್ರಕೂಟರು ಮೊದಲು ಒಂದು ಪ್ರಾಂತದ ಅದಿಕಾರಿಗಳಾಗಿದ್ದರೆಂದು ತೋರುತ್ತದೆಂದು ಕರ್ನಾಟಕದ ಹಳಮೆಯ ಅರಿಗರಾದ ಡಾ|| ಪಿ. ಬಿ. ದೇಸಾಯಿ ಅಬಿಪ್ರಾಯಪಟ್ಟಿದ್ದರು.

ರಾಶ್ಟ್ರಕೂಟ ನಾಡಿನ ಸ್ತಾಪಕನಾದ ದಂತಿದುರ‍್ಗನು ಮೂಲತಹ ಲಟ್ಟಲೂರು ಎಂಬ ಪ್ರದೇಶದವನಾಗಿದ್ದು, ಈತನ ಪ್ರತಮ ಶಾಸನವು ಮರಾಟಾವಾಡಾದ ಎಲ್ಲೋರಾದಲ್ಲಿದ್ದು ಅದೇ ರಾಶ್ಟ್ರಕೂಟರ ಮೂಲ ಕಾರ್ಯಕ್ಶೇತ್ರವಾಗಿತ್ತು. ಹೀಗೆ ಮುಂದೆ ತನ್ನ ನಾಡನ್ನು ವಿಸ್ತರಿಸಿದ ರಾಶ್ಟ್ರಕೂಟರು ಮಳಕೇಡವನ್ನು ರಾಜದಾನಿಯನ್ನಾಗಿ ಮಾಡಿಕೊಂಡರು.

ಕದಂಬರು ಮತ್ತು ಚಾಲುಕ್ಯರಂತೆ ರಾಶ್ಟ್ರಕೂಟರೂ ಕನ್ನಡಿಗರು. ಈಗಿನ ಲಾತೂರು ಅಂದಿನ ಕನ್ನಡ ಪ್ರದೇಶದ ಒಂದು ಬಾಗವಾಗಿತ್ತೆಂದು ಅದರ ಹೆಸರೇ ಸೂಚಿಸುತ್ತದೆ. ಲತ್ತಲೂರ ಎಂಬುದರಲ್ಲಿಯ ಲತ್ತ ಎಂಬುದು ರಟ್ಟ ಎಂಬ ಪದದ ಇನ್ನೊಂದು ರೂಪ. ರಟ್ಟನ ಊರು ಎಂಬುದು ಲತ್ತನೂರು, ಲತ್ತಲೂರು, ಲಾತೂರು ಎಂದಾಯಿತು.

ಇವರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಬಹಳಶ್ಟು ಅಬಿವ್ರುದ್ದಿ ಹೊಂದಿತು. ಈ ಮನೆತನದ ಅಮೋಗವರ‍್ಶ ನ್ರುಪತುಂಗನ ಗ್ರಂತವಾದ ‘ಕವಿರಾಜಮಾರ‍್ಗ’ ಮೊಟ್ಟ ಮೊದಲನೆಯ ಕನ್ನಡ ಗ್ರಂತವಾಗಿದೆ. ಜಬಲಪುರದ ಸಮೀಪದಲ್ಲಿ ಜೂರಾ ಎಂಬಲ್ಲಿಯ ಮೂರನೆಯ ಕ್ರಿಶ್ಣನ ಪ್ರಶಸ್ತಿಯು ಕನ್ನಡದಲ್ಲಿಯೇ ಇದೆ. ಹೀಗೆ ರಾಶ್ಟ್ರಕೂಟರ ತಾಯ್ನುಡಿಯು ಕನ್ನಡವಾಗಿದ್ದಿತೆಂದು ಸ್ಪಶ್ಟವಾಗುತ್ತದೆ.

ಒಂದನೆಯ ಅಮೋಗವರ‍್ಶ ನ್ರುಪತುಂಗ (ಕ್ರಿ.ಶ. 814-880):
ಮೂರನೆಯ ಗೋವಿಂದನ ಮಗನಾದ ಒಂದನೆಯ ಅಮೋಗವರ‍್ಶನು ಪಟ್ಟಕ್ಕೆ ಬಂದಾಗ ಕೇವಲ 14 ವರ‍್ಶದವನಿದ್ದನು. ಚಿಕ್ಕಂದಿನಿಂದಲೂ ಶಾಂತಿಪ್ರಿಯನಾಗಿದ್ದ ಈತ ಸ್ವತಹ ವಿದ್ವಾಂಸನಾಗಿದ್ದು, ದರ‍್ಮ, ಹಾಗೂ ಸಾಹಿತ್ಯದ ಅಬಿವ್ರುದ್ದಿಗೆ ತುಂಬ ಯತ್ನಿಸಿದ್ದನು. ಇವನು ಸಾಹಿತ್ಯಾರಾದಕನಾಗಿದ್ದುದಲ್ಲದೆ ಕವಿಯೂ, ವಿದ್ವಾಂಸನೂ ಆಗಿದ್ದನು. ಇದುವರೆಗೂ ಲಬ್ಯವಿರುವ ಕನ್ನಡ ಗ್ರಂತಗಳಲ್ಲಿ ಮೊದಲನೆಯದೆನಿಸಿದ ’ಕವಿರಾಜಮಾರ‍್ಗ’ ಎಂಬ ಕಾವ್ಯಲಕ್ಶಣ ಗ್ರಂತವು ಮತ್ತು ’ಪ್ರಶ್ನೋತ್ತರಮಾಲ’ ಎಂಬ ಗ್ರಂತವು ಇವನ ಕ್ರುತಿಗಳೆಂದು ಹೇಳಲಾಗಿದೆ. ಇವನ ಆಶ್ರಯದಲ್ಲಿ ಕನ್ನಡ ಬಾಶೆ ಮತ್ತು ಸಾಹಿತ್ಯ ಅಬಿವ್ರುದ್ದಿ ಹೊಂದಿದವು. ಮಾನ್ಯಕೇಟ (ಇಂದಿನ ಕಲಬುರ‍್ಗಿ ಜಿಲ್ಲೆಯಲ್ಲಿಯ ಮಳಕೇಡ) ರಾಶ್ಟ್ರಕೂಟ ರಾಜದಾನಿಯಾದುದು ಇವನ ಕಾಲದಲ್ಲಿಯೇ. ಅಮೋಗವರ‍್ಶ ನ್ರುಪತುಂಗನು ಮಾನ್ಯಕೇಟ (ಮಳಕೇಡ)ದ ನಿರ‍್ಮಾಪಕನು.

ಕಲೆ ಮತ್ತು ಸಾಹಿತ್ಯ ಕ್ಶೇತ್ರದಲ್ಲಿ ರಾಶ್ಟ್ರಕೂಟರ ಪ್ರಬಾವ ಅಚ್ಚಳಿಯದೇ ಉಳಿದಿದೆ. ಎಲ್ಲೋರಾದ ಕಯ್ಲಾಸ ದೇವಾಲಯವು ಇವರ ಕಾಲದ ಕಲಾ ಪ್ರವ್ಡಿಮೆಯ ಹೆಗ್ಗುರತಾಗಿದೆ. ದೊಡ್ಡ ಕಲ್ಲಿನ ಗುಡ್ಡವನು ಕೊರೆದು, ಸುಂದರವಾದ, ವಿಶಾಲವಾದ ಈ ದೇವಾಲಯವನು ಕಟ್ಟಿದ ಅಂದಿನ ಸ್ತಪದಿಗಳ ಹಾಗೂ ಶಿಲ್ಪಿಗಳ, ಕಲ್ಪನಾ ಸಾಮರ‍್ತ್ಯ, ಕಲಾ ಪ್ರವ್ಡಿಮೆ, ನಯ್ಪುಣ್ಯ ಕಲ್ಪನಾತೀತವಾಗಿದೆ. ಇದು ಮಾನವನ ಕ್ರುತಿಯಲ್ಲ, ಬ್ರಹ್ಮನದೇ ಸ್ರುಶ್ಟಿ ಎಂದು ಇಲ್ಲಿಯ ಶಾಸನ ಬರೆದವರು ನುಡಿದರೆ, ಇದು ಜಗತ್ತಿನಲ್ಲಿ ಅತ್ಯಂತ ಹಿರಿದಾದ ಸಾದನೆ ಎಂದು ಆದುನಿಕ ವಿದ್ವಾಂಸರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ಬಾಶೆ ಮತ್ತು ಸಾಹಿತ್ಯಕ್ಕೆ ರಾಶ್ಟ್ರಕೂಟರು ಮರೆಯಲಾಗದ ಸೇವೆ ಸಲ್ಲಿಸಿದ್ದಾರೆ. ಕನ್ನಡ ಲಿಪಿ ದುಂಡಾದ ಆಕಾರವನ್ನು ಈ ಕಾಲದಲ್ಲಿಯೇ ತಳೆಯಿತು. ಅಲ್ಲದೇ ಕನ್ನಡ ಶಾಸನಗಳ ಸಂಕ್ಯೆ ಈ ಕಾಲದಲ್ಲಿ ಹೆಚ್ಚಿತು. ಕನ್ನಡಕ್ಕೆ ಜನಾಶ್ರಯ ಮತ್ತು ರಾಜಾಶ್ರಯ ದೊರೆತು, ಕನ್ನಡ ಬಾಶೆ ಪ್ರಬುದ್ದವಾಯಿತು, ಸಾಹಿತ್ಯ ಸ್ರುಶ್ಟಿ ಬೆಳೆಯಿತು. ಇವರ ಕಾಲದಲ್ಲಿ ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಹರಡಲ್ಪಟ್ಟಿತು ಎಂಬುದರ ಬಗ್ಗೆ ಕವಿರಾಜಮಾರ‍್ಗದಲ್ಲಿ ಕೆಲವು ಉಲ್ಲೇಕಗಳಿವೆ.

ಅಲ್ಲದೇ ಜನರ ಸಾಹಿತ್ಯಾಬಿರುಚಿಯನ್ನು, ಹ್ರುದಯಂಗಮವಾಗಿ ಬಣ್ಣಿಸಲಾಗಿದೆ. ಆದಿಪಂಪ, ನಾವರ‍್ಮ, ಪೊನ್ನ, ರನ್ನರ ಕ್ರುತಿಗಳಿಂದ ಈ ಕಾಲದ ಕನ್ನಡ ಸಾಹಿತ್ಯ ಶ್ರೀಮಂತವಾಯಿತು ಮತ್ತು ವಿಪುಲವಾಗಿ ಬೆಳೆಯಿತು. ಹೀಗೆ ಹಲವು ಕೊಡುಗೆಗಳನ್ನು ಕೊಟ್ಟ ರಾಶ್ಟ್ರಕೂಟರ ಇತಿಹಾಸ ಕುರಿತು ನಾವು ಮತ್ತಶ್ಟು ಆಳವಾಗಿ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಹತ್ತು ಹಲವು ಅರಕೆಯನ್ನು ಮಾಡಿ, ಸಾಕಶ್ಟು ವಿವರವನ್ನು ನಮ್ಮ ಕನ್ನಡಿಗರೇ ಆದ ಡಾ|| ಪಿ. ಬಿ. ದೇಸಾಯಿಯವರು ಮಾಡಿದ್ದಾರೆ. ಇತಿಹಾಸದ ತಿಳುವಳಿಕೆಯ ಆಳ ಹೆಚ್ಚಿಸುವಲ್ಲಿ ಇವರ ಈ ಅರಕೆ ವರದಾನವಾಗಲಿದೆ.

(ಚಿತ್ರ ಸೆಲೆ: Wikipedia)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.