ಕಯ್ ಹಿಡಿದು ನಡೆಸುವುದು ತಾಯ್ನುಡಿಯ ಕಲಿಕೆ

ರತೀಶ ರತ್ನಾಕರ.

mother tongue

ಕಲಿಕೆಯೆಂಬುದು ಬಾಳಿನ ಬಹುಮುಕ್ಯ ಬಾಗವಾಗಿದೆ. ಹೆಚ್ಚಿನ ಮಂದಿಗೆ ಕಲಿಕೆಯು ಬಾಳಿನ ದಾರಿಯನ್ನು ತೋರಿಸುತ್ತದೆ. ಇತ್ತೀಚಿನ ವರುಶಗಳಲ್ಲಿ ತಂದೆ ತಾಯಂದಿರೂ ತಮ್ಮ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಕಾಳಜಿಯನ್ನು ತೋರುತ್ತಿದ್ದಾರೆ. ತಮ್ಮ ಗಳಿಕೆಯ ಕೆಲವು ಬಾಗವಾದರು ಮಕ್ಕಳ ಕಲಿಕೆಗೆಂದು ಮೀಸಲೀಡುತ್ತಿದ್ದಾರೆ. ಒಂದು ಮಗುವನ್ನು ಸ್ಕೂಲಿಗೆ ಸೇರಿಸುವ ಮುಂಚೆ ಸ್ಕೂಲಿನ ಹಲವಾರು ವಿವರಗಳನ್ನು ಕಲೆ ಹಾಕಿ ಯಾವ ಸ್ಕೂಲಿಗೆ ಸೇರಿಸಿದರೆ ಒಳ್ಳೆಯದು ಎಂಬ ತೀರ‍್ಮಾನಕ್ಕೆ ಬರುತ್ತಾರೆ. ಸ್ಕೂಲಿನ ಕಟ್ಟಡ, ಆಟದ ಮಯ್ದಾನ, ಕಲಿಸುಗರ ತಂಡ, ಹಿಂದಿನ ವರುಶಗಳ ಕಲಿಕೆಯ ಸಾದನೆಗಳು ಹೀಗೆ ಹತ್ತು ಹಲವು ಸುದ್ದಿಗಳ ಸುತ್ತ ವಿವರಗಳನ್ನು ಪಡೆಯುತ್ತಾರೆ. ಬಳಿಕ ತಮಗೆ ಅನಿಸಿದ ಒಳ್ಳೆಯ ಸ್ಕೂಲಿಗೆ ಮಗುವನ್ನು ಸೇರಿಸಿ ಕಲಿಕೆಯ ಮೇಲೆ ಒಂದು ನಿಗಾ ಇಟ್ಟಿರುತ್ತಾರೆ.

ಇವೆಲ್ಲದರ ನಡುವೆ ಹಲವು ತಂದೆ ತಾಯಂದಿರು ಮಗುವು ಯಾವ ಮಾದ್ಯಮದಲ್ಲಿ ಓದಬೇಕು ಎಂಬುದರ ಕುರಿತು ಕೂಡ ಒಂದು ಚಿಂತನೆ ನಡೆಸಿ ತೀರ‍್ಮಾನಿಸುತ್ತಾರೆ. ಹವ್ದು, ಮಕ್ಕಳನ್ನು ಶಾಲೆಗೆ ಸೇರಿಸುವ ಮುಂಚೆ ಗುಣಮಟ್ಟದ ಕಲಿಕೆಯನ್ನು ನೀಡುವ ಹಾಗು ಚೆನ್ನಾಗಿರುವ ಸ್ಕೂಲನ್ನು ಹುಡುಕಿ ಹುಡುಕಿ ಸೇರಿಸುತ್ತಾರೆ. ಆದರೆ ಗುಣಮಟ್ಟದ ಕಲಿಕೆಯು ಮಗುವಿಗೆ ಪರಿಣಾಮಕಾರಿ ಆಗಬೇಕೆಂದರೆ ಅದು ತನ್ನ ತಾಯ್ನುಡಿಯಲ್ಲಿ ಇದ್ದರೆ ಮಾತ್ರ ಸಾದ್ಯ. ಮಕ್ಕಳ ಒಳ್ಳೆಯ ಕಲಿಕೆಗೆ ಒಳ್ಳೆಯ ಸ್ಕೂಲು ಎಶ್ಟು ಮುಕ್ಯವೋ ಅದಕ್ಕಿಂದ ಮುಕ್ಯ ಆ ಮಗು ಯಾವ ಮಾದ್ಯಮದಲ್ಲಿ ಓದುತ್ತಿದೆ ಎನ್ನುವುದು.

ಜಗತ್ತಿನ ಹಲವಾರು ಅರಿಗರು ಮಾಡಿರುವ ಅರಕೆಗಳಲ್ಲಿ ತಾಯ್ನುಡಿಯ ಕಲಿಕೆಯೇ ಒಳ್ಳೆಯದು ಎಂದು ತೋರಿಸಿಕೊಟ್ಟಿದ್ದಾರೆ. ಇದನ್ನು ಯುನೆಸ್ಕೋ ಕೂಡ ಎತ್ತಿ ಹಿಡಿಯುತ್ತದೆ. ಜಗತ್ತಿನ ಅಬಿವ್ರುದ್ದಿ ಹೊಂದಿರುವ ನಾಡುಗಳ ಪಟ್ಟಿಯೊಂದನ್ನು ಮಾಡಿ ಅಲ್ಲಿನ ಕಲಿಕೆಯ ಮಾದ್ಯಮಗಳನ್ನು ಗುರುತಿಸಿದರೆ ಆ ಎಲ್ಲಾ ನಾಡುಗಳು ತಮ್ಮ ತಾಯ್ನುಡಿಯಲ್ಲಿಯೇ ಕಲಿಯುವಂತಹ ಏರ‍್ಪಾಡನ್ನು ಗಟ್ಟಿಯಾಗಿ ಕಟ್ಟಿಕೊಂಡಿರುವುದು ಕಾಣುತ್ತದೆ. ಆ ಮೂಲಕ ಆ ನಾಡಿನ ಮಂದಿ ಹಲವರು ಏಳಿಗೆ ಹೊಂದಿದ್ದಾರೆ ಮತ್ತು ಆ ನಾಡು ಅಬಿವ್ರುದ್ದಿ ಹೊಂದಿದ ನಾಡಾಗಿದೆ.

ಒಂದು ಮನೆ ಕಟ್ಟುವಾಗ ನಾವು ಅಡಿಪಾಯವನ್ನು ಕಲ್ಲಿನಿಂದ ಕಟ್ಟಿ ಆಮೇಲೆ ಇಟ್ಟಿಗೆಯಿಂದ ಗೋಡೆಗಳನ್ನು ಕಟ್ಟುತ್ತೇವೆ. ಅಡಿಪಾಯ ಗಟ್ಟಿಯಾಗಿದ್ದರೆ ಮೇಲೆ ಎರೆಡು ಮೂರು ಅಂತಸ್ತಿನ ಮನೆಯನ್ನು ಬೇಕಾದರೂ ಕಟ್ಟಬಹುದು. ಒಂದು ವೇಳೆ, ಪಾಯ ತೆಗೆದು ಬುಡದಿಂದಲೇ ಕಲ್ಲಿನ ಬದಲು ಇಟ್ಟಿಗೆಯಿಂದ ಗೋಡೆ ಕಟ್ಟುತ್ತಾ ಬಂದರೆ ಮನೆಯು ಬಾಳಿಕೆ ಬರುವುದೇ? ತಾಯ್ನುಡಿಯ ಕಲಿಕೆಯು ಹೀಗೆಯೇ ಕಲಿಕೆಗೆ ಒಂದು ಗಟ್ಟಿ ಅಡಿಪಾಯವನ್ನು ಹಾಕಿಕೊಡುತ್ತದೆ. ಒಮ್ಮೆ ಅಡಿಪಾಯ ಗಟ್ಟಿ ಆದಮೇಲೆ ನಾವು ಇಂಗ್ಲೀಶ್, ಪ್ರೆಂಚ್, ಜಪನೀಸ್ ಯಾವ ನುಡಿಯನ್ನು ಬೇಕಾದರೂ ಕಲಿಯಬಹುದು. ಮೊದಲ ಹಂತದ ತಾಯ್ನುಡಿಯ ಕಲಿಕೆಯು ಬೇರೆ ನುಡಿಗಳನ್ನು ಕಲಿಯಲು ಹೆಚ್ಚಾಗಿ ನೆರವಿಗೆ ಬರುತ್ತದೆ.

ಕನ್ನಡ ಮಾದ್ಯಮದಲ್ಲಿ ಓದಿಸುವುದು ಮಗುವನ್ನು ಒಳ್ಳೆಯ ಕಲಿಕೆಯತ್ತ ನಡೆಸುವ ಸರಿಯಾದ ದಾರಿ. ಮೊದಲ ಹಂತದ ಕಲಿಕೆಯನ್ನು ಕನ್ನಡದಲ್ಲಿ ನೀಡಿ ಇಂಗ್ಲೀಶನ್ನು ಒಂದು ನುಡಿಯಾಗಿ ಕಲಿಸಿದರೆ ದೊಡ್ಡ ಹಂತದ ಕಲಿಕೆಯಲ್ಲಿ ಅದು ಕಂಡಿತಾ ನೆರವಿಗೆ ಬರುತ್ತದೆ. ಒಂದರಿಂದ ಹತ್ತನೇ ತರಗತಿಯವರೆ ನಾನು ಕೂಡ ಕನ್ನಡ ಮಾದ್ಯಮದಲ್ಲಿಯೇ ಓದಿದೆ, ಪಿಯುಸಿ ಯಲ್ಲಿ ವಿಜ್ನಾನ ವಿಶಯ ಆರಿಸಿಕೊಳ್ಳುವ ಬಯಕೆ ಇತ್ತು. ಕನ್ನಡ ಮಾದ್ಯಮದಲ್ಲಿ ಓದಿರುವುದರಿಂದ ವಿಜ್ನಾನ ವಿಶಯ ಆರಿಸಿಕೊಂಡರೆ ತುಂಬಾ ಕಶ್ಟ ಆಗುತ್ತದೆ, ಮತ್ತು ಪಿಯುಸಿಯನ್ನು ಪಾಸ್ ಆಗದೇ ಇರುವ ಸಾದ್ಯತೆಗಳು ಕೂಡ ಇವೆ ಎಂದು ಕೆಲವರು ಹೇಳಿದ್ದರು. ಆದರೂ ವಿಜ್ನಾನ ವಿಶಯವನ್ನೇ ಆರಿಸಿಕೊಂಡೆ. ಪಿಯುಸಿಯ ಮೊದಲ ಎರೆಡು ತಿಂಗಳುಗಳು ಕೊಂಚ ಕಶ್ಟ ಎನಿಸಿತು ಬಳಿಕ ಯಾವುದೇ ತೊಂದರೆ ಇಲ್ಲದೇ ಮುಂದಿನ ಹಂತದ ಕಲಿಕೆಯನ್ನು ಮುಗಿಸಿದೆ. ಪಿಯುಸಿ ಬಳಿಕ ಚಳಕದರಿಮೆಯನ್ನೂ ಓದಿದೆ.

ಕನ್ನಡ ಮಾದ್ಯಮದಲ್ಲಿ ಮೊದಲು ಓದಿಸಿದರೆ ಪಿಯುಸಿ ಹಂತದಲ್ಲಿ ತುಂಬಾ ಕಶ್ಟ ಆಗುತ್ತದೆ ಎಂದು ಹಲವರಲ್ಲಿ ತಪ್ಪು ಅನಿಸಿಕೆಗಳಿವೆ. ಆದರೆ ಒಂದು ಮಗುವನ್ನು ಒಂದನೇ ತರಗತಿಯಲ್ಲಿ ಇಂಗ್ಲೀಶ್ ಮಾದ್ಯಮಕ್ಕೆ ಹಾಕಿದರೆ ಪಿಯುಸಿಯ ಹಂತಕ್ಕಿಂತ ಹಲವು ಪಟ್ಟು ಕಶ್ಟ ಪಡುತ್ತಿರುತ್ತದೆ. ಮಗುವಿಗೆ ತನ್ನ ಕಲಿಕೆಯ ಕಶ್ಟವನ್ನು ತಂದೆ ತಾಯಂದರಿಗೆ ಹೇಳುವುದಕ್ಕೆ ಬಂದಿರುವುದಿಲ್ಲ ಅಶ್ಟೆ. ಪಿಯುಸಿ ಹಂತದಲ್ಲಾದರೆ ನಮ್ಮ ಕಲಿಕೆಯ ಕಶ್ಟಗಳನ್ನು ಹೇಳಲು ಗೊತ್ತಿರುತ್ತದೆ. ಒಂದರಿಂದ ಹತ್ತನೇ ತರಗತಿಯಲ್ಲಿ ಗುಣಮಟ್ಟದ ಕಲಿಕೆ ಸಿಕ್ಕು, ಇಂಗ್ಲೀಶನ್ನು ಒಂದು ನುಡಿಯಾಗಿ ಚೆನ್ನಾಗಿ ಕಲಿತಿದ್ದರೆ ಇಂತಹ ಯಾವ ತೊಂದರೆಗಳೂ ಇರುವುದಿಲ್ಲ. ನಾನೀಗ ಸದ್ಯಕ್ಕೆ ಅಮೇರಿಕಾದಲ್ಲಿ ಇಂಗ್ಲೀಶ್ ನುಡಿಯಾಡುಗರ ನಡುವೆಯೇ ನೆಲೆಸಿದ್ದು, ಅವರ ಜೊತೆ ದಿನನಿತ್ಯದ ಒಡನಾಟವಿಟ್ಟುಕೊಂಡಿದ್ದೇನೆ. ನನ್ನ ಜೊತೆ ಕೆಲಸ ಮಾಡುವವರೊಡನೆ ಸರಾಗವಾಗಿ ಇಂಗ್ಲೀಶಿನಲ್ಲಿ ವ್ಯವಹರಿಸುತ್ತೇನೆ. ಈ ಎಲ್ಲಾ ಹಂತದಲ್ಲೂ ನನ್ನ ಪ್ರಾತಮಿಕ ಹಂತದ ಓದು ನನ್ನನ್ನು ಕಯ್ ಹಿಡಿದು ನಡೆಸಿದೆ, ನಡೆಸುತ್ತಿದೆ.

(ಚಿತ್ರ ಸೆಲೆ: coffeewithdad)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: