ನಡೆನುಡಿಗಳ ನಡುವಣ ಬಿರುಕು

– ಸಿ.ಪಿ.ನಾಗರಾಜ.

ಶನಿವಾರದಂದು ಬೆಳಗಿನ ತರಗತಿಯೊಂದರಲ್ಲಿ ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಒಬ್ಬರಾದ ಬಸವಣ್ಣನವರ ಈ ಕೆಳಕಂಡ ವಚನವನ್ನು ವಿವರಿಸಿ ಹೇಳುವ ಮುನ್ನ, ವಚನದಲ್ಲಿನ ನುಡಿಸಾಮಗ್ರಿಗಳ ನಾದಲಯ ಹೊರಹೊಮ್ಮುವಂತೆ ಓದತೊಡಗಿದೆನು.

ದಯವಿಲ್ಲದ ದರ‍್ಮವದಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ
ದಯವೇ ದರ‍್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ

ವಿದ್ಯಾರ‍್ತಿಗಳು ಮನವಿಟ್ಟು ಆಲಿಸುತ್ತಿದ್ದರು. ನಾನು ತನ್ಮಯನಾಗಿ ವಚನದ ತಿರುಳನ್ನು ಬಿಡಿಬಿಡಿಯಾಗಿ ಹೇಳತೊಡಗಿದೆನು.

“ನೋಡಿ…ಈ ವಚನದಲ್ಲಿ ಬಸವಣ್ಣನವರು ಅತ್ಯಂತ ಉದಾತ್ತವಾದ ಜೀವನ ತತ್ವವೊಂದನ್ನು ನಿರೂಪಿಸಿದ್ದಾರೆ. ಈ ಜಗತ್ತಿನಲ್ಲಿ ದರ‍್ಮವೆಂಬುದು ನೆಲೆಗೊಳ್ಳಬೇಕಾದರೆ ಒಲವಿನಿಂದ ಕೂಡಿದ ದಯೆ-ಕರುಣೆ-ಅನುಕಂಪ ಅನ್ನೋದು ಎಲ್ಲಾ ಮಾನವರ ಮನದಲ್ಲೂ ಮಿಡಿತಾಯಿರ‍್ಬೇಕು. ಯಾವುದೇ ಒಬ್ಬ ವ್ಯಕ್ತಿಯು ಮತ್ತೊಂದು ಜೀವಿಯನ್ನು ತನ್ನಂತೆಯೇ ತಿಳಿದುಕೊಂಡು ಕರುಣೆಯಿಂದ ಕಾಣ್ಬೇಕೆ ಹೊರತು ಕ್ರೂರತನದಿಂದಲ್ಲ. ಈ ವಚನದಿಂದ ನಾವು ಅರಿಯಬೇಕಾದುದ್ದು ಬಹಳವಿದೆ. ದರ‍್ಮದ ಹಾದಿಯಲ್ಲಿ ಅಡಿಯಿಡಬೇಕಾದರೆ ಮೊಟ್ಟಮೊದಲು ನಾವು ದಯಾಶೀಲರಾಗಿ ವರ‍್ತಿಸುವುದನ್ನು ಕಲೀಬೇಕು. ಮತ್ತೊಂದು ಜೀವಿಯನ್ನು ಅದು ಪ್ರಾಣಿಯೇ ಆಗಿರ‍್ಲಿ ಇಲ್ಲವೇ ಒಬ್ಬ ಮಾನವನೇ ಆಗಿರ‍್ಲಿ ಕಿಂಚಿತ್ತು ಹಿಂಸೆಗೆ ಗುರಿ ಮಾಡಬಾರದು. ಯಾವುದೇ ಕಾರಣದಿಂದಲೂ, ಅಂದರೆ ಆಸೆ-ಹಗೆತನ-ಅಸೂಯೆ-ಹೆದರಿಕೆಯ ಒಳಮಿಡಿತಗಳಿಗೆ ಒಳಗಾಗಿ ಇತರ ಜೀವಿಗಳನ್ನು ಕೊಲ್ಲಬಾರದು. ದಯೆಯೆಂಬುದು ದರ‍್ಮದ ತಳಹದಿಯಾಗಬೇಕು. ಜೀವಿಗಳ ಬಗೆಗೆ ಒಲವಿನಿಂದ ಕೂಡಿದ ಕರುಣೆಯಿಲ್ಲದೆ ನಾವು ಯಾವ ಕೆಲಸವನ್ನು ಮಾಡಿದರೂ ಏನೂ ಪ್ರಯೋಜನವಿಲ್ಲ. ನಮ್ಮ ಸುತ್ತಮುತ್ತಣ ಸಹಜೀವಿಗಳೆಲ್ಲರ ಬದುಕಿಗೆ ಒಳಿತಾಗುವಂತಹ ನಡೆನುಡಿಗಳು ನಮ್ಮದಾಗಿದ್ದಾಗ ಮಾತ್ರ ಕೂಡಲಸಂಗಯ್ಯನು ನಮ್ಮನ್ನು ಒಪ್ಪಿಕೊಳ್ಳುತ್ತಾನೆ. ನಮ್ಮ ಸಾಮಾಜಿಕ ನಡೆನುಡಿಗಳು ಇತರ ಜೀವಿಗಳಿಗೆ ಹಾನಿಯನ್ನುಂಟುಮಾಡುವಂತಿದ್ದರೆ ದೇವರಾದ ಕೂಡಲಸಂಗಯ್ಯನು ನಮ್ಮ ಯಾವುದೇ ಬಗೆಯ ಪೂಜೆಯನ್ನಾಗಲಿ ಇಲ್ಲವೇ ಮೊರೆಯನ್ನಾಗಲಿ ಒಪ್ಪಿಕೊಳ್ಳುವುದಿಲ್ಲ. ಈ ವಚನದಲ್ಲಿ ಬಸವಣ್ಣನವರು ದೇವರನ್ನು ಪೂಜಿಸುವುದು ಎಂದರೆ ಸಮಾಜದಲ್ಲಿ ಎಲ್ಲ ಜೀವಿಗಳೊಡನೆ ದಯೆಯಿಂದ ನಡೆದುಕೊಳ್ಳುವುದು ಎಂಬ ಜೀವನ ಸಂದೇಶವನ್ನು ಸಾರಿದ್ದಾರೆ”

ಎಂದು ವಿವರಿಸಿ ತರಗತಿಯನ್ನು ಇಡಿಯಾಗಿ ಒಮ್ಮೆ ನೋಡುತ್ತಾ –

“ವಚನದ ಸಾರ ಅರ‍್ತವಾಯ್ತೇನ್ರಿ” ಎಂದು ವಿದ್ಯಾರ‍್ತಿಗಳನ್ನು ಕೇಳಿದೆ.

“ಚೆನ್ನಾಗಿ ಅರ‍್ತವಾಯ್ತು ಸಾರ್ ” ಎಂದು ಒಂದಿಬ್ಬರು ಬಾಯ್ಬಿಟ್ಟು ಹೇಳಿದರೆ, ಉಳಿದವರು ಅದನ್ನು ಅನುಮೋದಿಸುವಂತೆ ತಲೆಯಾಡಿಸಿದರು.

“ಬರೀ ಅರ‍್ತ ಮಾಡ್ಕೊಂಡ್ರೆ ಏನೂ ಪ್ರಯೋಜನವಿಲ್ಲ. ಬಸವಣ್ಣನವರ ಇಂಗಿತವನ್ನು ನಮ್ಮ ಬದುಕಿನ ಆಚರಣೆಯಲ್ಲಿ ನಂನಮ್ಮ ಕಯ್ಯಲ್ಲಾದಶ್ಟು ಅಳವಡಿಸಿಕೊಂಡು, ನಮ್ಮ ನಡೆನುಡಿಗಳನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಬೇಕು” ಎಂದು ಒತ್ತುಕೊಟ್ಟು ಹೇಳಿದೆ. ಮತ್ತೆ ಇನ್ನೊಂದೆರಡು ವಚನಗಳನ್ನು ಓದಿ ವಿವರಿಸಿ ತರಗತಿಯಿಂದ ಹೊರಬಂದ ನಂತರವೂ, ಬಸವಣ್ಣನವರ ಮೇಲ್ಕಂಡ ವಚನದ ತಿರುಳು ಮತ್ತು ಆಶಯ ನನ್ನ ಮನಸ್ಸನ್ನು ಬಹಳ ಹೊತ್ತು ಆವರಿಸಿಕೊಂಡಿತ್ತು.

ಮಾರನೆಯ ದಿನ ಬಾನುವಾರ ಬೆಳಿಗ್ಗೆ ಎಂದಿನಂತೆ ಮಾಂಸವನ್ನು ತರಲೆಂದು ಹೊರಟಾಗ, ನನ್ನ ಹೆಂಡತಿಯು ಕಯ್ಚೀಲವನ್ನು ಕೊಡುತ್ತಾ –

“ಹೋದ ವಾರ ತಂದಂಗೆ ಈ ವಾರನೂ ಬಲಿಕೆ ಮಾಂಸ ತರ‍್ಬೇಡಿ. ನಂಗೆ ಅದ ಬೇಯಿಸಿ ಬೇಯಿಸಿ ಸಾಕಾಗಿ ಹೋಗುತ್ತೆ. ಮಕ್ಕಳಿಗೆ ತಣ ಕಂಡ್ರೆ ಬಹಳ ಇಶ್ಟ. ತಣಬೆರಕೆಯಾಗಿ ಎಳಸಾಗಿರೂ ಮಾಂಸನಾ ನೋಡ್ತನ್ನಿ” ಎಂದು ಆದೇಶ ನೀಡಿದಳು.

ಮಾಂಸದ ಅಂಗಡಿಗಳ ಬಳಿಗೆ ಬರುತ್ತಿದ್ದಂತೆಯೇ ಕತ್ತರಿಸಿ ಜೋಡಿಸಿಟ್ಟಿದ್ದ ಆಡು-ಕುರಿಗಳ ತಲೆಗಳ ಸಾಲು, ಚರ‍್ಮವನ್ನು ಸುಲಿದು ನೇತು ಹಾಕಿದ್ದ ಮಾಂಸದ ಮುದ್ದೆಗಳು ಕಣ್ಣಿಗೆ ಬಿದ್ದವು. ಅಂಗಡಿಯೊಂದರ ಮುಂದೆ ನಿಂತು ನೋಡತೊಡಗಿದೆ. ಅಲ್ಲಿ ನೇತು ಹಾಕಿದ್ದ ಮೂರ‍್ನಾಕು ಮರಿಗಳಲ್ಲಿ ಒಂದರಲ್ಲಾದರೂ ಮೂರ‍್ಕಾಸಿನ ಚರಬಿಯಾಗಲಿ ಇಲ್ಲವೇ ತಣವಾಗಲಿ ನನ್ನ ಕಣ್ಣಿಗೆ ಕಾಣಲಿಲ್ಲ. ಅಂಗಡಿಯ ಮಾಲೀಕ ಬಹಳ ಉತ್ಸಾಹದಿಂದ, ಒಂದೆರಡು ಮರಿಗಳ ತೊಡೆಯ ಬಾಗವನ್ನು ನನ್ನತ್ತ ತಿರುಗಿಸಿ ತೋರಿಸುತ್ತಾ –

“ಯಾವುದು ಕೊಡ್ಲಿ ಸಾರ್…ಆಡಂದು ಬೇಕು…ಕುರೀದೂ ಬೇಕು” ಎಂದ.

“ಏನಯ್ಯಾ…ಇವತ್ತು ಬಾನುವಾರ ಅಂತ ಗೊತ್ತಿದ್ರೂ…ಒಂದಾದ್ರೂ ಒಳ್ಳೇ ಮರಿ ಕುಯ್ದಿಲ್ಲ” ಎಂದು ಬೇಸರದಿಂದ ನುಡಿದೆ.

“ಇವಕ್ಕಿಂತ ಒಳ್ಳೇ ಮರಿ ಇನ್ಯಾವುದು ಸಾರ್ ” ಎಂದು ಉದ್ಗಾರವೆಳೆದ.

“ಒಂದರಲ್ಲಾದ್ರೂ ಚರಬೀನೆ ಇಲ್ಲ. ತಣವಿಲ್ಲದ ಮಾಂಸ ಇದ್ಯಾವುದಯ್ಯಾ? ” ಎನ್ನುತ್ತಾ , ಪಕ್ಕದ ಅಂಗಡಿಯತ್ತ ಹೊರಳಿ ನೋಡಿದೆ. ಅಲ್ಲಿ ನೇತು ಹಾಕಿದ್ದ ಮರಿಗಳಲ್ಲಿ ಒಂದರಲ್ಲಿ ತಣಬೆರೆತ ಬಾಡನ್ನು ಕಂಡು, ಅರಳಿದ ಮೊಗದಿಂದ ಅತ್ತ ನಡೆದೆ.

ಮಾಂಸದೊಡನೆ ಮನೆಗೆ ಹಿಂತಿರುಗಿ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ನೆನ್ನೆ ತರಗತಿಯಲ್ಲಿ ಓದಿ ಅರ‍್ತಮಾಡಿಕೊಂಡು ವಿವರಿಸಿದ್ದ “ದಯವಿಲ್ಲದ ದರ‍್ಮವದಾವುದಯ್ಯ” ಎಂಬ ನುಡಿ ಮತ್ತು ಇಂದು ಮಾಂಸದ ಅಂಗಡಿಯಲ್ಲಿ “ತಣವಿಲ್ಲದ ಮಾಂಸ ಇದ್ಯಾವುದಯ್ಯಾ” ಎಂದು ನಾನು ಆಡಿದ್ದ ನುಡಿ – ನನ್ನ ಮನದಲ್ಲಿ ತೀವ್ರವಾಗಿ ಒಂದಕ್ಕೊಂದು ಎಡತಾಕತೊಡಗಿದವು.

ಸಾಮಾಜಿಕ ಮಾನವರಾದ ನಾವು ಪಡೆಯುವ ಅರಿವು, ಆಡುವ ಮಾತು, ಮಾಡುವ ಕೆಲಸಗಳ ನಡುವಣ ದೊಡ್ಡ ಬಿರುಕಿಗೆ ನನ್ನ ನಡೆನುಡಿಗಳೇ ಸಾಕ್ಶಿಯಾಗಿದ್ದವು. ಜಗತ್ತಿನಲ್ಲಿ ಅತ್ಯ್ತುತ್ತಮವೆನಿಸಿದ ಸಾಹಿತ್ಯದ ಹೊತ್ತಿಗೆಗಳನ್ನು ಓದಿ ಪಡೆಯುವ ಅಕ್ಕರದ ಅರಿವಾಗಲೀ ಇಲ್ಲವೇ ನಮ್ಮ ಕಣ್ಣ ಮುಂದಿನ ಜಗತ್ತಿನ ಆಗುಹೋಗುಗಳನ್ನು ಚೆನ್ನಾಗಿ ಗಮನಿಸುವುದರ ಮೂಲಕ ಗಳಿಸುವ ಲೋಕಜ್ನಾನವಾಗಲೀ, ಇತರರ ಮೆಚ್ಚುಗೆಯನ್ನು ಪಡೆಯುವಂತಹ ಸುಂದರವಾದ ಮಾತುಗಳನ್ನಾಡುವುದಕ್ಕೆ ಮತ್ತು ಓದುಗರ ಮನಸೆಳೆಯುವಂತಹ ಬರಹದ ಒಕ್ಕಣೆಗೆ ಸೀಮಿತವಾಗಿದೆಯೇ ಹೊರತು, ನನ್ನಂತಹ ಬಹುತೇಕ ಮಂದಿಯ ನಿತ್ಯ ಜೀವನದ ಕೆಲಸದಲ್ಲಿ ಇಲ್ಲವೇ ನಡೆಯಲ್ಲಿ ಕಂಡು ಬರುವುದಿಲ್ಲ. ಮಾನವನ ನಡೆನುಡಿಗಳಲ್ಲಿನ ಈ ಬಿರುಕನ್ನು ವ್ಯಕ್ತಿಗತ ನೆಲೆಯಲ್ಲಿ ಮತ್ತು ಸಾಮಾಜಿಕ ನೆಲೆಯಲ್ಲಿ ಒರೆಹಚ್ಚಿ ನೋಡಿರುವ ಬಸವಣ್ಣನವರು ವಚನವೊಂದರಲ್ಲಿ –

ಎನ್ನ ನಡೆಯೊಂದು ಪರಿ
ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ದವಿಲ್ಲ ನೋಡಯ್ಯಾ

ಎಂದು ತಮ್ಮ ಅಳಲನ್ನು ತೋಡಿಕೊಳ್ಳುವುದರ ಮೂಲಕ ಸಾಮಾಜಿಕ ಮಾನವರ ಜೀವನದ ಇಕ್ಕಟ್ಟು ಮತ್ತು ಇಬ್ಬಂದಿತನವನ್ನು ಬಯಲುಮಾಡಿದ್ದಾರೆ

(ಚಿತ್ರ ಸೆಲೆ: wikimedia )

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ:

%d bloggers like this: