ಗೆಡ್ಡೆ-ಗೆಣಸು: ಬಲು ಉಪಕಾರಿ ಈ ತರಕಾರಿ

ಸುನಿತಾ ಹಿರೇಮಟ.

GeddeGeNasu
ಸೊಪ್ಪುಗಳ ಬಗ್ಗೆ ನಾ ಮಾತಾಡ್ತಿದಿನಿ ಅಂತ ಗೊತ್ತಾದ ಕೂಡ್ಲೆ ಅಲ್ಲೆ ಪುಟ್ಟಿಯೊಳಗಿನ ಗೆಣಸು, ಬಟಾಟೆ ನನ್ನನ್ನು ಕೂಗಿ ಕರೆದಂತಾಯುತು, ಬಗ್ಗಿ ನೋಡಿದರೆ ಅಲ್ಲೆ ಇದ್ದ ಮೂಲಂಗಿ ಗಜ್ಜರಿ ಕೂಡ ನಮ್ ಕಡೆ ಕೂಡ ಒಂದ್ಸಲ ಹಣಕ್ರಿ ಅಂತ ಕುಣಿತಾ ಇದ್ದುವು ಸರಿ ಅವನ್ನು ಒಂದ್ಸಲ ಮಾತಾಡ್ಸುಣು ಅಂತ ಪುಟ್ಟಿನ ಎತ್ಕೊಂಡ್ರೆ ಏನೇನ್ ಅದಾವ್ ಅಂತೀರಿ,  ಬೆಳ್ಳಗಿನ ಮೂಲಂಗಿ, ಕೆಂಪಗಿನ ಬೀಟ್ ರೂಟ್, ಕೇಸರಿ ಬಣ್ಣದ ಗಜ್ಜರಿ, ಬೆಳ್ಳಗಿನ ಬಟಾಟೆ(ಆಲೂ), ಬೆಳ್ಳುಳ್ಳಿ, ಗುಲಾಬಿ ಬಣ್ಣದ ಉಳ್ಳಾಗಡ್ಡಿ ಹೀಗೆ ಇನ್ನು… ಕರೆ ಅನುಸ್ತು, ಪಲ್ಲೆಗಳು ಅಂದ್ರ ನೆಲದ ಮೇಲೆ ಬೆಳೆಯೋ ಸೊಪ್ಪುಗಳ ಹಂಗೆ, ನೆಲದ ಕೆಳಗೆ ಬೆಳೆಯೋ ಈ ಎಲ್ಲ ಗೆಡ್ಡೆ ಗೆಣಸು ಕೂಡ ಬಹಳ ಅದಾವೆ ಅಂತ.

ಸೊಪ್ಪುಗಳು ನೆಲದ ಮೇಲಿನ ನೇಸರನ ಬೆಳಕು, ಗಾಳಿಯೊಂದಿಗೆ ಮಾತನಾಡಿ ನೀರು ಕುಡಿದು, ನೆಲದಡಿ ಸಿಗುವ ಗೊಬ್ಬರ ತಿಂದು ಬೆಳೆದರೆ, ನೆಲದಡಿ ಬೆಳೆಯುವ ಈ ಗೆಡ್ಡೆ ಗೆಣಸುಗಳಿಗೆ ಊಟ ಸಿಗುವುದು ಈ ಎಲೆಗಳಿದಂಲೆ. ಆದರು ನೆಲದಡಿ ಸಿಗುವ ಇತರ ಗಾಳಿ ಹಾಗು ಗೊಬ್ಬರದೊಡನೆ ಸೇರಿ ಮತ್ತೆ ನಮಗೇ ಅಹಾರವಾಗುತ್ತವೆ. ಗೆಡ್ಡೆ-ಗೆಣಸುಗಳು ಹಿಂದಿನಿಂದಲೂ ನಮ್ಮ ಆಹಾರ ಪದ್ದತಿಯಲ್ಲಿ ಸೇರಿಕೊಂಡಿವೆ. ನಾವು ಬಳಸುವ ತರಕಾರಿಗಳಲ್ಲಿ ಎರಡು ವಿದ; ಒಂದು ನೆಲದ ಕೆಳಗೆ ಬೆಳೆಯುವ ತರಕಾರಿ, ಮತ್ತೊಂದು ನೆಲದ ಮೇಲೆ ಬೆಳೆಯುವ ತರಕಾರಿ.

ಗೆಡ್ಡೆಯಲ್ಲಿ ಹಲವು ಬಗೆಗಳಿವೆ. ಇವುಗಳಲ್ಲಿ ಮುಕ್ಯ ವಾದವು ಪ್ರಕಂದ (ರೈಜೋಮ್), ಟ್ಯೂಬರ್, ಬಲ್ಬ್ ಮತ್ತು ಕಂದುಗಳು (ಕಾರ‍್ಮ್). ಎಲ್ಲ ರೀತಿಯ ಗೆಡ್ಡೆಗಳೂ ಆಹಾರವನ್ನು ಕೂಡಿಡುವುದರಿಂದ ಇವನ್ನು ಆಹಾರವಾಗಿ ಬಳಸುತ್ತಾರೆ.

ಪ್ರಕಂದ (ರೈಜೋಮ್):

ನೆಲದ ಒಳಗಡೆ ಬೂಮಿಗೆ ಸಮಾಂತರವಾಗಿ ಬೆಳೆ ಯುವ ಗೆಡ್ಡೆಯಿದು. ಇದರ ಮೇಲೆ ಗೆಣ್ಣು ಮತ್ತು ಅಂತರ‍್ಗೆಣ್ಣುಗಳಿವೆ. ಗೆಣ್ಣುಗಳ ಸುತ್ತ ಸಣ್ಣ ಸಣ್ಣ ಹುರುಪೆ ರೂಪದ ಎಲೆಗಳಿವೆ. ಎಲೆಗಳ ಕಂಕುಳುಗಳಲ್ಲಿ ಕಂಡುಬರುವ ಕಂಕುಳು ಮೊಗ್ಗುಗಳು ಬೆಳೆದು ಹೊಸ ಕಾಂಡವನ್ನು ಉತ್ಪತ್ತಿ ಮಾಡಬಹುದು. ಉದಾಹರಣೆ: ಅರಿಸಿನ, ಶುಂಟಿ ಇತ್ಯಾದಿ

ಟ್ಯೂಬರ್:

ಇದು ಕೂಡ ಬೂಮಿಗೆ ಸಮಾಂತರವಾಗಿ ನೆಲದ ಒಳಗೆ ಬೆಳೆಯುವ ಗೆಡ್ಡೆ. ಆಲೂಗೆಡ್ಡೆ ಉತ್ತಮ ಉದಾಹರಣೆ. ಆಲೂಗೆಡ್ಡೆ ಗಿಡ ಬೆಳೆಯುತ್ತಿರುವಾಗ ಗಿಡದ ತಳಬಾಗದ ಕಾಂಡದ ಕೆಲವು ಕವಲುಗಳು ತುದಿಯಲ್ಲಿ ಸ್ವಲ್ಪ ಉಬ್ಬಿರುತ್ತವೆ. ಇವೇ ಮುಂದೆ ಟ್ಯೂಬರುಗಳಾಗುತ್ತವೆ. ಗೆಡ್ಡೆಯ ಮೇಲ್ಬಾಗದಲ್ಲಿ ಹಲವಾರು ಕಂಕುಳು ಮೊಗ್ಗುಗಳಿರುತ್ತವೆ.

ಬಲ್ಬ್:

ಇದು ರಸಬರಿತ ಎಲೆಗಳಿಂದ ಆವ್ರುತವಾಗಿರುವ ಒಂದು ಕುಳ್ಳುಕಾಂಡ. ಇದು ಕಾಂಡದ ಮೇಲಿರುವ ಎಲೆಗಳಂತೆ ರಸಬರಿತ ಎಲೆಗಳಲ್ಲಿ ಕೂಡ ಕಂಕುಳು ಮೊಗ್ಗುಗಳು ಇರುತ್ತವೆ. ಈ ಬಗೆಯ ಗೆಡ್ಡೆ ಏಕದಳ ಸಸ್ಯಗಳಲ್ಲಿ ಮಾತ್ರ ಕಾಣಬರುತ್ತದೆ. ಉದಾಹರಣೆ: ಈರುಳ್ಳಿ, ಬೆಳ್ಳುಳ್ಳಿ, ಲಿಲಿ, ಟ್ಯೂಲಿಪ್ ಮುಂತಾದವು.

ಕಂದುಗಳು (ಕಾರ‍್ಮ್):

ಇದು ಪ್ರಕಂದವನ್ನು ಹೋಲುವ ಗೆಡ್ಡೆ. ಪ್ರಕಂದ ಸಮಾಂತರವಾಗಿ ಬೆಳೆದರೆ ಇದು ಮೇಲ್ಮುಕವಾಗಿ ಬೆಳೆಯುತ್ತದೆ. ಇದರ ಒಳ ರಚನೆಯನ್ನು ಪರೀಕ್ಶಿಸಿದರೆ ಕಾರ‍್ಟಿಕಲ್ ಪದರದಲ್ಲಿ ನಾಳಗಳು ಹರಡಿರುವುದನ್ನು ಗಮನಿಸಬಹುದು. ಬೇರುಗಳು ಕಂದಿನ ತಳಬಾಗದಲ್ಲಿರುತ್ತವೆ. ಹೊರಗಡೆ ಪೊರೆಯಂತಿರುವ ಎಲೆಗಳಿವೆ. ಎಲೆಗಳು ಕಂದಿನ ಮೇಲೆ ಸುತ್ತಾಕಾರದಲ್ಲಿ ಜೋಡಣೆಗೊಂಡಿರುತ್ತವೆ. ಬಲ್ಬಿಗೂ ಕಂದಿಗೂ ಒಂದು ಮುಕ್ಯ ವ್ಯತ್ಯಾಸವೆಂದರೆ, ಕಂದುಗಳಲ್ಲಿ ಕಾಂಡದ ಬಾಗ ಹೆಚ್ಚು, ಎಲೆಗಳ ಸಂಕ್ಯೆ ಕಡಿಮೆ ಮತ್ತು ನಡುಗೆಣ್ಣುಗಳ ಉದ್ದ ಹೆಚ್ಚು, ಆರ‍್ಕಿಡೇಸೀ ಕುಟುಂಬದ ಸಸ್ಯಗಳಲ್ಲಿ ಕಂದನ್ನು ಕಾಣಬಹುದು.

ಇನ್ನು ಎಲ್ಲ ಗೆಡ್ಡೆ ಗೆಣಸುಗಳಲ್ಲಿ ಕನಿಜಾಂಶ, ಪೋಶಕಾಂಶ ಅದಿಕವಾಗಿರುತ್ತದೆ. ಹಾಗಾದರೆ ನೆಲದ ಕೆಳಗೆ ಬೆಳೆಯುವ ತರಕಾರಿಗಳ ಉಪಯೋಗಗಳೇನು ಎಂಬುದನ್ನು ನೋಡೋಣ:

 • ಅಂಟು(Gluten) ಹೊಂದಿರುವ ಊಟದಿಂದ ದೂರ ಇರಬೇಕಾದವರು ಗೋದಿ ಹಿಟ್ಟಿಗೆ ಬದಲಿಯಾಗಿ ಮರಗೆಣಸನ್ನು ಸೇವಿಸಬಹುದು
 • ಈಸ್ಟ್ರೊಜೆನ್: ನೆಲದೊಳಗೆ ಬೆಳೆಯುವ ತರಕಾರಿ, ಗಡ್ಡೆಗೆಣಸುಗಳು ಶರೀರದಲ್ಲಿನ ಹೆಚ್ಚುವರಿ ಈಸ್ಟ್ರೊಜೆನ್ ಅನ್ನು ಹೊರಹಾಕಬಲ್ಲವು. ಆದ್ದರಿಂದ ಮಹಿಳೆಯರು ಇವನ್ನು ಬಳಸಿದರೆ ಒಳ್ಳೆಯದು
 • ಇದರಲ್ಲಿ ನೈಸರ‍್ಗಿಕ ರೀತಿಯ ಆಹಾರದ ನಾರಿನಂಶ ಹೇರಳವಾಗಿದ್ದು, ಇದು ಕೊಲೆಸ್ಟ್ರಾಲ್, ಕರುಳಿನ ಕ್ಯಾನ್ಸರ್, ಸಕ್ಕರೆ ರೋಗ ಮತ್ತು ಹ್ರುದಯದ ಕಾಯಿಲೆಗಳ ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ
 • ಎಲ್ಲ ಗೆಡ್ಡೆ ಗೆಣಸುಗಳಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ, ಮ್ಯಾಂಗನೀಸ್, ಪೊಟಾಶಿಯಂ, ಜಿಂಕ್ ಮೊದಲಾದ ಕನಿಜಾಂಶಗಳು ಸಾಕಶ್ಟು ಒಳ್ಳೆಯ ಪ್ರಮಾಣದಲ್ಲಿವೆ, ಇದರಿಂದ ಮೈ ಹಾಗು ಮಾನಸಿಕ ಆರೋಗ್ಯ ಬೆಳವಣಿಗೆಗೆ ಸಹಕಾರಿಯಾಗಿವೆ
 • ಇವು ಒಳ್ಳೆಯ ಯಾಂಟಿ-ಆಕ್ಸಿಡೆಂಟ್ ಗಳ ಮೂಲಗಳಾಗಿರುವುದರಿಂದ ಚರ‍್ಮ ಸಮಸ್ಯೆಗಳಿಂದ ಪಾರು ಮಾಡುತ್ತದೆ
 • ಗೆಣಸು ಕಾರ‍್ಬೋಹೈಡ್ರೇಟಿನ ಅತ್ಯುತ್ತಮ ಮೂಲ. ಇದರಲ್ಲಿರುವ ಅದಿಕ ಗಂಜಿಯ ಅಂಶಗಳಿಂದಾಗಿ ಇದನ್ನು ಮುಕ್ಯ ಆಹಾರವಾಗಿಯೇ ಬಡಿಸಲಾಗುತ್ತದೆ. ಬಸಿರಾದ ಹೆಂಗಸರಿಗೆ ಬಹಳ ಆವಶ್ಯಕವಾದ ಬಿ-ವಿಟಾಮಿನ್ ಸೇರಿದಂತೆ ಪೋಲಿಕ್ ಆಸಿಡ್ ಮರಗೆಣಸಿನಲ್ಲಿ ಹೇರಳವಾಗಿದೆ
 • ಕೆಲವು ವಿದದ ಕ್ಯಾನ್ಸರ್ ಗಳನ್ನು ತಡೆಯುವ ಶಕ್ತಿ ಬೀಟ್‍ರೂಟ್ ಗಿದೆ ಕೆಂಬಣ್ಣದಿಂದ ತುಂಬಿರುವ ತರಕಾರಿಗಳ ರಾಣಿ ಬೀಟ್‍ರೂಟ್ ಪೋಶಕಾಂಶಗಳ ಗಣಿ. ಬೆಳೆಯುವ ಮಕ್ಕಳಿಗೆ ಇದು ಉಪಯುಕ್ತ ಆಹಾರ. ಸೋಡಿಯಂ, ಪೊಟಾಶಿಯಂ, ರಂಜಕ, ಕ್ಯಾಲ್ಶಿಯಂ, ಅಯೋಡಿನ್, ಕಬ್ಬಿಣಾಂಶಗಳ ಗಣಿ. ಬಿ1, ಬಿ2,ಬಿ5, ಬಿ6, ಸಿ ಅನ್ನಾಂಗಗಳಿಂದ ಸಮ್ರುದ್ದ. ಊಟ ಅರಗುವುದಕ್ಕೆ, ರಕ್ತದ ಶುದ್ದಿಗೆ ಬೀಟ್‍ರೂಟ್ ಸಹಕರಿಸುತ್ತದೆ
 • ಮೂಲಂಗಿಯಲ್ಲಿ ಸಕ್ಕರೆಯ ಅಂಶವು ಕಡಿಮೆ ಇದ್ದು, ವಿಟಮಿನ್ ಸಿ, ಪಾಸ್ಪರಸ್, ಜಿಂಕ್, ಮತ್ತು ವಿಟಮಿನ್-ಬಿ ಕಾಂಪ್ಲೆಕ್ಸಿನ ಅನೇಕ ಅಂಶಗಳನ್ನು ಒಳಗೊಂಡಿದೆ. ಇದು ಚರ‍್ಮಕ್ಕೆ ಬಹಳ ಪ್ರಯೋಜನಕಾರಿಯಾದ ಅಂಶ. ಮೂಲಂಗಿಯಲ್ಲಿರುವ ನೀರಿನ ಅಂಶವು ಚರ‍್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಬಹಳ ಸಹಾಯಕ. ಮೂಲವ್ಯಾದಿಯಂತಹ ಕಾಯಿಲೆಯನ್ನು ಗುಣ ಪಡಿಸುವ ಸಾಮರ‍್ತ್ಯ ಮೂಲಂಗಿಗೆ ಇದೆ. ಇದರ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು
 • ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ (allicin) ಹ್ರುದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ
 • ಈರುಳ್ಳಿಯಲ್ಲಿರುವ ಸತುವಿನಂಶ ಅದಿಕವಾಗಿದೆ, ಸೋಂಕಾಣುಗಳ ವಿರುದ್ದ ಹೋರಾಡುತ್ತದೆ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿ ಅರಗುವಿಕೆಗೂ ಸಹಾಯ ಮಾಡುತ್ತದೆ
 • ಶುಂಟಿ ನಾನಾ ಕಾಯಿಲೆಗಳಿಗೆ ರಾಮಬಾಣವಾಗಿದೆ. ಪ್ರತಿನಿತ್ಯ ಅಡುಗೆಗೆ ಬಳಸಿದರೆ ಅರಗುವಿಕೆಗೆ ತುಂಬಾ ಸಹಕಾರಿ
 • ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಅದಿಕವಾಗಿದ್ದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು
 • ನವಿಲ್ ಕೋಸು ಇದನ್ನು ತಿಂದರೆ ಹ್ರುದಯಕ್ಕೆ ತುಂಬಾ ಒಳ್ಳೆಯದು, ಎದೆ ಉರಿ, ಹೊಟ್ಟೆ ಉರಿ ಸಮಸ್ಯೆ ಇರುವವರು ಇದನ್ನು ತಿನ್ನುವುದು ತುಂಬಾ ಒಳ್ಳೆಯದು
 • ಹೆಚ್ಚಿನವರು ಆಲೂಗಡ್ಡೆ ಒಳ್ಳೆಯದಲ್ಲ ಎಂದು ಅದನ್ನು ತಿನ್ನುವುದಿಲ್ಲ. ಇದನ್ನು ಸಿಪ್ಪೆ ಸಹಿತ ತಿಂದರೆ ಅದಿಕ ರಕ್ತದೊತ್ತಡ ಕಡಿಮೆಯಾಗುವುದು ಹಾಗೂ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು

ಗೆಡ್ಡೆಗಳೆಲ್ಲಾ ಬಹುತೇಕ ಚಳಿಗಾಲದ ತರಕಾರಿ. ನವೆಂಬರ್ ನಿಂದ ಜನವರಿ ತನಕ. ಆಲೂಗೆಡ್ಡೆ, ಸುವರ‍್ಣಗಡ್ಡೆ ಬಿಟ್ಟರೆ ಮಿಕ್ಕ ಗೆಡ್ಡೆಗಳು ಮಾರುಕಟ್ಟೆಯಲ್ಲಿ ಅಪರೂಪ. ಕೆಲವೊಂದು ಮರೆತೇ ಹೋಗಿದೆ. ಉಪಯೋಗವೂ ಕಡಿಮೆ. ಮಳೆಗಾಲ ಕಳೆದು ಬೇಸಿಗೆ ತರಕಾರಿ ಆರಂಬವಾಗುವ ಮೊದಲು ಗೆಡ್ಡೆ ತರಕಾರಿಗಳ ಬಳಕೆ ಕುರಿತು ಹಿರಿಯರು ಜ್ನಾಪಿಸಿಕೊಳ್ಳುತ್ತಾರೆ. ನಾವು ಹೆಚ್ಚಿನ ತರಕಾರಿಗಳನ್ನು ಅದರ ಪ್ರಾಮುಕ್ಯತೆ ಅರಿಯದೆ ತಿನ್ನುತ್ತೇವೆ, ನಮಗೆ ಇಶ್ಟವಿಲ್ಲದ ತರಕಾರಿಯನ್ನು ತಿನ್ನದೆ ಕೆಲವೊಂದನ್ನು ದೂರವಿಡುತ್ತೇವೆ. ಗೆಡ್ಡೆಗಳು ಬದುಕಿನೊಂದಿಗೆ ಹೊಸೆದು, ಅಡುಗೆ ಮನೆಯಲ್ಲಿ ಕಾದ್ಯಗಳಾಗಿ ಬಟ್ಟಲು ಸೇರುತ್ತಿದ್ದ ದಿನಗಳನ್ನು ಹಿರಿಯರು ಜ್ನಾಪಿಸಿಕೊಳ್ಳುತ್ತಾರೆ. ಕೇವಲ ಆಲೂಗಡ್ಡೆ, ಬಟಾಟೆ, ಬೀಟ್‍ರೂಟ್, ಮೂಲಂಗಿ, ಗೆಣಸು ಇವಕ್ಕೆ ಮಾತ್ರ ಈಗ ಗೆಡ್ಡೆಯ ಪಟ್ಟ. ಉಳಿದ ಅವೆಶ್ಟೋ ಗೆಡ್ಡೆಗಳು ಮಣ್ಣಲ್ಲೇ ಅವಿತಿರುತ್ತದೆ. ಟೊಮೆಟೋ, ಕ್ಯಾಬೇಜ್ ಬರಾಟೆಗೆ ಗೆಡ್ಡೆಗಳು ನೆಲದ ಒಡಲಿನಾಳಕ್ಕೆ ಇಳಿಯುತ್ತವೆ! ಅವುಗಳನ್ನು ಮತ್ತೊಮ್ಮೆ ಅಗೆಯುವ ಕೆಲಸವಾಗಬೇಕಿದೆ.

ಗೆಡ್ಡೆ ತರಕಾರಿ ಅಂದಾಗ ಎಲ್ಲವನ್ನೂ ಬಳಸಬಹುದು ಎನ್ನುತ್ತೇವೆ. ಅವುಗಳ ಗುಣ ದೋಶಗಳನ್ನು ಅರಿತು ಸೇವಿಸಿದಾಗ ಆರೋಗ್ಯಕ್ಕೆ ಒಳ್ಳೆಯದು. ‘ಯಾವುದನ್ನು ಬಳಸಬೇಕು, ಯಾವುದು ಬೇಡ’ ಮತ್ತು ಅದರಲ್ಲೂ ಸಕ್ಕರೆ ರೋಗಿಗಳು ವೈದ್ಯರ ಸಲಹೆ ಮೇಲೆ ಇವನ್ನು ಅಳವಡಿಸಿಕೊಂದರೆ ಒಳ್ಳೆಯದು. ನಮ್ಮ ದೇಹ ಗುಣಕ್ಕೆ ಒಗ್ಗುತ್ತವೊ, ಇಲ್ಲವೊ ತಿಳಿದು ಬಳಸಿದಲ್ಲಿ ಅವು ಸಿರಿಯೆ ಸರಿ.

ಆದಯ್ಯ ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ;

ಕೂಡಿ ಸುಖಂಬಡುವುದು ಜಂಗಮಲಿಂಗದ ವಿಷಯ,
ಸುಖಂಬಡೆದು ಪರಿಣಾಮತೆಯನೆಯಿದೂದು ಪ್ರಸಾದಲಿಂಗದ ವಿಷಯ,
ಪರಿಣಾಮತೆಯನೆಯ್ದಿ ನಿಶ್ಚಯಬಡೆವುದು ಮಹಾಲಿಂಗದ ವಿಷಯ.
ಇನ್ನು ಆಚಾರಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ:
ಬೇರು ಗೆಡ್ಡೆ ಗೆಣಸು ಮೊದಲಾದವರಲ್ಲಿಯ ಗಂಧವನರಿವುದು
ಆಚಾರಲಿಂಗದಲ್ಲಿಯ ಆಚಾರಲಿಂಗ.

ಬೂಮಿ ತಾಯಿಯ ಒಳ್ಳೆಯ ಗುಣಗಳನ್ನು ಇವು ಮೈಗೂಡಿಸಿಕೊಂಡು ಬೆಳೆದಿವೆ ಅನ್ನಿಸುತ್ತದೆ. ಪೋಶಕ ಶಕ್ತಿಯನ್ನೆಲ್ಲಾ ನೆಲದಿಂದ ತೆಗೆದು, ಒತ್ತಿ ಸಂಗ್ರಹಿಸಿಟ್ಟು, ಸಮಯ ಬಂದಾಗ ಚಿಗುರಿ, ಮೇಲೆದ್ದು ಬರುವ ಅದಮ್ಯ ಜೀವಶಕ್ತಿಯನ್ನು ಅದರ ಒಳಗೆ ಅಲ್ಲಲ್ಲಿ ಇಟ್ಟು, ಜೀವತ್ಯಾಗ ಮಾಡುತ್ತವೆ. ಅವು ಸಿರಿಯ ಗಡ್ಡೆಗಳು. ಅವು ಜೀವಶಕ್ತಿಯ ಗುಡ್ಡಗಳು. ಕಾಯಿಲೆಗೆ ಮದ್ದು, ಹಸಿವಿಗೆ ತರಕಾರಿ – ಅವು ನಮಗೆ ಉಪಕಾರಿ.

(ಚಿತ್ರ ಸೆಲೆ: skinnyon)

(ವಚನಗಳ ಸೆಲೆ: vachanasanchaya)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks