ಕರುನಾಡ ಕಲೆ ಕಂಬಳ(ಕಂಬುಲ)
ಕರುನಾಡ ಪಾರಂಪರಿಕವಾಗಿ ತನ್ನದೇ ಆದ ವಿಶಿಶ್ಟ ಕಲೆ, ಸಂಸ್ಕ್ರುತಿ, ಹಾಗೂ ಮೇಲ್ತನಕ್ಕೆ ತನ್ನದೇ ಆದ ನೆಲೆಗಟ್ಟನ್ನು ಕಟ್ಟಿಕೊಂಡು ವಿಶ್ವದೆಲ್ಲೆಡೆ ರಾರಾಜಿಸುತ್ತಿರುವುದು ನಮಗೆ ಹೆಮ್ಮೆಯ ವಿಶಯ. ಹೀಗೇ ಕರ‍್ನಾಟಕದ ಹಳೆಯ ಸಾಂಸ್ಕ್ರುತಿಕ ಕ್ರೀಡೆಗಳಲ್ಲಿ ಕಂಬಳವೂ ಒಂದು. ಕರ‍್ನಾಟಕದ ಕರಾವಳಿ ದಕ್ಶಿಣ ಕನ್ನಡ ಜಿಲ್ಲೆಯಲ್ಲಿ , ಬೇಸಾಯವೇ ಮುಕ್ಯವಾದ ಸಮಾಜದಲ್ಲಿ ಕೋಳಿ ಮತ್ತು ಕೋಣಗಳು ಬದುಕಿನೊಂದಿಗೆ ಹುದುಗಿಹೋಗಿವೆ. ಬೇಸಾಯಗಾರರು ಬತ್ತದ ಗದ್ದೆಗಳಲ್ಲಿ ಉತ್ತಿದ ಬಳಿಕ ಕೋಣ ಎತ್ತುಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟ ‘ಕಂಬಳ’. ಕಂಬಳ ಅತವಾ ತುಳು ಬಾಶೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ದವಾಗಿರುವ ಕೆಸರುಗದ್ದೆ ಎಂದೇ ಹುರುಳು. ಕೆಸರುಗದ್ದೆಯಲ್ಲಿ, ಬಾಕಿಮಾರು ಗದ್ದೆಯಲ್ಲಿ, ಕಂಬಳ ಗದ್ದೆಯಲ್ಲಿ ದಪ್ಪನೆ ಮಯ್ಯ, ಸಾಕಿದ ಕೋಣಗಳನ್ನು ಓಡಿಸುವುದು ಒಂದು ಮನೋರಂಜನೆ ಆಟ.
ಕರಾವಳಿ ಕರ‍್ನಾಟಕದ ಜನಪದ ಆಚರಣೆಗಳಲ್ಲಿ ಕಂಬಳ ವಿಶಿಶ್ಟವಾದುದು. ಆದರೆ ಇದು ಕೇವಲ ಕೋಣಗಳ ಓಟದ ಪಯ್ಪೋಟಿಯಲ್ಲ. ಇದೊಂದು ದಾರ‍್ಮಿಕ ಹಾಗೂ ಪಲವಂತಿಕೆಯ ಆಚರಣೆಯೂ ಆಗಿದೆ. ಕಂಬಳಕ್ಕೆ ಅದರದ್ದೇ ಆದ ಸಾಂಸ್ಕ್ರುತಿಕ, ಸಾಮಾಜಿಕ, ದಾರ‍್ಮಿಕ ಹೆಚ್ಚುಗಾರಿಕೆ ಇದೆ. ದಕ್ಶಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿರುವ ಈ ಆಟ ಕರಾವಳಿಯ ರಯ್ತಾಪಿ ಜನರು ಬತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ‍್ಪಡಿಸುತ್ತಿದ್ದ ಈ ಆಟ, ಕಳೆದ ಅನೇಕ ವರುಶಗಳಿಂದ ಸಾಂಗಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಆಟದಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಕ್ಯ. ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಶ್ಟೆಯ ವಿಚಾರ ಕೂಡ. ಈಚಿನ ದಿನಗಳಲ್ಲಿ ಕಂಬಳವು ಬಹಳ ಸಿಂಗಾರಗೊಂಡಿದೆ. ಸೋಲು-ಗೆಲುವುಗಳು ಮರ‍್ಯಾದೆಯ ಪ್ರಶ್ನೆಯಾಗಿಬಿಟ್ಟಿವೆ. ಹಾಗಾಗಿ ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಗನತೆ, ಅವುಗಳನ್ನು ಸಾಕಲು ಸಾಕಶ್ಟು ಹಣಕಾಸಿನ ಬಲ ಕೂಡ ಬೇಕು.
ಕಂಬಳ ಆಚರಣೆ ಮತ್ತು ಆಚರಣೆಯ ವಿದಗಳು:
ಸಾಮಾನ್ಯವಾಗಿ, ಕಂಬಳಗಳು ನವೆಂಬರ್ ಮತ್ತು ಮಾರ‍್ಚ್ ತಿಂಗಳುಗಳ ನಡುವಿನ ಹೊತ್ತಿನಲ್ಲಿ ನಡೆಯುತ್ತವೆ. ಕಂಬಳದಲ್ಲಿ ‘ಬಾರೆ ಕಂಬಳ’, ‘ಪೂಕರೆ ಕಂಬಳ’, ‘ಅರಸು ಕಂಬಳ’ ಮತ್ತು ಈಗ ನಡೆಯುತ್ತಿರುವ ‘ಆದುನಿಕ ಕಂಬಳ’ ಎಂಬ ನಾಲ್ಕು ಬಗೆಗಳನ್ನು ಗುರುತಿಸಬಹುದು. ಬಾರೆ ಕಂಬಳ ಮತ್ತು ಪೂಕರೆ ಕಂಬಳಗಳಲ್ಲಿ ಕೋಣಗಳ ಪಂದ್ಯಕ್ಕಿಂತ, ಇತರ ಆಚರಣೆಗಳಿಗೆ ಬಹಳ ಹೆಚ್ಚುಗಾರಿಕೆಯಿದೆ. ಬಾರೆಕಂಬಳದಲ್ಲಿ, ಗದ್ದೆಯ ನಡುವೆ ಒಂದು ಬಾಳೆಯ ಗಿಡವನ್ನು ನೆಡುವುದೇ ಬಹಳ ಮುಕ್ಯ. ಕೋಣಗಳ ಓಟ ಕೇವಲ ಸಾಂಕೇತಿಕವಾದುದು. ಅರಸು ಕಂಬಳದಲ್ಲಿ ಆಚರಣೆಗಳು ಮತ್ತು ಪಂದ್ಯ ಎರಡಕ್ಕೂ ಒಂದೇ ಬಗೆಯ ಹೆಚ್ಚುಗಾರಿಕೆ ಇದೆ.
ಆದುನಿಕ ಕಾಲದಲ್ಲಿ, ಆಚರಣೆಗಳು ಹಿನ್ನೆಲೆಗೆ ಸರಿದು, ಪಂದ್ಯಕ್ಕೆ ಇನ್ನಿಲ್ಲದ ಹೆಚ್ಚುಗಾರಿಕೆ ಬಂದಿದೆ. ಕಂಬಳಕ್ಕೆ ಸಂಬಂದಿಸಿದ ಆಚರಣೆಗಳು, ಅದಕ್ಕಾಗಿ ನಿಗದಿ ಪಡಿಸಿರುವ ದಿನಕ್ಕಿಂತ, ಕೆಲವು ದಿನಗಳು ಮುಂಚಿತವಾಗಿಯೇ ಮೊದಲಾಗಿ, ಅದು ಮುಗಿದ ಬಳಿಕವೂ ಮುಂದುವರಿಯುತ್ತವೆ. ಹಳ್ಳಿಯ ಹಿರಿಯರನ್ನು ಕಂಬಳಕ್ಕೆ ಕರೆಯುವುದು, ಕಂಬಳದ ಗದ್ದೆಯನ್ನು ಸಿಂಗರಿಸುವುದು, ಬೇರೆ ಬೇರೆ ಜಾನಪದ ದಯ್ವಗಳನ್ನು ಪೂಜಿಸುವುದು, ಡೋಲು ಕುಣಿತ, ಕೊರಗ ಮತ್ತು ಮುಂಡಾಲದವರು ಹಾಡುವ ಹಾಡುಗಳು ಮತ್ತು ಕೋಣಗಳ ಮೆರವಣಿಗೆ ಇವೆಲ್ಲವನ್ನೂ ವಿಜ್ರಂಬಣೆಯಿಂದ ಆರಾದನೆಯ ಹಾಗೆ ನಡೆಸಲಾಗುವುದು.
ಕೋಣಗಳನ್ನು ಚೆನ್ನಾಗಿ ಅಲಂಕರಿಸಿ ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ ಕರೆ ತರುತ್ತಾರೆ. ಚೆನ್ನಾಗಿ ಬೆಳೆದ ಕೋಣಗಳ ಮಯ್ ಮಿರಮಿರನೆ ಮಿಂಚುತ್ತದೆ. ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ. ನೆಲದ ಮಣ್ಣನ್ನು ಗೋರಿ ತಲೆ ಮತ್ತು ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ. ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ. ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾದ್ಯವಿಲ್ಲ. ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ಸಿದ್ದರಾಗಿರುತ್ತಾರೆ. ಕೋಣಗಳು ಓಡಿಕೊಂಡು ಬರುವಾಗ ಜನರ ಬೊಬ್ಬೆ ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು. ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ‍್ರಾ ಬಿರ‍್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು! ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಶ್ಟ ಅನುಬವನ್ನು ಕೊಡುತ್ತದೆ .
ಕಂಬಳದ ಗದ್ದೆಯ ಬಗೆಗಳು :
1. ಒಂಟಿ ಗದ್ದೆಯ ಕಂಬಳ :
ಮೂಡಣ ದಿಕ್ಕು (ಮೂಡಯ್ ಕೆರೆ) ಅತವಾ ಪಡುವಣ ದಿಕ್ಕು (ಪಡ್ಡಯ್ ಕೆರೆ) ಎಂಬ ಎರಡು ಕಣಗಳಿದ್ದು, ಒಂಟಿ ಗದ್ದೆಯ ಕಂಬಳದಲ್ಲಿ ಯಾವುದಾದರೂ ಒಂದು ಕಣದಲ್ಲಿ ಒಂದೊಂದೇ ಜೋಡಿ ಕೋಣಗಳನ್ನು ಓಡಿಸಲಾಗುತ್ತದೆ. ಹೊತ್ತಿನ ಆದಾರದ ಮೇಲೆ ಕೋಣದ ಜೋಡಿಯ ಗೆಲುವನ್ನು ತೀರ‍್ಮಾನಿಸಲಾಗುವುದು. ಈ ಪಯ್ಕಿ ತೋನ್ಸೆ ಪಡುಮನೆ ಕಂಬಳ ಹಳತು ಹಾಗೂ ಹೆಸರುವಾಸಿ.
2. ಜೋಡಿ ಗದ್ದೆಯ (ಜೋಡುಕರೆ) ಕಂಬಳ:
ಜೋಡುಕರೆ ಕಂಬಳಗಳಲ್ಲಿ ಮೂಡಣ ದಿಕ್ಕು (ಮೂಡಯ್ ಕೆರೆ) ಮತ್ತು ಪಡುವಣ ದಿಕ್ಕು (ಪಡ್ಡಯ್ ಕೆರೆ) ಎಂಬ ಅಕ್ಕ ಪಕ್ಕದ ಎರಡು ಕಣಗಳಿದ್ದು ಎರಡರಲ್ಲೂ ಒಟ್ಟಿಗೇ ಕೋಣಗಳನ್ನು ಓಡಿಸಿ ಅವುಗಳ ಮದ್ಯೆ ಪೈಪೋಟಿ ನಡೆಸಲಾಗುತ್ತದೆ. ಹೆಚ್ಚಾಗಿ ಜೋಡುಕರೆ ಕಂಬಳಗಳಿಗೆ ಪುರಾಣ ಮತ್ತು ಜಾನಪದದಲ್ಲಿ ಸಿಗುವ ಅವಳಿ-ಜವಳಿಗಳ ಅತವಾ ಜೋಡಿಗಳ ಹೆಸರಿಡುವುದು ವಾಡಿಕೆ.
ಕಂಬಳ ಆಟದ ಬಗೆಗಳು:
ಕೋಣಗಳ ಓಟದ ಪಯ್ಪೋಟಿಯನ್ನು ನಡೆಸುವ ಬಗೆಯನ್ನು ಅವಲಂಬಿಸಿ ಕಂಬಳದಲ್ಲಿ ನಾಲ್ಕು ಬಗೆಗಳಿವೆ. ಹಗ್ಗದ ಓಟ, ಅಡ್ಡಹಲಗೆ ಓಟ, ನೇಗಿಲ ಓಟ ಮತ್ತು ಕಣೆ ಹಲಗೆ ಓಟ ಎಂಬ ಹೆಸರುಗಳಿಂದ ಅವುಗಳನ್ನು ಕರೆಯುತ್ತಾರೆ. ಹಗ್ಗದ ಓಟದಲ್ಲಿ, ಕೋಣಗಳು ಒಂದು ನೊಗವನ್ನು ಕಟ್ಟಿಕೊಂಡು ಓಡುತ್ತವೆ. ಆ ನೊಗದ ನಡುವಿಗೆ ಕಟ್ಟಿದ ಹಗ್ಗಗಳನ್ನು ಹಿಡಿದುಕೊಂಡಿರುವ ಮನುಶ್ಯನು ಕೋಣಗಳ ಸಂಗಡ ತಾನೂ ಓಡುತ್ತಾನೆ. ಅಡ್ಡ ಹಲಗೆ ಓಟದಲ್ಲಿ ಆ ಮನುಶ್ಯನು, ನೊಗಕ್ಕೆ ಸೇರಿಸಿರುವ ಹಲಗೆಯ ಮೇಲೆ ನಿಂತುಕೊಂಡು ಕೋಣಗಳ ಓಟವನ್ನು ನಿಯಂತ್ರಿಸುತ್ತಾನೆ. ನೇಗಿಲ ಓಟದಲ್ಲಿ ನೊಗದ ಜಾಗದಲ್ಲಿ ನೇಗಿಲು ಇರುತ್ತದೆ. ಇಲ್ಲಿ ಓಡಿಸುಗನು ನೇಗಿಲನ್ನು ಹಿಡಿದಿರುತ್ತಾನೆ. ಆ ನೇಗಿಲಿಗೆ ಕೋಣಗಳನ್ನು ಕಟ್ಟಿರುತ್ತಾರೆ. ಸುಮಾರು ನೂರರಿಂದ ಇನ್ನೂರು ಮೀಟರುಗಳಶ್ಟು ಉದ್ದದ ಓಟದ ಕಣಗಳಲ್ಲಿ ಕಂಬಳ ನಡೆಯುತ್ತದೆ. ಹಸನಾದ ಗದ್ದೆಯ ಮಣ್ಣಿನೊಂದಿಗೆ ಜಿಗುಟಾಗದಿರಲು ತಕ್ಕಶ್ಟು ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಿ ಮಾಡಿದ ಕೆಸರು ಗದ್ದೆಯೇ ಕಂಬಳ ಓಟದ ಕಣ. ಕಂಬಳದ ಕಣವು ನೆಲ ಮಟ್ಟಕ್ಕಿಂತ ಕೆಲವು ಆಡಿಗಳಶ್ಟು ಆಳದಲ್ಲಿ ಇರುತ್ತದೆ. ಕಣದ ಒಂದು ಕೊನೆಯಲ್ಲಿ ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ಇರುತ್ತದೆ. ಅಲ್ಲಿ ಮೇಲೆ ಕಟ್ಟಿದ ಮಾವಿನ ಎಲೆಗಳ ತೋರಣವು ಓಟದ ಆರಂಬದ ಗೆರೆಯನ್ನು ಸೂಚಿಸುತ್ತದೆ. ಕಣದ ಇನ್ನೊಂದು ಕೊನೆಯಲ್ಲಿ ಕಟ್ಟಿದ ಮಾವಿನ ಎಲೆಗಳ ತೋರಣವು ಆಟದ ಕೊನೆಯ ಗೆರೆಯನ್ನು ಸೂಚಿಸುತ್ತದೆ. ಆಟದ ಕೊನೆಯಲ್ಲಿ ಕಣದಿಂದ ಏರಿಯೊಂದನ್ನು ಕಟ್ಟಿರುತ್ತಾರೆ. ಬಿರುಸಾಗಿ ಓಡಿ ಬಂದ ಕೋಣಗಳು ಮಂಜೊಟ್ಟಿ ಎಂದು ಕರೆಯಲಾಗುವ ಆ ಏರಿಯನ್ನೇರಿ ಬಿರುಸು ಕಳಕೊಂಡು ನಿಲ್ಲುತ್ತದೆ (ಅತವಾ ಅವುಗಳನ್ನು ಹಿಡಿದು ನಿಲ್ಲಿಸಲಾಗುತ್ತದೆ). ಪಂದ್ಯದಲ್ಲಿ ಗೆದ್ದ ಜೋಡಿಯ ಒಡೆಯರಿಗೆ ಬಂಗಾರದ ಪದಕ ಮತ್ತು ಶೀಲ್ಡುಗಳನ್ನು ಬಹುಮಾನವಾಗಿ ಕೊಡುತ್ತಾರೆ. ಗೆಲುವನ್ನು ತಂದಿಕೊಟ್ಟ ಕೋಣಗಳಿಗೆ ಬಾಳೇಹಣ್ಣು, ಎಳನೀರು ಮುಂತಾದ ರುಚಿಯಾದ ತಿನುಸು ದೊರೆಯುತ್ತದೆ.
ವಂಡಾರು ಕಂಬಳ, ಪುತ್ತೂರು ದೇವರ ಕಂಬಳ, ಕದ್ರಿ ಕಂಬಳ, ಕೊಕ್ಕಡದ ಕಂಬಳ ಮೊದಲಾದ ಕಂಬಳಗಳ ಉಲ್ಲೇಕ ಹಲವಾರು ತುಳು ಜಾನಪದ ಹಾಡುಗಳಲ್ಲಿ ದೊರೆಯುತ್ತದೆ ಅನೇಕ ಕಲ್ಬರಹಗಳಲ್ಲೂ ಕಂಬಳದ ಬಗ್ಗೆ ಹೆಸರಿಸಲಾಗಿದೆ. ಹೀಗೆ ನೂರಾರು ವರುಶಗಳಿಂದ ಕಂಬಳವು ಜನ ಸಮುದಾಯಗಳನ್ನು ಸೆಳೆಯುತ್ತಾ ಬಂದಿದೆ.
ಕಂಬಳದ ಹಿನ್ನಲೆ :
ಕರಾವಳಿಯಲ್ಲಿ ಕಂಬಳದ ಆಚರಣೆ ಸುಮಾರು 800-900 ವರುಶಗಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ‍್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂದಿಸಿದ ಕಲ್ಬರಹದಲ್ಲಿ ಕಂಬಳದ ಬಗ್ಗೆ ಹೇಳಲಾಗಿದೆ. “ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದು” ಎಂದು ಇದರಲ್ಲಿ ಹೇಳಲಾಗಿದೆ.
1) ಇದರ ಕಾಲ ಕ್ರಿ. ಶ.1200 (ಶಕ ವರುಶ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಎಂದು ತಿಳಿವಿಗರು ಅಬಿಪ್ರಾಯಪಟ್ಟಿದ್ದಾರೆ. ಕ್ರಿ. ಶ. ಹನ್ನೆರಡನೆಯ ನೂರೇಡಿನಲ್ಲಿಯೇ ಸುಗ್ಗಿಯ ಕಾಲದಲ್ಲಿ ಕಂಬಳ ನಡೆಯುತ್ತಿದ್ದದನ್ನು ಕಲ್ಬರಹದ ಹೇಳಿಕೆ ತಿಳಿಸುತ್ತದೆ. ಇದರಿಂದ ಕಂಬಳ ಕನಿಶ್ಟ ಎಂಟುನೂರು ವರುಶಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಶ್ಟವಾಗುತ್ತದೆ. ಕ್ರಿ. ಶ.1402ರ ಬಾರಕೂರು ಕಲ್ಬರಹದಲ್ಲಿ ‘ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆ’ ಎಂದು ಹೇಳಲಾಗಿದೆ.
2) ಕ್ರಿ. ಶ. 1421ರ ಬಾರಕೂರು ಕಲ್ಬರಹದಲ್ಲಿ “ದೇವರು ಸಾವಂತನ ಕಂಬಳ ಗದ್ದೆಯ ಮೇಲೆ” ಎಂದು ಕಂಬಳಗದ್ದೆಯನ್ನು ಹೇಳಲಾಗಿದೆ.
3) ಕ್ರಿ. ಶ. 1424ರ ಬಾರಕೂರು ಕಲ್ಬರಹದಲ್ಲಿ “ಹೊತ್ತಾಗಿ ಮಾಡಿದ ಕಂಬಳ ಗದ್ದೆ” ಎಂದಿದೆ.
4) ಕ್ರಿ. ಶ. 1437ರ ಉಡುಪಿ ಕಲ್ಬರಹವು “ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರು” ಎಂದಿದೆ.
5) ಕ್ರಿ. ಶ. 1482ರ ಕೊಲ್ಲೂರು ಕಲ್ಬರಹದಲ್ಲಿ “ಅವರಿಗೆ ಒಬ್ಬ ಬಾಳು ಕಂಬಳ ಗದ್ದೆ” ಎಂದು ಹೇಳಲಾಗಿದೆ.
6) ಕ್ರಿ. ಶ. 1521ರ ಬಾರಕೂರು ಕಲ್ಬರಹದಲ್ಲಿ ಕಂಬಳ ಗದ್ದೆಯಲಿ ನಡುಹುಣಿ” ಎಂದು ಹೇಳಲಾಗಿದೆ.
7) ಕ್ರಿ. ಶ. 1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಕಲ್ಬರಹದಲ್ಲಿ “ನನ್ನ ಕಂಬಲ ಗದ್ದೆಯಿಂದ ನಡೆಸಬಹುದು” ಎಂಬಲ್ಲಿ ಕಂಬಳಗದ್ದೆಯ ಬಗ್ಗೆ ಹೇಳಲಾಗಿದೆ.
8) ಕಂಬಳ ಪದದ ನಿಶ್ಪತ್ತಿ (ಶಬ್ದದ ರೂಪಸಿದ್ದಿ) ಕಂಪ ಎಂಬುದಕ್ಕೆ ಕೆಸರು ಎಂಬ ಹುರುಳಿದೆ. ಆದ್ದರಿಂದ ಕಂಪ+ಪೊಲ>ಕಂಬುಲ ಆಯಿತು ಎಂದು ನಂಬಿಕೆಯಿದೆ, ಕಳ ಎಂಬುದಕ್ಕೆ ಸ್ಪರ‍್ದೆಯ ವೇದಿಕೆ, ಕಣ ಎಂಬ ಹುರುಳಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದೂ ನಂಬಿಕಕೆಯಿದೆ. ಕಂಬಳ ಗದ್ದೆಯಲ್ಲಿ ಕೊನೆಗೆ ‘ಪೂಕರೆ’ ಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂಬ ನಂಬಿಕೆಯೂ ಇದೆ. ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ನುಡಿಯರಿಮೆಯ ಕಣ್ಣಿನಿಂದ ನೋಡಿದಾಗ ಳ>ಡ ಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಎತ್ತುಗೆಗೆ: ಇಡಾ>ಇಳಾ, ಮಾಡ>ಮಾಳ ತುಳು-ಕನ್ನಡದಲ್ಲಿ, ಉದಾ: ಕುಂಬಳ>ಕುಂಬುಡ, ಕೆಂಪು ಕುಂಬಳ>ಕೆಂಬುಡೆ. ಅದೇ ರೀತಿ ಎರಡನೇ ಪದದ ಮೊದಲ ಅಕ್ಶರ, ‘ಕ’ ಲುಪ್ತವಾಗುವುದು ಕೂಡ ಸಾಮಾನ್ಯ. ಉದಾ: ಗೆಜ್ಜೆ+ಕತ್ತಿ>ಗೆಜ್ಜೆತ್ತಿ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಶ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.
9) ಕಂಬಳದ ಹೆಚ್ಚುಗಾರಿಕೆ ಕರ‍್ನಾಟಕದ ಕರಾವಳಿಯಲ್ಲಿ ಕಂಬಳ ಎನ್ನುವುದು ಗನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂದಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಹಳಮೆಗಳಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ‘ಕಂಬಳ’ ಎಂದರೆ ‘ಕೋಣಗಳ ಓಟದ ಸ್ಪರ‍್ದೆ’ ಎಂದು ಜನರು ಬಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ‍್ದೆಯಲ್ಲ ಕೇವಲ ಕೋಣಗಳ ಓಟದ ಪಯ್ಪೋಟಿ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಶ್ಟು ಹೆಚ್ಚುಗಾರಿಕೆ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂದಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ.
ಕಂಬಳ ಒಂದು ವಿಶಿಶ್ಟ ಜನಪದ ಆಚರಣೆ. ಈ ಬಗ್ಗೆ, “ಕಂಬಳ ಕೇವಲ ಓಟದ ಕೋಣಗಳ ಸ್ಪರ‍್ದೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಹಣಕಾಸಿನ, ರಾಜಕೀಯ ಆಯಾಮವುಳ್ಳ ಪಲವಂತಿಕೆಯ ಆಚರಣೆ ಎಂಬುದು ಕಚಿತವಾಗುತ್ತದೆ” ಎಂಬುದು ಜನರ ನಂಬಿಕೆ.
10) ಮವ್ಕಿಕ ಪರಂಪರೆ ಹಾಗೂ ಹಳಮೆಗಳು ಅನೇಕ ತುಳು ಪಾಡ್ದನಗಳಲ್ಲಿ ಕೂಡ ಕಂಬಳದ ಬಗ್ಗೆ ಹೇಳಲಾಗಿದೆ. ಕಂಬಳಕ್ಕೆ ಸಂಬಂದಿಸಿದಂತೆ ‘ಈಜೋ ಮಂಜೊಟ್ಟಿಗೋಣ’ವೆಂಬ ಪಾಡ್ದನ ಕರ‍್ನಾಟಕದ ಕರಾವಳಿಯಲ್ಲಿ ಹಬ್ಬಿದೆ. ಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಬಗ್ಗೆ ಹೇಳಲಾಗಿದೆ. ದೂಮಾವತಿ ದಯ್ವದ ಪಾಡ್ದನದಲ್ಲಿ ‘ಗಿಡಾವು ಗೋಣ ಕಂಜಿಲು’ ಎಂದು ಕಂಬಳದಲ್ಲಿ ಓಡಿಸುವ ಕೋಣಗಳ ಬಗ್ಗೆ ವಿವರಣೆ ಇದೆ. ಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಶ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ. ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳ ಕೋಣಗಳೊಂದಿಗೆ ಒಬ್ಬಂಟಿಯಾಗಿ ಹೋರಾಡಿ, ಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ಕಾಪಾಡಿದನೆಂಬ ಕತೆ ಕೇಳಿಬರುತ್ತದೆ. ಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ಅಂಕುಡೊಂಕುಗೊಳಿಸಿದರೆಂಬ ಸ್ತಳೀಯ ಹಳಮೆಯಿದೆ.
ಪೂಕರೆ ಕಂಬದ ವಿಚಾರದಲ್ಲಿ ಯುದ್ದವಾಗುತ್ತಿದ್ದಿರುವಂತೆ ತೋರುತ್ತದೆ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಒಂದನ್ನು ಹಳಮೆಗಾರ ಸುಂದರ ಕೇನಾಜೆಯವರು ಸಂಗ್ರಹಿಸಿದ್ದಾರೆ.
ಉರಲ್ (ತುಳು)
ನಮೊನ ಉಲ್ಲಾಯ ದಂಡ್‍ಗು ಪೋತೆರ್
ದಂಡ್‍ಡ್ದ್ ಬನ್ನಗ ಗಿಂಡೆದ ನೀರು
ಕುಡ್ಪುಡು ಕಾಯಿ
ಬಟ್ಟಲ್ಡ್ ಪೇರು
ಕೊರೈಡ್ ಸುಣ್ಣೋ
ಬಂಡಿಡ್ ಪೂಕರೆ
ಕೊಂಡೊದು ಬರ‍್ವರೆ ಉಲ್ಲಾಯೆ
ಆಯೆರ್‍ಗ್ ಪೋನಗ ಆಜಿಕಟ್ಟು ಬಡು
ಈಯೆರೆಗ್ ಬನ್ನಗ ಮೂಜಿಕಟ್ಟು ಬಡು
ಕಂಪಕಂಡೊಡು ಗುಂಪು ಬಲಿಪಡ
ಪೊಯ್ಯಕಂಡೊಡು ಪೊಯ್ಯ ಬಲಿಪಡ
ಮೆಲ್ಲಪೋ ಮೆಲ್ಲ ಬಲ
ಓ … ಓ … ಓ…
ಕನ್ನಡ ಅನುವಾದ,
ನಮ್ಮ ಯಜಮಾನರು ದಂಡಿಗೆ ಹೋಗಿದ್ದಾರೆ
ದಂಡಿನಿಂದ ಬರುವಾಗ ಗಿಂಡೆಯಲ್ಲಿ ನೀರು
ಎಸರು ತಟ್ಟೆಯಲ್ಲಿ ಕಾಯಿ
ಬಟ್ಟಲಿನಲ್ಲಿ ಹಾಲು
ಮರಿಗೆಯಲ್ಲಿ ಸುಣ್ಣ
ಬಂಡಿಯಲ್ಲಿ ಪೂಕರೆ
ತೆಗೆದುಕೊಂಡು ಬರುತ್ತಾರೆ
ಆ ಕಡೆ ಹೋಗುವಾಗ ಆರು ಕಟ್ಟು ಬೆತ್ತ
ಈ ಕಡೆ ಬರುವಾಗ ಮೂರು ಕಟ್ಟು ಬೆತ್ತ
ಕೆಸರುಗದ್ದೆಯಲ್ಲಿ ಗುಂಪು ಓಡಬೇಡ
ಹೊಯ್ಗೆ ಗದ್ದೆಯಲ್ಲಿ ಹೊಯ್ಯೋ ಓಡಬೇಡ
ಮೆಲ್ಲಗೆ ಹೋಗು ಮೆಲ್ಲಗೆ ಬಾ
ಓ …. ಓ …. ಓ ….
ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ತಿಳಿಸುತ್ತದೆ.
ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಹಳಮೆಯು ‘ಅಗೋಳಿ ಮಂಜಣ್ಣ’ ಎಂಬ ಹೆಸರಿನಲ್ಲಿ ಪ್ರಚಲಿತವಿದೆ. ಪೇರೂರಿನಲ್ಲಿ ಪೂಕರೆ ಕಂಬ ಕಳೆದುಹೋದ ಮೇಲೆ ಪೂಕರೆ ಕಂಬ ಹಾಕುವ ಆಚರಣೆ ನಿಂತುಹೋಯಿತು ಎಂಬ ಹಳಮೆಯಿದೆ. ಕೋಳ್ಯೂರು ಮತ್ತು ಕಳಿಯೂರು, ಕಾಸರಗೋಡು ಜಿಲ್ಲೆಯ ಅಕ್ಕಪಕ್ಕದ ಎರಡು ಹಳ್ಳಿಗಳು. ಕಳಿಯೂರಿನಲ್ಲಿ ಪೂಕರೆ ಕಂಬಳವೂ, ಕೋಳ್ಯೂರಿನಲ್ಲಿ ಬಾಳೆ ಕಂಬಳವೂ ನಡೆಯುತ್ತಿತ್ತು. ಒಂದು ವರುಶ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ‘ರೆಂಜೆಗುಂಡಿ’ ಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ.
ಕಂಬಳ ಸಂಬಂದಿ ಈ ಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾನಿ ಬಬ್ಬು ಹಾಗೂ ಕೋಣಗಳು ಮಾಯವಾದಕತೆಯನ್ನು ಹೇಳುತ್ತವೆ. ಹೀಗೆ ಕೋಣಗಳು ಮಾಯವಾದ ಮರುದಿವಸ ನೋಡುವಾಗ ಕಳಿಯೂರಿನ ಪೂಕರೆ ಕಂಬ ಕೋಳ್ಯೂರು ಕಂಬಳಗದ್ದೆಯಲ್ಲಿ ಬಂದು ಬಿದ್ದಿತ್ತು. ಅಂದಿನಿಂದ ಕೋಳ್ಯೂರು ಕಂಬಳಗದ್ದೆಯಲ್ಲಿ ಬಾಳೆ ಹಾಗೂ ಪೂಕರೆ ಕಂಬ ಎರಡೂ ಹಾಕುವ ಪದ್ದತಿ ಬಂತು ಎಂಬ ಹಳಮೆಯಿದೆ. ಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬಯ್ಲು ಕಂಬಳ ಗದ್ದೆಯಲ್ಲಿ ಜೊಳ್ಳು ಬತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ತಳ ಹಳಮೆಯಿದೆ. ಕಂಬಳದ ಆಚರಣೆಯಲ್ಲಿ ಮೂರು ಮುಕ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಪಯ್ಪೋಟಿಗೆ ಸಂಬಂದಿಸಿದ ಅಂಶ. ಎರಡನೆಯದು ಪಲವಂತಿಕೆಯ ಆಚರಣೆಗೆ ಸಂಬಂದಿಸಿದೆ. ಮೂರನೆಯದು ನಾಗ ಹಾಗೂ ಇತರ ದಯ್ವಗಳ ಆರಾದನೆಗೆ ಸಂಬಂದಿಸಿದೆ. ಹೀಗೆ ತನ್ನದೇ ಆದ ಹಿನ್ನಲೆ, ಹಿರಿಮೆ, ಹಾಗೂ ಮೇಲ್ತನವನ್ನು ಹೊಂದಿರುವ ಈ ಸಾಂಸ್ಕ್ರುತಿಕ ಆಟ ಕಂಬಳವು ವಿಶ್ವದೆಲ್ಲೆಡೆ ಹರಡಿ ಕರುನಾಡಿನ ಸಂಸ್ಕ್ರುತಿ ಇನ್ನೂ ಹೆಚ್ಚಾಗಿ ಹಬ್ಬಿ ಕರುನಾಡ ಕಂಪು ಎಲ್ಲೆಡೆ ಸೂಸಲಿ ಎಂದು ಬಯಸುತ್ತೇನೆ.
1 Response
[…] ಹೊನಲಿನಲ್ಲಿ ಮೂಡಿಬಂದಿದ್ದ ಕರುನಾಡ ಕಲೆ ಕಂಬಳ(ಕಂಬುಲ) ಎಂಬ ಬರಹದಲ್ಲಿ, ನಮ್ಮ ನಾಡ ವಿಶಿಶ್ಟ […]