ಜೋಳದ ಜತೆಗಿನ ಬಾಳು

ಸುನಿತಾ ಹಿರೇಮಟ.

Jowar‌_Sorghumಒಂದು ಬೊಗಸೆ ಜೋಳ – ಹೌದು ಒಂದು ಬೊಗಸೆ ಜೋಳ ನಮಗು, ನಿಮಗು, ಹಕ್ಕಿಪಿಕ್ಕಿಗು, ದನಕರುಗಳಿಗೂ. ಒಂದು ಬೊಗಸೆ ಜೋಳ ಬಿತ್ತಿ ನೋಡಿ ಅದರ ಬೆಳೆ ಅದರ ಸಿರಿತನ ಇಡಿ ಜಗತ್ತಿನ ಹಸಿವು ನೀಗಬಲ್ಲುದು. ನಿಜ, ಹಿಂದಿನ ಕಾಲದಲ್ಲಿ ಬರೀ ಬಿತ್ತೋದು ಬೆಳೆಯೊದೊಂದೇ ಕಾಯಕವಾಗಿರಲಿಲ್ಲ ನೂರೆಂಟು ಆಯಾಮಗಳಿದ್ದವಲ್ಲಿ. ಮಳೆ ಮತ್ತು ಮಣ್ಣಿನ ಗುಣಗಳನ್ನಾದರಿಸಿ ಬೆಳೆ ಪದ್ದತಿ ಅನುಸರಿಸಲಾಗುತ್ತಿತ್ತು. ರಂಟೆ-ಕುಂಟೆ, ಬೀಜ ತಯಾರಿ, ಎತ್ತುಗಳ ಬೆಳವಣಿಗೆ ಹೀಗೆ ಹತ್ತು ಹಲವು ಪೂರ‍್ವ ಸಿದ್ದತೆ ಇರುತ್ತಿತ್ತಲ್ಲಿ. ಅವರಿಗದು ಸರಳವಾಗುರುತ್ತಿ, ಮತ್ತು ಗಟ್ಟಿಯಾಗಿರುತ್ತಿತ್ತು.

ಬೇಸಾಯದ ಆ ಗಟ್ಟಿ ಅನುಬವ, ಮಣ್ಣಿನ ಹಿತವಾದ ವಾಸನೆ ಇವು ರೈತಾಪಿ ಬದುಕಿನ ತಿರುಳನ್ನ ಇನ್ನಶ್ಟು ಗಟ್ಟಿಗೊಳಿಸುವುದು ಹತ್ತು ಹಲವು ಆಚರಣೆಗಳಿಂದ. ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಬದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ. ಕಾರ ಹುಣ್ಣಿಮೆಯ ಬಳಿಕ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಬ್ರಮ ಪಡುವ ಹಬ್ಬ.

ಈ ಹಬ್ಬಗಳ ಪ್ರಮುಕತೆ ಇರುವುದೇ ಈ ಕಿರುದಾನ್ಯಗಳಲ್ಲಿ. ಮಟ-ಮಂದಿರಗಳು ಹಳ್ಳಿ ಜನರ ಆಚಾರ ವಿಚಾರಗಳಲ್ಲಿ ಬಹು ಮುಕ್ಯ ಪಾತ್ರ ವಹಿಸುತ್ತವೆ. ದಾಸೋಹ ಎಂಬುದು ಹಳ್ಳಿ ಬದುಕಿನ ಒಂದು ಗಟ್ಟಿಯಾದ ವಿಶಾಲ ಅನುಬವ. ಉದಾಹರಣೆಗೆ ಈಗಲೂ ಕೊಪ್ಪಳದ ಗವಿಮಟದ ಜಾತ್ರಾ ದಾಸೋಹಕ್ಕೆ ಲಕ್ಶಗಟ್ಟಲೆ ರೊಟ್ಟಿಗಳು, ನದಿಯಾಗಿ ದಾನ ರೂಪದಲ್ಲಿ ಹರಿದುಬರುತ್ತವೆ. ಗುಲ್ಬರ‍್ಗಾದ ದಾಸೋಹಿ ಶರಣಬಸಪ್ಪನ ಜಾತ್ರೆಯಲಿ ಇದೇ ಮುಕ್ಯ ಪ್ರಸಾದ. ಉತ್ತರ ಕರ‍್ನಾಟಕದ ಕಡೆ ರೊಟ್ಟಿ ಹಬ್ಬ ಅಂತಲೇ ವಿಶಿಶ್ಟವಾದ ಹಬ್ಬ ಮಾಡುತ್ತಾರೆ. ಕಡಕ್ ರೊಟ್ಟಿ ಈ ಹಬ್ಬದ ವಯ್ಶಿಶ್ಟ. ಇದು ಹಸಿದು ಬಂದವರಿಗೆ ಆಪತ್ಬಾಂದವ.

ಇನ್ನು ಒಡಪು, ಒಗಟು, ಗಾದೆಗಳಲ್ಲಂತೂ ರೊಟ್ಟಿಯ ನೆನಿಕೆ ಇದ್ದೇ ಇದೆ.

“ಕಟಗ ರೊಟ್ಟಿ, ಎಣ್ಣಿ ಬದನೆಕಾಯಿ ಕಟಿಗೊಂಡು ಹೋಗಂದ್ರ ಶೆಟಗೊಂಡು ಹೋಗ್ತಾರ ನಮ್ಮ ತಿಪ್ಪಶೆಟ್ರು…” ಇದು ಉತ್ತರ ಕರ‍್ನಾಟಕದ ಹಳ್ಳಿಗಳಲ್ಲಿ ಹೆಣ್ಣಮಕ್ಕಳು ಗಂಡನ ಹೆಸರು ಕೇಳಿದಾಗ ಹಾಸ್ಯ ಹಾಗೂ ಶ್ರುಂಗಾರ ಬರಿತವಾಗಿ ಹೇಳುವ ಒಡಪಿನ ದ್ವನಿ, ‘ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಶ್ಟು ಉಪ್ಪಿನ ಕಾಯಿ.’ ಆಕಾಶ ನಕ್ಶತ್ರದ ಉತ್ತರ ಕಾಣಿಸುವ ಇದು ಒಗಟಿನ ಸಾಲು.

ಸ್ವಾತಿ ಮಳೆ ಬಿದ್ರೆ ಮುತ್ತಿನಂತ ಜೋಳ
ರೋಹಿಣಿ ಮಳೆಯಲ್ಲಿ ಓಣಿಯೆಲ್ಲ ಜೋಳ…

ಹೀಗೆ ಹತ್ತು ಹಲವು ಗಾದೆ ಒಡಪುಗಳಿಗೆ ಜೀವ ನೀಡುತ್ತದೆ ಜೋಳ. ಇನ್ನು ಮುದುಕ ಮುದುಕಿಯರು ಬಯ್ಯುವ ಶಯ್ಲಿ ನೋಡಿ,

“ಮುನ್ನೋಡಿ ಉಣ್ಣೋ ಮೂಳ ಎಂದರೆ, ಯಾವ ಹೊಲದ ಜೋಳ ಎಂದನಂತೆ.”
“ಬಿರ‍್ರನೆ ಬಾ, ನಿನಗಂತ ಮಜ್ಜಿಗೆ ಕಟಂಬಲಿ ಮಾಡಿನಿ, ಬುತ್ತಿಗೆ ನವಣೆ ಅನ್ನ, ಗಟ್ಟ ಬ್ಯಾಳಿ, ಜೊತಿಗಿ ಕಡ್ಲೆಪುಡಿ, ಗುರಲು ಪುಡಿ ಅಯ್ತಿ, ಉಂಡು ಬದಕ ಮಾಡ.”

“ರೊಟ್ಟಿ ಬಡಿ ಬೇಕಾರ ಎಚ್ರ ಇರ‍್ಲಿ ಅಂಚ ಸೀಳಬ್ಯಾಡ ಗಟ್ಟಿ ಅಂಚ ಬದುಕ ಗಟ್ಟಿ ಮಾಡ್ತೆತಿ”
ಇವು ರೈತನ ದಿನ ನಿತ್ಯದ ಮಾತುಗಳಾಡುವ ಬಾಗಗಳ ಒಂದೆರಡು ತುಣುಕುಗಳಶ್ಟೆ, ಇಲ್ಲಿ ಕಾಣಸಿಗುವುದು ಜೋಳದ ಜೊತೆಗೆ ಮಾಡಬೇಕಾದ ಕೆಲಸದ ಶ್ರದ್ದೆ ಕೂಡ.

ಜಾನಪದ ಗೀತೆಗಳಲ್ಲಿ ನಿಸರ‍್ಗ ಮತ್ತು ಜೀವನ ಮೌಲ್ಯಗಳ ಹೋಲಿಕೆಯಿಂದ ಹೊಸದೊಂದು ಅರ‍್ತ ಹೊರಡಿಸುವ ಪ್ರಯತ್ನ ಸರ‍್ವೇ ಸಾಮಾನ್ಯ.

ಒಂದು ಬೊಗಸೆ ಜೋಳ
ನಾ ಬೀಸಬಲ್ಲೆನೆ, ಆ ಹಾಡ ಹಾಡ ಬಲ್ಲೆನೆ ಈಗ
ಆದಾವ ನಮ ಜೋಳ ಉಳಿದಾವ ನಮ ಹಾಡು
ಈಗ ಸಾಕವ್ವ ನಿನ ಕಲ್ಲ | ಕೈಯಾನ
ಹಾಕಿದುಂಗರ ಸವೆದಾವ |

ಆ ಜೋಳ ಬೀಸುವ ಪರಿ ಆ ಜನಪದ ಗೀತೆ ಈಗ ನೆನಪು ಮಾತ್ರ ರೈತರು ಬೆವರು ಸುರಿಸಿ, ಬಿತ್ತಿ, ನೀರುಣಿಸಿದ ಜೋಳದ ಬೆಳೆ ಬಲಿತು ಪಲ ಕೊಡಲು ಕಾಯುತ್ತಿರುತ್ತಾನೆ. ಇನ್ನೂ ಹಸಿಯಿರುವ ಜೋಳದ ಕಾಳುಗಳನ್ನು ಹಕ್ಕಿಗಳು ಹೆಕ್ಕಿ ತಿನ್ನುತ್ತಿರುತ್ತವೆ. ರೈತನಿಗೆ ತಾನು ಬಿತ್ತಿ ಬೆಳೆದ ಕಾಳುಗಳು ಹಕ್ಕಿಗಳ ಪಾಲಾಗುವುದಲ್ಲ ಎನ್ನುವ ಚಿಂತೆಯಿರುತ್ತದೆ. ತನ್ನ ಬೆಳೆಯಲ್ಲಿ ಗಿಣಿಗಳು ಸುಳಿದು ಹಸಿ ಜೋಳದ ಕಾಳುಗಳನ್ನು ತಿನ್ನುವುದನ್ನು ತಡೆಯಲು ಅವನು ಹೊಲದಲ್ಲೇ ಬಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಹಕ್ಕಿಗಳತ್ತ ಬೀಸಿ, ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾನೆ. ಅದನ್ನು ಕಂಡ ತುಂಬು ಹ್ರುದಯದ ಗರತಿಯೊಬ್ಬಳು, ಜೋಳದ ಹೊಲದಲ್ಲಿದ್ದ ಗಿಣಿಯೊಂದಕ್ಕೆ ಈ ರೀತಿ ಹೇಳುತ್ತಾಳೆ.

ಹಳ್ಳದ ಹೊಲದಾಗ ಬೆಳ್ಳಿಯ ಬಿಳಿಜೋಳ
ಮೆಲ್ಲಕ ಮೆಲಿಯೋ ಗಿಣಿರಾಮ ನನ್ನಣ್ಣ,
ಕಲ್ಲ ಬಂದಾವು ಕಡಿಗಾಗೊ|

ಹಳ್ಳದ ಪಕ್ಕದಲ್ಲೇ ಇರುವ ಜೋಳದ ಹೊಲದಲ್ಲಿದ್ದ ಗಿಳಿಗೆ “ಮೆಲ್ಲನೆ, ಶಬ್ದವಾಗದಂತೆ” ಮೆಲಿಯಲು ಹೇಳುತ್ತಾಳೆ. ಒಂದು ವೇಳೆ ಗಿಣಿರಾಯನನ್ನು ಓಡಿಸಲು ರೈತನೊಬ್ಬ ಬಂದರೆ, ಅವನ ಕಲ್ಲುಗಳು ಬರುವ ಮೊದಲೇ ಅಲ್ಲಿಂದ ಪಾರಗಲು ಗಿಳಿಗೆ ಎಚ್ಚರಿಸುತ್ತಾಳೆ. ಮೇಲ್ನೋಟಕ್ಕೆ ಇದು ಕೇವಲ ನಿಸರ‍್ಗದ ಸಣ್ಣ ವರ‍್ಣನೆಯೆನಿಸಬಹುದು. ಆದರೆ ಈ ಗೀತೆಯ ದ್ವನಿಯ ಆಳಕ್ಕೆ ಇಳಿಯುವುದು ಸುಲಬವಲ್ಲ. ಗ್ರಾಮ್ಯ ಜೀವನಕ್ಕೂ- ನಿಸರ‍್ಗಕ್ಕೂ ಇರುವ ನಿಕಟ ಸಂಬಂದದ ಸೂಚನೆ ಇಲ್ಲಿದೆ. “ಮೆಲ್ಲನೆ ಮೆಲಿಯೊ ಗಿಣಿರಾಮ” ಎಂಬಲ್ಲಿ ನಿಸರ‍್ಗ ಪ್ರೇಮವಿದೆ. “ಕಲ್ಲ ಬಂದಾವು ಕಡಿಗಾಗೋ” ಎಂಬಲ್ಲಿ, ರಯ್ತನ ಪರಿಶ್ರಮದ ಪ್ರತಿಬಿಂಬವಿದೆ. ಬಾಳಿ ಬದುಕಲು ತಾನು ಬೆಳೆದ ಬೆಳೆ ಎಶ್ಟೊಂದು ಮುಕ್ಯ ಎಂಬ ಪ್ರಜ್ನೆ ಇಲ್ಲಿದೆ.

ಎಲ್ಲೋ ಒಂದು ಡೊಳ್ಳು ಪದ ಕೇಳಿದ್ದ ನೆನಪು;

ಮುದುಕ ಮನುಶ ಎಡತಾಕಲಾರೆ
ನನ್ನ ದಾನ ಮುಂಚೆ ಕೊಡಬೇಕು ಬಕ್ತ
ಕೇಳುದಿಲ್ಲಾ ನೀ ಜೋಳ ಕೊಡತೇನಿ
ಕಡೆಗಣಕ ಬರಹೋಗಂತಾ|

ಇನ್ನು ಆರೋಗ್ಯಕ್ಕೆ ಬಂದರೆ ಸರ‍್ವಜ್ನನ ವಚನ ಇಲ್ಲಿ ಹೇಳಲೇಬೇಕು;

ಜೋಳವನು ತಿಂಬುವನು ತೋಳದಂತಾಗುವನು
ಬೇಳೆ ಬೆಲ್ಲಗಳನುಂಬುವನುಬಹು
ಬಾಳನೆಂದರಿಗು ಸರ್ವಜ್ಞ|

ಇವೆಲ್ಲ ಬರಿಯ ಡೊಳ್ಳುಪದ, ಹಬ್ಬ ಹರಿದಿನ, ಒಗಟು, ಗಾದೆ, ವಚನ ಮತ್ತಿನ್ನೇನೂ ಅಲ್ಲ, ಇದು ಬದುಕು. ಬದುಕು ಏನೆಂದು ಹೇಳಬಹುದೇ? ಉಹೂಂ, ಕಶ್ಟ. ಅದು ಹಿರಿಯರ ಅನುಬವ. ಆಳವಾಗಿ ಬಗೆದಶ್ಟು ಚಿಮ್ಮುವ ಚಿಲುಮೆ. ಜೀವನ ಶಯ್ಲಿ ಚೆನ್ನಾಗಿದ್ದರೆ ಆರೋಗ್ಯವಿರುತ್ತದೆ. ಜೀವನ ಶಯ್ಲಿಗೂ ನಮ್ಮ ಆಹಾರಾಬ್ಯಾಸಕ್ಕೂ ನಿಕಟ ಸಂಬಂದವಿದೆ. ಜೋಳ ಈ ಪದ್ದತಿಯ ಒಂದು ಬಾಗವಾದರೆ ಅದು ಮೇಲೆ ತಿಳಿಸಿದ ಬದುಕಿನ ಎಲ್ಲ ಮೂಲೆಗಳಿಗೂ ಹರಡಿ ಸಿರಿವಂತರಾಗುವಲ್ಲಿ ಎರಡು ಮಾತಿಲ್ಲ.

(ಚಿತ್ರ ಸೆಲೆ: wikimedia)

2 ಅನಿಸಿಕೆಗಳು

  1. ಜೋಳದ ಸಿರಿ ಚಂದಾಗಿ ಬಂದಿದೆ ನಿಮ್ಮ ಬರಹದಲ್ಲಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.